ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ | ಸಂಸತ್ತಿನಲ್ಲಿ ‘ಯುವ ಧ್ವನಿ’ ಅಗತ್ಯ: ಪ್ರಿಯಾಂಕಾ ಸತೀಶ ಜಾರಕಿಹೊಳಿ

Published : 27 ಏಪ್ರಿಲ್ 2024, 22:45 IST
Last Updated : 27 ಏಪ್ರಿಲ್ 2024, 22:45 IST
ಫಾಲೋ ಮಾಡಿ
Comments
ಚಿಕ್ಕೋಡಿ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಕಣಕ್ಕಿಳಿದಿದ್ದಾರೆ. 27 ವರ್ಷದವರಾದ ಅವರು ಎಂಬಿಎ ಪದವೀಧರರು. ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರದಲ್ಲಿ ಅಲ್ಲಲ್ಲಿ ಸಭೆಗಳನ್ನು ನಡೆಸುವುದರ ಜೊತೆಗೆ ಜನರ ಬಳಿ ತೆರಳಿ ಮತ ಯಾಚಿಸುತ್ತಿದ್ದಾರೆ.  ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಪ್ರ

ಘಟಾನುಘಟಿ ರಾಜಕಾರಣಿಗಳು ಪ್ರತಿನಿಧಿಸಿದ ಕ್ಷೇತ್ರವಿದು. ಚಿಕ್ಕ ವಯಸ್ಸಿನಲ್ಲೇ ರಾಜಕೀಯ ಬೇಕಿತ್ತೇ?

ದೇಶದಲ್ಲಿ ಶೇ 50ರಷ್ಟು ಯುವಜನರಿದ್ದಾರೆ. ಅವರ ಪರ ಧ್ವನಿ ಎತ್ತಲು ಸಂಸತ್ತಿನಲ್ಲೂ ಯುವಜನ ಬೇಕು. ಕಾಂಗ್ರೆಸ್‌ ಯುವಜನರಿಗೆ ಆದ್ಯತೆ ಕೊಟ್ಟಿದೆ. ಹಿರಿಯ ನಾಯಕರ ಆಶೀರ್ವಾದವಿದೆ.

ಪ್ರ

ಕ್ಷೇತ್ರದ ಸಮಸ್ಯೆಗಳ ಬಗ್ಗೆ ನಿಮಗೆಷ್ಟು ಅರಿವಿದೆ?

ನೆರೆ ಇಲ್ಲವೇ ಬರ ಈ ಭಾಗದಲ್ಲಿ ಸಾಮಾನ್ಯ. ನೀರಾವರಿ ಸೌಲಭ್ಯ ಕಲ್ಪಿಸಬೇಕಿದೆ. ಗಡಿ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಮಹಿಳೆಯರ ದುಡಿಯುವ ಕೈಗಳಿಗೆ ಕೆಲಸ ನೀಡಬೇಕಿದೆ.

ಪ್ರ

ಕುಟುಂಬ ರಾಜಕಾರಣ ಹೇಗೆ ಸಮರ್ಥಿಸಿಕೊಳ್ಳುತ್ತೀರಿ?

ನನಗೆ ಟಿಕೆಟ್‌ ಕೊಟ್ಟಿರುವ ವಿಚಾರದಲ್ಲಿ ಕುಟುಂಬ ರಾಜಕಾರಣವಿಲ್ಲ. ಶಾಸಕರು, ಮಾಜಿ ಶಾಸಕರು, ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಕೊಟ್ಟಿದ್ದಾರೆ.

ಪ್ರ

ಎಂಬಿಎ ಪದವೀಧರೆಯಾದರೂ ರಾಜಕೀಯದ ಬಗೆಗೆ ಒಲವು ಏಕೆ?

ಹಲವು ವರ್ಷಗಳಿಂದ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ನನಗೆ ಸಹಜವಾಗಿಯೇ ರಾಜಕೀಯದ ಸೆಳೆತವಿತ್ತು. ಆದರೆ, ಸೂಕ್ತ ವೇದಿಕೆ ಸಿಕ್ಕಿರಲಿಲ್ಲ. ಈ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿದೆ ಎಂದು ತಂದೆ ಹೇಳಿದರು. ಆದರೆ, ಸ್ಪರ್ಧಿಸಲು ಒತ್ತಡ ಹೇರಲಿಲ್ಲ. ಸ್ವಯಂಪ್ರೇರಣೆಯಿಂದ ನಾನೇ ಒಪ್ಪಿಕೊಂಡೆ.

ಪ್ರ

ನಿಮ್ಮ ಕುಟುಂಬ ಮತ್ತು ನಿಮ್ಮ ವ್ಯಕ್ತಿತ್ವದ ಪ್ರಭಾವ ಮತದಾರರ ಮೇಲೆ ಎಷ್ಟು ಪರಿಣಾಮ ಬೀರಬಹುದು?

ತಂದೆ ಸತೀಶ ಜಾರಕಿಹೊಳಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೈಗೊಂಡಿದ್ದಾರೆ. ಎಲ್ಲ ಸಮುದಾಯಗಳ ಒಡನಾಟ ಹೊಂದಿದ್ದಾರೆ. ನಮ್ಮ ಕುಟುಂಬದ ಜೊತೆ ಕಾರ್ಯಕರ್ತರ ಪಡೆ ಇದೆ. ತಂದೆಯವರು ಹಾಕಿಕೊಟ್ಟ ಮಾರ್ಗದಲ್ಲೇ ನಾನು ಸಾಗುವೆ. ಇವೆಲ್ಲ ಸಂಗತಿಗಳೂ ಫಲಿತಾಂಶದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ.

ಪ್ರ

ನಿಮ್ಮ ಎದುರು ಹಿರಿಯ ರಾಜಕಾರಣಿ ಸ್ಪರ್ಧಿಸಿದ್ದಾರಲ್ಲ?

ಜನಪ್ರತಿನಿಧಿಯಾಗಿ ಸೇವೆ ಮಾಡಲು ಮನಸ್ಸು ಮತ್ತು ಜನಪರ ತುಡಿತ ಮುಖ್ಯವೇ ಹೊರತು ವಯಸ್ಸು ಅಲ್ಲ. ಆ ಮನಸ್ಸು ನನಗಿದೆ. ನಾನು ಚುನಾವಣೆಗೆ ಸ್ಪರ್ಧಿಸುತ್ತಿರುವುದು ಮೊದಲ ಸಲ ಇರಬಹುದು. ಆದರೆ, ಹಲವು ಚುನಾವಣೆ ಕಂಡಿದ್ದೇನೆ. ತಂದೆ ಸ್ಪರ್ಧಿಸಿದಾಗ, ಗ್ರಾಮಗಳಲ್ಲಿ ಪ್ರಚಾರ ಮಾಡಿದ್ದೇನೆ.

ಪ್ರ

ಎದುರಿಸುತ್ತಿರುವ ಸವಾಲು, ಸಮಸ್ಯೆಗಳೇನು?

ಈಗಿರುವ ಸಂಸದರು ನಿರೀಕ್ಷೆಯಂತೆ ಕೆಲಸ ಮಾಡಿಲ್ಲ ಎಂಬ ಭಾವನೆ  ಜನರಲ್ಲಿದೆ. ಪಂಚ ಗ್ಯಾರಂಟಿ ಯೋಜನೆಗಳಿಗೆ ಆಕರ್ಷಿತರಾದ ಜನ, ನಮ್ಮನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದಾರೆ. ಯುವ ಮತದಾರರಿಂದ ಉತ್ತಮ ಸ್ಪಂದನೆಯಿದೆ.

ಪ್ರ

ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಕರ ಸ್ಪರ್ಧೆಯಿಂದ ಒಳೇಟು ಬೀಳುತ್ತದೆಯಲ್ಲವೇ?

ಖಂಡಿತ ಇಲ್ಲ. ಅವರು 2023ರ ವಿಧಾನಸಭೆ ಚುನಾವಣೆಯಲ್ಲಿ ರಾಯಬಾಗ ಮತಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ, ಇದು ಎಂಟು ಮತಕ್ಷೇತ್ರ ಒಳಗೊಂಡ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಚುನಾವಣೆ. ಅವರ ಸ್ಪರ್ಧೆಯಿಂದ ನಮಗೇನೂ ಹಿನ್ನಡೆಯಾಗದು. ಕಾಂಗ್ರೆಸ್‌ನ ಮತಗಳು ನಮಗೇ ಬರಲಿವೆ.

‘ಮಾದರಿ ಕ್ಷೇತ್ರವಾಗಿಸುವ ಕನಸು’
ಪ್ರ

ಕ್ಷೇತ್ರದ ಅಭಿವೃದ್ಧಿ ಬಗ್ಗೆ ಇಟ್ಟುಕೊಂಡ ಕನಸು ನಿರೀಕ್ಷೆಗಳೇನು?

ಗ್ರಾಮಗಳಲ್ಲಿ ಜನರು ಎದುರಿಸುತ್ತಿರುವ ಕುಂದು ಕೊರತೆಗಳನ್ನು ಬಗೆಹರಿಸಬೇಕಿದೆ. ಅದಕ್ಕೆ ಒತ್ತು ನೀಡುವೆ. ನೀರಾವರಿ ಕಲ್ಪಿಸಬೇಕು ಎಂಬುದು ಬಹುದಿನಗಳ ಕನಸು. ಉದ್ಯೋಗ ಸೃಷ್ಟಿಗೆ ಆದ್ಯತೆ ಕೊಡುವೆ. ಚಿಕ್ಕೋಡಿ ಕ್ಷೇತ್ರವನ್ನು ಮಾದರಿಯಾಗಿಸುವ ಸಂಕಲ್ಪ ಮಾಡಿದ್ದೇನೆ. ಯುವಜನರ ಮತ್ತು ಮಹಿಳಾ ಸಬಲೀಕರಣದ ಕನಸಿದೆ.

ಪ್ರ

ಮತದಾರರು ನಿಮಗೆ ಏಕೆ ಮತ ಹಾಕಬೇಕು?

ಕಷ್ಟ ಕಾಲದಲ್ಲೂ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳ ಲಾಭ ಶೇ 95ರಷ್ಟು ಜನರಿಗೆ ಸಿಕ್ಕಿದೆ. ಅಭಿವೃದ್ಧಿ ವಿಷಯದಲ್ಲಿ ತಂದೆಗೆ ಒಳ್ಳೆಯ ಹೆಸರಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ಜನಪರ ಯೋಜನೆಗಳನ್ನು ಪ್ರಕಟಿಸಿದ್ದೇವೆ. ನನಗೆ ಮತ ಹಾಕಲು ಇವೆಲ್ಲವೂ ಸಕಾರಣವಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT