ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಂಗಭದ್ರಾ: 1.07 ಲಕ್ಷ ಕ್ಯುಸೆಕ್‌ ನೀರು ನದಿಗೆ

Published 26 ಜುಲೈ 2024, 13:49 IST
Last Updated 26 ಜುಲೈ 2024, 13:49 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಬಹುತೇಕ ಭರ್ತಿಯಾಗಿರುವ ತುಂಗಭದ್ರಾ ಜಲಾಶಯದ ಸರಾಸರಿ ಒಳಹರಿವಿನ ಪ್ರಮಾಣ 98,702 ಕ್ಯುಸೆಕ್‌ನಷ್ಟಿರುವುದರಿಂದ 1.07 ಲಕ್ಷ ಕ್ಯುಸೆಕ್‌ನಷ್ಟು ನೀರನ್ನು 30 ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ಹರಿಸಲಾಗುತ್ತಿದೆ. ಹೀಗಾಗಿ ಹಂಪಿಯಲ್ಲಿ ಕೆಲವು ಸ್ಮಾರಕಗಳನ್ನು ಮುಳುಗಿಸುತ್ತ ನದಿ ರಭಸದಿಂದ ಸಾಗುತ್ತಿದೆ.

ಪುರಂದರ ಮಂಟಪ ಪೂರ್ಣ ಮುಳುಗಿದ್ದು, ಧ್ವಜ ಮಾತ್ರ ಕಾಣಿಸುತ್ತಿದೆ. ಹಂಪಿ ವಿರೂಪಾಕ್ಷ ದೇವಸ್ಥಾನದ ಬಳಿಯ ಸ್ನಾನಘಟ್ಟವೂ ಸಂಪೂರ್ಣ ಮುಳುಗಿದೆ. ಚಕ್ರತೀರ್ಥ ಸಮೀಪದ ಕೋದಂಡರಾಮ, ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನಕ್ಕೆ ಹೋಗುವ ಕಾಲುದಾರಿ ನೀರಲ್ಲಿ ಮುಳುಗಿದ್ದು, ಬದಲಿ ದಾರಿಯಲ್ಲಿ ಭಕ್ತರು ತೆರಳುತ್ತಿದ್ದಾರೆ.

ಸಿಎಂ ಬಾಗಿನ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್ 6ರಂದು ತುಂಗಭದ್ರಾಕ್ಕೆ ಬಾಗಿನ ಅರ್ಪಿಸಲಿದ್ದಾರೆ’ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದ್ದಾರೆ.

ಪ್ರವಾಸಿಗರಿಗೆ ನಿರ್ಬಂಧ ಇಲ್ಲ: ‘ಹಂಪಿಯಲ್ಲಿ ಸದ್ಯ ಯಾವುದೇ ಅಪಾಯದ ಸ್ಥಿತಿ ಇಲ್ಲ, ಪ್ರವಾಸಿಗರಿಗೆ ನಿರ್ಬಂಧ ಇಲ್ಲ. ನದಿಯ ಸಮೀಪಕ್ಕೆ ಹೋಗದೆ ದೂರದಿಂದಲೇ ಸೌಂದರ್ಯ ಸವಿಯಬೇಕು’ ಎಂದು ಅವರು ಹೇಳಿದ್ದಾರೆ.

ಹಂಪಿಯಲ್ಲಿ  ಡಿ.ಸಿ ಪರಿಶೀಲನೆ: ತುಂಗಭದ್ರಾ ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ನೀರನ್ನು ನದಿಗೆ ಬಿಡುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಹಂಪಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಪ್ರವಾಸಿಗರು, ಭಕ್ತರ ಸುರಕ್ಷತೆಗೆ ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದರು.

‘ಹಂಪಿಯು ಪ್ರಸಿದ್ಧ ಪ್ರವಾಸಿ ತಾಣ. ಮಳೆಗಾಲ ಮತ್ತು ನದಿಗೆ ಹರಿಬಿಟ್ಟಾಗ ಈ ಪ್ರದೇಶವು ಮತ್ತಷ್ಟು ಆಕರ್ಷಕವಾಗಿರುತ್ತದೆ. ಈ ಸಮಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಬಹುದು. ಆದ್ದರಿಂದ ಅಧಿಕಾರಿಗಳು ಮುಂಜಾಗ್ರತ ಕ್ರಮಗಳನ್ನು ಮಾಡಿಕೊಳ್ಳಬೇಕು’ ಎಂದು ಅವರು ಸೂಚನೆ ನೀಡಿದರು.

‘ಪ್ರವಾಸಿಗರು ಯಾವ ಕಡೆಗಳಲ್ಲಿ ಭೇಟಿ ನೀಡುತ್ತಾರೆ? ಯಾವ ಕಡೆಗಳಲ್ಲಿ ಹೆಚ್ಚಾಗಿ ಅಪಾಯಕ್ಕೆ ಸಿಲುಕುತ್ತಾರೆ? ಯಾವ ಯಾವ ಕಡೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕಾಗಬಹುದು? ಹೆಚ್ಚಿನ ಸಂಖ್ಯೆಯಲ್ಲಿ ಯಾವ ಕಡೆಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಬೇಕಾಗುತ್ತದೆ ಎಂಬುದರ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು. ಕಾಲಕಾಲಕ್ಕೆ ವಾಸ್ತವ ಸ್ಥಿತಿಗತಿಯ ಬಗ್ಗೆ ವರಿದಿ ನೀಡಬೇಕು. ಪ್ರವಾಸಿಗರನ್ನು ನದಿಪಾತ್ರಕ್ಕೆ ಬಿಡದಂತೆ ಎಚ್ಚರ ವಹಿಸಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ನದಿಗೆ ಇಳಿದು ಸ್ನಾನ ಮಾಡಬೇಡಿ: ವಿರುಪಾಕ್ಷೇಶ್ವರ ದೇವಸ್ಥಾನ ಪಕ್ಕದ ನದಿ ಪಾತ್ರದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಸ್ನಾನ ಮಾಡಲು ನದಿಗೆ ಇಳಿಯದಂತೆ ಭಕ್ತರಿಗೆ ಸೂಚನೆ ನೀಡಬೇಕು. ನದಿದಡದಲ್ಲಿ ಸದ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ಮುಂಜಾಗ್ರತೆ ವಹಿಸಬೇಕು ಎಂದರು.  ಈ ಬಗ್ಗೆ ಸೂಕ್ತ ಮೇಲ್ವಿಚಾರಣೆ ಮಾಡಬೇಕು ಎಂದು ಹಂಪಿ ಗ್ರಾಮ ಪಂಚಾಯಿತಿ ಪಿಡಿಓ ಅವರಿಗೆ ನಿರ್ದೇಶನ ನೀಡಿದರು.

ನೀರಿನ ಹರಿವು ಹೆಚ್ಚಿರುವ ಕಾರಣ ಪ್ರವಾಸಿಗರ ದಂಡು ನೀರಿನ ವೀಕ್ಷಣೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ನದಿಪಾತ್ರ ಎಲ್ಲಾ ಕಡೆಗಳಲ್ಲಿ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡಬೇಕು ಎಂದು ಹಂಪಿ ಪಿಎಸ್‌ಐ ಅವರಿಗೆ ಸೂಚಿಸಿದರು.

ನಂತರ ಹಂಪಿಯ ಮತ್ತೊಂದು ಪ್ರವಾಸಿ ತಾಣವಾದ ವಿಜಯವಿಠ್ಠಲ ದೇವಾಸ್ಥಾನ ಹತ್ತಿರ ತೆರಳಿ, ನದಿ ನೀರಿಗೆ ಅಲ್ಲಿನ ಪುರಂದರ ಮಂಟಪ ಮುಳುಗಿರುವುದನ್ನು ವೀಕ್ಷಿಸಿದರು. ನದಿ ಪಾತ್ರಕ್ಕೆ ಪ್ರವಾಸಿಗರು ಆಗಮಿಸಿ ಸೆಲ್ಪಿ ಕ್ಲಿಕ್ಕಿಸುವ ಬರದಲ್ಲಿ ಅನಾಹುತ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಇದನ್ನು ತಡೆಯಲು ಸರಿಯಾದ ಸೂಚನೆ ನೀಡಲು ಕ್ರಮ ವಹಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಹೊಸಪೇಟೆಯ ಉಪವಿಭಾಗಾಧಿಕಾರಿ ವಿವೇಕಾನಂದ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಪ್ರಭುಲಿಂಗ ಎಸ್.ತಳಕೇರಿ, ಹೊಸಪೇಟೆ ತಹಶೀಲ್ದಾರ್ ವಿಶ್ವಜಿತ್ ಮೆಹತಾ, ಹಂಪಿ ಪಿಎಸ್‌ಐ ಶಿವಕುಮಾರ ನಾಯ್ಕ, ಹಂಪಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜನಿ ಷಣ್ಮುಖ ಗೌಡ, ಪಿಡಿಒ ಗಂಗಾಧರ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT