ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶಕ್ಕಾಗಿ ಪ್ರಾಣ ಕೊಡುವ ಸೈನಿಕರ ಗೌರವಿಸಿ: ಶಿವಾನಂದ ಬಿರಾದಾರ

ಕಾರ್ಗಿಲ್ ವಿಜಯೋತ್ಸವ ಸಮಾರಂಭ
Published 26 ಜುಲೈ 2024, 14:39 IST
Last Updated 26 ಜುಲೈ 2024, 14:39 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ‘ದೇಶದ ರಕ್ಷಣೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟಿರುವ ಸೈನಿಕರನ್ನು ದೇಶದ ಜನರು ಗೌರವದಿಂದ ಕಾಣಬೇಕು’ ಎಂದು ಲೆಫ್ಟಿನೆಂಟ್ ಕರ್ನಲ್ ಶಿವಾನಂದ ಬಿರಾದಾರ ಹೇಳಿದರು.

ಪಟ್ಟಣದ ಹಳೇ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಶುಕ್ರವಾರ ಕಾರ್ಗಿಲ್ ವೀರಯೋಧರ ಸ್ಮಾರಕ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ 25ನೇ ಕಾರ್ಗಿಲ್ ವಿಜಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ  ಅವರು‘ಸೈನಿಕರ ಕೆಲಸಗಳನ್ನು ಸರ್ಕಾರದ ಅಧಿಕಾರಿಗಳು ಆದ್ಯತೆ ಮೇರೆಗೆ ಮಾಡಿಕೊಡಬೇಕು’ ಎಂದರು.

ಮಹಾರಾಷ್ಟ್ರ ಸಿವಿಲ್‌ ಡಿಫೆನ್ಸ್ ಕಮಾಂಡೆಟ್ ರಾಜೇಶ್ವರಿ ಕೋರಿ ಮಾತನಾಡಿ, ‘ಸೇನೆಯಲ್ಲಿ ಯುವತಿಯರು ಸೇರ್ಪಡೆಯಾಗಬೇಕು. ಸಬ್ ಮರೀನ್ ಅಂತಹ ರಕ್ಷಣಾ ವಿಭಾಗದಲ್ಲಿ ಮಹಿಳೆಯರು ಕೆಲಸ ಮಾಡಬೇಕು ಎಂಬುದು ನನ್ನ ಆಸೆಯಾಗಿದೆ’ ಎಂದು ಹೇಳಿದರು.

ಯಂಕಂಚಿ-ಚಟ್ಟರಕಿ ಅಭಿನವ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ‘ಜೀವ ಪಣಕ್ಕಿಟ್ಟು ನಮ್ಮನ್ನು ಕಾಪಾಡುವ ಸೈನಿಕರ ತ್ಯಾಗ ದೊಡ್ಡದು. ಕಾರ್ಗಿಲ್‌ನಲ್ಲಿ ಹುತಾತ್ಮರಾದ ಕುಟುಂಬದವರಿಗೆ ರಾಜ್ಯದಲ್ಲಿ ಎಲ್ಲೂ ಇಲ್ಲದಂತಹ ಕಾರ್ಗಿಲ್‌ನಲ್ಲಿ ನಿರ್ಮಿಸಿರುವ ಸ್ಮಾರಕದ ಮಾದರಿಯಲ್ಲಿ ಮುದ್ದೇಬಿಹಾಳದ ಕಾರ್ಗಿಲ್ ಸ್ಮಾರಕ ಸಮಿತಿಯವರು ಕೈಗೊಂಡಿರುವ ಕಾರ್ಯ ಶ್ಲಾಘನೀಯ’ ಎಂದರು.

ಸಮಿತಿಯ ಸಂಸ್ಥಾಪಕ ಗೌರವಾಧ್ಯಕ್ಷ ಬಸವರಾಜ ನಂದಿಕೇಶ್ವರಮಠ, ನಿವೃತ್ತ ಕರ್ನಲ್ ಸತೀಶ ದೇಶಪಾಂಡೆ ಮಾತನಾಡಿದರು.

ತಾಳಿಕೋಟಿ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು,ಕಾರ್ಗಿಲ್ ವೀರಯೋಧರ ಸ್ಮಾರಕ ಸಮಿತಿ ಅಧ್ಯಕ್ಷ ಚಂದ್ರಶೇಖರ ಕಲಾಲ, ಗೌರವಾಧ್ಯಕ್ಷ ಮಹಾಂತೇಶ ಬೂದಿಹಾಳಮಠ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಬಳವಾಟದ ಲಾಲಸಾಬ ಕಂಬಾರ ಇದ್ದರು.

ಸ್ಮಾರಕ ನಿರ್ಮಾಣದಲ್ಲಿ ಕೊಡುಗೆ ನೀಡಿದ ಶಿವಾನಂದ ರಕ್ಕಸಗಿ, ಬಸವರಾಜ ಬಿರಾದಾರ, ಶೇಖರ ಢವಳಗಿ,ರಾಮಬಾಬು ಈಟಿ, ಖಾಜಾಹುಸೇನ ಹುನಕುಂಟಿ ಹಾಗೂ ದಾನಿಗಳು, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದವರನ್ನು ಸನ್ಮಾನಿಸಲಾಯಿತು. ಉದಯ ರಾಯಚೂರು ಹಾಗೂ ರಾಜಶೇಖರ ಹೊಳಿ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಕಾರ್ಗಿಲ್ ಹುತಾತ್ಮ ಸ್ಮಾರಕ ಸಮಿತಿ ಪದಾಧಿಕಾರಿಗಳು,ಮಾಜಿ ಸೈನಿಕರು ಪಾಲ್ಗೊಂಡಿದ್ದರು.

ಪ್ರಮುಖ ಬೀದಿಗಳಲ್ಲಿ ಜ್ಯೋತಿಯಾತ್ರೆ:
 
ಕಾರ್ಗಿಲ್ ಯೋಧ ದಾವಲಸಾಬ ಕಂಬಾರ ಅವರ ನಿವಾಸದಿಂದ ಮುದ್ದೇಬಿಹಾಳದ ಪ್ರಮುಖ ಬೀದಿಗಳಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳ ಸದಸ್ಯರು ಜ್ಯೋತಿಯಾತ್ರೆ ನಡೆಸಿದರು. ಸಾರೋಟಿನಲ್ಲಿ ಸೇನೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸತೀಶ ದೇಶಪಾಂಡೆ, ರಾಜೇಶ್ವರಿ ಕೋರಿ, ಶಿವಾನಂದ ಬಿರಾದಾರ ಅವರನ್ನು ಮೆರವಣಿಗೆ  ಮಾಡಲಾಯಿತು. ಮಾರ್ಗ ಮಧ್ಯೆ ಓಂಶಾಂತಿ ಭವನದ ಮುಂದೆ ಪ್ರಜಾಪಿತ ಬ್ರಹ್ಮಕುಮಾರಿ ವಿದ್ಯಾಲಯದ ಮಂಜುಳಾ ಅಕ್ಕ ಸೇನೆಯ ಅಧಿಕಾರಿಗಳನ್ನು ಸನ್ಮಾನಿಸಿದರು.

ಮುದ್ದೇಬಿಹಾಳದಲ್ಲಿ ಸೇನೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಸೇನಾ ಅಧಿಕಾರಿಗಳನ್ನು ಸಾರೋಟಿನಲ್ಲಿ ಮೆರವಣಿಗೆ  ಮಾಡಲಾಯಿತು
ಮುದ್ದೇಬಿಹಾಳದಲ್ಲಿ ಸೇನೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಸೇನಾ ಅಧಿಕಾರಿಗಳನ್ನು ಸಾರೋಟಿನಲ್ಲಿ ಮೆರವಣಿಗೆ  ಮಾಡಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT