ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಕಾಲು ಸಂಕದ ಮೇಲೆ ಅಡವಿಮನೆ ಗ್ರಾಮದ ಜನರ ಆತಂಕದ ಓಡಾಟ

50 ವರ್ಷಗಳಿಂದ ಬಿದಿರು ಸಂಕವೇ ಸಂಪರ್ಕಕ್ಕೆ ಆಧಾರ
Published 23 ಜುಲೈ 2024, 4:08 IST
Last Updated 23 ಜುಲೈ 2024, 4:08 IST
ಅಕ್ಷರ ಗಾತ್ರ

ಶಿರಸಿ: ‘ಜನಪ್ರತಿನಿಧಿಗಳು ಭರವಸೆ ನೀಡಿ ವರ್ಷಗಳೇ ಉರುಳುತ್ತಿವೆ. ಆದರೆ ನಾವು ಮಾತ್ರ ಪ್ರತೀ ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದು ಬಿದಿರಿನ ಕಾಲು ಸಂಕ ದಾಟಬೇಕಿದೆ. ನಮ್ಮೂರಿಗೆ ಸೇತುವೆ ಭಾಗ್ಯ ಕನಸಿನ ಮಾತಾಗಿ ಉಳಿದಿದೆ’ ಎಂದು ಅಡವಿಮನೆಯ ಅಶೋಕ ಮರಾಠಿ ಹೇಳುವಾಗ ಅವರ ಮಾತಿನಲ್ಲಿ ಹತಾಶ ಭಾವ ಕಾಡುತ್ತಿತ್ತು.

ತಾಲ್ಲೂಕಿನ ಭೈರುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡವಿಮನೆ ಗ್ರಾಮದ ಜನರು ಮಳೆಗಾಲದಲ್ಲಿ ಇಂದಿಗೂ ಬಿದಿರು ಕಾಲುಸಂಕದ ಮೇಲೆ ಓಡಾಡುವ ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದಾರೆ. ಅಡವಿಮನೆ ಹೊಳೆ 50 ಅಡಿಯಷ್ಟು ಅಗಲವಾಗಿ ಹರಡಿದೆ. ಹೊಳೆಯ ಎರಡು ಕಡೆಗಳಲ್ಲಿ ಮರಾಠಿ ಸಮುದಾಯದ ಜನರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಇವರೆಲ್ಲರ ಜಮೀನು ಹೊಳೆಯ ಇನ್ನೊಂದು ಬದಿಯಲ್ಲಿದೆ. ಅಡಿಕೆ, ಭತ್ತ ಬೆಳೆಯುವ ಇಲ್ಲಿನವರು ಮಳೆಗಾಲದಲ್ಲಿ ತಮ್ಮ ಜಮೀನಿಗೆ ಹೋಗುವುದಕ್ಕೆ ಹರಸಾಹಸ ಪಡಬೇಕಿದೆ. 50 ವರ್ಷಗಳಿಂದ ಪ್ರತಿ ವರ್ಷವೂ ಬಿದಿರಿನ ಕಾಲುಸಂಕ ನಿರ್ಮಿಸಿಕೊಂಡು ಅದರ ಮೂಲಕ ಓಡಾಡುತ್ತಾರೆ. ಅಬ್ಬರದ ಮಳೆ ನೀರಿನಲ್ಲಿ ಬಿದಿರಿನ ಕಾಲು ಸಂಕ ತೇಲಿ ಹೋಗಿರುವ ಉದಾಹರಣೆಯೂ ಇದೆ. 

‘ವರ್ಷಗಳ ಹಿಂದೆ ಸಂಸದರ ನಿಧಿಯಿಂದ ಸೇತುವೆ ನಿರ್ಮಾಣಕ್ಕೆ ₹13 ಲಕ್ಷ ಮಂಜೂರಾಗಿತ್ತು. ಜಾಗದ ಸಮಸ್ಯೆಯಾಗಿ ಹಣ ವಾಪಸ್ಸಾಗಿತ್ತು. ಕಳೆದ ಸರ್ಕಾರದ ಅವಧಿಯಲ್ಲಿ ಶಾಸಕರು, ಜಿಲ್ಲಾ ಪಂಚಾಯಿತಿ ಎಂಜಿನಿಯ‌ರ್ ಸ್ಥಳಕ್ಕೆ ಕಳುಹಿಸಿ ಅಂದಾಜು ಪಟ್ಟಿ ಸಿದ್ಧಪಡಿಸಲು ತಿಳಿಸಿದ್ದರು. ಆ ಪ್ರಕಾರ ಪರಿಶೀಲಿಸಿ ಹೋಗಿದ್ದರು. ನಂತರ ₹30 ಲಕ್ಷ ಮಂಜೂರಾಗಿದೆ. ಸದ್ಯದಲ್ಲಿಯೇ ಕಾಮಗಾರಿ ಆರಂಭವಾಗುತ್ತದೆ ಎಂದು ಹೇಳಿದ್ದರು. ಅದಾದ ನಂತರ ಸರ್ಕಾರ ಬದಲಾಗಿದ್ದು, ಈವರೆಗೂ ಸೇತುವೆ ಕಾಮಗಾರಿ ಅನುಷ್ಠಾನ ಆಗಿಲ್ಲ’ ಎಂದು ಅಶೋಕ ಅವರು ಬೇಸರ ವ್ಯಕ್ತಪಡಿಸಿದರು.

‘ವಿದ್ಯಾರ್ಥಿಗಳು ಪ್ರತಿನಿತ್ಯ ಇದೇ ಸಂಕದ ಮೇಲೆ ಶಾಲೆಗಳಿಗೆ ತೆರಳಬೇಕು. ಈ ಭಾಗಕ್ಕೆ ಅತ್ಯಗತ್ಯವಾಗಿರುವ ಸೇತುವೆ ನಿರ್ಮಾಣವಾದರೆ ಇಲ್ಲಿನ ಜನರ ಬಹು ವರ್ಷದ ಬೇಡಿಕೆ ಈಡೇರಿದಂತಾಗುತ್ತದೆ. ಸೇತುವೆ ನಿರ್ಮಾಣವಾದರೆ, ಹುಲೇಕಲ್ ಮತ್ತು ನೀರ್ನಳ್ಳಿ ಪಂಚಾಯಿತಿಗಳ ಸಂಪರ್ಕಕ್ಕೆ ಬಹಳ ಸಮೀಪ. ಇಲ್ಲವಾದರೆ ಮಳೆಗಾಲದಲ್ಲಿ ನಗರ ಮತ್ತು ಪಂಚಾಯಿತಿಗೆ ತೆರಳಿ ಕೆಲಸ ನಿರ್ವಹಿಸಿಕೊಂಡು ಬರಲು 10 ಕಿ.ಮೀ. ಸುತ್ತಿ ಬಳಸಿ ಬರುವ ಸ್ಥಿತಿ ಇದೆ. ಕಾಲುಸಂಕ ನಿರ್ಮಾಣಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ₹2500 ನೀಡುತ್ತದೆ. ಬಿಟ್ಟರೆ ಬೇರೆ ಯಾವ ಅನುದಾನವೂ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ಬಿದಿರಿಗೆ ಕಟ್ಟೆ ರೋಗ ಬಂದು ನಾಶವಾಗಿದೆ. ಆದರೂ ಕಾಡು ತಿರುಗಿ ಬಿದಿರು ಹುಡುಕಿ ತಂದು ಸಂಕ ನಿರ್ಮಿಸಿ ಕೊಂಡು ಓಡಾಡುತ್ತಿದ್ದೇವೆ' ಎನ್ನುತ್ತಾರೆ ಸ್ಥಳೀಯರು. 

ಸಂಪರ್ಕ ಸೇತುವೆ ಮಂಜೂರಾಗಿ ಎರಡು ವರ್ಷ ಕಳೆದರೂ ಕಾಮಗಾರಿ ಅನುಷ್ಠಾನವಾಗದ ಕಾರಣ ಈ ಹಿಂದಿನಂತೆ ಗ್ರಾಮಸ್ಥರೇ ಒಟ್ಟಾಗಿ ಮರದಿಂದ ಮರಕ್ಕೆ ಬಿದಿರಿನ ಕಾಲುಸಂಕ ನಿರ್ಮಿಸಿ ಅಪಾಯದ ನಡುವೆ ಓಡಾಡುವಂತಾಗಿದೆ
ಮಂಜು ಮರಾಠಿ ಗ್ರಾಮಸ್ಥ
ಸೇತುವೆ ಕಾಮಗಾರಿ ಮಂಜೂರಾಗಿ ಟೆಂಡ‌ರ್ ಕರೆಯಲಾಗಿತ್ತು. ಆದರೆ ಯಾರೂ ಟೆಂಡರ್‌ನಲ್ಲಿ ಭಾಗವಹಿಸಿರಲಿಲ್ಲ. ಪ್ರಸ್ತುತ ಮಂಜೂರಾಗಿದ್ದ ಕಾಮಗಾರಿ ನಡೆಸಲು ಪುನರ್ ಆದೇಶ ನೀಡುವಂತೆ ಸಿಇಒ ಅವರು ಸರ್ಕಾರಕ್ಕೆ ಪತ್ರ ಬರೆದು ವಿನಂತಿಸಿದ್ದಾರೆ
ಅನೀಲಕುಮಾರ ಜಿ.ಪಂ.ಎಇಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT