ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ | ಕ್ಷೇತ್ರದ ಜನರ ಸಮಸ್ಯೆಗಳಿಗೆ ಧ್ವನಿಯಾಗುವೆ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ
Published : 23 ಏಪ್ರಿಲ್ 2024, 6:18 IST
Last Updated : 23 ಏಪ್ರಿಲ್ 2024, 6:18 IST
ಫಾಲೋ ಮಾಡಿ
Comments
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಈಗ ಉಡುಪಿ– ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಬಿರುಸಿನ ಪ್ರಚಾರದಲ್ಲಿ ತೊಡಗಿರುವ ಇರುವ ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.
ಪ್ರ

ಶೋಭಾ ಕರಂದ್ಲಾಜೆ, ಸಿ.ಟಿ. ರವಿ, ಪ್ರಮೋದ್ ಮಧ್ವರಾಜ್ ಅವರ ಪೈಪೋಟಿ ನಡುವೆ ನಿಮಗೆ ಟಿಕೆಟ್ ಸಿಕ್ಕಿದೆ. ಚುನಾವಣೆ ಹೇಗೆ ಎದುರಿಸುತ್ತಿದ್ದೀರಿ?

ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಸುತ್ತಿನ ಪ್ರಚಾರ ಮುಗಿಸಿ ಎರಡನೇ ಸುತ್ತಿನ ಪ್ರಚಾರ ನಡೆಯುತ್ತಿದೆ. ಸಿ.ಟಿ.ರವಿ ಅವರು ನನ್ನ ಜತೆಯಲ್ಲೇ ಪ್ರಚಾರದಲ್ಲಿದ್ದಾರೆ. ಪ್ರಮೋದ್ ಮಧ್ವರಾಜ್ ಅವರು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಯಾವುದೇ ಗೊಂದಲಗಳಿಲ್ಲ.

ಪ್ರ

ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ ಹೆಗ್ಡೆ ಅವರು ಈ ಕ್ಷೇತ್ರಕ್ಕೆ ಹಳಬರು. ನಿಮಗೆ ಎರಡು ಜಿಲ್ಲೆಗಳ ಜನರ ವಿಶ್ವಾಸ ಗಳಿಸಲು ಸಾಧ್ಯವೇ?

ಮಂತ್ರಿಯಾಗಿ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕನಾಗಿ ಎರಡೂ ಜಿಲ್ಲೆಗಳ ಸಂಪರ್ಕ ನನಗೂ ಇದೆ. ಕಾರ್ಯಕರ್ತರ ದೊಡ್ಡ ಪಡೆ ಇದೆ. ಸಂಘಟನಾತ್ಮಕ ಶಕ್ತಿ ಹೊಂದಿರುವ ಪಕ್ಷ ನಮ್ಮದು. ಜನರ ಉತ್ಸಾಹ ನೋಡಿದರೆ ನನ್ನ ಗೆಲುವು ನಿಶ್ಚಿತ. ಸಂಸದನಾಗಿ ಕ್ಷೇತ್ರದ ಜನರ ಸಮಸ್ಯೆಗಳಿಗೆ ಧ್ವನಿಯಾಗುವೆ.

ಪ್ರ

ಚುನಾವಣೆ ಎಂದರೆ ಜಾತಿ ಮತ್ತು ಹಣ ಬಲ ಮುಖ್ಯ ಎಂಬ ಮಾತಿದೆಯಲ್ಲ? 

ಲೋಕಸಭೆ ಚುನಾವಣೆ ಜಾತಿ ಮತ್ತು ಹಣದ ಮೇಲೆ ನಿಂತಿಲ್ಲ. ದೇಶದ ಮೇಲೆ ನಿಂತಿದೆ. ಭಾರತದ ಭವಿಷ್ಯ ನಿರ್ಧಾರ ಮಾಡುವ ಚುನಾವಣೆ. ಜಾತಿ, ಮತ ಎಲ್ಲವನ್ನೂ ಮರೆತು ದೇಶಕ್ಕಾಗಿ ಜನ ನನ್ನನ್ನು ಗೆಲ್ಲಿಸುತ್ತಾರೆ. ಅಭ್ಯರ್ಥಿಯಾಗಿ ನಾನೂ ಅಹರ್ನಿಶಿ ದುಡಿಯುತ್ತಿದ್ದೇನೆ. 

ಪ್ರ

ನೀವು ಪ್ರಮಾಣಿಕ ರಾಜಕಾರಣಿ ಎಂಬ ಮಾತಿದೆ. ಚುನಾವಣಾ ಬಾಂಡ್ ಹೆಸರಿನಲ್ಲಿ ಉದ್ಯಮಿಗಳಿಂದ ಬಿಜೆಪಿ ಸಾವಿರಾರು ಕೋಟಿ ಹಣ ಪಡೆದಿದೆ. ಇದು ನಿಮಗೆ ಮುಜುಗರು ಎನಿಸುತ್ತಿಲ್ಲವೇ?

ದೇಣಿಗೆ ಪಡೆಯುವುದು ಎಲ್ಲಾ ಪಕ್ಷಗಳಲ್ಲೂ ಇದೆ. ಅದು ಕಾನೂನುಬದ್ಧ ಕೂಡ. ಕೆಲವು ಪಕ್ಷಗಳಲ್ಲಿ ಕಡಿಮೆ ಇರಬಹುದು, ಕೆಲವು ಪಕ್ಷದಲ್ಲಿ ಜಾಸ್ತಿ ಇರಬಹುದು. ರಾಷ್ಟ್ರೀಯ ವಿಷಯ, ಪಾರದರ್ಶಕತೆ ವಿಷಯದಲ್ಲಿ ಬಿಜೆಪಿ ಮೀರಿಸುವ ಮತ್ತೊಂದು ಶಕ್ತಿ ಇಲ್ಲ. ಮೋದಿ ಪ್ರಧಾನಿಯಾಗುವ ಮೊದಲು ಕೇಂದ್ರದಲ್ಲಿ ಸಚಿವರಾಗಿದ್ದವರ ಮೇಲೆ ಏನೆಲ್ಲಾ ಆರೋಪಗಳಿದ್ದವು ಎಂಬುದು ಜಗತ್ತಿಗೆ ಗೊತ್ತಿದೆ. ಮೋದಿ ಆಡಳಿತದಲ್ಲಿ ಯಾರ ಮೇಲೂ ಆರೋಪ ಇಲ್ಲ.

ಪ್ರ

ನೀವೂ ಕೋಟಿ ಕೋಟಿ ಆಸ್ತಿ ಮಾಡಿದ್ದೀರಿ ಎಂಬ ಸುದ್ದಿ ಹರಡುತ್ತಿದೆಯಲ್ಲ?

ನನ್ನ ಮೇಲೆ ಆರೋಪ ಬಂದ ಕೂಡಲೇ ನಾನೇ ಲೋಕಾಯುಕ್ತರಿಗೆ ದೂರು ಕೊಟ್ಟಿದ್ದೇನೆ. ಈ ರೀತಿ ಸ್ವಯಂ ದೂರು ಕೊಟ್ಟ ದೇಶದ ಮೊದಲ ರಾಜಕಾರಣಿ ನಾನು. ಆದಾಯ– ಆಸ್ತಿಯಲ್ಲಿ ವ್ಯತ್ಯಾಸ ಇಲ್ಲ ಎಂದು ಲೋಕಾಯುಕ್ತರೇ ಸರ್ಟಿಫಿಕೇಟ್‌ ಕೊಟ್ಟಿದ್ದಾರೆ. ಬೇಕಿದ್ದರೆ ದಾಖಲೆ ಬಿಡುಗಡೆ ಮಾಡುತ್ತೇನೆ.

ಪ್ರ

ಮೋದಿ ಹೆಸರು ಬಿಟ್ಟರೆ ಮತ ಕೇಳಲು ಬೇರೆ ಯಾವ ಅರ್ಹತೆಯೂ ನಿಮಗೆ ಇಲ್ಲ ಎಂಬ ಆರೋಪ ಇದೆ?

ಪಂಚಾಯಿತಿಯಿಂದ ಆರಂಭವಾಗಿ ಮೂರು ಬಾರಿ ಮಂತ್ರಿಯಾಗಿ, ವಿಪಕ್ಷದ ನಾಯಕನಾಗಿ ಎಲ್ಲ ಸ್ಥರದಲ್ಲಿ ಕೆಲಸ ಮಾಡಿದ್ದೇನೆ. ನನ್ನದೇ ಆದ ವ್ಯಕ್ತಿತ್ವ ಇದೆ. ಆದರೆ, ಮೋದಿ ನಮ್ಮ ಸರ್ವಶ್ರೇಷ್ಠ ನಾಯಕರು. ಕೆಲ ರಾಜಕೀಯ ಪಕ್ಷಗಳಲ್ಲಿ ಮುಖ ಇರುವ ಮುಖಂಡರಿಲ್ಲ. ಆದ್ದರಿಂದ ಅವರು ತಮ್ಮ ಮುಖಂಡರ ಹೆಸರು ಹೇಳುತ್ತಿಲ್ಲ.

ಪ್ರ

ಸಾಧನೆ ಆಧಾರದಲ್ಲೇ ಮತ ಯಾಚನೆ

ಎದುರಾಳಿ ಅಭ್ಯರ್ಥಿಯು ಸಾಧನೆಯ ಆಧಾರದ ಮೇಲೆ ಮಾತ್ರ ಮತ ಕೇಳಬೇಕು ಎಂದು ಹೇಳುತ್ತಿದ್ದಾರೆ. ಮುಜರಾಯಿ ಸಚಿವನಾಗಿದ್ದಾಗ ರಾಜ್ಯದ ಸಾವಿರಾರು ಸಣ್ಣ ದೇವಸ್ಥಾನಗಳಿಗೂ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಸಪ್ತಪದಿ ಯೋಜನೆ ಜಾರಿ ಮೂಲಕ ಬಡವರ ಮನೆಯ ಹೆಣ್ಣುಮಕ್ಕಳ ಮದುವೆಯನ್ನು ಸರ್ಕಾರದ ಖರ್ಚಿನಲ್ಲಿ ಮಾಡಿಸಿರುವ ತೃಪ್ತಿ ಇದೆ. ಮೀನುಗಾರಿಕಾ ಸಚಿವನಾಗಿದ್ದಾಗ ಹೆಜಮಾಡಿ ಬಂದರಿಗೆ ₹ 141 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, 22 ಸಾವಿರ ಮೀನುಗಾರ ಮಹಿಳೆಯರ ಸಾಲ ಮನ್ನಾ ಮಾಡಿಸಿದ್ದು ಸಾಧನೆಯಲ್ಲವೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT