ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ | ನನ್ನ ಗೆಲುವಿಗೆ ‘ಗೃಹಲಕ್ಷ್ಮಿ’ಯರ ಬಲ: ಡಾ. ಪ್ರಭಾ ಮಲ್ಲಿಕಾರ್ಜುನ್‌

Published : 4 ಮೇ 2024, 23:07 IST
Last Updated : 4 ಮೇ 2024, 23:07 IST
ಫಾಲೋ ಮಾಡಿ
Comments
ಪ್ರ

ದಾವಣಗೆರೆ ಕ್ಷೇತ್ರದ ಜನರು ಎದುರಿಸುತ್ತಿರುವ ಸಮಸ್ಯೆಗಳು ಯಾವುವು?

ಜನರ ನಿರೀಕ್ಷೆಗಳು ಅಪಾರ. ಅವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮುಖ್ಯವಾಗಿ ಈ ಭಾಗದಲ್ಲಿ ಕೈಗಾರಿಕೆ ಬೇಕು. ಹೊಲಿಗೆ ಕಲಿತು ಬೆಂಗಳೂರಿಗೆ ಕೆಲಸಕ್ಕೆ ಹೋಗುವ ಯುವತಿಯರಿಗಾಗಿ ಗಾರ್ಮೆಂಟ್ ಫ್ಯಾಕ್ಟರಿಗಳು ಬೇಕಿವೆ. ಆರೋಗ್ಯ ಸಮಸ್ಯೆಗಳಿವೆ. ಆಂಬುಲೆನ್ಸ್‌ಗಳು ಬೇಕಿವೆ. ಅಡಿಕೆ ದರ ಏರಿಳಿತ ಆಗತ್ತಿದ್ದು, ಸ್ಥಿರವಾಗಿ ಇರಬೇಕು ಅನ್ನೋ ಬೇಡಿಕೆ ಇದೆ. ಜಗಳೂರು, ಹರಪನಹಳ್ಳಿ ಭಾಗದಲ್ಲಿ ಕುಡಿಯುವ ನೀರಿನ‌ ಸಮಸ್ಯೆ ಇದೆ. ಅಲ್ಲಿ ಭದ್ರಾ ನೀರು ತಂದು ಕೆರೆ ತುಂಬಿಸಬೇಕು. ಹರಿಹರ ಭಾಗದಲ್ಲಿ ಭದ್ರಾ ಬಲದಂಡೆ ನಾಲೆಯ ಕೊನೆ ಭಾಗದ ರೈತರ ಜಮೀನಿಗೆ ನೀರು ತಲುಪುತ್ತಿಲ್ಲ. ಅವರ ಬೇಡಿಕೆ ಈಡೇರಿಸಬೇಕಿದೆ. ಗ್ರಾಮೀಣ ಮಹಿಳೆಯರು ಇನ್ನೂ 5 ಕೆ.ಜಿ. ಅಕ್ಕಿ ಕೊಡಿ ಅಂತ ಕೇಳ್ತಾರೆ. ಬರ ಇದೆ. ರೈತರ ಕೈಹಿಡಿಯಬೇಕಿದೆ.

ಪ್ರ

ಕ್ಷೇತ್ರದಲ್ಲಿ 25 ವರ್ಷಗಳಿಂದ ಬಿಜೆಪಿಯೇ ಗೆಲ್ಲುತ್ತಿದೆ. ಈ ಕ್ಷೇತ್ರ ಆ ಪಕ್ಷದ ಭದ್ರಕೋಟೆಯೇ ಆದಂತಿದೆಯಲ್ಲ?

ಹಾಲಿ ಸಂಸದರು ಕಣ್ಣಿಗೆ ಕಾಣುವಂಥ ಕೆಲಸವನ್ನು ಮಾಡಿಲ್ಲ. ಅದಕ್ಕಾಗಿಯೇ ಪ್ರಧಾನಿ ಮೋದಿ ಹೆಸರು ಹೇಳುತ್ತಿದ್ದಾರೆ. ಜಗಳೂರು, ಹರಪನಹಳ್ಳಿ ಭಾಗಗಳು ಬರಪೀಡಿತ ಪ್ರದೇಶಗಳಾಗಿವೆ. ಹಿಂದುತ್ವ, ರಾಮಮಂದಿರ ಎಂದೆಲ್ಲಾ ಮಾತಾಡ್ತಾರೆ. ಜನರ ಪ್ರಬುದ್ಧತೆಯನ್ನೂ ನಾನು ಪ್ರಶ್ನೆ ಮಾಡಬೇಕಾಗುತ್ತದೆ. ಸಮಸ್ಯೆಗಳನ್ನು ಪರಿಹರಿಸುವವರಿಗೆ ಮತ ಹಾಕ್ತಾರೆ ಅನ್ನೋ ನಂಬಿಕೆ ಇದೆ. ಬರ ಪರಿಹಾರ ನೀಡಲೂ ಬಿಜೆಪಿ ಮೀನ–ಮೇಷ ಎಣಿಸಿತ್ತು. 25 ಸಂಸದರು ಈ ಬಗ್ಗೆ ಧ್ವನಿ ಎತ್ತಲಿಲ್ಲ. ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಬರ ಪರಿಹಾರ ಬರುತ್ತಿದೆ. ಇದು ಜನರ ಮನದಲ್ಲಿದೆ.

ಪ್ರ

ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತೆ ಅಂತ ಬಿಜೆಪಿ ಆರೋಪ ಮಾಡುತ್ತದಲ್ಲ?

ಹಾಗಾದ್ರೆ ಬಿಜೆಪಿಯಿಂದ ಯಾರಿಗೆ ಟಿಕೆಟ್ ಕೊಟ್ಟಿದ್ದಾರೆ? ಇನ್ನೊಬ್ಬರ ಕಡೆ ಬೆರಳು ಮಾಡೋದು ಸುಲಭ. ಇಷ್ಟು ವರ್ಷ ಕುಟುಂಬ ರಾಜಕಾರಣ ಮಾಡಲಾಗುತ್ತದೆ ಅನ್ನೋ ಕಾರಣಕ್ಕೇ ನಾನು ತೆರೆಯ ಮರೆಯಲ್ಲೇ ಇದ್ದೆ. ಈ ಬಾರಿ ಗೆಲ್ಲುವ ಅಭ್ಯರ್ಥಿಯನ್ನು ನೋಡಿ ಪಕ್ಷ ‌ನನಗೆ ಟಿಕೆಟ್ ನೀಡಿದೆ.

ಪ್ರ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಜಾರಿಗೊಳಿಸಿದೆ. ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಮತ್ತಷ್ಟು ಭರವಸೆ ನೀಡಲಾಗಿದೆ. ಅದು ನಿಮಗೆ ನೆರವಾಗಲಿದೆಯೇ?

ರಾಜ್ಯ ಸರ್ಕಾರ ಆರಂಭಿಸಿರುವ ಗೃಹಲಕ್ಷ್ಮಿ ಯೋಜನೆ ಕೈಹಿಡಿದಿದೆ. ಮಹಿಳೆಯರು ಸಂತುಷ್ಟರಾಗಿದ್ದಾರೆ. ₹ 1 ಲಕ್ಷ ನೆರವು ನೀಡುವ ಯೋಜನೆ ಬಗ್ಗೆ ತಿಳಿದಿದೆ. ಉದ್ಯೋಗ ನೀಡುವ ಭರವಸೆಯೂ ಗೆಲ್ಲಲು ಅನುಕೂಲ ಕಲ್ಪಿಸಲಿದೆ.

ಪ್ರ

ಶಾಸನ ಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಇಲ್ಲವಲ್ಲ?

ಮಹಿಳೆಯರಿಗೆ ಶಾಸನಸಭೆಗಳಲ್ಲಿ ಶೇ 33ರಷ್ಟು ಮೀಸಲಾತಿ ಅಗತ್ಯವಿದೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ 6 ಜನ ಮಹಿಳೆಯರಿಗೆ ಟಿಕೆಟ್ ನೀಡಿದೆ. ರಾಜ್ಯಸಭೆ ಮತ್ತು ವಿಧಾನಪರಿಷತ್‌ ನಾಮನಿರ್ದೇಶನ ಸಂದರ್ಭ ಮಹಿಳೆಯರನ್ನು ಪರಿಗಣಿಸುವ ಮೂಲಕ ಆದ್ಯತೆ ನೀಡಬೇಕು.

ಪ್ರ

ನೇಹಾ ಹತ್ಯೆ ಪ್ರಕರಣದ ಬಗ್ಗೆ ಮಹಿಳೆಯಾಗಿ ಏನು ಹೇಳ್ತೀರಿ?

ಮಹಿಳೆಯರು ಸ್ವಯಂ ರಕ್ಷಣೆಯ ಕಲೆಯನ್ನು ಕರಗತ ಮಾಡಿಕೊಳ್ಳಬೇಕಿದೆ. ಕರಾಟೆ ಮತ್ತಿತರ ಪಟ್ಟುಗಳ ಮೂಲಕ ಆತ್ಮರಕ್ಷಣೆಗೆ ಮುಂದಾಗಬೇಕು. ಮಹಿಳೆಯರ ವಿರುದ್ಧದ ಅಪರಾಧಗಳ ತಡೆಗೆ ಕಠಿಣ ಕಾನೂನುಗಳು ಜಾರಿಯಾಗಬೇಕಿದೆ.

ಪ್ರ

ಮಹಿಳೆ ಅಡುಗೆ ಮನೆಗೆ ಸೀಮಿತ ಎಂದು ಶಾಮನೂರು ಶಿವಶಂಕರಪ್ಪ ಹೇಳಿಕೆ ಕೊಟ್ಟಿದ್ದರಲ್ಲ?

ಆ ಹೇಳಿಕೆಯನ್ನು ಬಿಜೆಪಿಯವರು ತಿರುಚಿ ಲಾಭ ಪಡೆಯಲು ನೋಡಿದರು. ಹಿರಿಯರಾದ ಶಾಮನೂರು ಶಿವಶಂಕರಪ್ಪ ಅವರು ಇಬ್ಬರೂ ಅಭ್ಯರ್ಥಿಗಳ ವ್ಯಕ್ತಿತ್ವ ಮತ್ತು ಅರ್ಹತೆಯ ತುಲನೆ ಮಾಡಿ, ‘ಗಾಯತ್ರಿ ಅವರು ಸಾಮಾಜಿಕ ಜೀವನದಲ್ಲಿ ತೊಡಗಿಕೊಂಡಿಲ್ಲ. ಅಡುಗೆ ಮಾಡಿಕೊಂಡು ಇದ್ದವರು ಸಂಸತ್‌ ಸದಸ್ಯೆಯಾಗಿ ನಿಮ್ಮ ಆಶೋತ್ತರ ಈಡೇರಿಸಲಾರರು’ ಎಂಬ ಅರ್ಥದಲ್ಲಿ ಜನತೆಗೆ ತಿಳಿಸಿದ್ದರು. ಅದನ್ನೇ ತಿರುಚಿ ಜನರ ದಾರಿ ತಪ್ಪಿಸಲು ಯತ್ನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT