ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಹರಂ ಸಂಭ್ರಮ | ಅಲಾಯಿ ಕುಣಿತ, ಬೊಡೆಂ ನೃತ್ಯಗಳ ಆಕರ್ಷಣೆ

ಗುರುಮಠಕಲ್: ಗ್ರಾಮೀಣ ಭಾಗದಲ್ಲಿ
Published 14 ಜುಲೈ 2024, 6:57 IST
Last Updated 14 ಜುಲೈ 2024, 6:57 IST
ಅಕ್ಷರ ಗಾತ್ರ

ಗುರುಮಠಕಲ್: ತಾಲ್ಲೂಕಿನಲ್ಲಿ ಮೊಹರಂ ಉತ್ಸವದ ಸಂಭ್ರಮ ಕಂಡು ಬಂದಿದ್ದು, ಬೊಡೆಂ ನೃತ್ಯ, ಅಲಾಯಿ ಕುಣಿತ, ಹಲ‌ಗೆ ಬಡಿತದ ಜುಗಲ್‌ಬಂದಿಗೆ ಗ್ರಾಮಗಳು ಮೀಯುತ್ತಿವೆ.

ಜುಲೈ 7ರಿಂದ ಮೊಹರಂ ಆಚರಣೆ ಆರಂಭಗೊಂಡಿದ್ದು, ಮಳೆಯ ಕಾರಣ ಈ ಕಳೆದ ವರ್ಷದಷ್ಟು ಕಳೆ ಇಲ್ಲವಾದರೂ ಗ್ರಾಮೀಣ ಭಾಗದ ಯುವ ಸಮೂಹದ ಅಲಾಯಿಯ ಮೋಡಿ ಮಾತ್ರ ಮುಂದುವರಿದಿದೆ.

ಮೊದಲಿಂದಲೂ ತಾಲ್ಲೂಕು ವ್ಯಾಪ್ತಿಯ ಪಟ್ಟಣ, ಚಪೆಟ್ಲಾ, ಯದ್ಲಾಪುರ, ಗಾಜರಕೋಟ, ಬೂದೂರು, ಕಾಕಲವಾರ ಗ್ರಾಮಗಳಲ್ಲಿ ಪೀರ್‌ಗಳ ಸವಾರಿಗಳ ದಿನದಂದು ಹೆಚ್ಚಿನ ಜನ ಸೇರುತ್ತಾರೆ. ಇಲ್ಲಿನ ಜನ ನೆರೆಯ ಸೇಡಂ ತಾಲ್ಲೂಕಿನ ಇಟ್ಕಲ್, ಕೋಲಕುಂದಾ, ರಂಜೋಳ ಗ್ರಾಮಗಳಿಗೆ ತೆರಳಿ ತಮ್ಮ ಹರಕೆ ತೀರಿಸುವ ವಾಡಿಕೆ ಮುಂದುವರಿದಿದೆ.

ಮಾರುಕಟ್ಟೆಯಲ್ಲಿ ಬಗೆಬಗೆಯ ಬಣ್ಣದಲ್ಲಿನ ಕಾಗದ ಹೂಗಳ ಹಾರಗಳು, ವಿವಿಧ ಮಾದರಿಯ ಹೂಗಳ ಹಾರಗಳ ಬೇಡಿಕೆಗೆ ತಕ್ಕಂತೆ ವರ್ತಕರೂ ಹಾರಗಳನ್ನು ತರಿಸುತ್ತಿದ್ದಾರೆ. ಆದರೆ, ಕಳೆದ ಎರಡು ವರ್ಷಗಳಿಂದ ಮಳೆಗಾಲದ ಅವಧಿಯಲ್ಲಿ ಮೊಹರಂ ಹಬ್ಬ ಬರುತ್ತಿದೆ. ಇದರಿಂದಾಗಿ ಹೆಚ್ಚಿನ ವ್ಯಾಪಾರವಾಗುತ್ತಿಲ್ಲ. ಚಳಿ ಅಥವಾ ಪೂರ್ವ ಬೇಸಿಗೆಯ ಅವಧಿಯಲ್ಲಿ ಬಂದಾಗ ಹೆಚ್ಚು ವ್ಯಾಪಾರವಾಗುತ್ತಿತ್ತು ಎಂದು ವರ್ತಕರೊಬ್ಬರು ತಿಳಿಸಿದರು.

ಅರೆಬಿಕ್ ಕ್ಯಾಲೆಂಡರ್ ಅನುಸಾರ ವರ್ಷಕ್ಕಿಷ್ಟು ಬೇಗ ಬರುವ ಕಾರಣ ಹೀಗಾಗುತ್ತಿದೆ. ಮೊಹರಂ ಹಿನ್ನಲೆ ದೂರದ ನಗರಗಳಿಗೆ ಹೋದವರೂ ಹಿಂದಿರುಗಿ ಹಬ್ಬದಲ್ಲಿ ಭಾಗವಹಿಸುತ್ತಾರೆ. ಕಳೆದ ಭಾನುವಾರ ಮೊಹರಂ ಆಚರಣೆಗೆ ಚಾಲನೆ ನೀಡಿದ್ದು ನಮ್ಮೂರಿನಲ್ಲಿ ಭಾನುವಾರ (ಜುಲೈ14) ರಂದು ಖಾಸೀಂ ಸಾಬ್ ಪೀರ್ ಸವಾರಿಯಿದೆ. ಬುಧವಾರ (ಜುಲೈ 17) ಮೊಹರಂ ಉತ್ಸವ ಕೊನೆಗೊಳ್ಳುತ್ತದೆ ಎಂದು ಚಪೆಟ್ಲಾ ಗ್ರಾಮದ ಹಜರತ್ ಖಾಜಾಪಾಶಾ ಖತೀಬ್ ಮಾಹಿತಿ ನೀಡಿದರು.

ಮೊಹರಂ ಎಂದರೆ ಅಲಾಯಿ ನೃತ್ಯವೆಂಬ ಜಾನಪದ ಶೈಲಿಯ ನೃತ್ಯ ಪ್ರಕಾರವು ಮೊದಲು ನೆನಪಾಗುತ್ತದೆ. ಅಲಾಯಿ ನೃತ್ಯದಲ್ಲಿ ಪ್ರತಿ ವರ್ಷವೂ ಭಾಗವಹಿಸುವೆ. ಹಲಗೆಯೆ ಲಯಕ್ಕೆ ತಕ್ಕಂತೆ ಹೆಜ್ಜೆಗಳನ್ನು ಹಿಂದೆ ಮುಂದೆ ಹಾಕಿ, ಮೊಹರಂ ಹಾಡುಗಳನ್ನು ಗುನುಗುತ್ತಾ ಕುಣಿಯುವುದು ತುಂಬಾ ಆಕರ್ಷಕವೂ ಮತ್ತು ಮುದನೀಡುವುದೂ ಆಗಿದೆ ಎಂದು ಯುವಕ ಮಹೇಶ ವಿವರಿಸಿದರು.

ಹಿಂದಿನಿಂದಲೂ ತಾಲ್ಲೂಕು ವ್ಯಾಪ್ತಿಯಲ್ಲಿ ಮೊಹರಂ ಹಿಂದೂ-ಮುಸ್ಲಿಂ ಎನ್ನುವ ಭೇದ-ಭಾವವಿಲ್ಲದೇ ಆಚರಿಸುವ ಹಬ್ಬವಾಗಿರುವುದು ಜನಜನಿತ. ಮೊಹರಂನಲ್ಲಿ ಯುವ ಸಮುದಾಯವೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಜತೆಗೆ, ಇಡೀ ಉತ್ಸವದಲ್ಲಿ ಸಂಭ್ರಮದಿಂದ ಕುಣಿದು ಕುಪ್ಪಳಿಸಲಿದೆ. ಕಳೆದ ವರ್ಷ ಹರಕೆ ಹೊತ್ತವರು ಹರಕೆ ತೀರಿಸಲೂ ಗ್ರಾಮಗಳಿಗೆ ಹಿಂದಿರುಗುತ್ತಾರೆ.

ತಾಲ್ಲೂಕು ವ್ಯಾಪ್ತಿಯಲ್ಲಿ ಮೊಹರಂ ಕಳೆಗಟ್ಟುತ್ತಿದ್ದು, ಬುಧವಾರ ಮೊಹರಂ ಆಚರಣೆಗೆ ಕೊನೆದಿನ. ಪಟ್ಟಣದಲ್ಲಿನ ಎಲ್ಲಾ ಪೀರಾ ಮಸೀದಿಗಳಲ್ಲಿ ಪ್ರತಿಷ್ಠಾಪಿತ ಪೀರಾಗಳು ಅಂದು ಸಂಜೆ ಮಿಟ್ಟಿಬೌಡಿ (ಗಂಗಾಪರಮೇಶ್ವರಿ ವೃತ್ತ) ಹತ್ತಿರ ಜೊತೆಗೂಡಿ (ಅಲಾಯಿ-ಬಲಾಯಿ) ಮೆರವಣಿಗೆಯಾಗುತ್ತದೆ. ಮೆರವಣಿಗೆಯುದ್ದಕ್ಕೂ ಅಲಾಯಿ, ಬೊಡೆಂ ನೃತ್ಯಗಳು ಮೆರವಣಿಗೆಯಲ್ಲಿ ಕಾಣಬಹುದು ಎಂದು ಪಟ್ಟಣದ ನಿವಾಸಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT