ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ | ಕಾರ್ಗಿಲ್‌ ವಿಜಯ ಧ್ವಜ ಜಾಥಾಕ್ಕೆ ಸ್ವಾಗತ

ಯುವ ಬ್ರಿಗೇಡ್‌ ಆಯೋಜನೆ: ಹೂಮಳೆಗರೆದ ಜನ
Published 23 ಜುಲೈ 2024, 14:43 IST
Last Updated 23 ಜುಲೈ 2024, 14:43 IST
ಅಕ್ಷರ ಗಾತ್ರ

ಹೊಸಪೇಟೆ: ಕಾರ್ಗಿಲ್ ಯುದ್ಧದಲ್ಲಿ ಭಾರತ ಪಾಕಿಸ್ತಾನವನ್ನು ಮಣಿಸಿ ವಿಜಯೋತ್ಸವ ಆಚರಿಸಿದ ರಜತ ಮಹೋತ್ಸವ ಪ್ರಯುಕ್ತ ಯುವ ಬ್ರಿಗೇಡ್‌ ವತಿಯಿಂದ ರಾಜ್ಯದಾದ್ಯಂತ ತ್ರಿವರ್ಣ ಧ್ವಜ ಜಾಥಾ ನಡೆಯುತ್ತಿದ್ದು, ಮಂಗಳವಾರ ಅದಕ್ಕೆ ನಗರದಲ್ಲಿ ಸ್ವಾಗತ ನೀಡಲಾಯಿತು.

ಯುವ ಬ್ರಿಗೇಡ್‌ನ ಸಂಚಾಲಕ ಚಂದ್ರಶೇಖರ್ ಅವರು ತ್ರಿವರ್ಣ ಧ್ವಜದೊಂದಿಗ ಕೊಟ್ಟೂರು ಸ್ವಾಮಿ ಮಠದ ಆವರಣಕ್ಕೆ ಬಂದರು.

ನಿವೃತ್ತ ಯೋಧರಾದ ಅಶೋಕ್‌ ಚಿತ್ರಗಾರ್‌, ಸತೀಶ್ ಪಾವಂಜೆ ಮತ್ತು ಶ್ರೀನಿವಾಸನ್ ಅವರು ಧ್ವಜವನ್ನು ಎತ್ತಿ ಹಿಡಿದು ವೇದಿಕೆಯತ್ತ ತಂದಾಗ ನೆರೆದಿದ್ದವರು ಹೂಮಳೆಗರೆದರು. ಯೋಗ ಗುರು ಗೋಕರ್ಣದ ನಾಗೇಂದ್ರ ಭಟ್‌ ಮತ್ತು ಇತರ ಹಲವು ಹಿರಿಯರು ನಿವೃತ್ತ ಯೋಧರೊಂದಿಗೆ ಧ್ವಜ ಎತ್ತಿ ಹಿಡಿದಂತೆಯೇ ‘ಯೇ ಮೇರೆ ವತನ್‌ ಕೆ ಲೋಗೊ..’ ಹಾಡು ಮೊಳಗಿತು. ಹುತಾತ್ಮ ಯೋಧರನ್ನು ನೆನೆದು ಕಣ್ಣುಗಳು ತೇವಗೊಂಡವು.

ಚಂದ್ರಶೇಖರ್ ಮಾತನಾಡಿ, ಭಾರತವು ಪಾಕಿಸ್ತಾನದೊಂದಗೆ ಸ್ನೇಹ ಬಯಸಿ ಒಪ್ಪಂದ ಮಾಡಿಕೊಂಡ ಬಳಿಕ ಆ ದೇಶದ ಮೇಲೆ ನಂಬಿಕೆ ಇಟ್ಟಿತ್ತು. ಆದರೆ ಪಾಕಿಸ್ತಾನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿತು. ಕಾರ್ಗಿಲ್‌, ಡ್ರಾಸ್‌ನ ಅತ್ಯಂತ ಕಠಿಣ ಬೆಟ್ಟ ಪ್ರದೇಶಗಳಲ್ಲಿ ನಮ್ಮ ವೀರ ಯೋಧರು ದೇಶಕ್ಕಾಗಿ ಬಹುದೊಡ್ಡ ಬಲಿದಾನ ಮಾಡಿ ಮಹೋನ್ನತ ವಿಜಯ ತಂದುಕೊಟ್ಟರು. ಅಂತಹ ಹುತಾತ್ಮರನ್ನು ನಾವೆಲ್ಲ ನೆನೆಯಬೇಕು ಎಂದರು.

ಇದಕ್ಕೆ ಮೊದಲು ನಾಗೇಂದ್ರ ಭಟ್‌ ಅವರು ಯೋಗ, ಧ್ಯಾನ, ಪ್ರಾಣಾಯಾಮಗಳ ಮಹತ್ವ ತಿಳಿಸಿಕೊಟ್ಟರು.

ಪತಂಜಲಿ ಯುವ ಭಾರತದ ರಾಜ್ಯ ಪ್ರಭಾರಿ ಕಿರಣ್‌ ಕುಮಾರ್, ಹಿರಿಯ ಯೋಗ ಸಾಧಕರಾದ ಶಿವಮೂರ್ತಿ, ವಿಠೋಬಣ್ಣ, ಮಂಗಳಮ್ಮ, ಪ್ರಮೀಳಮ್ಮ, ರಾಜೇಶ್‌ ಕಾರ್ವಾ, ಅನಂತ ಜೋಷಿ ಇದ್ದರು.

ಕಾಲೇಜುಗಳಲ್ಲಿ ಜಾಥಾ: ಕಾರ್ಗಿಲ್‌ ಧ್ವಜ ಜಾಥಾ ಬಳಿಕ ಶ್ರೀ ಶಂಕರ್ ಆನಂದ ಸಿಂಗ್ ಪ್ರಥಮ ದರ್ಜೆ ಕಾಲೇಜು ಮತ್ತು ವಿಜಯನಗರ ಕಾಲೇಜುಗಳಿಗೂ ತೆರಳಿ ವಿದ್ಯಾರ್ಥಿಗಳಿಗೆ ವೀರ ಯೋಧರ ಬಲಿದಾನ ಮತ್ತು ದೇಶಭಕ್ತಿಯ ಬಗ್ಗೆ ಅರಿವು ಮೂಡಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT