ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಮ್ಮನಜೋಗಿ | ಬಾರದ ಬಸ್, ಬದಲಾಗದ ವ್ಯವಸ್ಥೆ

ಅಮರನಾಥ ಕೆ. ಹಿರೇಮಠ
Published : 20 ಡಿಸೆಂಬರ್ 2023, 5:34 IST
Last Updated : 20 ಡಿಸೆಂಬರ್ 2023, 5:34 IST
ಫಾಲೋ ಮಾಡಿ
Comments

ದೇವರಹಿಪ್ಪರಗಿ: ಕಾರ್ಯ ನಿರ್ವಹಿಸದ ಶುದ್ಧ ಕುಡಿಯುವ ನೀರಿನ ಘಟಕ, ಮುಖ್ಯ ರಸ್ತೆಗಳಲ್ಲಿಯೇ ಹರಿಯುವ ಕೊಳಚೆ ನೀರು, ಬಳಕೆಯಾಗದ ಹೈಟೆಕ್ ಶಾಲೆ ಹಾಗೂ ಮಹಿಳಾ ಶೌಚಾಲಯಗಳು, ಬಸ್ ಸೌಲಭ್ಯವಿಲ್ಲದೇ ಶಿಕ್ಷಣವಂಚಿತ ವಿದ್ಯಾರ್ಥಿನಿಯರು ಹೀಗೆ ಹತ್ತು ಹಲವು ಸಮಸ್ಯೆಗಳ ಬೀಡಾಗಿದೆ ಬಮ್ಮನಜೋಗಿ ಗ್ರಾಮ.

ತಾಲ್ಲೂಕಿನ ಮಣೂರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬಮ್ಮಜೋಗಿ ಗ್ರಾಮ ರಾಷ್ಟ್ರೀಯ ಹೆದ್ದಾರಿ-50 ರಿಂದ 3 ಕಿ.ಮೀ ಅಂತರದಲ್ಲಿದೆ. ಎರಡು ತಾಂಡಾಗಳ ಸಹಿತ ಅಂದಾಜು 4 ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಎರಡು ವಾರ್ಡ್‌ಗಳಿದ್ದು ಆರು ಗ್ರಾಮ ಪಂಚಾಯಿತಿ ಪ್ರತಿನಿಧಿಗಳಿದ್ದಾರೆ.

ವನಾಳ ವಸ್ತಿ, ತಾಂಡಾ ಸೇರಿ ಒಟ್ಟು ಗ್ರಾಮದಲ್ಲಿ ಮೂರು ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಿದ್ದು ಇವುಗಳಲ್ಲಿ ಗ್ರಾಮದ ಪ್ರಾಥಮಿಕ ಶಾಲೆಯ 1 ರಿಂದ 8ನೇ ತರಗತಿಯವರೆಗೆ ಒಟ್ಟು 316 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ‘ಮಕ್ಕಳಿಗಾಗಿ ಉತ್ತಮ ತರಗತಿ ಕೊಠಡಿಗಳು, ಅಡುಗೆ ಕೋಣೆಯಿದೆ. ಆದರೆ ಶುದ್ಧ ಕುಡಿಯುವ ನೀರು ಮಾತ್ರ ಇಲ್ಲ. ಜಲಜೀವನ ಮಿಷನ್ ಅಡಿಯಲ್ಲಿ ಸಾರ್ವಜನಿಕರಿಗೆ ಪೂರೈಕೆಯಾಗುವ ನೀರಿನಲ್ಲಿಯೇ ಮಕ್ಕಳ ಬಿಸಿಯೂಟದ ತಯಾರಿ ನಡೆಯುತ್ತದೆ. ಶಾಲಾ ಆವರಣದಲ್ಲಿ₹ 12 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಎರಡು ಹೈಟೆಕ್ ಶೌಚಾಲಯಗಳು ಇದ್ದರೂ, ಮಕ್ಕಳ ಬಳಕೆಗೆ ಸಿಕ್ಕಿಲ್ಲ’ ಎನ್ನುತ್ತಾರೆ ಶಿಕ್ಷಕ ಎಸ್.ಜಿ. ಆಲಮೇಲ.

‘ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಬಂದಾಗಿ ಹಲವು ವರ್ಷಗಳಾಗಿವೆ. ಈಗ ಗ್ರಾಮಸ್ಥರಿಗೆ ಜೆ.ಜೆ.ಎಂ ನೀರೇ ಗತಿ. ತಾಂಡಾ ರಸ್ತೆಯಲ್ಲಿ ನಿರ್ಮಿಸಿದ ಮಹಿಳಾ ಶೌಚಾಲಯ ಹೆಸರಿಗಷ್ಟೇ ಇದೆ. ಇದು ನಿರ್ಮಾಣಗೊಂಡ ದಿನದಿಂದಲೇ ಬಳಕೆಯಾಗಿಲ್ಲ. ಮೇಲೆ ಎರಡು ನೀರಿನ ತೊಟ್ಟಿಗಳಿದ್ದರೂ ನೀರು ಪೂರೈಕೆಯಿಲ್ಲ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದ್ದರೂ ಗ್ರಾಮ ಸಾರಿಗೆ ಬಸ್ ಬರ ಎದುರಿಸುತ್ತಿದೆ.

‘ಎರಡು ವರ್ಷಗಳ ಹಿಂದೆ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದ ಕಾರಣ ಕೇವಲ ಒಂದು ತಿಂಗಳು ಮಾತ್ರ ಸಿಂದಗಿ ಘಟಕದ ಬಸ್ ಗ್ರಾಮಕ್ಕೆ ಬಂತು. ನಂತರ ಬಸ್ ಬರುವುದು ಬಂದಾಯಿತು. ಈಗ ಗ್ರಾಮಕ್ಕೆ ಬರಬೇಕೆಂದರೆ ಖಾಸಗಿ ವಾಹನಗಳೇ ಗತಿ. ಬಸ್ ಸೌಲಭ್ಯಗಳಿಲ್ಲದ ಕಾರಣ ಎಂಟನೆಯ ತರಗತಿ ನಂತರ ವಿದ್ಯಾರ್ಥಿನಿಯರು ಶಿಕ್ಷಣ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿನಿಯರ ಶಿಕ್ಷಣದ ದೃಷ್ಟಿಯಿಂದಾದರೂ ಗ್ರಾಮಕ್ಕೆ ವಿಜಯಪುರ ಹಾಗೂ ಸಿಂದಗಿ ಘಟಕಗಳಿಂದ ದಿನಕ್ಕೆ ಎರಡು ಬಸ್ ವ್ಯವಸ್ಥೆ ಕಲ್ಪಿಸಬೇಕು. ಸಿಂದಗಿ ಘಟಕದ ಎಲ್ಲ ಬಸ್‌ಗಳನ್ನೂ ಕ್ರಾಸ್‌ನಲ್ಲಿ ನಿಲುಗಡೆ ಮಾಡಬೇಕು’ ಎಂದು ಗ್ರಾಮದ ಸಂಗನಗೌಡ ಬಿರಾದಾರ ಹಾಗೂ ದಾವುಲಸಾಬ್ ಮುಲ್ಲಾ ಒತ್ತಾಯಿಸಿದ್ದಾರೆ.

‘ಗ್ರಾಮಕ್ಕೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್‌ ಭೇಟಿಯ ನಂತರ ಗ್ರಾಮದ ಚಿತ್ರಣ ಬದಲಾಗುತ್ತದೆ ಎಂದೇ ನಾವು ಭಾವಿಸಿದ್ದೆವು. ಆದರೆ ಅದಾವುದೂ ಆಗಲೇ ಇಲ್ಲ. ಗ್ರಾಮದ ಎಸ್.ಸಿ ಕಾಲೊನಿಯಲ್ಲಿ ಸಿ.ಸಿ. ರಸ್ತೆ ನಿರ್ಮಾಣದ ಅಗತ್ಯವಿದೆ. ಗ್ರಾಮದಲ್ಲಿ ಹೆಣ್ಣುಮಕ್ಕಳಿಗಾಗಿ ಮುಖ್ಯವಾಗಿ ಪ್ರೌಢಶಾಲೆ, ಪಿ.ಯು ಕಾಲೇಜಿನ ಅಗತ್ಯವಿದೆ. ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಖಾಸಗಿ ಪ್ರೌಢಶಾಲೆ ಹಾಗೂ ಕಾಲೇಜು ಈಗ ಬಂದಾಗಿದೆ. ಕೆಲವು ವರ್ಷಗಳ ಹಿಂದೆ ಗ್ರಾಮಕ್ಕೆ ಮಂಜೂರಾದ ಪ್ರೌಢಶಾಲೆ ಸಹ ಕೊಕಟನೂರ ಗ್ರಾಮಕ್ಕೆ ಸ್ಥಳಾಂತರವಾಯಿತು. ಈಗ ನೂತನ ಸರ್ಕಾರಿ ಪಿ.ಯು ಕಾಲೇಜು, ಪ್ರೌಢಶಾಲೆ ಆರಂಭಗೊಂಡರೆ ಮಕ್ಕಳ ಕಲಿಕೆಗೆ ಅನುಕೂಲವಾಗುತ್ತದೆ’ ಎಂದು ಗ್ರಾಮದ ಅಲ್ಲಾಭಕ್ಷ ಹರನಾಳ, ವಿಠ್ಠಲ ಯಂಕಂಚಿ, ಅಣ್ಣಯ್ಯ ಖಾಚಾಪುರ, ಶಿವಶರಣ ನಾವಿ ಆಗ್ರಹಿಸಿದ್ದಾರೆ.ಬಸ್‌ ಬಿಡಬೇಕೆಂಬ ಗ್ರಾಮಸ್ಥರ ಬೇಡಿಕೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ವಹಿಸಲಾಗುವುದು ರೇವಣಸಿದ್ಧ ಖೈನೂರ ವ್ಯವಸ್ಥಾಪಕ ಸಿಂದಗಿ ಬಸ್ ಘಟಕ

ಗ್ರಾಮ ವ್ಯಾಪ್ತಿಯ 5 ಕಿ.ಮೀ ಅಂತರದಲ್ಲಿ ಸರ್ಕಾರಿ ಅಥವಾ ಅನುದಾನಿತ ಪ್ರೌಢಶಾಲೆ ಇರದೇ ಇದ್ದರೆ ಮಾತ್ರ ಅಲ್ಲಿ ಪ್ರೌಢಶಾಲೆ ಆರಂಭಕ್ಕೆ ಅವಕಾಶವಿದೆ. ಬಮ್ಮನಜೋಗಿ ಹತ್ತಿರದಲ್ಲಿ 2 ಪ್ರೌಢಶಾಲೆಗಳಿವೆ
ಆರೀಫ್ ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿ, ಸಿಂದಗಿ
ಬಸ್‌ ಬಿಡಬೇಕೆಂಬ ಗ್ರಾಮಸ್ಥರ ಬೇಡಿಕೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ವಹಿಸಲಾಗುವುದು.
ರೇವಣಸಿದ್ಧ ಖೈನೂರ, ವ್ಯವಸ್ಥಾಪಕ, ಸಿಂದಗಿ ಬಸ್ ಘಟಕ
ಬಮ್ಮನಜೋಗಿ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹೈಟೆಕ್ ಹೆಸರಿನಲ್ಲಿ ನಿರ್ಮಾಣಗೊಂಡು ಬಳಕೆಯಾಗದ ಶೌಚಾಲಯಗಳು
ಬಮ್ಮನಜೋಗಿ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹೈಟೆಕ್ ಹೆಸರಿನಲ್ಲಿ ನಿರ್ಮಾಣಗೊಂಡು ಬಳಕೆಯಾಗದ ಶೌಚಾಲಯಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT