ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಕನ್ನಡ | ಜಿಲ್ಲಾ ರಂಗಮಂದಿರಕ್ಕೆ ಶಾಶ್ವತ ಬೀಗ?

ಶಿಥಿಲಗೊಂಡ ಕಟ್ಟಡ ತೆರವಿಗೆ ಸಲಹೆ:ಹೊಸ ಯೋಜನೆಗೆ ಪ್ರಸ್ತಾವ
Published : 11 ಸೆಪ್ಟೆಂಬರ್ 2024, 4:31 IST
Last Updated : 11 ಸೆಪ್ಟೆಂಬರ್ 2024, 4:31 IST
ಫಾಲೋ ಮಾಡಿ
Comments

ಕಾರವಾರ: ಇಲ್ಲಿನ ಜಿಲ್ಲಾ ರಂಗಮಂದಿರ ಶಿಥಿಲಗೊಂಡು ವರ್ಷ ಕಳೆದಿದ್ದು, ಹಳೆಯದಾಗಿರುವ ಕಟ್ಟಡ ತೆರವುಗೊಳಿಸಲು ಲೋಕೋಪಯೋಗಿ ಇಲಾಖೆ ಸಲಹೆ ನೀಡಿದ ಬೆನ್ನಲ್ಲೆ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಆದರೆ, ಒಮ್ಮೆ ರಂಗಮಂದಿರದ ತೆರವುಗೊಳಿಸಿದರೆ ಮರುನಿರ್ಮಾಣಕ್ಕೆ ಹಲವು ಸವಾಲು ಎದುರಾಗಬಹುದು ಎಂಬ ಚರ್ಚೆ ನಡೆಯತೊಡಗಿದೆ.

ಮಾಲಾದೇವಿ ಮೈದಾನದ ಒಂದು ಬದಿಯಲ್ಲಿರುವ ರಂಗಮಂದಿರವನ್ನು 1986ರ ವೇಳೆಯಲ್ಲಿ ನಿರ್ಮಿಸಲಾಗಿತ್ತು. 2011–12ರ ಅವಧಿಯಲ್ಲಿ ಕಟ್ಟಡ ನವೀಕರಣಗೊಳಿಸಲಾಗಿತ್ತು. ಏಕಕಾಲಕ್ಕೆ 600 ಜನರು ಕುಳಿತುಕೊಳ್ಳಬಹುದಾದಷ್ಟು ಆಸನ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು.

ಆದರೆ, ನವೀಕರಣಗೊಂಡು ದಶಕ ಕಳೆಯುವಷ್ಟರಲ್ಲಿಯೇ ಕಟ್ಟಡವು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. 20223–24ನೇ ಸಾಲಿನಲ್ಲಿಯೇ ಕಟ್ಟಡದ ಸಾಮರ್ಥ್ಯ ಪರಿಶೀಲಿಸಿದ್ದ ಲೋಕೋಪಯೋಗಿ ಇಲಾಖೆ ಎಂಜಿನಿಯರಗಳ ತಂಡವು ಕಟ್ಟಡವು ಶಿಥಿಲಗೊಂಡಿದ್ದು, ತೆರವುಗೊಳಿಸಲು ಸಲಹೆಯನ್ನೂ ನೀಡಿದ್ದರು.

‘ಕಟ್ಟಡದ ಚಾವಣಿ ಹಾಳಾಗಿದ್ದು ಅದರ ದುರಸ್ತಿಗೆ ಹಿಂದೆ ಪ್ರಯತ್ನ ನಡೆದಿತ್ತು. ಆದರೆ, ಕಟ್ಟಡದ ಗೋಡೆ, ಕಾಂಕ್ರೀಟ್ ಕಂಬಗಳು ಮುರಿದು ಬೀಳುವ ಸ್ಥಿತಿಯಲ್ಲಿದ್ದು, ಕಟ್ಟಡವನ್ನೇ ತೆರವುಗೊಳಿಸಬೇಕು ಎಂದ ತಜ್ಞರ ಸಲಹೆಯಿಂದ ದುರಸ್ತಿ ಕಾರ್ಯವೂ ನನೆಗುದಿಗೆ ಬಿದ್ದಿತ್ತು’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ರಂಗಮಂದಿರ ತೆರವಿಗೆ ಸಲಹೆ ನೀಡಿದ್ದರಿಂದ ಸದ್ಯ ಅಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ. ಬಳಕೆಯನ್ನು ಸಂಪೂರ್ಣ ನಿಲ್ಲಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿ ಮಾತ್ರ ನಡೆಸಲಾಗುತ್ತಿದೆ’ ಎಂದು ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ರಾಜ್ಯದ ಗಡಿಭಾಗದಲ್ಲಿರುವ ರಂಗಮಂದಿರವು ಸಾವಿರಾರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ಒದಗಿಸಿದೆ. ಒಮ್ಮೆ ರಂಗಮಂದಿರವನ್ನು ಕೆಡವಿದರೆ ಪುನಃ ಅದೇ ಸ್ಥಳದಲ್ಲಿ ಕಟ್ಟಡ ನಿರ್ಮಿಸಲು ಹಲವು ಅಡೆತಡೆಗಳು ಎದುರಾಗಬಹುದು. ಮೈದಾನ ಅಭಿವೃದ್ಧಿಯ ನೆಪವೊಡ್ಡಿ ಕಟ್ಟಡ ನಿರ್ಮಾಣಕ್ಕೆ ಅಡ್ಡಿಪಡಿಸಲೂಬಹುದು. ಹೀಗಾಗಿ ಹೊಸ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕ ಬಳಿಕವೇ ಹಳೆಯ ಕಟ್ಟಡ ತೆರವುಗೊಳಿಸಬೇಕು’ ಎಂದು ಹಿರಿಯ ಕಲಾವಿದರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ರಂಗಮಂದಿರವನ್ನು ಹೊಸದಾಗಿ ನಿರ್ಮಾಣ ಮಾಡಲು ಅಗತ್ಯ ಅನುದಾನ ಕೋರಿ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗುತ್ತಿದೆ
ಮಂಗಲಾ ನಾಯಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ

ಅಪಾಯದ ನಡುವೆಯೂ ಕಟ್ಟಡ ಬಳಕೆ

2023ರಲ್ಲಿಯೇ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಒಳಗೊಂಡ ತಾಂತ್ರಿಕ ಸಲಹಾ ಸಮಿತಿಯು ಜಿಲ್ಲಾ ರಂಗಮಂದಿರ ಶಿಥಿಲಗೊಂಡಿದ್ದು ತೆರವುಗೊಳಿಸಲು ಸಲಹೆ ನೀಡಿತ್ತು. ಮಳೆಗಾಲದಲ್ಲಿ ಕಟ್ಟಡದ ಚಾವಣಿಯಿಂದ ಮಳೆನೀರು ಸೋರಿಕೆಯಾಗಿದ್ದರಿಂದ ಮಳೆಗಾಲದಲ್ಲಿ ಮಾತ್ರ ಕಟ್ಟಡ ಬಳಕೆ ಆಗಿರಲಿಲ್ಲ. ಮಳೆಗಾಲ ಮುಗಿದ ಬಳಿಕ ಜಿಲ್ಲಾಡಳಿತದಿಂದಲೇ ಚುನಾವಣೆ ತರಬೇತಿ ಸೇರಿದಂತೆ ಕೆಲ ಸರ್ಕಾರಿ ಕಾರ್ಯಕ್ರಮ ಆಯೋಜನೆ ನಡೆಸಿದ್ದು ಚರ್ಚೆಗೆ ಎಡೆಮಾಡಿಕೊಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT