ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ | ಅಪಘಾತ ತಡೆಗೆ ಸೂಚನಾ ಫಲಕ ಅಳವಡಿಸಲು ಆಗ್ರಹ

ಕಮಲಾಪುರ–ಪಿ.ಕೆ.ಹಳ್ಳಿ ರಸ್ತೆ: ವಿಶ್ವವಿದ್ಯಾಲಯ ‘ಬಿ’ ಗೇಟ್ ಬಳಿ ಇಬ್ಬರ ಸಾವಿನ ಬಳಿಕ ಹೆಚ್ಚಿದ ಆತಂಕ
Published 23 ಜೂನ್ 2024, 4:53 IST
Last Updated 23 ಜೂನ್ 2024, 4:53 IST
ಅಕ್ಷರ ಗಾತ್ರ

ಹೊಸಪೇಟೆ (ಕಮಲಾಪುರ): ಕಮಲಾಪುರ–‍ಪಾಪಿನಾಯಕನಹಳ್ಳಿ (ಪಿ.ಕೆ.ಹಳ್ಳಿ) ರಸ್ತೆಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ‘ಬಿ’ ದ್ವಾರದ ಬಳಿ ಜೂನ್ 18ರಂದು ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ಈ ಭಾಗದ ಜನರಲ್ಲಿ ಆತಂಕ ಮೂಡಿಸಿದ್ದು, ರಸ್ತೆಗೆ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಳೆದ ವರ್ಷ ಜಿ–20 ಸಭೆ ಹಂಪಿಯಲ್ಲಿ ನಡೆದಿತ್ತು. ಆಗ ಈ ಎಂಟು ಕಿ.ಮೀ.ರಸ್ತೆಯನ್ನು ಲೋಕೋಪಯೋಗಿ ಇಲಾಖೆ ದುರಸ್ತಿಗೊಳಿಸಿ ಅತ್ಯುತ್ತಮ ರಸ್ತೆಯನ್ನಾಗಿ ಪರಿವರ್ತಿಸಿತ್ತು. ಬಳಿಕ ವಾಹನಗಳು ವೇಗವಾಗಿ ಸಂಚರಿಸತೊಡಗಿದ್ದು, ಅಪಾಯ ಎದುರಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದರು. ಮಂಗಳವಾರ ರಾತ್ರಿ ಅಪಘಾತ ಸಂಭವಿಸಿದ ಬಳಿಕ ತಮ್ಮ ಆತಂಕವನ್ನು ಬಹಿರಂಗವಾಗಿಯೇ ಹೇಳತೊಡಗಿದ್ದಾರೆ.

‘ವಿಶ್ವವಿದ್ಯಾಲಯದ ದ್ವಾರದಿಂದ ಒಳಗೆ ಕ್ಯಾಂಪಸ್‌ನಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಆದರೆ ರಸ್ತೆಯಲ್ಲಿ ಬೀದಿದೀಪಗಳಿಲ್ಲ. ರಾತ್ರಿ ಓಡಾಡುವುದು ಅಪಾಯಕಾರಿಯಾಗಿ ಕಾಣಿಸುತ್ತದೆ. ಈ ಅಪಘಾತದ ಬಳಿಕ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಂಡರೆ ಉತ್ತಮ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ.ವಿ.ಪರಮಶಿವಮೂರ್ತಿ ಅವರು ಅಪಘಾತ ಸಂಭವಿಸಿದ ಮರುದಿನ ‘ಪ್ರಜಾವಾಣಿ’ಗೆ ತಿಳಿಸಿದ್ದರು.

ಇದೇ ರೀತಿಯ ಬೇಡಿಕೆಯನ್ನು ಕಮಲಾಪುರ ಭಾಗದ ಹಲವು ಮಂದಿ ಮುಂದಿಟ್ಟಿದ್ದು, ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಪೊಲೀಸ್  ಇಲಾಖೆಗಳು ಜಂಟಿಯಾಗಿ ಸುರಕ್ಷಿತ ಪ್ರಯಾಣಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಅಪಘಾತ ವಲಯ ಅಲ್ಲ:

‘ಕಮಲಾಪುರ–ಪಿ.ಕೆ.ಹಳ್ಳಿ ನಡುವಿನ ರಸ್ತೆಯಲ್ಲಿ ಎಲ್ಲೂ ಅಪಘಾತ ವಲಯ ಇಲ್ಲ. ಇದೇ ಮೊದಲ ಬಾರಿಗೆ ಅಪಘಾತ ಸಂಭವಿಸಿದೆ. ಅಟಲ್‌ ಬಿಹಾರಿ ವಾಜಪೇಯಿ ಮೃಗಾಲಯದವರೆಗೂ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಓಡಾಡುತ್ತಿರುವುದು ಗಮನದಲ್ಲಿ ಇದೆ. ಅನಂತಶಯನಗುಡಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾರಣ ಬಸ್‌ ಮತ್ತಿತರ ದೊಡ್ಡ ವಾಹನಗಳನ್ನು ಕಮಲಾಪುರ–ಪಿ.ಕೆ.ಹಳ್ಳಿ ಮೂಲಕ ಹೊಸಪೇಟೆಗೆ ಕಳುಹಿಸಲಾಗುತ್ತಿದೆ. ಅಪಘಾತದ ಹಿನ್ನೆಲೆಯಲ್ಲಿ ಸೂಚನಾ ಫಲಕಗಳನ್ನು, ಪ್ರತಿಫಲಕ ಚಿಹ್ನೆಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಪಿಡಬ್ಲ್ಯುಡಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಈ ರಸ್ತೆಯಲ್ಲಿ ಎಲ್ಲೂ ಅಪಘಾತ ವಲಯ ಇಲ್ಲ. ಹೀಗಿದ್ದರೂ ಕಮಲಾಪುರದಲ್ಲಿ ಸಂಭವಿಸಿದ ಅಪಘಾತಕ್ಕೆ ಕಾರಣ ಏನು ಎಂಬುದನ್ನು ತಿಳಿಯುವ ಪ್ರಯತ್ನ ನಡೆಯುತ್ತಿದೆ.
ಶ್ರೀಹರಿಬಾಬು ಬಿ.ಎಲ್‌., ಎಸ್‌ಪಿ

ಬ್ಲಾಕ್ ಸ್ಪಾಟ್‌ ತೆರವು:

‘ವಿಜಯನಗರ ಜಿಲ್ಲೆಯಲ್ಲಿ ಇದುವರೆಗೆ ಪದೇ ಪದೇ ಅಪಘಾತ ಸಂಭವಿಸುವ ಆರು ಬ್ಲಾಕ್‌ ಸ್ಪಾಟ್‌ಗಳಿದ್ದವು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಾತ್ರ ಈ ಸ್ಥಳಗಳಿದ್ದವು. ಈ ಪೈಕಿ ಐದು ಬ್ಲಾಕ್‌ ಸ್ಪಾಟ್‌ಗಳನ್ನು ಅಪಘಾತ ವಲಯದಿಂದ ಮುಕ್ತ ಗೊಳಿಸಲಾಗಿದೆ. ಇನ್ನೊಂದು ಸ್ಥಳವನ್ನು ಸಹ ಶೀಘ್ರ ಸರಿಪಡಿಸಲಾಗುತ್ತದೆ. ಹೀಗಾಗಿ ಜಿಲ್ಲೆಯಲ್ಲಿ ಅಪಘಾತ ಪ್ರಮಾಣ ಬಹಳಮಟ್ಟಿಗೆ ಕಡಿಮೆಯಾಗಿದೆ. ಇತರ ರಸ್ತೆಗಳಲ್ಲಿ ಸಹ ಮೇಲಿಂದ ಮೇಲೆ ಅಪಘಾತ ಸಂಭವಿಸಿದರೆ ಮಾತ್ರ ಅಂತಹ ಸ್ಥಳಗಳ ಬಗ್ಗೆ ವಿಶೇಷವಾಗಿ ಗಮನಹರಿಸಲಾಗುತ್ತದೆ. ಚಾಲಕರ ನಿರ್ಲಕ್ಷ್ಯ, ವಾಹನಗಳ ತಾಂತ್ರಿಕ ತೊಡಕು ಹಾಗೂ ರಸ್ತೆ ನಿರ್ಮಾಣದಲ್ಲಿನ ಎಂಜಿನಿಯರಿಂಗ್ ತೊಡಕುಗಳೇ ರಸ್ತೆ ಅಪಘಾತಗಳಿಗೆ ಮುಖ್ಯ ಕಾರಣಗಳು. ಕಮಲಾಪುರ–ಪಿ.ಕೆ.ಹಳ್ಳಿ ರಸ್ತೆಯಲ್ಲಿ ಅಂತಹ ಸಮಸ್ಯೆ ಇದುವರೆಗೆ ಕಾಣಿಸಿರಲಿಲ್ಲ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕಾರು ಚಾಲಕನ ನಿರ್ಲಕ್ಷ್ಯದಿಂದ ಅಪಘಾತ

ಜೂನ್‌ 18ರಂದು ರಾತ್ರಿ 9.45ರ ಸುಮಾರಿಗೆ ವಿಶ್ವವಿದ್ಯಾಲಯ ‘ಬಿ’ ಗೇಟ್‌ ಸಮೀಪ ಆಂಜನೇಯ ಮತ್ತು ಅವರ ಮಗ ಕೆ.ಹನುಮೇಶ್ ಅವರು ಬೈಕ್‌ನಲ್ಲಿ ಗಾದಿಗನೂರಿನತ್ತ ತೆರಳುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಕಾರು ಚಾಲಕ ಅಜಾಗರೂಕತೆಯಿಂದ ಕಾರು ಚಲಾಯಿಸಿಕೊಂಡು ಬೈಕ್‌ಗೆ ಡಿಕ್ಕಿ ಹೊಡೆಸಿದ್ದರಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟರು ಎಂದು ದೂರು ನೀಡಲಾಗಿದ್ದು, ಅದರಂತೆ ಎಫ್‌ಐಆರ್ ದಾಖಲಾಗಿದೆ. ಕಾರು ಚಾಲಕ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿ ಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಾಹನ ಸಂಚಾರ ಹೆಚ್ಚಳ

ಅನಂತಶಯನಗುಡಿ ಸಮೀಪ ರೈಲ್ವೆ ಹಳಿಯಲ್ಲಿ ಮೇಲ್ಸೇತುವೆ ಕಾರ್ಯ ನಡೆಯುತ್ತಿರುವುದರಿಂದ ದೂರದ ಊರಿಗೆ ಸಂಚರಿಸುವ ಬಸ್‌ಗಳ ಸಹಿತ ಟ್ರಕ್‌, ಇತರ ಬೃಹತ್‌ ವಾಹನಗಳನ್ನು ಕಮಲಾಪುರ–ಪಿ.ಕೆ.ಹಳ್ಳಿ ಮೂಲಕ ಸಂಚರಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಸಹಜವಾಗಿಯೇ ಈ ರಸ್ತೆಯಲ್ಲಿ ವಾಹನ ಸಂಚಾರ ಪ್ರಮಾಣ ಹೆಚ್ಚಿದೆ. ಈ ರಸ್ತೆಯಲ್ಲಿ ಮುಖ್ಯವಾಗಿ ವಿಶ್ವವಿದ್ಯಾಲಯದ ಜತೆಗೆ, ಇವಾಲ್ವ್ ಬ್ಯಾಕ್ ರೆಸಾರ್ಟ್‌, ದರೋಜಿ ಕರಡಿಧಾಮ ಕಚೇರಿ, ನಿಸರ್ಗ ಧಾಮ, ಅಟಲ್‌ ಬಿಹಾರಿ ವಾಜಪೇಯಿ ಮೃಗಾಲಯ, ಜಂಗಲ್‌ ಲಾಡ್ಜ್ ಮೊದಲಾದ ಪ್ರಮುಖ ತಾಣಗಳಿವೆ. ಸಹಜವಾಗಿಯೇ  ಪ್ರವಾಸಿಗರ ಓಡಾಟವೂ ಇಲ್ಲಿ ಹೆಚ್ಚಿದೆ. ಈ ರಸ್ತೆಯ ಇಕ್ಕೆಲಗಳು ಬಹುತೇಕ ಅರಣ್ಯ ಪ್ರದೇಶಗಳಾಗಿದ್ದು, ವನ್ಯಜೀವಿಗಳ ಸಂಚಾರವೂ ಇದ್ದೇ ಇದೆ. ಹೀಗಾಗಿ ವಾಹನಗಳು ಎಚ್ಚರಿಕೆಯಿಂದ ಸಾಗಬೇಕು. ಅದಕ್ಕಾಗಿ ಅಲ್ಲಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT