ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ನಾವೆಲ್ಲ ಸಿಂಹಗಳು, ಕುರಿಗಳಂತೆ ಬದುಕು ಬೇಡ’

ಶ್ರೀ ರಾಮಕೃಷ್ಣ ಗೀತಾಶ್ರಮದ ದಶಮಾನೋತ್ಸವ ಪ್ರಯುಕ್ತ ಯುವ ಸಮ್ಮೇಳನ
Published 3 ಜುಲೈ 2024, 14:33 IST
Last Updated 3 ಜುಲೈ 2024, 14:33 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಭಾರತೀಯರಾದ ನಾವೆಲ್ಲ ಸಿಂಹಗಳಾದರೂ ಕುರಿಗಳಂತೆ ಬದುಕಿದ್ದೇವೆ. ವಿವೇಕಾನಂದರು ತಮ್ಮ ಮಾತುಗಳ ರೂಪದಲ್ಲಿ ನಮ್ಮ ಜತೆಗಿದ್ದಾರೆ. ಇನ್ನು ಮೇಲಾದರೂ ನಾವು ಸಿಂಹಗಳೇ ಎಂಬುದನ್ನು ತೋರಿಸಬೇಕಾಗಿದೆ’ ಎಂದು ಗದಗ–ವಿಜಯಪುರ ಶ್ರೀ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದಜಿ ಮಹಾರಾಜ್ ಹೇಳಿದರು.

ಇಲ್ಲಿನ ಶ್ರೀ ರಾಮಕೃಷ್ಣ ಗೀತಾಶ್ರಮದ ದಶಮಾನೋತ್ಸವ ಹಾಗೂ ಶ್ರೀ ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್‌ ಕರ್ನಾಟಕ ಅರ್ಧವಾರ್ಷಿಕ ಸಭೆಯ ಹಿನ್ನೆಲೆಯಲ್ಲಿ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಯುವ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಭಾರತೀಯರ ರಕ್ತದಲ್ಲಿ ಬಹಳ ದೊಡ್ಡ ಶಕ್ತಿ ಇದೆ. ಅನಾಗರಿಕ ದೇಶದವರನ್ನೂ ನಾಗರಿಕರನ್ನಾಗಿ ಮಾಡಿದ್ದು ನಾವು. ಅದಕ್ಕೆ ಕಾರಣ ನಮ್ಮ ಸಂಸ್ಕೃತಿ, ಪರಂಪರೆ, ನಾವು ಬೆಳೆದ ರೀತಿ ಮತ್ತು ನಮಗೆ ಸಿಕ್ಕಿದಂತಹ ಸಂಸ್ಕಾರ. ಭಾರತೀಯರಲ್ಲಿ ಹರಿಯತ್ತಿರುವ ಆರ್ಯರ ರಕ್ತದ ಶಕ್ತಿಯ ಬಗ್ಗೆ ವಿವೇಕಾನಂದರಿಗೆ ಬಹಳ ನಂಬಿಕೆ ಇತ್ತು, ಅದನ್ನು ಉಳಿಸುವ ಕೆಲಸ ಯುವ ಜನತೆಯಿಂದ ಆಗಬೇಕು’ ಎಂದು ಹೇಳಿದರು.

‘ಅದ್ಭುತವಾಗಿ ಬದುಕುವ ಟಾನಿಕ್ ನಮಗೆ ಕೊಡಬೇಕಿತ್ತು, ಆದರೆ ಅದನ್ನು ನಮಗೆ ಕೊಟ್ಟವರಿಲ್ಲ, ವಿವೇಕಾನಂದ ಅವರು ಈ ಕೆಲಸ ಮಾಡಿದರು. ವಿದ್ಯಾರ್ಥಿಗಳಿಗೆ ವಿವೇಕ ಸಂದೇಶ ತಲುಪುವ ಕೆಲಸವಾಗಬೇಕು’ ಎಂದು ಅವರು ತಿಳಿಸಿದರು.

ಹೈದಾರಾಬಾದ್‌ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಬೋಧಮಯಾನಂದಜಿ ಮಹಾರಾಜ್ ಮಾತನಾಡಿ,‘ನಾನು ಸ್ವಾತಂತ್ರ್ಯ ತಂದುಕೊಟ್ಟರೆ ಅದನ್ನು ಉಳಿಸಿಕೊಳ್ಳುವವರು ಯಾರು ಎಂದು ವಿವೇಕಾನಂದರು ಕೇಳಿದ್ದರು. ಇನ್ನು 50 ವರ್ಷಗಳ ಬಳಿಕ ದೇಶಕ್ಕೆ ಸ್ವಾತಂತ್ರ್ಯ ಲಭಿಸಬಹುದು ಎಂದು 1900ರಲ್ಲೇ ವಿವೇಕಾನಂದರು ತಿಳಿಸಿದ್ದರು. ಅವರ ಮಾತು ನಿಜವಾಗಿದೆ. ನಾಯಕತ್ವ ಕೊರತೆ ಸ್ವಾತಂತ್ರ್ಯದ ಬಳಿಕವೂ ಕಾಡುತ್ತಲೇ ಇತ್ತು. ಅದರ ಸ್ಪಷ್ಟ ಚಿತ್ರಣ ಸಿಗಬೇಕಿದ್ದರೆ ನಾವು ಗಡಿ ಭಾಗಕ್ಕೆ ಹೋಗಬೇಕು’ ಎಂದರು.

‘ಬ್ರಿಟಿಷರು ಮಾಡಿದ ಅನ್ಯಾಯ ಒಂದೆರಡಲ್ಲ. ಬಂಗಾಳವನ್ನು ವಿಭಜಿಸಿದ್ದು ದೇಶಕ್ಕೆ ಎದುರಾದ ಮೊದಲ ದೊಡ್ಡ ಆಘಾತವಾಗಿತ್ತು. ಅದರ ಫಲವಾಗಿ ಇಂದು ಬಾಂಗ್ಲಾದೇಶ ನಮ್ಮದಲ್ಲದೆ ಹೋಯಿತು. ಇತ್ತೀಚೆಗಷ್ಟೇ ಬಾಂಗ್ಲಾ ಸರ್ಕಾರದೊಂದಿಗೆ ರೈಲು ಒಪ್ಪಂದ ಆಗಿರುವುದು ಐತಿಹಾಸಿಕ ನಿರ್ಧಾರ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್ ಮಾತನಾಡಿ, ಸ್ವಾಮಿ ವಿವೇಕಾನಂದರಿಗೆ ಯುವ ಸಮುದಾಯದ ಮೇಲೆ ಅಪಾರ ನಂಬಿಕೆ ಇತ್ತು. ಯುವಕರು ಅವರ ಆಶಯಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಯುವಕರು ಶೈಕ್ಷಣಿಕ ಸವಾಲುಗಳನ್ನು ಎದುರಿಸುವಲ್ಲಿ ವಿವೇಕಾನಂದರ ಚಿಂತನೆ ನೆರವಿಗೆ ಬರುತ್ತದೆ. ಶೈಕ್ಷಣಿಕ ಸಾಧನೆ ಮಾತ್ರವಲ್ಲ, ಯುವಕರ ಆಂತರಿಕ ಶಕ್ತಿಯನ್ನು ಉತ್ತೇಜಿಸುವ ಕೆಲಸ ಆಗಬೇಕು, ಇದುವರೆಗೆ ಅದು ಆಗಿರಲಿಲ್ಲ ಎಂದರು.

ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾದ ಬಳಿಕ ಹಲವು ವಿಷಯಗಳಲ್ಲಿ ದಾಸ್ಯ ಕಳೆದುಕೊಂಡ ನಿರಾಳ ಭಾವ ಮೂಡುತ್ತಿದೆ. ಯುವಜನತೆ ಈಗಲಾದರೂ ತಮ್ಮ ಜಡತ್ವವನ್ನು ಬದಿಗಿಟ್ಟು ಸೆಟೆದು ನಿಲ್ಲಬೇಕು ಎಂದರು.

ಬೆಂಗಳೂರು ಹಲಸೂರಿನ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಬೋಧಸ್ವರೂಪಾನಂದಜಿ ಮಹಾರಾಜ್‌, ದಾವಣಗೆರೆ ರಾಮಕೃಷ್ಣ ಮಿಶನ್‌ ಆಶ್ರಮದ ಅಧ್ಯಕ್ಷ ಸ್ವಾಮಿ ತ್ಯಾಗೀಶ್ವರಾನಂದಜಿ ಮಹಾರಾಜ್‌, ರಾಣೆಬೆನ್ನೂರಿನ ಶ್ರೀರ ರಾಮಕೃಷ್ಣ ಗೀತಾಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶನಂದಜಿ ಮಹಾರಾಜ್‌ ವೇದಿಕೆಯಲ್ಲಿದ್ದರು. ಹನುಮಂತಪ್ಪ ಕಾರ್ಯಕ್ರಮ ಸಂಘಟಿಸಿದರು.

ಕಿಕ್ಕಿರಿದ ಯುವಪಡೆ

ವಾಸವಿ ಕಲ್ಯಾಣ ಮಂಟಪದಲ್ಲಿ ಹಲವು ಕಾಲೇಜುಗಳ ವಿದ್ಯಾರ್ಥಿಗಳು ಕಿಕ್ಕಿರಿದು ಸೇರಿದ್ದರು. ಆಸನಗಳೆಲ್ಲ ಭರ್ತಿಯಾಗಿದ್ದರಿಂದ ನೆಲದಲ್ಲೇ ಕುಳಿತು ಸ್ವಾಮೀಜಿಗಳು ಹಾಗೂ ಚಕ್ರವರ್ತಿ ಸೂಲಿಬೆಲೆ ಅವರ ಭಾಷಣಗಳನ್ನು ನಿಶ್ಯಬ್ದವಾಗಿ ಆಲಿಸಿದರು. ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಒಳಗೊಂಡ ಪುಸ್ತಕಗಳ ಮಾರಾಟ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT