ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೈಂದೂರು | ಕಾಲುಸಂಕವಿಲ್ಲದೆ ಪರದಾಟ: ಸ್ಥಳಕ್ಕೆ ಶಾಸಕ ಭೇಟಿ

Published 3 ಜುಲೈ 2024, 14:35 IST
Last Updated 3 ಜುಲೈ 2024, 14:35 IST
ಅಕ್ಷರ ಗಾತ್ರ

ಬೈಂದೂರು: ತಂದೆ ತನ್ನ ವಿಶೇಷ ಚೇತನ ಮಗುವನ್ನು ಹೆಗಲ ಮೇಲೆ ಕೂರಿಸಿಕೊಂಡು ತೋಡು ದಾಟುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಅದು ತನ್ನ ಕ್ಷೇತ್ರ ವ್ಯಾಪ್ತಿಯ ಯಳಜಿತ್‌ನಲ್ಲಿ ನಡೆದಿರುವುದು ಎಂಬುದನ್ನು ಖಚಿತಪಡಿಸಿಕೊಂಡ ಶಾಸಕ ಗುರುರಾಜ್ ಗಂಟಿಹೊಳೆ ಸ್ಥಳಕ್ಕೆ ತೆರಳಿ, ಮಕ್ಕಳನ್ನು, ಅವರ ಪಾಲಕರನ್ನು ಭೇಟಿ ಮಾಡಿ ತುರ್ತು ಅಗತ್ಯಗಳಿಗೆ ಸ್ಪಂದಿಸಿ ತಾತ್ಕಾಲಿಕ ವ್ಯವಸ್ಥೆ ರೂಪಿಸಿದರು.

ಯಳಜಿತ್ ಗ್ರಾಮದ ಹುಲ್ಕಡಿಕೆ ಗುಡಿಕೇರಿಯಲ್ಲಿ ವಾಸಿಸುತ್ತಿರುವ ಕುಟುಂಬದ ಇಬ್ಬರು ವಿಶೇಷ ಚೇತನ ಮಕ್ಕಳಿಗೆ ಶಾಲೆಗೆ ಹೋಗಲು, ಆ ಭಾಗದ ಜನರಿಗೆ ಮಾರ್ಗ ಮಧ್ಯದ ತೋಡಿನಿಂದ ಮಳೆಗಾಲದಲ್ಲಿ ಸಮಸ್ಯೆ ಎದುರಾಗುತ್ತಿದೆ. ಹೊಳೆ ದಾಟಿ ಶಾಲೆಗೆ ತೆರಳಲು ಕಾಲುಸಂಕವಿಲ್ಲದೆ ಪರದಾಡುತ್ತಿರುವ ದೃಶ್ಯ ನೋಡಿದ ಶಾಸಕ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಮಳೆಗಾಲ ನಿಲ್ಲುವವರೆಗೆ, ಕಾಲುಸಂಕ ನಿರ್ಮಾಣ ಆಗುವವರೆಗೆ ಮಕ್ಕಳಿಗೆ ತೊಂದರೆ ಆಗಬಾರದೆಂದು ಸ್ಥಳೀಯ ಕಾರ್ಯಕರ್ತರ ನೆರವಿನೊಂದಿಗೆ ಪ್ರತ್ಯೇಕ ಮನೆ ವ್ಯವಸ್ಥೆ ಮಾಡಲು ಶಾಸಕರು ಯೋಜನೆ ರೂಪಿಸಿದ್ದಾರೆ. 

ಬೈಂದೂರು ಕ್ಷೇತ್ರದಲ್ಲಿ ಕಾಲುಸಂಕಗಳ ತುರ್ತು ಅಗತ್ಯತೆ ಹೆಚ್ಚಿದೆ. ಸರಿಯಾದ ಕಾಲುಸಂಕ ವ್ಯವಸ್ಥೆ ಇಲ್ಲದೆ ಕ್ಷೇತ್ರದ ಕೆಲವು ಭಾಗದಲ್ಲಿ ಆಗುತ್ತಿರುವ ಸಮಸ್ಯೆ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಸಮೃದ್ಧ ಬೈಂದೂರು ಟ್ರಸ್ಟ್, ಬೆಂಗಳೂರಿನ ಅರುಣಾಚಲಂ ಟ್ರಸ್ಟ್ ಸಹಯೋಗದಲ್ಲಿ ಈಗಾಗಲೇ ಹಲವು ಕಡೆಗಳಲ್ಲಿ ಜಾಗ ಗುರುತಿಸಿ ವಿಶೇಷ ಮಾದರಿಯಲ್ಲಿ ಕಾಲು ಸಂಕ ನಿರ್ಮಾಣ ಮಾಡಲಾಗುತ್ತಿದೆ. ಈ ಭಾಗದಲ್ಲಿ ಶೀಘ್ರದಲ್ಲೇ ಕಾಲು ಸಂಕ ನಿರ್ಮಿಸುವುದರೊಂದಿಗೆ, ಆ ಮಕ್ಕಳ ಆರೋಗ್ಯದ ಬಗ್ಗೆಯೂ ಮುಂದಿನ ದಿನಗಳಲ್ಲಿ ಕಾಳಜಿ ವಹಿಸಲಾಗುವುದು ಎಂದು ಗುರುರಾಜ ಗಂಟಿಹೊಳೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT