ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ: ಗಿರಿನಾಡಿನಲ್ಲಿ ಬೆಳಕಿನ ಹಬ್ಬದ ವಿಶೇಷ

Published : 1 ನವೆಂಬರ್ 2024, 7:21 IST
Last Updated : 1 ನವೆಂಬರ್ 2024, 7:21 IST
ಫಾಲೋ ಮಾಡಿ
Comments
ಯಾದಗಿರಿ ನಗರದ ರೈಲ್ವೆ ಸ್ಟೇಷನ್‌ ರಸ್ತೆಯ ಅಂಗಡಿಯೊಂದರಲ್ಲಿ ದೀಪಾವಳಿ ಹಬ್ಬಕ್ಕಾಗಿ ಇಟ್ಟಿದ್ದ ಬಣ್ಣದ ದೀಪಗಳನ್ನು ಬಾಲಕಿ ಕುತೂಹಲದಿಂದ ವೀಕ್ಷಿಸಿದಳು  
ಯಾದಗಿರಿ ನಗರದ ರೈಲ್ವೆ ಸ್ಟೇಷನ್‌ ರಸ್ತೆಯ ಅಂಗಡಿಯೊಂದರಲ್ಲಿ ದೀಪಾವಳಿ ಹಬ್ಬಕ್ಕಾಗಿ ಇಟ್ಟಿದ್ದ ಬಣ್ಣದ ದೀಪಗಳನ್ನು ಬಾಲಕಿ ಕುತೂಹಲದಿಂದ ವೀಕ್ಷಿಸಿದಳು  
ಯಾದಗಿರಿ ನಗರದ ಮೆಥೋಡಿಸ್ಟ್‌ ಚರ್ಚ್‌ ಮುಂಭಾಗದಲ್ಲಿ ಮಣ್ಣಿನ ಹಣತೆ ವ್ಯಾಪಾರ ನಡೆಯಿತು
ಯಾದಗಿರಿ ನಗರದ ಮೆಥೋಡಿಸ್ಟ್‌ ಚರ್ಚ್‌ ಮುಂಭಾಗದಲ್ಲಿ ಮಣ್ಣಿನ ಹಣತೆ ವ್ಯಾಪಾರ ನಡೆಯಿತು
ಕಾಳ ಪಾಟ್‌ ಬಲಿ
ಯಾದಗಿರಿ ಜಿಲ್ಲೆಯ ಪ್ರತಿಯೊಂದು ಹೋಬಳಿಯಲ್ಲಿ ತಾಂಡಾಗಳ ಸಂಖ್ಯೆ ಹೆಚ್ಚಿದೆ. ಹೀಗಾಗಿ ಲಂಬಾಣಿ ಸಮುದಾಯದವರು ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ದುಡಿಯಲು ದೂರದ ಮಹಾನಗರಗಳಿಗೆ ತೆರಳಿದವರು ‌ದೀಪಾವಳಿಗೆ ತಮ್ಮ ಊರಿಗೆ ಬರುತ್ತಾರೆ. ಯಾದಗಿರಿ ತಾಲ್ಲೂಕಿನ ಯರಗೋಳ ಮುದ್ನಾಳ ದೊಡ್ಡ ತಾಂಡಾ ಆಶನಾಳ ತಾಂಡಾ ಮುಂಡರಗಿ ಅಲ್ಲಿಪುರ ವೆಂಕಟೇಶ ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಂಡಾಗಳಲ್ಲಿ ನೃತ್ಯವೇ ಇಲ್ಲಿ ಆಕರ್ಷಣೆಯಾಗಿದೆ. ದಸರಾ ಹಬ್ಬದಿಂದ ದೀಪಾವಳಿವರೆಗೆ ಪ್ರತಿನಿತ್ಯ ರಾತ್ರಿ ಮಹಿಳೆಯರು ನೃತ್ಯ ಮಾಡುವ ಸಂಪ್ರದಾಯ ಕಂಡುಬರುತ್ತದೆ. ಶಹಾಪುರ ತಾಲ್ಲೂಕಿನ ಹೋತಪೇಟ ಗ್ರಾಮಕ್ಕೆ ಹೊಂದಿಕೊಂಡ ನಾಲ್ಕು ತಾಂಡಾಗಳಲ್ಲಿ ದೀಪಾವಳಿ ಸಂಭ್ರಮದಿಂದ ನಡೆಯುತ್ತದೆ. ದಿಬ್ಬ ತಾಂಡಾ ನಡುವಿನ ತಾಂಡಾ ಕೆಳಗಿನ ತಾಂಡಾ ಮತ್ತು ಮುಂದಿನ ತಾಂಡಾಗಳಲ್ಲಿ ಹಬ್ಬವನ್ನು ಸಡಗರದಿಂದ ಆಚರಣೆ ಮಾಡಲಾಗುತ್ತದೆ. ದವಾಳಿ (ದೀಪಾವಳಿ) ಹಬ್ಬವನ್ನು ವಿಜೃಂಭಣೆ ಹಾಗೂ ಭಯಭಕ್ತಿಯಿಂದ ಆಚರಿಸುವ ‘ಗೋರ್‌’ ಜನರು ಈ ದೀಪಾವಳಿ ಅಮಾವಾಸ್ಯೆಯನ್ನು ‘ಕಾಳಿಮಾಸ್’ ಎಂಬುದಾಗಿ ಆಚರಿಸುತ್ತಾರೆ. ಕಾಳಿಮಾಸ್ ಎಂದರೆ ಕಾಳ ಅಮಾವಾಸ್ ಎಂಬುದಾಗಿದ್ದು ವರ್ಷದಲ್ಲಿ ಬರುವ ಹನ್ನೆರಡು ಅಮಾವಾಸ್ಯೆಗಳಲ್ಲಿಯೇ‌ ಈ ಅಮಾವಾಸ್ಯೆಯನ್ನೇ ಗೋರ್‌ ಜನರು ಕಾಳಿಮಾಸ್ (ಕತ್ತಲೆಯ ಅಮಾವಾಸ್ಯೆ) ಎಂದು ಆಚರಣೆ ಮಾಡುತ್ತಾರೆ. ಕಾಳಿಮಾಸ್ ದಿನ ಗೋರ್‌ ಜನರು ಪ್ರತಿ ತಾಂಡಾಗಳಲ್ಲಿಯೂ ಕರಿ ಹೆಣ್ಣು ಆಡಿನ (ಕಾಳ ಪಾಟ್) ಬಲಿಯನ್ನೇ ಕೊಡುತ್ತಾರೆ. ತಾಂಡಾದವರಿಗೆಲ್ಲರಿಗೂ ಈ ಆಡಿನ‌ ಮಾಂಸವನ್ನು ಪಾಲು ಹಂಚಿ‌ ತಾಂಡಾದಲ್ಲಿ ಸಮಾನತೆ ಸಾರುತ್ತಾರೆ. ತಾಂಡಾಗಳಲ್ಲಿ ದೀಪಾವಳಿ ಎಂದರೆ ಆರತಿ ಬೆಳಗುವುದು ಹಾಡು ಹಾಡುವುದು ನೃತ್ಯ ಮಾಡುವುದು ಭಕ್ತಿಗೀತೆಗಳ ಮೂಲಕ ಕುಲದೇವತೆ ಮತ್ತು ಸಂತ ಸೇವಾಲಾಲ್‌ ಅವರನ್ನು ಪೂಜಿಸುವುದಾಗಿದೆ. ಕಾಂಚಳಿ (ಜಾಕೀಟು) ಪೇಟಿಯಾ (ಲಂಗ) ಛಾಟೀಯ (ಮೇಲು ವಸ್ತ್ರ) ಅಲಂಕಾರಕ್ಕೆ ಬೇಕಾಗುವ ಸಾಮಗ್ರಿ ರಂಗೋಲಿ ಪುಡಿ ಖರೀದಿಸುತ್ತಾರೆ. ಅಮಾವಾಸ್ಯೆಯ ಸಂಜೆ ಮೇರಾ ಮಾಡುವಾಗ ಬಲಿ ಪಾಡ್ಯಮಿಯಂದು ಲಂಬಾಣಿ ತಾಂಡಾದ ಅವಿವಾಹಿತ ಹೆಣ್ಣುಮಕ್ಕಳು ತಾಂಡಾದ ಕತ್ತಲೆ ಓಡಿಸಿ ಬೆಳಕು ಕರುಣಿಸುವಂತೆ ಪ್ರಾರ್ಥನೆ ಸಲ್ಲಿಸುವರು. ನಂತರ ದೀಪಾವಳಿ ದಿನ ಆ ವರ್ಷದಲ್ಲಿ ಅಗಲಿದವರನ್ನು ನೆನೆದು ಅವರ ಆತ್ಮಕ್ಕೆ ಶಾಂತಿ ಕೋರುವರು. ಸಾವು ಸಂಭವಿಸಿದ ಮನೆಗಳಿಗೆ ಹೋಗಿ ಕುಟುಂಬಸ್ಥರಿಗೆ ಸಾಂತ್ವನ ಹೇಳುವರು. ದೇವರ ನಾಮ ಸ್ಮರಣೆಯೊಂದಿಗೆ ಅಪ್ಪ ಅಮ್ಮ ಅಣ್ಣ ತಮ್ಮ ಗುರು ಹಿರಿಯರ ಗುಣಗಾನ ಮಾಡಿ ನಮಸ್ಕರಿಸುತ್ತಾರೆ. ‘ವರ್ಸೇರ ದಾಡೇರ್ ಕೋರ್ ದವಾಳಿ ತೋನ್ ಮೇರಾ ಸೇವಾಲಾಲ್ ತೋನ್ ಮೇರಾ ಮಾರಿಯಮ್ಮ ತೋನ್ ಮೇರಾ’ ಎಂಬ ಶುಭಾಶಯದ ಹಾಡು ಹಾಡುವುದರ ಮುಖಾಂತರ ಪ್ರತಿ ತಾಂಡಾದ ಮನೆಗಳಲ್ಲಿ ದೀಪಾವಳಿ ಹಬ್ಬದ ವಿಶೇಷ. ಮಾರನೇ ದಿನ ಹೂವು ತರಲು ಹೊರಟ ಯುವತಿಯರು ಲಂಬಾಣಿ ಭಾಷೆಯಲ್ಲಿ ಹಬ್ಬದ ಮಹತ್ವ ಸಾರುವ ಹಾಡುಗಳ ಜೊತೆಗೆ ಹೂವು ಕೀಳಲು ಬಂದ ತಮ್ಮನ್ನು ಬಯ್ಯಬೇಡಿ ಎಂದು ಹೊಲದ ಮಾಲೀಕನಿಗೆ ಹಾಡಿನಲ್ಲೇ ಮನವಿ ಮಾಡುತ್ತಾರೆ. ಕಾಡು ಹೂವುಗಳನ್ನು ಕಿತ್ತು ಬುಟ್ಟಿಯಲ್ಲಿ ಸಂಗ್ರಹಿಸಿಕೊಂಡು ಬಂದು ಹಾಡುಗಳನ್ನು ಹಾಡುತ್ತ ತಾಂಡಾದ ಪ್ರತಿ ಮನೆಗೆ ತೆರಳುತ್ತಾರೆ. ಮನೆಯ ಮುಂದೆ ಹೂವು ಹಾಕಿ ಬರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT