ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಪಿಒಪಿ ಗಣಪ’ನ ತಡೆಗೆ ಗಡಿಯಲ್ಲಿ ನಿಗಾ

ಗಣೇಶ ಮೂರ್ತಿಗಳಿಗೆ ಅಂತಿಮ ರೂಪ ನೀಡುತ್ತಿರುವ ಕಲಾವಿದರು
Published : 3 ಸೆಪ್ಟೆಂಬರ್ 2024, 5:20 IST
Last Updated : 3 ಸೆಪ್ಟೆಂಬರ್ 2024, 5:20 IST
ಫಾಲೋ ಮಾಡಿ
Comments

ಕಾರವಾರ: ಗಣೇಶ ಚತುರ್ಥಿ ಸಂಭ್ರಮಕ್ಕೆ ಜಿಲ್ಲೆಯು ಸಜ್ಜುಗೊಳ್ಳತೊಡಗಿದ್ದು, ಎಲ್ಲೆಡೆ ಜೇಡಿ ಮಣ್ಣಿನ ಮೂರ್ತಿ ತಯಾರಿಸಿ ಅದಕ್ಕೆ ಅಂತಿಮರೂಪ ನೀಡುವಲ್ಲಿ ಕಲಾವಿದರು ನಿರತರಾಗಿದ್ದಾರೆ. ಇನ್ನೊಂದೆಡೆ ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ (ಪಿಒಪಿ) ತಯಾರಿಸಿದ ಮೂರ್ತಿ ತಡೆಯಲು ಗಡಿಭಾಗದಲ್ಲಿ ನಿಗಾ ವಹಿಸಲಾಗುತ್ತಿದೆ.

ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಪೂಜಿಸಲು ತಯಾರಿ ಭರದಿಂದ ಸಾಗಿದೆ. ಜಿಲ್ಲೆಯ 1,434 ಸ್ಥಳಗಳಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆ ನಡೆಯುತ್ತಿದೆ. ಅವುಗಳ ಹೊರತಾಗಿ ಸಾವಿರಾರು ಮನೆಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ನೂರಾರು ವೃತ್ತಿನಿರತ ಮತ್ತು ಹವ್ಯಾಸಿ ಕಲಾವಿದರು ಮೂರ್ತಿ ತಯಾರಿಕೆಯಲ್ಲಿ ನಿರತರಾಗಿದ್ದಾರೆ.

ಹಬ್ಬಕ್ಕೆ ಮುನ್ನ ಮೂರ್ತಿ ತಯಾರಿಸುವ ಕಲಾವಿದರಲ್ಲಿ ಜಾಗೃತಿ ಮೂಡಿಸುತ್ತಿರುವ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಪರಿಸರಕ್ಕೆ ಹಾನಿಕಾರಕ ಸಾಮಗ್ರಿ ಬಳಕೆ ಮಾಡದಂತೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಪಿಒಪಿ ಮೂರ್ತಿ ತಯಾರಿಸುತ್ತಿಲ್ಲ. ಹೊರಜಿಲ್ಲೆಗಳಿಂದ ಆಮದಾಗುವ ಸಾಧ್ಯತೆ ಇದ್ದು ಹೆಚ್ಚು ಎಚ್ಚರವಹಿಸಲಾಗಿದೆ.
ಬಿ.ಕೆ.ಸಂತೋಷ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ

‘ಹಬ್ಬದ ವೇಳೆ ಪಿಒಪಿಯಿಂದ ಸಿದ್ಧಪಡಿಸಿದ ಮತ್ತು ರಾಸಾಯನಿಕ ಬಣ್ಣಗಳನ್ನು ಲೇಪಿಸಿದ ಮೂರ್ತಿಗಳನ್ನು ನಿಯಂತ್ರಿಸುವದು ಸವಾಲಿನ ಕೆಲಸ ಆಗುತ್ತಿದೆ. ಈ ಬಾರಿ ಜಿಲ್ಲೆಯಾದ್ಯಂತ ಸಾಕಷ್ಟು ಮುಂಚಿತವಾಗಿ ಜಾಗೃತಿ ಮೂಡಿಸುವ ಕೆಲಸ ನಡೆಸಿದ್ದೇವೆ. ಜಿಲ್ಲೆಯಲ್ಲಿ ಪಿಒಪಿಯಿಂದ ಮೂರ್ತಿ ತಯಾರಿಕೆ ನಡೆಯುತ್ತಿಲ್ಲ. ಆದರೆ, ನೆರೆಯ ಬೆಳಗಾವಿ, ಹುಬ್ಬಳ್ಳಿಯಿಂದ ಅಂಥ ಮೂರ್ತಿಗಳನ್ನು ಹಬ್ಬಕ್ಕೆ ಕೆಲ ದಿನ ಮುಂಚಿತವಾಗಿ ಮಾರಾಟಕ್ಕೆ ತರಲಾಗುತ್ತದೆ. ಅವುಗಳ ಮೇಲೆ ನಿಗಾ ಇಡುತ್ತಿದ್ದು, ಗಡಿಭಾಗದ ತಪಾಸಣಾ ನಾಕೆಯಲ್ಲಿ ತಡೆಯಲು ಸಿದ್ಧತೆ ನಡೆದಿದೆ’ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಬಿ.ಕೆ.ಸಂತೋಷ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅನೇಕ ವರ್ಷಗಳಿಂದ ನೈಸರ್ಗಿಕವಾದ ಪದಾರ್ಥಗಳಿಂದಲೇ ಮೂರ್ತಿ ತಯಾರು ಮಾಡಲಾಗುತ್ತಿದೆ. ಜೇಡಿಮಣ್ಣು ಬಳಸಿ ಮೂರ್ತಿ ತಯಾರಿಸಿ, ಅದಕ್ಕೆ ರಸಾಯನಿಕ ರಹಿತ ಬಣ್ಣ ಲೇಪಿಸುತ್ತಿದ್ದೇವೆ. ಹಬ್ಬಕ್ಕೆ ಮೂರು ತಿಂಗಳ ಮುನ್ನ ಮೂರ್ತಿ ತಯಾರಿಕೆ ಮಾಡುತ್ತೇವೆ. ಬೇಡಿಕೆಗೆ ತಕ್ಕಂತೆ ಮೂರ್ತಿ ತಯಾರಾಗುತ್ತದೆ’ ಎಂದು ಮೂರ್ತಿ ಕಲಾವಿದ ನಂದನಗದ್ದಾದ ಘನಶ್ಯಾಮ ಟಿ.ನಾಯ್ಕ ಹೇಳಿದರು.

ಮೂರ್ತಿ ತಯಾರಿಕೆ ವೆಚ್ಚ ದುಬಾರಿ

‘ಗಣಪನ ಮೂರ್ತಿ ತಯಾರಿಸಲು ಅಂಗಡಿ ಮಾಜಾಳಿ ಗ್ರಾಮದ ಕೃಷಿಭೂಮಿಯಿಂದ ಜೇಡಿಮಣ್ಣು ಖರೀದಿಸಿ ತರುತ್ತೇವೆ. ವರ್ಷದಿಂದ ವರ್ಷಕ್ಕೆ ಪ್ರತಿ ಮುದ್ದೆ ಮಣ್ಣಿನ ದರ ಏರಿಕೆಯಾಗುತ್ತಿದೆ. ರಾಸಾಯನಿಕ ರಹಿತ ನೈಸರ್ಗಿಕ ಬಣ್ಣವನ್ನು ಹೊರಗಿನಿಂದ ತರಿಸಬೇಕಾಗುತ್ತದೆ. ಅದರ ದರವೂ ಶೇ 25–30 ರಷ್ಟು ಹೆಚ್ಚಳವಾಗಿದೆ. ಒಂದು ಮೂರ್ತಿ ತಯಾರಿಸಲು ಕನಿಷ್ಠ ನಾಲ್ಕರಿಂದ ಐದು ದಿನ ತಗಲುತ್ತದೆ. ಎಲ್ಲ ಸೇರಿ ಮೂರ್ತಿ ತಯಾರಿಕೆಗೆ ತಗಲುವ ವೆಚ್ಚ ₹3500 ರಿಂದ ₹4 ಸಾವಿರ ದಾಟುತ್ತದೆ. ಮೂರ್ತಿ ಖರೀದಿಗೆ ಬಂದವರಲ್ಲಿ ಆರ್ಥಿಕವಾಗಿ ದುರ್ಬಲರಿದ್ದರೆ ಹೆಚ್ಚು ದರ ಹೇಳುವ ಸ್ಥಿತಿಯೂ ಇರದು. ಹವ್ಯಾಸಿ ಮೂರ್ತಿ ಕಲಾವಿದರು ಲಾಭ ಬಿಟ್ಟು ಮೂರ್ತಿ ತಯಾರಿಸಿಕೊಡುವುದನ್ನು ಸಂಪ್ರದಾಯವಾಗಿ ಮುಂದುವರೆಸಿಕೊಂಡು ಹೋಗಬೇಕಾಗಿದೆ’ ಎನ್ನುತ್ತಾರೆ ಗರಸಭೆ ಸದಸ್ಯರೂ ಆಗಿರುವ ಮೂರ್ತಿ ಕಲಾವಿದ ನಂದಾ ಟಿ.ನಾಯ್ಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT