ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಮಿಕರಿಗೆ ಹಲವು ಯೋಜನೆ: ಮದುವೆಗೆ ₹60 ಸಾವಿರ, ಹೆರಿಗೆಗೆ ₹50 ಸಾವಿರ ಸಹಾಯಧನ

Published : 20 ಸೆಪ್ಟೆಂಬರ್ 2024, 15:38 IST
Last Updated : 20 ಸೆಪ್ಟೆಂಬರ್ 2024, 15:38 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ಸರ್ಕಾರ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅಸಂಘಟಿತ ಕಾರ್ಮಿಕರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಇದರ ಮುಖ್ಯ ಉದ್ದೇಶವಾಗಿದೆ ಎಂದು ವಿಜಯನಗರ ಉಪ ವಿಭಾಗದ ಕಾರ್ಮಿಕ ಅಧಿಕಾರಿ ಸೂರಪ್ಪ ಡೊಂಬಲಮತ್ತೂರ ತಿಳಿಸಿದ್ದಾರೆ.

ಕಾರ್ಮಿಕರ ಕುಟುಂಬದಲ್ಲಿ ಜನನದಿಂದ ಹಿಡಿದು ಮರಣದ ವರೆಗೆ ಹಲವು ಯೋಜನೆಗಳಿದ್ದು, ಅದರ ಬಗ್ಗೆ ಮಾಹಿತಿ ಪಡೆದು ಅನುದಾನ ಪಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ ಸಾವನ್ನಪ್ಪಿದರೆ ಅಥವಾ ಅಪಘಾತವಾಗಿ ಶಾಶ್ವತ ದುರ್ಬಲತೆ ಹೊಂದಿದರೆ, ಕಾರ್ಮಿಕ ಕುಟುಂಬಕ್ಕೆ ಸರ್ಕಾರದಿಂದ ಸಹಾಯಹಸ್ತ ನೀಡಲಾಗುತ್ತದೆ. ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ ₹ 60 ಸಾವಿರದವರೆಗೆ  ಸಹಾಯಧನ ಇದೆ. ಮೊದಲ ಎರಡು ಹೆರಿಗೆಗೆ ಮಹಿಳೆಗೆ ತಲಾ ₹ 50 ಸಾವಿರ ಸಹಾಯಧನ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಫಲಾನುಭವಿಯ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯಧನ, ನೋಂದಾಯಿತ ಫಲಾನುಭವಿ ಹಾಗೂ ಅವರ ಅವಲಂಭಿತರಿಗೆ ₹ 300 ರಿಂದ ₹ 20 ಸಾವಿರದವರೆಗೆ ಸಹಾಯಧನ, ಕಾರ್ಮಿಕರು ಮರಣ ಹೊಂದಿದ್ದಲ್ಲಿ ₹ 5 ಲಕ್ಷ, ಸಂಪೂರ್ಣ ಶಾಶ್ವತ ದುರ್ಬಲತೆಯಾದಲ್ಲಿ ₹2 ಲಕ್ಷ, ಭಾಗಶಃ ಶಾಶ್ವತ ದುರ್ಬಲತೆಯಾದಲ್ಲಿ ₹ 1ಲಕ್ಷದವರೆಗೆ ಸಹಾಯಧನ ನೀಡಲಾಗುವುದು ಎಂದಿದ್ದಾರೆ.

ಔದ್ಯೋಗಿಕ ಕಾಯಿಲೆಗಳ ಚಿಕಿತ್ಸೆಗಳಿಗೆ ₹ 2 ಲಕ್ಷದವರೆಗೆ ವೈದ್ಯಕೀಯ ವೆಚ್ಚದ ಸಹಾಯಧನ, ಮಹಿಳಾ ಫಲಾನುಭವಿ ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಆಕೆಯ ಮಗುವಿನ ಶಾಲಾ ಪೂರ್ವ ಶಿಕ್ಷಣ ಮತ್ತು ಪೌಷ್ಟಿಕತೆಗಾಗಿ ಮಗುವಿಗೆ ಮೂರು ವರ್ಷಗಳು ತುಂಬುವವರೆಗೆ ವಾರ್ಷಿಕ ₹6,000  ಸಹಾಯಧನ, ಮೂರು ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗೆ ಮಾಸಿಕ ₹3,000 ವರೆಗೆ ಸಹಾಯಧನ. ಕುಟುಂಬ ಪಿಂಚಣಿ ಸೌಲಭ್ಯ ಅಡಿಯಲ್ಲಿ ಮೃತ ಪಿಂಚಣಿದಾರರ ಪತಿ, ಪತ್ನಿಗೆ ಮಾಸಿಕ ₹1,500 ವರೆಗೆ, ದುರ್ಬಲತೆ ಪಿಂಚಣಿ ಅಡಿಯಲ್ಲಿ ನೋಂದಾಯಿತ ಫಲಾನುಭವಿಯು ಕಾಯಿಲೆಗಳಿಂದ ಅಥವಾ ಕಟ್ಟಡ ಕಾಮಗಾರಿಗಳ ಅಪಘಾತದಿಂದ ಶಾಶ್ವತ, ಭಾಗಶಃ ಅಂಗವಿಕಲತೆ ಹೊಂದಿದ್ದರೆ ಮಾಸಿಕ ₹2,000, ಪಿಂಚಣಿ ಹಾಗೂ ಶೇಕಡವಾರು ದುರ್ಬಲತೆಯನ್ನಾಧರಿಸಿ ₹ 2 ಲಕ್ಷದವರೆಗೆ ಅನುಗ್ರಹ ರಾಶಿ ಸಹಾಯಧನ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಅಂತ್ಯಕ್ರಿಯೆ ವೆಚ್ಚಕ್ಕಾಗಿ ₹4,000 ಹಾಗೂ ಅನುಗ್ರಹ ರಾಶಿ ₹ 71,000 ಸಹಾಯಧನ ಸೌಲಭ್ಯಗಳು ನೀಡಲಾಗುವುದು ಎಂದಿದ್ದಾರೆ.

ಗಿಗ್ ಕಾರ್ಮಿಕರ ಸೌಲಭ್ಯಗಳು

ಗಿಗ್‌ ಕಾರ್ಮಿಕರು ಅಪಘಾತದಿಂದ ಮರಣ ಹೊಂದಿದಲ್ಲಿ ವಿಮಾ ಪರಿಹಾರ ₹2 ಲಕ್ಷ ಹಾಗೂ ಜೀವ ವಿಮಾ ₹ 2 ಲಕ್ಷ ಸೇರಿ ಒಟ್ಟು ₹ 4 ಲಕ್ಷಗಳು ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಲ್ಲಿ ₹2 ಲಕ್ಷಗಳವರೆಗೆ ಸಹಾಯಧನ ಆಸ್ಪತ್ರೆ ವೆಚ್ಚ ಮರುಪಾವತಿ ₹ 1 ಲಕ್ಷಗಳ ವರೆಗೆ (ಅಪಘಾತ ಪ್ರಕರಣಗಳಲ್ಲಿ ಮಾತ್ರ) ಜೀವ ವಿಮಾ ₹ 2ಲಕ್ಷ ನೀಡಲಾಗುವುದು.

ದಿನ ಪತ್ರಿಕೆ ವಿತರಣಾ ಕಾರ್ಮಿಕರ ಸೌಲಭ್ಯಗಳು: ಅಪಘಾತದಿಂದ ಮರಣ ಹೊಂದಿದಲ್ಲಿ ₹ 2 ಲಕ್ಷ ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಲ್ಲಿ ₹ 2 ಲಕ್ಷಗಳವರೆಗೆ (ಶೇಕಡ ವಾರು ದುರ್ಬಲತೆ ಆಧಾರದ ಮೇಲೆ) ಅಪಘಾತ ಅಥವಾ ಗಂಭೀರ ಕಾಯಿಲೆ ಅಥವಾ ಗಂಭೀರ ಅನಾರೋಗ್ಯಕ್ಕೆ ತುತ್ತಾದಲ್ಲಿ ಆಸ್ಪತ್ರೆ ವೆಚ್ಚ ಮರುಪಾವತಿ ₹ 1ಲಕ್ಷಗಳವರೆಗೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT