ಸೋಮವಾರ, 30 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ | ಸುಳ್ಳು ದಾಖಲೆ ಸೃಷ್ಟಿ: ಅಧಿಕಾರಿ ಅಮಾನತು

Published : 30 ಸೆಪ್ಟೆಂಬರ್ 2024, 5:07 IST
Last Updated : 30 ಸೆಪ್ಟೆಂಬರ್ 2024, 5:07 IST
ಫಾಲೋ ಮಾಡಿ
Comments

ವಿಜಯಪುರ: ದ್ವಿತೀಯ ಪಿಯುಸಿಯನ್ನು ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಪ್ರೋತ್ಸಾಹ ಧನವನ್ನು ದೋಚಿದ ಸಿಬ್ಬಂದಿ ಕೊನೆಗೂ ತಪ್ಪೊಪ್ಪಿಕೊಳ್ಳುವ ಮೂಲಕ ಅಮಾನತುಗೊಂಡಿದ್ದಾನೆ.

‘ನಕಲಿ ವಿದ್ಯಾರ್ಥಿಗಳ ಹೆಸರಿನಲ್ಲಿ ಹಣ ಗುಳುಂ’ ಎಂಬ ಶೀರ್ಷಿಕೆಯಲ್ಲಿ ಸೆ.5 ರಂದು ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಎಚ್ಚೆತ್ತು ಕೊಂಡ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ರಿಷಿ ಆನಂದ್‌ ಹಾಗೂ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುಂಡಲೀಕ ಮಾನವರ ಅವರಿಗೆ ಸೂಚನೆ ನೀಡಿದ್ದರು.

ಈ ಸಂಬಂಧ ತನಿಖಾ ತಂಡವನ್ನು ನೇಮಿಸಲಾಗಿತ್ತು. ತಂಡವು ಇಲಾಖೆಯ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿತ್ತು. ಅಲ್ಲದೇ, ದಾಖಲೆ ಪತ್ರಗಳನ್ನು ಪರಿಶೀಲಿಸಿದಾಗ ವಿದ್ಯಾರ್ಥಿ ಗಳಿಗೆ ನೀಡಬೇಕಾದ ಪ್ರೋತ್ಸಾಹಧನ ವನ್ನು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಲಪಟಾಯಿಸಿರುವುದು ಖಚಿತವಾಗಿದೆ.

ವಿಷಯ ನಿರ್ವಾಹಕ ಅಮಾನತು: ‘ಸಮಾಜ ಕಲ್ಯಾಣ ಇಲಾಖೆಯ ವಿಜಯಪುರ ತಾಲ್ಲೂಕು ಉಪ ನಿರ್ದೇಶಕ ಕಚೇರಿಯ ವಿಷಯ ನಿರ್ವಾಹಕ (ಎಸ್‌ಡಿಎ) ಸಿದ್ದಪ್ಪ ಹೊನ್ನಮನಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಇಲಾಖೆಗೆ ತಪ್ಪು ಮಾಹಿತಿ ನೀಡಿ ಪ್ರೋತ್ಸಾಹಧನವನ್ನು ನಕಲಿ ಬ್ಯಾಂಕ್‌ ಅಕೌಂಟ್‌ಗಳಿಗೆ ವರ್ಗಾಯಿಸಿಕೊಂಡು ಇಲಾಖೆಗೆ ವಂಚನೆ ಮಾಡಿರುವುದು ಸಾಬೀತಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುಂಡಲೀಕ ಮಾನವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಜಯಪುರ ತಾಲ್ಲೂಕಿಗೆ ಸಂಬಂಧಿಸಿದಂತೆ 2023–24ನೇ ಸಾಲಿನಲ್ಲಿ ಮಂಜೂರು ಮಾಡಿದ ಪ್ರೋತ್ಸಾಹ ಧನದ ಅರ್ಜಿಗಳನ್ನು ಪರಿಶೀಲಿಸಲಾಗಿ ಒಟ್ಟು 14 ಅರ್ಜಿಗಳಲ್ಲಿ ವಿದ್ಯಾರ್ಥಿಗಳ ಹೆಸರು, ತಂದೆಯ ಹೆಸರು ಮತ್ತು ವಿದ್ಯಾರ್ಥಿಯ ಜಾತಿಯಲ್ಲಿ ವ್ಯತ್ಯಾಸ ಕಂಡು ಬಂದಿದೆ’ ಎಂದರು.

‘ಒಟ್ಟು 14 ವಿದ್ಯಾರ್ಥಿಗಳ ಹೆಸರಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ₹2.80 ಲಕ್ಷ ಹಣವನ್ನು ನಕಲಿ ಅಕೌಂಟ್‌ಗಳಿಗೆ ವರ್ಗಾವಣೆ ಮಾಡಿರುವುದು ಖಚಿತವಾಗಿದೆ. ಈ ಸಂಬಂಧ ಸಿಬ್ಬಂದಿ ಸಿದ್ದಪ್ಪ ಹೊನ್ನಮನಿಗೆ ನೋಟಿಸ್‌ ನೀಡಲಾಗಿತ್ತು. ಈಗಾಗಲೇ ಸಿಬ್ಬಂದಿಯು ಹಣ ವಂಚಿಸಿರುವ ಬಗ್ಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾನೆ. ಅಲ್ಲದೇ, ಹಣವನ್ನು ಸರ್ಕಾರಕ್ಕೆ ಮರಳಿಸುವುದಾಗಿ ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ನೀಡಲಾದ ವರದಿ ಅನ್ವಯ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಆತನನ್ನು ಕೆಲಸದಿಂದ ಅಮಾನತುಗೊಳಿಸಿದ್ದಾರೆ’ ಎಂದು ಹೇಳಿದರು.

ಹಗರಣದಲ್ಲಿ ಇನ್ನಷ್ಟು ಮಂದಿ ಶಾಮೀಲು; ಕ್ರಮಕ್ಕೆ ಆಗ್ರಹ

ವಿಜಯಪುರ: ‘ಪ್ರೋತ್ಸಾಹಧನ ವಂಚನೆ ಪ್ರಕರಣದಲ್ಲಿ ಇದುವರೆಗೆ ಕೇವಲ ಒಬ್ಬ ಸಿಬ್ಬಂದಿ ಮಾತ್ರ ಸಿಕ್ಕಿ ಬಿದ್ದಿದ್ದು, ಅಮಾನತುಗೊಂಡಿದ್ದಾನೆ, ಈ ವಂಚನೆ ಹಗರಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಇನ್ನೂ ಅನೇಕ ಸಿಬ್ಬಂದಿ, ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಇದೆ. ಅಲ್ಲದೇ, ವಿಜಯಪುರ ತಾಲ್ಲೂಕು ಮಾತ್ರವಲ್ಲದೇ ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲೂ ಪ್ರೋತ್ಸಾಹಧನ ವಂಚಿಸಿರುವ ಪ್ರಕರಣ ನಡೆದಿದೆ, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು’ ಎಂದು ದಲಿತ ಮುಖಂಡ ಬಸಲಿಂಗಪ್ಪ ಬಿದರಕುಂದಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT