ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಮಟಾ: ನೆರೆ ಇಳಿದ ನಂತರ...

ಕಾಳಜಿ ಕೇಂದ್ರದಿಂದ ಮನೆಗೆ ಹಿಂತಿರುಗಿದ ಸಂತ್ರಸ್ತರು
Published 19 ಜುಲೈ 2024, 4:35 IST
Last Updated 19 ಜುಲೈ 2024, 4:35 IST
ಅಕ್ಷರ ಗಾತ್ರ

ಕುಮಟಾ: ಒಂದು ವಾರದಿಂದ ನಿರಂತರವಾಗಿ ಸುರಿದ ಮಳೆ ತಂದ ನೆರೆ ಸ್ಥಿತಿ ಮುಗಿದು ಕಾಳಜಿ ಕೇಂದ್ರದಿಂದ ವಾಪಸ್‌  ತೆರಳಿರುವ ಸಂತ್ರಸ್ತರು ತಮ್ಮ ಮನೆಗಳನ್ನು ಶುಚಿಗೊಳಿಸಿ ಮತ್ತೆ ಬದುಕು ಕಟ್ಟಿಕೊಳ್ಳಲು ನರಕ ಯಾತನೆ ಅನುಭವಿಸುತ್ತಿದ್ದಾರೆ.

ತಾಲ್ಲೂಕಿನ ಅಘನಾಶಿನಿ ನದಿ, ಬಡಗಣಿ ಹೊಳೆಗೆ ನೆರೆ ಬಂದು ಸುಮಾರು 900 ಕ್ಕೂ ಅಧಿಕ ಸಂತ್ರಸ್ತರು 20 ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಗೊಂಡಿದ್ದರು. ನೆರೆ ನೀರು ಮನೆಗೆ ನುಗ್ಗಿದಾಗ ಕಾಳಜಿ ಕೇಂದ್ರಕ್ಕೆ ತೆರಳಲು ಊರಿನ ಜನರು, ಜನಪ್ರತಿನಿಧಿಗಳು, ಅಧಿಕಾರಿಗಳು ಸಹಾಯಕ್ಕೆ ಧಾವಿಸುತ್ತಾರೆ. ಆದರೆ ನೆರೆ ಇಳಿದ ನಂತರ ಸಂತ್ರಸ್ತರು ವಾಪಸ್‌ ತೆರಳಿ ತಮ್ಮ ಮನೆಗಳಲ್ಲಿ ಕುಳಿತ ಅರ್ಧ ಅಡಿಯಷ್ಟು ಕೆಸರು ತೊಳೆದು ಶುಚಿ ಮಾಡಲು ಯಾರ ನೆರವೂ ಸಿಗುವುದಿಲ್ಲ. ನೆರೆ ನೀರು ನುಗ್ಗಿದಾಗ ಸಂತ್ರಸ್ತರು ಮನೆ ಬಿಟ್ಟು ತೆರಳುವಾಗ ದಿನಸಿ, ಹಾಸಿಗೆ, ಬಟ್ಟೆ-ಬರೆ, ಪಾತ್ರೆ ಎಲ್ಲವನ್ನೂ ಸಾಧ್ಯವಾದಷ್ಟು ಸುರಕ್ಷಿತ ಸ್ಥಳದಲ್ಲಿಡುತ್ತಾರೆ.

ಬಡಗಣಿ ಹೊಳೆ ನೆರೆ ಸಂತ್ರಸ್ತೆ ಹಿರೇಕಟ್ಟು ಗ್ರಾಮದ ದೇವಿ ಮುಕ್ರಿ, ’ನೆರೆ ನೀರು ಅಂಗಳ ಬಿಡುವ ಮೊದಲೇ ನಾವು ಆ ನೀರು ಬಳಸಿ ಮನೆ ಶುಚಿ ಕಾರ್ಯ ಆರಂಭಿಸಬೇಕು. ಇಲ್ಲದಿದ್ದರೆ ಸಮೀಪದಲ್ಲಿ ಇಡೀ ಮನೆ ತೊಳೆಯುಷ್ಟು ನೀರು ಎಲ್ಲೂ ಸಿಗುವುದಿಲ್ಲ. ಒಂದು ದಿನ ತಡವಾಗಿ ಮನೆಗೆ ಹೋದರೆ ಇಡೀ ಮನೆಯಲ್ಲಿ ನಿಂತ ಅರ್ಧ ಅಡಿಗೂ ಅಧಿಕ ಕೆಸರು ಅಲ್ಲಿಯೇ ಗಟ್ಟಿಯಾಗಿ ಬಿಡುತ್ತದೆ. ಬಟ್ಟೆ-ಬರೆ ಏನಾದರೂ ನೆರೆ ನೀರಲ್ಲಿ ಮುಳುಗಿದ್ದರೆ ಅದನ್ನು ತೊಳೆದು ಒಣ ಹಾಕುವುದು ಹರ ಸಾಹಸದ ಕೆಲಸ. ದಿನಸಿ ಸಾಮಗ್ರಿ ಮುಳುಗಿದರೆ ನಮ್ಮ ಪಾಡು ಕೇಳುವವರೇ ಇಲ್ಲದಂತಾಗುತ್ತದೆ. ಕೇವಲ ಮನೆಯನ್ನು ಶುಚಿಗೊಳಿಸಿದರೆ ಸಾಲದು, ತಿರುಗಾಡುವ ದಾರಿಯನ್ನೂ ಶುಚಿಗೊಳಿಸದಿದ್ದರೆ ಮತ್ತೆ ಮನೆಯಲ್ಲ ಕೆಸರಾಗುತ್ತದೆ‘ ಎಂದು ಗೋಳು ತೋಡಿಕೊಂಡರು.

 ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯ ವೈಭವ ನಾಯ್ಕ, `ಈ ಸಲದ ನೆರೆಯಲ್ಲಿ ಕೆಳ ಮಟ್ಟದಲ್ಲಿರುವ ಎಲ್ಲ ಕುಡಿಯುವ ನೀರಿನ ತೆರೆದ ಬಾವಿಗಳಿಗೆ ನೆರೆ ನೀರು ನುಗ್ಗಿ ಗಲೀಜಾಗಿದೆ. ಆ ನೀರನ್ನು ಪಂಪ್ ಮೂಲಕ ಖಾಲಿ ಮಾಡಿಸಿ ಬಾವಿಯಲ್ಲಿ ಹೊಸ ನೀರು ಶೇಖರಣೆ ಆದ ನಂತರವೇ ಅದನ್ನು ಕುಡಿಯಲು ಬಳಸುತ್ತಾರೆ. ಈ ಕಾರ್ಯ ನಡೆಯಲು ಕನಿಷ್ಠ ಎರಡ್ಮೂರು ತಿಂಗಳಾದರೂ ಬೇಕಾಗುವುದರಿಂದ ನೆರೆ ಸಂತ್ರಸ್ತರು ಕುಡಿಯುವ ನೀರಿಗೂ ಪರದಾಡುವಂತಾಗಿದೆ‘ ಎಂದರು.

ಕುಮಟಾ ತಾಲ್ಲೂಕಿನ ಹಿರೇಕಟ್ಟು ಗ್ರಾಮದ ನೆರೆ ಸಂತ್ರಸ್ತ ಮಹಿಳೆ ದೇವಿ ಮುಕ್ರಿ ನೆರೆ ನೀರು ನುಗ್ಗಿ ಕೆಸರಾದ ತನ್ನ ಮನೆ ಶುಚಿ ಕಾರ್ಯದಲ್ಲಿ ತೊಡಗಿರುವುದು
ಕುಮಟಾ ತಾಲ್ಲೂಕಿನ ಹಿರೇಕಟ್ಟು ಗ್ರಾಮದ ನೆರೆ ಸಂತ್ರಸ್ತ ಮಹಿಳೆ ದೇವಿ ಮುಕ್ರಿ ನೆರೆ ನೀರು ನುಗ್ಗಿ ಕೆಸರಾದ ತನ್ನ ಮನೆ ಶುಚಿ ಕಾರ್ಯದಲ್ಲಿ ತೊಡಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT