ಶನಿವಾರ, 28 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶುಂಠಿಗೆ ಕೊಳೆ ರೋಗ: ಅವಧಿಪೂರ್ವ ಕೊಯ್ಲು

Published : 28 ಸೆಪ್ಟೆಂಬರ್ 2024, 20:11 IST
Last Updated : 28 ಸೆಪ್ಟೆಂಬರ್ 2024, 20:11 IST
ಫಾಲೋ ಮಾಡಿ
Comments

ಶಿರಸಿ: ಅತಿವೃಷ್ಟಿಯಿಂದ ಶುಂಠಿ ಬೆಳೆಗೆ ಕಾಡಿದ ಕೊಳೆರೋಗಕ್ಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಇಳುವರಿ ನಷ್ಟದ ಪ್ರಮಾಣ ತಗ್ಗಿಸಲು ಅವಧಿಪೂರ್ವ ಕೊಯ್ಲು ಆರಂಭಿಸಿದ್ದಾರೆ. ಇದು ತೂಕ ಮತ್ತು ದರ ಎರಡರಲ್ಲೂ ತೀವ್ರ ನಷ್ಟ ಅನುಭವಿಸುವಂತಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಬನವಾಸಿ, ಮುಂಡಗೋಡ ಭಾಗದಲ್ಲಿ ಒಂದು ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ವಾರ್ಷಿಕ 30 ಸಾವಿರ ಟನ್‌ಗೂ ಹೆಚ್ಚು ಉತ್ಪಾದನೆಯಿದೆ.

ಪ್ರಸಕ್ತ ಸಾಲಿನ ಕೊಳೆರೋಗವು ಶುಂಠಿ ಬೆಳೆಗಾರರನ್ನು ಕಂಗೆಡಿಸಿದೆ. ದಿನದಿಂದ ದಿನಕ್ಕೆ ಶುಂಠಿ ಗಡ್ಡೆ ಕೊಳೆಯುವ ಪ್ರಮಾಣ ಹೆಚ್ಚುತ್ತಿದ್ದು, ಇರುವ ಬೆಳೆಯನ್ನು ಕೊಯ್ಲು ಮಾಡಿ ನಷ್ಟದ ಪ್ರಮಾಣ ತಪ್ಪಿಸಿಕೊಳ್ಳಲು ಬೆಳೆಗಾರರು ಮುಂದಾಗಿದ್ದಾರೆ. ಹೀಗಾಗಿ, ನಾಟಿ ಮಾಡಿ ಐದನೇ ತಿಂಗಳಲ್ಲಿ ಬೆಳೆಯ ಕೊಯ್ಲಿಗೆ ಮುಂದಾಗಿದ್ದಾರೆ. 

‘ತಾಜಾ ಮಸಾಲೆ ಉದ್ದೇಶಕ್ಕೆ ಶುಂಠಿಯನ್ನು ಆರನೇ ತಿಂಗಳಿನಿಂದ ಕೊಯ್ಲು ಮಾಡಲಾಗುತ್ತದೆ. ಸಂಸ್ಕರಣೆಗೆ ಬಳಸಲು ಎಂಟು ತಿಂಗಳ ನಂತರ ಕೊಯ್ಲು ಮಾಡಲಾಗುತ್ತದೆ. ಆದರೆ, ಈ ಬಾರಿ ಕೊಳೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಹಾಗಾಗಿ, ಎಳೆಯ ಗಡ್ಡೆಯನ್ನೇ ತೆಗೆದು ಮಾರುಕಟ್ಟೆಗೆ ಸಾಗಿಸುತ್ತಿದ್ದೇವೆ’ ಎಂದು ದಾಸನಕೊಪ್ಪದ ಬೆಳೆಗಾರ ಶೇಖರಪ್ಪ ತಿಳಿಸಿದರು.

‘ಜನವರಿ-ಮಾರ್ಚ್ ವೇಳೆ ಒಂದು ಕ್ವಿಂಟಲ್‌ ಶುಂಠಿಗೆ ₹5 ಸಾವಿರದಿಂದ ₹7 ಸಾವಿರಕ್ಕೂ ಹೆಚ್ಚು ದರ ಇತ್ತು. ಈಗ ಗರಿಷ್ಠ ₹2 ಸಾವಿರ ಮಾತ್ರ ಲಭಿಸುತ್ತಿದೆ.  ಹಾಕಿದ ಬಂಡವಾಳ ಕೂಡ ಕೈಸೇರುವ ವಿಶ್ವಾಸವಿಲ್ಲ. ಮಾರುಕಟ್ಟೆಯಲ್ಲೂ ಸರಿಯಾಗಿ ಬೇಡಿಕೆ ಇಲ್ಲ’ ಎಂದು ಹೇಳಿದರು.

ಹಂಗಾಮಿನಲ್ಲಿ ಶುಂಠಿ ಕೊಯ್ಲು ಮಾಡಿದ್ದರೆ ಎಕರೆಗೆ 25 ಟನ್ ಇಳುವರಿ ಬರುತಿತ್ತು. ಈಗ ಶೇ 70ರಷ್ಟು ತೂಕ ಕಡಿಮೆಯಾಗುತ್ತದೆ. ಎಕರೆಗೆ 6 ರಿಂದ 8 ಟನ್ ಸಿಗಬಹುದು
–ಶೇಖರಪ್ಪ ಶುಂಠಿ ಬೆಳೆಗಾರ ದಾಸನಕೊಪ್ಪ
ಅತಿವೃಷ್ಟಿಗೆ ಕೊಳೆರೋಗ ಉಲ್ಬಣಿಸಿದ್ದರಿಂದ ಗಡ್ಡೆಗಳು ಕೊಳೆಯುತ್ತಿವೆ. ಔಷಧೋಪಚಾರ ಮಾಡಿದರೆ ಬೆಳೆ ಉಳಿಸಿಕೊಂಡು ನಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದು
– ಸತೀಶ ಹೆಗಡೆ ತೋಟಗಾರಿಕೆ ಇಲಾಖೆ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT