ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಟ್ಟೂರು: 15 ವರ್ಷದಿಂದ ಜರುಗದ ರಥೋತ್ಸವ

ಗ್ರಾಮಗಳ ಮಧ್ಯ ಭಿನ್ನಾಭಿಪ್ರಾಯ: ಪರಿಹರಿಸಲು ಸಭೆ ಇಂದು
Published : 1 ಸೆಪ್ಟೆಂಬರ್ 2023, 4:27 IST
Last Updated : 1 ಸೆಪ್ಟೆಂಬರ್ 2023, 4:27 IST
ಫಾಲೋ ಮಾಡಿ
Comments

ಕೊಟ್ಟೂರು: 15 ವರ್ಷದಿಂದ ಜರುಗದ ತಾಲ್ಲೂಕಿನ ಚಿರಬಿ ಗ್ರಾಮದ ಹೊರವಲಯದಲ್ಲಿರುವ ಮೂಗ ಬಸವೇಶ್ವರ ಸ್ವಾಮಿ ರಥೋತ್ಸವ ಈ ವರ್ಷವಾದರೂ ನಡೆಯಬಹುದಾ ಎಂದು ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ.

 ಮೂಗ ಬಸವೇಶ್ವರ ಸ್ವಾಮಿ ಈ ಭಾಗದ ಆರಾಧ್ಯ ದೈವ. ಪ್ರತಿ ವರ್ಷ ಶ್ರಾವಣ ಮಾಸದ ಕೊನೆಯ ಸೋಮವಾರದಂದು ಸ್ವಾಮಿಯ ರಥೋತ್ಸವ ಆಚರಣೆ ಬಹು ಹಿಂದಿನಿಂದ ನಡೆಯುತ್ತ ಬಂದಿತ್ತು. ಚಿರಿಬಿ ಮತ್ತು ರಾಂಪುರ ಗ್ರಾಮಗಳ ಭಕ್ತರು ಒಟ್ಟಾಗಿ ಈ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದರು. ರಥೋತ್ಸವದಂದು ಸ್ವಾಮಿಯ ದರ್ಶನ ಪಡೆದ ಭಕ್ತರು ದೇವಸ್ಥಾನದ ಸುತ್ತಮುತ್ತ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಹೊಲ ತೋಟಗಳಲ್ಲಿ ಬಿಡಾರ ಹೂಡಿ ಊಟ ಮಾಡಿ ಜಾತ್ರೆ ಮುಗಿಸಿಕೊಂಡು ತಮ್ಮ ತಮ್ಮ ಊರುಗಳಿಗೆ ಮರಳುತ್ತಿದ್ದರು. ಆದರೆ 2007ರಲ್ಲಿ ಎರಡು ಗ್ರಾಮಗಳ ನಡುವೆ ಹುಟ್ಟಿದ ಭಿನ್ನಾಭಿಪ್ರಾಯ 15 ವರ್ಷಗಳಿಂದ ಈ ರಥೋತ್ಸವದ ಸಂಭ್ರಮವನ್ನು ನಿಲ್ಲಿಸಿದೆ.

ಗಲಭೆ ಹಿನ್ನೆಲೆ: ದೇವಸ್ಥಾನಕ್ಕೆ ಸಮೀಪದಲ್ಲಿ ಚಿರಿಬಿ ಮತ್ತು ರಾಂಪುರ ಗ್ರಾಮಗಳು ಇವೆ. ಈ ಹಿಂದಿನಿಂದಲೂ ರಥೋತ್ಸವ ಕಾರ್ಯಗಳನ್ನು ರಾಂಪುರ ಗ್ರಾಮದವರು ನೆರವೇರಿಸುತ್ತಾ ಬಂದಿದ್ದರು.

ತೇರಿನ ಗಾಲಿಗಳಿಗೆ ಒಡೆಯುವ ತೆಂಗಿನಕಾಯಿ ಹಾಗೂ ಬಾಳೆಹಣ್ಣುಗಳನ್ನು ಆರಿಸಿಕೊಳ್ಳಲು ನಮಗೆ ಅವಕಾಶ ನೀಡಬೇಕು ಎಂದು 2007ರಲ್ಲಿ ಚಿರಿಬಿ ಗ್ರಾಮದವರು ತಮ್ಮ ಬೇಡಿಕೆ ಇಟ್ಟರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಂಪುರ ಗ್ರಾಮಸ್ಥರು ಈ ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ ಬದಲಿಸಲು ಸಾಧ್ಯವಿಲ್ಲ ಎಂದರು.

ಇದೇ ವಿಷಯ ಎರಡೂ ಗ್ರಾಮಗಳ ನಡುವೆ ಗಲಭೆಗೆ ಕಾರಣವಾಗಿದ್ದಲ್ಲದೆ ನ್ಯಾಯಾಲಯದ ಮೆಟ್ಟಿಲೂ ಸಹ ಏರಿತು. ಕಳೆದ 15 ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಸ್ವಾಮಿ ರಥೋತ್ಸವ ಇದುವರೆಗೂ ಜರುಗದೆ ಕೇವಲ ದರ್ಶನಕ್ಕೆ ಮಾತ್ರ ಭಕ್ತರು ತೃಪ್ತಿಗೊಳ್ಳುವಂತಾಗಿದೆ.

ಮಠಾಧೀಶರು ಹಾಗೂ ಜನಪ್ರತಿನಿಧಿಗಳು ಎರಡು ಗ್ರಾಮಸ್ಥರನ್ನು ಒಗ್ಗೂಡಿಸಲು ಕಳೆದ ಐದಾರು ವರ್ಷಗಳಿಂದ ನಡೆಸಿದ ಪ್ರಯತ್ನಗಳು ವಿಫಲವಾಗಿದ್ದರಿಂದ ಇಂದಿಗೂ ಸ್ವಾಮಿಯ ರಥ ಎಳೆಯಲು ಭಕ್ತರಿಗೆ ಕಾಲ ಕೂಡಿ ಬಂದಿಲ್ಲ.

ಇತ್ತೀಚಿಗೆ ಈ ದೇವಸ್ಥಾನವನ್ನು ಧಾರ್ಮಿಕ ಇಲಾಖೆ ತನ್ನ ವಶಕ್ಕೆ ಪಡೆದಿದೆ. ಅಧಿಕಾರಿಗಳು ಇದೇ ಸೆ.1 ರಂದು ಶಾಸಕರ ನೇತೃತ್ವದಲ್ಲಿ ದೇವಸ್ಥಾನದ ಆವರಣದಲ್ಲಿ ಎರಡು ಗ್ರಾಮಸ್ಥರ ಸಭೆ ಕರೆದಿರುವುದು ಭಕ್ತರಿಗೆ ಕುತೂಹಲವನ್ನುಂಟು ಮಾಡಿದೆ. ಈ ಸಭೆಯಲ್ಲಾದರೂ ಸಮಸ್ಯೆಗೆ ಪರಿಹಾರ ದೊರೆತು ರಥೋತ್ಸವ ಜರಗಬಹುದು ಎಂಬ ನಿರೀಕ್ಷೆ ಭಕ್ತರದಾಗಿದೆ.

ಸಭೆಯಲ್ಲಿ ಶಾಸಕರು ಎರಡೂ ಗ್ರಾಮಸ್ಥರನ್ನು ಒಗ್ಗೂಡಿಸಿ ತಲಾ ಇಂತಿಷ್ಟು ವರ್ಷ ಎಂದು ಹಂಚಿಕೆ ಮಾಡಿ ರಥೋತ್ಸವ ಜರುಗಲು ಅನುವು ಮಾಡಿಕೊಟ್ಟರೆ ಭಕ್ತರಿಗೆ ಸಂತಸವಾಗುತ್ತದೆ ಎಂದು ಭಕ್ತರಾದ ಡಾ.ಬಿ.ಸಿ.ಮೂಗಪ್ಪ ಹಾಗೂ ಎಂ.ಎಂ.ಜೆ. ಮೂಗಣ್ಣ ಅಭಿಪ್ರಾಯಪಟ್ಟರು.

ಎರಡೂ ಗ್ರಾಮದ ಭಕ್ತರು ರಥೋತ್ಸವ ನಡೆಸಲು ಸಭೆಯಲ್ಲಿ ಒಮ್ಮತ ನಿರ್ಣಯಕ್ಕೆ ಬರುತ್ತಾರೆ ಎಂಬ ವಿಶ್ವಾಸವಿದೆ

-ಗಂಗಾಧರಪ್ಪ ಪ್ರಭಾರಿ ಸಹಾಯಕ ಆಯುಕ್ತ ಧಾರ್ಮಿಕ ಇಲಾಖೆಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT