ಹಂಪಿ (ಹೊಸಪೇಟೆ): ರವಿ ಆಗಸದಲ್ಲಿ ಮರೆಯಾಗುತ್ತಿದ್ದರೆ, ಇತ್ತ ಜಾನಪದ ಕಲಾವಿದರು ಮೈಮರೆತು ರಸ್ತೆಯುದ್ದಕ್ಕೂ ಹೆಜ್ಜೆ ಹಾಕುತ್ತಿದ್ದರು. ಅವರ ಕಲೆ ನೋಡಲು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನ ಅವರನ್ನು ಹುರಿದುಂಬಿಸಿ ಹುಮ್ಮಸ್ಸು ತುಂಬಿದರು. ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಅದರಲ್ಲೂ ‘ಕಾಂತಾರ’ ಸಿನಿಮಾದಿಂದ ಇನ್ನೂ ಜನ ಹೊರಬಂದಂತಿಲ್ಲ. ಎಲ್ಲಾದರೂ ಭೂತಕೋಲ, ಯಕ್ಷಗಾನ ಕಲಾವಿದರು ಕಂಡರೆ ಜನ ಅವರನ್ನು ಮುತ್ತಿಕ್ಕಿಕೊಳ್ಳುತ್ತಿದ್ದಾರೆ. ಇಂಥದ್ದೇ ದೃಶ್ಯ ಮೆರವಣಿಗೆಯಲ್ಲೂ ಕಂಡು ಬಂತು. ಉಡುಪಿ ಕಲಾವಿದರು ಯಕ್ಷಗಾನ ದಿರಿಸಿನಲ್ಲಿ ಹೆಜ್ಜೆ ಹಾಕುತ್ತಿದ್ದರೆ ಅವರನ್ನು ಕುತೂಹಲದಿಂದ ಜನ ನೋಡುತ್ತಿದ್ದರು. ಮೊಬೈಲ್‌ನಲ್ಲಿ ಛಾಯಾಚಿತ್ರ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ವಿದೇಶಿಯರು ಇದರಿಂದ ಹೊರತಾಗಿರಲಿಲ್ಲ. ‘ವ್ಹಾವ್ ವಾಟ್ ಏ ಕಾಸ್ಟೂಮ್’ ಎಂದು ಉದ್ಗಾರ ತೆಗೆದರು. ‘ಅಮ್ಮ ಅಲ್ನೋಡು, ಕಾಂತಾರ ಬಂದ’ ಎಂದು ಮಕ್ಕಳು ಅಮ್ಮನಿಗೆ ಹೇಳುತ್ತಿದ್ದದ್ದು ಕರ್ಣಗಳಿಗೆ ಬಿತ್ತು.

ಹಂಪಿ ಯಂತ್ರೋದ್ಧಾರಕ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ವಿರೂಪಾಕ್ಷೇಶ್ವರ ದೇವಸ್ಥಾನದ ರಥಬೀದಿಯ ವರೆಗೆ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಜಾನಪದ ಕಲಾವಿದರು ಹೊಸ ಲೋಕವನ್ನೇ ಸೃಷ್ಟಿಸಿದ್ದರು. ವಿಜಯನಗರ ಸಾಮ್ರಾಜ್ಯದ ಕಾಲದ ಮೈಸೂರು ಉತ್ಸವ ನೆನಪಿಸುವಂತಿದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದರು.

ಕಂಪ್ಲಿಯಿಂದ ಹಕ್ಕಿಪಿಕ್ಕಿ ನೃತ್ಯ, ಕೊಪ್ಪಳದ ಹಗಲುವೇಷ ಕಲಾವಿದರು, ಶಿವಮೊಗ್ಗದ ಮಹಿಳಾ ವೀರಗಾಸೆ, ಕಂಪ್ಲಿಯ ಉರಮೆ ನಂದಿ ಸಮಾಳ, ಶಿವಮೊಗ್ಗದ ಅಲಂಕೃತ ಚಾಮರ ತಂಡದ ಕಲಾವಿದರು, ಸಂಗಮೇಶ್ವರದಿಂದ ಬಂದಿದ್ದ ಭಜನಾ ತಂಡ, ಕೊಡಗಿನ ಕೊಡವ ನೃತ್ಯ, ಮಂಡ್ಯದ ಹುಲಿವೇಷ ಕಲಾವಿದರು, ಅದೇ ಜಿಲ್ಲೆಯ ಗೊರವರ ಕುಣಿತ, ಗದಗ ಜಿಲ್ಲೆಯ ವೀರಭದ್ರೇಶ್ವರ ಪುರವಂತ ಜಾನಪದ ಕಲಾ ಮೇಳದ ಪುರವಂತಿಕೆ ಮೆರವಣಿಗೆಯುದ್ದಕ್ಕೂ ಎಲ್ಲರ ಗಮನ ಸೆಳೆಯಿತು. ಅವರ ಕಲೆ ನೋಡಿ ಜನ ಬೆರಗಾದರು.

ಗಾದಿಗನೂರಿನ ತಂಡದ ತಾಷರಂಡೋಲ್, ವಿಜಯನಗರದ ಡಾ. ಅಂಬೇಡ್ಕರ್ ಪರಿಶಿಷ್ಟ ಜಾತಿ ಕಲಾ ಸಂಘದ ಹಲಗೆವಾದನ, ಇದೇ ಜಿಲ್ಲೆಯ ಎಸ್.ಎಂ. ಚಂದ್ರಯ್ಯ ಸ್ವಾಮಿ ಅವರ ವೀರಗಾಸೆ, ಸೋಮಲಾಪುರದ ವಿ. ಮಾರೇಶ್ ಅವರ ಹಗಲುವೇಷಧಾರಿಗಳು, ಬಾಗಲಕೋಟೆಯ ದಾನಯ್ಯ, ಮಹಾಲಿಂಗಯ್ಯ ಮಠಪತಿ ಅವರ ಕರಡಿ ಮೇಳ, ಚಾಮರಾಜನಗರದ ದಿನೇಶ್ ತಂಡದ ಕಂಸಾಳೆ, ತುಮಕೂರಿನ ಲೋಕೇಶ್ ಅವರ ಕೋಳಿ ನೃತ್ಯ ತಂಡ, ಧಾರವಾಡದ ಪಾರವ್ವ ದ್ಯಾಮಣ್ಣ ಲಮಾಣಿ ಹಾಗೂ ತಂಡದ ಲಂಬಾಣಿ ನೃತ್ಯ, ಮೈಸೂರಿನ ನಿವೇದ ಹಾಗೂ ತಂಡದವರ ಮಹಿಳಾ ನಗಾರಿ ಎಲ್ಲರಲ್ಲೂ ಜೋಶ್ ಭರಿಸುವಂತಿತ್ತು.

ಭಾನುವಾರ ರಜಾ ದಿನ ಹಾಗೂ ಹಂಪಿ ಉತ್ಸವದ ಕೊನೆಯ ದಿನವಾಗಿದ್ದರಿಂದ ಸಂಜೆ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಕಡೆಗಳಿಂದ ಅಪಾರ ಜನ ಬಂದಿದ್ದರು. ಮೆರವಣಿಗೆ ಹಾದು ಹೋಗುವ ರಸ್ತೆಯುದ್ದಕ್ಕೂ ನಿಂತು ಮೆರವಣಿಗೆ ಕಣ್ತುಂಬಿಕೊಂಡರು. ಮೂರು ದಿನಗಳ ಉತ್ಸವದ ಅವಧಿಯಲ್ಲಿ ಭಾನುವಾರ ಜಾತ್ರೆಯ ವಾತಾವರಣ ಕಂಡು ಬಂತು. ಜನರ ನಡುವೆ ಅಲಂಕರಿಸಿದ ಆನೆ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿತು. ಅದರ ಹಿಂಭಾಗದಲ್ಲಿ ಅಲಂಕೃತ ವಾಹನದಲ್ಲಿ ತಾಯಿ ಭುವನೇಶ್ವರಿ ದೇವಿಯ ಉತ್ಸವ ಮೂರ್ತಿ ಮೆರವಣಿಗೆಯಲ್ಲಿತ್ತು. ತಾಯಿಯನ್ನು ನೋಡಿ ಜನ ದೂರದಿಂದಲೇ ಕೈಮುಗಿದು ನಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.