ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ: ಯೋಗ ಉದ್ಯಾನಕ್ಕೇ ಅನಾರೋಗ್ಯ!

ಸುಂದರ ಫ್ರೀಡಂ ಪಾರ್ಕ್‌ ಹಿಂಭಾಗದ ದುಃಸ್ಥಿತಿ: ಗಿಡಗಂಟೆಗಳಲ್ಲಿ ಮುಚ್ಚಿದ ಕಂಚಿನ ಯೋಗ ಪ್ರತಿಮೆಗಳು
Published 1 ಜುಲೈ 2024, 6:13 IST
Last Updated 1 ಜುಲೈ 2024, 6:13 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹೊಸಪೇಟೆಯಲ್ಲಿ ಸದ್ಯದ ಸುಂದರ ತಾಣ ಎಂದರೆ ಅದು ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಸ್ವಾತಂತ್ರ್ಯ ಉದ್ಯಾನ. ಫ್ರೀಡಂ ಪಾರ್ಕ್‌ ಎಂದೇ ಖ್ಯಾತವಾಗಿರುವ ಇದರ ಹಿಂಭಾಗಕ್ಕೆ ಹೋಗಿ ನೋಡಿದರೆ ಬೇಸರವಾಗುತ್ತದೆ. ಎರಡು ವರ್ಷಗಳಿಂದ ಬೆಳೆದಿರುವ ಗಿಡಗಂಟೆಗಳು ಅಲ್ಲಿನ ಕಂಚಿನ ಯೋಗ ಮೂರ್ತಿಗಳನ್ನು ಮುಚ್ಚಿಬಿಟ್ಟಿವೆ. 

ಹೊಸ ಶೌಚಾಲಯ ಕಟ್ಟಡ ಮಾತ್ರ ಇದೆ. ಒಳಗಿನ ಸ್ವಿಚ್‌ಬೋರ್ಡ್‌, ವೈಯರ್‌ಗಳನ್ನು ಕಳವು ಮಾಡಲಾಗಿದೆ. ಮದ್ಯ ಸೇವನೆಯ ಅಡ್ಡೆಯಾಗಿರುವ ಇಲ್ಲಿನ ಶೌಚ ಗುಂಡಿಗೆ ಸಿಂಕ್‌ ಅಳವಡಿಸಿಲ್ಲ. ಆದರೆ ಪಿವಿಸಿ ಪೈಪ್‌ಗಳನ್ನೇ ಸುಟ್ಟು ಹಾಕಲಾಗಿದೆ. ಸುತ್ತಮುತ್ತ ಪೊದೆಗಳಲ್ಲಿ, ನಡಿಗೆ ಪಥದ ಅಕ್ಕಪಕ್ಕದಲ್ಲಿ ರಾಶಿಬಿದ್ದಿರುವ ಮದ್ಯದ ಬಾಟಲ್‌ಗಳಿಗೆ ಲೆಕ್ಕವಿಲ್ಲ. ಸೂರ್ಯನಮಸ್ಕಾರದ 12 ಭಂಗಿಗಳನ್ನು ತೋರಿಸುವ ಕಂಚಿನ ಪ್ರತಿಮೆಗಳಲ್ಲಿ ಕೆಲವು ಕಾಡು ಪೊದೆಗಳಲ್ಲಿ ಮುಚ್ಚಿ ಹೋಗಿವೆ. ಕೆಲವು ಉಕ್ಕಿನ ಪೀಠಗಳಿಗೆ ತುಕ್ಕು ಹಿಡಿದಿವೆ.

ಮಾಜಿ ಸಚಿವ ಆನಂದ್ ಸಿಂಗ್ ಅವರ ಮನೆಯ ಪಕ್ಕದಲ್ಲಿ ಹಾದುಹೋಗುವ ಬೈಪಾಸ್‌ ರಸ್ತೆಯ ಮಗ್ಗುಲಲ್ಲೇ ಈ ಪಾಳುಬಿದ್ದ ಉದ್ಯಾನವಿದೆ. ‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದಾರ್ಥ ಸಿಂಗ್ ಗೆಲುವು ಸಾಧಿಸಿದ್ದರೆ ಉದ್ಯಾನದ ಕತೆಯೇ ಬೇರೆ ಇರುತ್ತಿತ್ತು, ಫ್ರೀಡಂ ಪಾರ್ಕ್‌ನಂತೆ ಯೋಗ ಪಾರ್ಕ್‌ ಸಹ ಮಿಂಚುತ್ತಿತ್ತು’ ಎಂದು ಉದ್ಯಾನಕ್ಕೆ ಭೇಟಿ ನೀಡುತ್ತಿರುವ ಹಲವರು ಹೇಳುತ್ತಾರೆ. 

ಯೋಗ–ಮನರಂಜನೆ ತಾಣ:

ಫ್ರೀಡಂ ಪಾರ್ಕ್‌ ನಗರದ ಹೃದಯ ಭಾಗದಲ್ಲಿರುವ ಏಕೈಕ ಮಕ್ಕಳ ಮನರಂಜನಾ ತಾಣವಾಗಿದೆ. ಬೆಳಿಗ್ಗೆ ಇಲ್ಲಿ ನಡೆಯುವ ಯೋಗ ಶಿಬಿರ ಹಲವು ಕಾರಣಗಳಿಂದ ಹೆಸರಾಗಿದೆ. ತುಂಗಭದ್ರಾ ಮಂಡಳಿಗೆ ಒಳಪಟ್ಟ ಈ ಜಾಗವನ್ನು ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯಿಂದ, ಡಿಎಂಎಫ್‌ ನಿಧಿಯಿಂದ ಅಭಿವೃದ್ಧಿಪಡಿಸಿ ನಗರಸಭೆಗೆ ಹಸ್ತಾಂತರಿಸಿದ ಬಳಿಕ ಕಳೆದ ಒಂದೂವರೆ ವರ್ಷದಿಂದ ಅತ್ಯುತ್ತಮ ವಿಹಾರ ತಾಣವಾಗಿ ಬದಲಾಗಿದೆ. ಇಲ್ಲಿನ ಕೆಂಪುಕೋಟೆ ಮಾದರಿಯ ರಚನೆ, ಸಂಗೀತ ಕಾರಂಜಿ, ಸುಂದರ ಉದ್ಯಾನ, ಮಕ್ಕಳ ಆಟಿಕೆಗಳು, ರುಚಿಕರ ಆಹಾರ ವ್ಯವಸ್ಥೆಗಳೆಲ್ಲ ಕುಟುಂಬಗಳನ್ನು ಇಲ್ಲಿಗೆ ಸೂಜಿಗಲ್ಲಿನಂತೆ ಸೆಳೆಯುತ್ತದೆ.

ಇಲ್ಲಿ ಸಿಸಿ ಟಿ.ವಿ ಕ್ಯಾಮೆರಾಗಳಿಲ್ಲ. ರಸ್ತೆಯ ಇನ್ನೊಂದು ಬದಿ ಸಾರ್ವಜನಿಕ ಶೌಚಾಲಯ ಇದ್ದರೂ ಉದ್ಯಾನದ ಒಳಗೆ ಶೌಚಾಲಯ ಇಲ್ಲ. ಉದ್ಯಾನದ ಇನ್ನೊಂದು ಬದಿಯಲ್ಲಿ ಒಂದು ಎಕರೆ ಪ್ರದೇಶದಲ್ಲಿ ಯೋಗ ಉದ್ಯಾನ ನಿರ್ಮಾಣ ಮಾಡಲು ಶೇ 75ರಷ್ಟು ಕೆಲಸ ಮುಗಿದಿದೆ. ಶೌಚಾಲಯ ನಿರ್ಮಿಸಿ ಅರ್ಧಕ್ಕೇ ನಿಲ್ಲಿಸಲಾಗಿದೆ. ಕಂಚಿನ ಯೋಗ ಪ್ರತಿಮೆಗಳು, ಕಾರ್ಗಿಲ್‌ ಯುದ್ಧದಲ್ಲಿ ಗೆದ್ದ ವೀರರನ್ನು ನೆನಪಿಸುವ ಪ್ರತಿಮೆಗಳಿವೆ. ಆದರೆ ಸದ್ಯ ಈ ಸ್ಥಳ ಕುಡುಕರ ಅಡ್ಡೆಯಾಗಿದೆ.

‘ಫ್ರೀಡಂ ಪಾರ್ಕ್‌ನ ಇನ್ನೊಂದು ಭಾಗದ ಅಭಿವೃದ್ಧಿ ಕಾಮಗಾರಿ ಅರ್ಧಕ್ಕೇ ಸ್ಥಗಿತಗೊಂಡಿದೆ. ಇದಕ್ಕೆ ಸಿಎಸ್ಆರ್ ಹಣ ಬಾರದೆ ಇರುವುದು ಕಾರಣ. ಅದನ್ನು ತರಿಸಿಕೊಂಡು ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನ ನಡೆದಿದೆ. ಸುಮಾರು ₹ 50 ಲಕ್ಷದಲ್ಲಿ ಉಳಿದ ಕಾಮಗಾರಿಗಳು ಕೊನೆಗೊಳ್ಳಲಿವೆ. ಜಿಂದಾಲ್‌ನಿಂದ ಈ ಹಣ ಬರಬೇಕಿದೆ. ಸಿಎಸ್‌ಆರ್ ದುಡ್ಡು ಸಿಗದಿದ್ದರೆ ಸರ್ಕಾರ, ನಗರಸಭೆ ಅಥವಾ ಬೇರೆ ಮೂಲಗಳಿಂದಾದರೂ ಹಣ ಹೊಂದಿಸಿ ಕೆಲಸ ಪೂರ್ಣಗೊಳಿಸುತ್ತೇವೆ’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರೂ ಆಗಿರುವ ನಗರಸಭೆಯ ಪ್ರಭಾರ ಆಯುಕ್ತ ಮನೋಹರ್‌ ತಿಳಿಸಿದರು.

‘ಇನ್ನು 15 ದಿನಗಳಲ್ಲೇ ಹೊಸ ಶೌಚಾಲಯಕ್ಕೆ ಎಲ್ಲ ಸೌಲಭ್ಯ ಕಲ್ಪಿಸಿ ಅದನ್ನು ಬಳಕೆಯೋಗ್ಯ ಮಾಡಲಿದ್ದೇವೆ’ ಎಂದು ಅವರು ಭರವಸೆ ನೀಡಿದರು.

‘ಮುಂಭಾಗದ ಫ್ರೀಡಂ ಪಾರ್ಕ್‌ನ ವಿನ್ಯಾಸದಂತೆ ಹಿಂಭಾಗದ ಪಾರ್ಕ್‌ ವಿನ್ಯಾಸವೂ ಸುಂದರವಾಗಿದೆ. ಇಲ್ಲಿ ಮಣ್ಣಿನ ಚಿಕಿತ್ಸೆ, ಸ್ವಾತಂತ್ರ್ಯ ಹೋರಾಟಗಾರರ ಜೀವನಗಾಥೆಯನ್ನು ಬಿಂಬಿಸುವ ಗ್ಯಾಲರಿಗಳಿಗೆ ವ್ಯವಸ್ಥೆ ಮಾಡಲಾಗಿದೆ. ಅನುದಾನ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿದೆ ಅಷ್ಟೇ’ ಎಂದು ಇಡೀ ಪಾರ್ಕ್‌ನ ವಿನ್ಯಾಸವನ್ನು ರೂಪಿಸಿರುವ ವಾಸ್ತು ತಜ್ಞ ಭೂಪಾಳ ಶ್ರೀಪಾದ ತಿಳಿಸಿದರು.

‘ಕಳೆದ ಒಂದೂವರೆ ವರ್ಷಗಳಿಂದ ಮಕ್ಕಳು ಸಹಿತ ಸಾರ್ವಜನಿಕರ ಮನರಂಜನೆಗೆ, ಶುಚಿತ್ವಕ್ಕೆ ಯಾವುದೇ ಧಕ್ಕೆ ಬರದಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಉದ್ಯಾನದ ಇನ್ನೊಂದು ಬದಿಯನ್ನೂ ಶೀಘ್ರ ಸಾರ್ವಜನಿಕರಿಗೆ ಒದಗಿಸಿಕೊಟ್ಟರೆ ಇನ್ನಷ್ಟು ಮಂದಿಯನ್ನು ಸೆಳೆಯುವುದು ಸಾಧ್ಯ. ಜತೆಗೆ ಉದ್ಯೋಗಾವಕಾಶವೂ ಹೆಚ್ಚಲಿದೆ’ ಎಂದು ಉದ್ಯಾನದ ನಿರ್ವಹಣೆ ನೋಡಿಕೊಳ್ಳುತ್ತಿರುವ ಜನನಿ ವಿವಿಧೋದ್ದೇಶ ಸಹಕಾರ ಸಂಘದ ಮುಖ್ಯಸ್ಥ ಅನಂತ ಜೋಷಿ ಹೇಳಿದರು.

ಫ್ರೀಡಂ ಪಾರ್ಕ್‌ನ ಮುಂಭಾಗದಂತೆ ಹಿಂಭಾಗ ಸಹ ಶೀಘ್ರ ಸಾರ್ವಜನಿಕರ ಉಪಯೋಗಕ್ಕೆ ಸಿಗಲಿ ಎಂಬ ಜನರ ಕೂಗು ಪಕ್ಕದ ಎಲ್‌ಎಲ್‌ಸಿ ಕಾಲುವೆಯಲ್ಲಿ ಕೊಚ್ಚಿ ಹೋಗದಿರಲಿ ಎಂದು ಹಿರಿಯ ಯೋಗ ಸಾಧಕ ಕಿರಣ್‌ ಕುಮಾರ್ ಹೇಳುತ್ತಾರೆ. 

ಉದ್ಯಾನದೊಳಗಿನ ಶೌಚಾಲಯದ ಸ್ಥಿತಿ
ಉದ್ಯಾನದೊಳಗಿನ ಶೌಚಾಲಯದ ಸ್ಥಿತಿ
ಬಾಕಿ ಉಳಿದಿರುವ ಸಿಎಸ್‌ಆರ್ ನಿಧಿ ತರಿಸಿಕೊಳ್ಳುವ ಪ್ರಯತ್ನ ಸಾಗಿದೆ ವಿಳಂಬವಾದರೆ ನಗರಸಭೆ ಅಥವಾ ಸರ್ಕಾರದಿಂದ ವಿಶೇಷ ಅನುದಾನ ತರಿಸಿ ಉದ್ಯಾನದ ಕಾಮಗಾರಿ ಪೂರ್ಣಗೊಳಿಸಲಾಗುವುದು
ಮನೋಹರ್ ಜಿಲ್ಲಾ ಯೋಜನಾ ನಿರ್ದೇಶಕರು ಹಾಗೂ ಹೊಸಪೇಟೆ ನಗರಸಭೆ ಪ್ರಭಾರ ಆಯುಕ್ತರು
ಫ್ರೀಡಂ ಪಾರ್ಕ್‌ನಲ್ಲಿ ಈಗಾಗಲೇ ಯೋಗ ಶಿಬಿರ ಅತ್ಯುತ್ತಮವಾಗಿ ನಡೆಯುತ್ತಿದೆ. ಯೋಗ ಪಾರ್ಕ್‌ ಅಭಿವೃದ್ಧಿ ಹೊಂದಿದರೆ ಇದೊಂದು ಉತ್ತಮ ಧ್ಯಾನ ಮಸಶಾಂತಿಯ ತಾಣವಾಗಲಿದೆ
ಕಿರಣ್‌ ಕುಮಾರ್‌ ಪತಂಜಲಿ ಯುವ ಭಾರತದ ರಾಜ್ಯ ಪ್ರಭಾರಿ
ಫ್ರೀಡಂ ಪಾರ್ಕ್‌ ಚೆನ್ನಾಗಿದೆ ನೂರಾರು ಮಂದಿ ಬರುತ್ತಾರೆ ಇಲ್ಲಿ ಸಿಸಿ ಟಿವಿ ಕ್ಯಾಮೆರಾದ ವ್ಯವಸ್ಥೆ ಇಲ್ಲ. ಶೌಚಾಲಯ ಇಲ್ಲ. ಆದಷ್ಟು ಬೇಗ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕು
ಮಟ್ಟಿ ಮಂಜುಳಾ ಹೊಸಪೇಟೆ ಚಿತ್ರಕೇರಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT