ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಹಾಪುರ ಅಭಿವೃದ್ಧಿಗೆ ₹475 ಕೋಟಿ ಅನುದಾನ: ದರ್ಶನಾಪುರ

ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಗೆ ₹292.98 ಕೋಟಿ ನೀಡಲು ಅನುಮೋದನೆ
Published : 18 ಸೆಪ್ಟೆಂಬರ್ 2024, 15:33 IST
Last Updated : 18 ಸೆಪ್ಟೆಂಬರ್ 2024, 15:33 IST
ಫಾಲೋ ಮಾಡಿ
Comments

ಶಹಾಪುರ: ‘ನಗರದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಗೆ ₹292.98 ಕೋಟಿ ನೀಡಲು ಮಂಗಳವಾರ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಭೀಮಾ ನದಿಯಿಂದ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ₹87 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಮನೆ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸುವ ₹86.82 ಕೋಟಿ ವೆಚ್ಚದ ಯೋಜನೆ ಅನುಷ್ಠಾನಗೊಳ್ಳಲಿದೆ. ಹೀಗೆ ನಗರಕ್ಕೆ ಸುಮಾರು ₹475 ಕೋಟಿ ಅನುದಾನ ಲಭ್ಯವಾಗಲಿದೆ’ ಎಂದರು.

ನಗರಕ್ಕೆ ಒಳಚರಂಡಿ ವ್ಯವಸ್ಥೆಯ ಅಗತ್ಯವಿತ್ತು. ಆ ನಿಟ್ಟಿನಲ್ಲಿ ಸಮಗ್ರ ವಿವರದೊಂದಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ರಾಜ್ಯ ಸರ್ಕಾರ ಒಳ ಚರಂಡಿ ಕಾಮಗಾರಿ ಕೈಗೊಳ್ಳಲು ಬೇಕಾದ ಅನುದಾನ ಕಲ್ಪಿಸಿದೆ ಎಂದು ಹೇಳಿದರು.

ತಾಲ್ಲೂಕಾಡಳಿತ ಕಚೇರಿಗೆ ಮಿನಿ ವಿಧಾನಸೌಧದ ಬದಲಿಗೆ ಪ್ರಜಾಸೌಧ ನಿರ್ಮಿಸಲಾಗುತ್ತಿದ್ದು, ಅದರಲ್ಲಿ ಎ.ಬಿ.ಸಿ ಮೂರು ವಿಭಾಗಗಳನ್ನು ಮಾಡಲಾಗಿದೆ. ಎ ಮಾದರಿ ಪ್ರಜಾಸೌಧಕ್ಕೆ ₹8.60 ಕೋಟಿ, ಬಿ ಮಾದರಿ ಕಟ್ಟಡಕ್ಕೆ ₹10.70 ಕೋಟಿ, ಸಿ ಮಾದರಿ ಕಟ್ಟಡಕ್ಕೆ ₹16 ಕೋಟಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಶಹಾಪುರದಲ್ಲೂ ಟೌನ್‌ಹಾಲ್ ಬಳಿ ಸುಮಾರು ನಾಲ್ಕು ಎಕರೆ ಜಾಗದಲ್ಲಿ ಪ್ರಜಾಸೌಧ ನಿರ್ಮಿಸಲಾಗುವುದು ಎಂದು ಸಚಿವ ದರ್ಶನಾಪುರ ತಿಳಿಸಿದರು.

ನಗರದ ಮಿನಿ ವಿಧಾನಸೌಧ ಕಟ್ಟಡವನ್ನು ನಗರಸಭೆ ಕಚೇರಿ ನಡೆಸಲು ನೀಡಲಾಗುವುದು. ಹಳೆ ತಹಶೀಲ್ದಾರ್ ಕಚೇರಿ ಜಾಗದಲ್ಲಿ 50 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸಲಾಗುವುದು. ನೋಂದಣಾಧಿಕಾರಿಗಳ ಕಚೇರಿಯನ್ನು ಎಪಿಎಂಸಿ ಕಟ್ಟಡವೊಂದರಲ್ಲಿ ಆರಂಭಿಸಲಾಗುತ್ತಿದೆ ಎಂದರು.

‘ಶೀಘ್ರ ಬ್ಯಾಡ್ಮಿಂಟನ್ ಮೈದಾನ ಜಿಮ್ ಸೌಲಭ್ಯ’

ಶಹಾಪುರ ನಗರದ ಕ್ರೀಡಾಂಗಣದ ಬಳಿ ಬ್ಯಾಡ್ಮಿಂಟನ್ ಮೈದಾನದ ಜೊತೆಗೆ ಹೊರಗೆ ‘ಹೊರಾಂಗಣ ಜಿಮ್’ ಸ್ಥಾಪಿಸಲಾಗುವುದು. 19 ಸಲಕರಣೆ ಅಳವಡಿಸಲಾಗುವುದು. ಈ ಕೆಲಸ ಶೀಘ್ರದಲ್ಲಿಯೇ ಆರಂಭವಾಗಲಿದೆ’ ಎಂದು ಸಚಿವ ದರ್ಶನಾಪುರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT