ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಂಡಿಮಯ ರಸ್ತೆ; ಸಂಚಾರಕ್ಕೆ ಸಂಚಕಾರ

ಹದಗೆಟ್ಟ ಜಿಲ್ಲಾ, ರಸ್ತೆ ಗ್ರಾಮೀಣ ರಸ್ತೆಗಳು, ಸವಾರರ ಪರದಾಟ
Published 16 ಜುಲೈ 2024, 6:52 IST
Last Updated 16 ಜುಲೈ 2024, 6:52 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಲ್ಲಿ ಈಚೆಗೆ ಸುರಿದ ಮಳೆಗೆ ಜಿಲ್ಲಾ ಮುಖ್ಯ ರಸ್ತೆ, ಗ್ರಾಮೀಣ ರಸ್ತೆಗಳು ಗುಂಡಿ ಬಿದ್ದು, ಸಂಚಾರಕ್ಕೆ ಸಂಚಕಾರ ತಂದಿವೆ.

ಮೇ ಮತ್ತು ಜೂನ್‌ ತಿಂಗಳಲ್ಲಿ ಸುರಿದ ಮಳೆಗೆ ಗ್ರಾಮೀಣ ರಸ್ತೆಗಳು ಟಾರ್‌ ಕಿತ್ತು ಗುಂಡಿಗಳು ಬಿದ್ದು, ಅಲ್ಪ‍ ಮಳೆಯಾದರೂ ನೀರು ನಿಂತು ಎಷ್ಟು ಅಳ ಇವೆ ಎನ್ನುವಷ್ಟರ ಮಟ್ಟಿಗೆ ಸವಾರರು ಭಯಪಡಿಸುತ್ತಿವೆ. ಟಂಟಂ, ಬೈಕ್‌ ಸೇರಿದಂತೆ ಇತರೆ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವಂತೆ ಆಗಿದೆ. ಹೆದ್ದಾರಿಗೆ ಹೊಂದಿಕೊಂಡ ರಸ್ತೆಗಳಿಗೆ ಮಣ್ಣು ಹಾಕಿದ್ದಲ್ಲದೆ ಡಾಂಬರೀಕರಣ ಮಾಡಿ ತೇಪೆ ಕೆಲಸವಾಗಿದೆ.

ಜಿಲ್ಲೆಯಲ್ಲಿ 13 ರಾಜ್ಯ ಹೆದ್ದಾರಿ ರಸ್ತೆಗಳಿದ್ದು, 758.04 ಕಿಮೀ ವ್ಯಾಪ್ತಿ ಇದೆ. 1,259.99 ಗ್ರಾಮೀಣ ಭಾಗದ ಮುಖ್ಯರಸ್ತೆಗಳಿವೆ. ಇವುಗಳಲ್ಲಿ ಬಹುತೇಕ ಕಳೆದ ಒಂದು ವರ್ಷದಿಂದ ರಸ್ತೆಗಳು ದುರಸ್ತಿಯಾಗಿಲ್ಲ. ಹೀಗಾಗಿ ಮಳೆಗಾಲದಲ್ಲಿ ಮತ್ತಷ್ಟು ಹದಗೆಟ್ಟಿವೆ ಎನ್ನುವ ಆರೋಪಗಳು ಗ್ರಾಮೀಣ ಜನರಿಂದ ಕೇಳಿ ಬರುತ್ತಿವೆ.

ಜಿಲ್ಲಾ ಕೇಂದ್ರದ ಸುತ್ತಲಿನ ಗುರುಸಣಗಿ, ನಾಯ್ಕಲ್, ಗಡ್ಡೆಸೂಗುರು, ಬದಲಾದ, ಬಂದಳ್ಳಿ, ವರ್ಕನಳ್ಳಿ, ಹತ್ತಿಕುಣಿ ರಸ್ತೆ, ಅಬ್ಬೆತುಮಕೂರು, ಮುದ್ನಾಳಗೆ ತೆರಳುವ ರಸ್ತೆ ಕೊರಕಲು ಬಿದ್ದಿವೆ. ರಸ್ತೆಯ ಒಂದು ಭಾಗದಿಂದ ಮತ್ತೊಂದು ಭಾಗದವರೆಗೆ ಗುಂಡಿಗಳು ಬಿದ್ದಿವೆ.

ಅಧಿಕ ಭಾರದ ವಾಹನಗಳ ಸಂಚಾರ:

ಜಿಲ್ಲಾ ಮುಖ್ಯ ರಸ್ತೆ ಸೇರಿ ಗ್ರಾಮೀಣ ರಸ್ತೆಗಳಲ್ಲಿ ಅಧಿಕ ಭಾರದ ಮರಳು ಸಾಗಣೆ ವಾಹನಗಳು ಸಂಚಾರ ಮಾಡುವುದರಿಂದ ದುರಸ್ತಿ ಮಾಡಿದಂತೆ ಮತ್ತೆ ಕೆಟ್ಟು ಹೋಗುತ್ತಿವೆ. ಕೆಲವೆಡೆ ನಿಗದಿತ ಮಿತಿಗಿಂತ ಹೆಚ್ಚಿನ ಭಾರದ ವಾಹನಗಳು ರಸ್ತೆಯ ಮೇಲೆ ಸಂಚರಿಸುತ್ತಿವೆ. ಗ್ರಾಮೀಣ ರಸ್ತೆಗಳ ಮೂಲಕ ಭಾರದ ಮರಳು ಹೊತ್ತ ವಾಹನಗಳು ಸಂಚರಿಸುತ್ತಿರುವ ಕಾರಣ ಪದೇ ಪದೇ ರಸ್ತೆಗಳು ಹದಗೆಡುತ್ತಿವೆ. ಇದರಿಂದ ರಸ್ತೆಗಳು ಹಾಳಾಗುತ್ತವೆ ಎನ್ನುತ್ತಾರೆ ಗ್ರಾಮೀಣ ಜನತೆ.

‘ನಮ್ಮ ಗ್ರಾಮ ಭೀಮಾ ನದಿಗೆ ಹೊಂದಿಕೊಂಡಿದ್ದು, ಯಾದಗಿರಿ–ವಡಗೇರಾ ಮುಖ್ಯ ರಸ್ತೆಯಲ್ಲಿ ಮರಳು ತುಂಬಿದ ವಾಹನಗಳು ಅಕ್ರಮವಾಗಿ ಪ್ರವೇಶಿಸುತ್ತಿವೆ. ಇದರಿಂದ ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದು, ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿವೆ’ ಎಂದು ಬಬಲಾದ ನಿವಾಸಿ ರವಿ ಮುದಕನೋರ ಹೇಳುತ್ತಾರೆ.

ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರು
ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರು
 ಗೌತಮ ಕ್ರಾಂತಿ
 ಗೌತಮ ಕ್ರಾಂತಿ

ಮಳೆಗಾಲದಲ್ಲಿ ಗ್ರಾಮೀಣ ಭಾಗದ ರಸ್ತೆಗಳು ಹದಗೆಟ್ಟಿರುವುದು ಗಮನಕ್ಕೆ ಬಂದಿದೆ. ಶೀಘ್ರ ದುರಸ್ತಿಗೆ ಸಂಬಂಧಿಸಿದವರಿಗೆ ಸೂಚಿಸಲಾಗುವುದು

- ಚನ್ನಾರೆಡ್ಡಿ ಪಾಟೀಲ ತುನ್ನೂರು ಶಾಸಕ

ಜಿಲ್ಲಾ ಕೇಂದ್ರಕ್ಕೆ ಸಮೀಪವಿರುವ ಗ್ರಾಮದಲ್ಲಿ ರಸ್ತೆ ಸಂಚಾರ ಹದಗೆಟ್ಟಿದೆ. ರಸ್ತೆ ಮತ್ತಷ್ಟು ಹದಗೆಟ್ಟರೆ ನಮ್ಮೂರಿಗೆ ಬಸ್‌ ಬರುವುದು ನಿಲ್ಲುತ್ತದೆ. ಕೂಡಲೇ ಸಂಬಂಧಿಸಿದವರು ರಸ್ತೆ ದುರಸ್ತಿ ಮಾಡಬೇಕು

- ಗೌತಮ ಕ್ರಾಂತಿ ಗ್ರಾಪಂ ಸದಸ್ಯ ಬಬಲಾದ

ನಗರದಲ್ಲೂ ಸಂಚಾರಕ್ಕೆ ಹೈರಾಣು ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ರಾಜ್ಯ ಹೆದ್ದಾರಿ ಜಿಲ್ಲಾ ಮುಖ್ಯ ರಸ್ಯೆಗಳು ಹಾದುಹೋಗಿದ್ದು ವಾಹನ ಸವಾರರು ಸಂಚಾರಕ್ಕೆ ಪರದಾಡುತ್ತಿದ್ದಾರೆ. ನಗರದಲ್ಲಿ ಹಾದುಹೋಗಿರುವ 150 ರಾಷ್ಟ್ರೀಯ ಹೆದ್ದಾರಿ ಅಲ್ಲಲ್ಲಿ ಹದಗೆಟ್ಟಿದ್ದು ಮಳೆ ಬಂದರೆ ನೀರು ನಿಂತು ವಾಹನಗಳ ಸವಾರರು ಗುಂಡಿ ತಪ್ಪಿಸಲು ಹೋಗಿ ಅಪಘಾತಗಳಾಗಿರುವ ಘಟನೆಗಳು ನಡೆದಿವೆ. ಎಲ್‌ಐಸಿ ಕಚೇರಿ ಸಮೀಪದಲ್ಲಿ ದೊಡ್ಡ ಗುಂಡಿ ಬಿದ್ದಿದ್ದು ಒಂದು ವರ್ಷವಾದರೂ ತೇಪೆ ಹಚ್ಚುವ ಕೆಲಸವಾಗಿದೆ ವಿನಃ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸ ಆಗಿಲ್ಲ ಎನ್ನುವ ಆರೋಪವನ್ನು ನಗರ ನಿವಾಸಿಗಳು ಮಾಡುತ್ತಾರೆ. ‘ನಗರದಲ್ಲಿ ವಿವಿಧ ಭಾಗಗಳಲ್ಲಿ ರಸ್ತೆಗಳು ಹದಗೆಟ್ಟಿವೆ. ತಾತ್ಕಾಲಿಕ ಕಾಮಗಾರಿಯಿಂದ ರಸ್ತೆ ಸಂಚಾರ ಮತ್ತಷ್ಟು ಹೈರಾಣಾಗಿದೆ. ಸಂಬಂಧಿಸಿದ ಅಧಿಕಾರಿಗಳು ಜನಪ್ರನಿಧಿಗಳು ಕ್ರಮ ಕೈಗೊಳ್ಳಬೇಕು’ ಎಂದು ನಗರ ನಿವಾಸಿ ಮುಸ್ತಾಫ್‌ ಪಟೇಲ್‌ ಆಗ್ರಹಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT