ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಹಾಪುರ | ಕಾಯಂ ಬಿಇಒ ನೇಮಕಕ್ಕೆ ಹೆಚ್ಚಿದ ಕೂಗು

Published 24 ಜುಲೈ 2024, 6:02 IST
Last Updated 24 ಜುಲೈ 2024, 6:02 IST
ಅಕ್ಷರ ಗಾತ್ರ

ಶಹಾಪುರ: ಪ್ರಭಾರ ಹುದ್ದೆಯಲ್ಲಿರುವ ಜಾಹೇದಾ ಬೇಗಂ ಅವರನ್ನು ನಿಯೋಜನೆ ಮೇಲೆ ಬಿಡುಗಡೆಗೊಳಿಸಿ ಕಾಯಂ ಬಿಇಒ ಅವರನ್ನು ನೇಮಕ ಮಾಡಿ ತಾಲ್ಲೂಕಿನಲ್ಲಿ ಹದಗೆಟ್ಟ ಶಿಕ್ಷಣ ಇಲಾಖೆಯನ್ನು ಸರಿದಾರಿಗೆ ತರಬೇಕು ಎಂಬ ಕೂಗು ಮಕ್ಕಳ ಪಾಲಕರಿಂದ ಕೇಳಿ ಬರುತ್ತಲಿದೆ.

ಹಿಂದೆ ಶಿಬಾ ಜಲಿಯನ್ ಅವರು ಏಪ್ರಿಲ್‌ 30ರಂದು ವಯೋನಿವೃತ್ತಿ ಹೊಂದಿದ ಮೇಲೆ ಕಲಬುರಗಿ ಶಿಕ್ಷಣ ಇಲಾಖೆಯ ಜಾಹೇದಾ ಬೇಗಂ ಅವರು ನಿಯೋಜನೆ ಮೇಲೆ ಬಿಇಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಪ್ರಸಕ್ತ ವರ್ಷ ಶೈಕ್ಷಣಿಕ ವರ್ಷ ಆರಂಭವಾಗಿ ಒಂದುವರೆ ತಿಂಗಳು ಕಳೆದರೂ ಸಮರ್ಪಕವಾಗಿ ಮಕ್ಕಳಿಗೆ ಸಮವಸ್ತ್ರದ ಹಂಚಿಕೆಯಾಗಿಲ್ಲ.

ಅರೆ ಬರೆ ಪುಸ್ತಕ ವಿತರಣೆ ಮಾಡಲಾಗಿದೆ. ಮಕ್ಕಳಿಗೆ ಶೂಗಳನ್ನು ಕಲ್ಪಿಸಿಲ್ಲ. ಅಲ್ಲದೆ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಗೆ ಗೈರು ಹಾಜರಾಗಿ ಅನ್ಯ ಕೆಲಸವೆಂದು ಕೆಳ ಹಂತದ ಅಧಿಕಾರಿಯನ್ನು ಕಳುಹಿಸುವುದು ರೂಢಿ ಮಾಡಿಕೊಂಡಿದ್ದಾರೆ ಎಂದು ಪಾಲಕರು ದೂರಿದ್ದಾರೆ.

ಅನಧಿಕೃತ ಶಾಲೆಗಳನ್ನು ಬಂದ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಧರಣಿ, ಪ್ರತಿಭಟನೆ ನಡೆಸಿದರೂ ಸಹ ಬಿಇಒ ಅವರು ಕಾಟಾಚಾರಕ್ಕೆ ಶಾಲೆಗಳಿಗೆ ಭೇಟಿ ನೀಡಿ ನೋಟಿಸ್‌ ನೀಡಿ ಕೈ ತೊಳೆದುಕೊಂಡಿದ್ದಾರೆ ಎಂಬುದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಪುತ್ರ ಜವಳಿ ಆರೋಪ.

ಇಂತಹ ಶಾಲೆಗಳಲ್ಲಿ ನಗರದ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಹೆಸರು ದಾಖಲಿಸಿದ್ದಾರೆ. ಮುಂದೆ ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಪ್ರದೇಶ ವಿದ್ಯಾರ್ಥಿಯೆಂದು ಸೈನಿಕ, ನವೋದಯ ಶಾಲೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಬಡ ಗ್ರಾಮೀಣ ಮಕ್ಕಳಿಗೆ ಅವಕಾಶ ವಂಚಿತರಾಗುತ್ತಾರೆ. ಅಲ್ಲದೆ ಶಾಲಾ ದಾಖಲಾತಿಯಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಮಧ್ಯಾಹ್ನ ಬಿಸಿಯೂಟ, ಸಮವಸ್ತ್ರ ಹೀಗೆ ಸರ್ಕಾರದ ಎಲ್ಲಾ ಸೌಲಭ್ಯಗಳು ದೊರೆಯುತ್ತವೆ. ಇದರಿಂದ ಸರ್ಕಾರಕ್ಕೆ ವಂಚಿಸಿದಂತೆ ಆಗುತ್ತಲಿದೆ ಎಂದು ಆರೋಪಿಸುತ್ತಾರೆ ಅವರು.

ತಾಲ್ಲೂಕಿನಲ್ಲಿ ಶೈಕ್ಷಣಿಕ ಸಾಧನೆ ತುಂಬಾ ಸಂಕಷ್ಟದಲ್ಲಿ ಇದೆ. ರಾಜ್ಯದಲ್ಲಿಯೇ ಕೊನೆ ಸ್ಥಾನವನ್ನು ಎಸ್.ಎಸ್.ಎಲ್‌ಸಿ ಕೊನೆ ಸ್ಥಾನದಲ್ಲಿ ಇರುವುದು. ಮತ್ತೆ ಪಾಲಕರಿಗೆ ಆತಂಕವನ್ನು ಉಂಟು ಮಾಡಿದೆ. ಕಾಯಂ ಬಿಇಒ ನೇಮಿಸಿರುವುದರಿಂದ ಆಡಳಿತದಲ್ಲಿ ದಕ್ಷತೆ ತರಲು ಅವಕಾಶವಿರುತ್ತದೆ ಎನ್ನುತ್ತಾರೆ ಪಾಲಕರು.

ತಾಲ್ಲೂಕಿನಲ್ಲಿ ಕಾಯಂ ಬಿಇಒ ಅವರನ್ನು ನೇಮಿಸಿ ಶೈಕ್ಷಣಿಕ ಉನ್ನತಿಗೆ ಶ್ರಮಿಸಬೇಕು. ತಾಲ್ಲೂಕಿನಲ್ಲಿ ಶಿಕ್ಷಣ ವ್ಯವಸ್ಥೆ ಹಾಳಾಗಿ ಹಳ್ಳ ಹಿಡಿದಿದೆ.
ಶಿವಪುತ್ರ ಜವಳಿ, ದಲಿತ ಸಂಘಟನೆ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT