ಸೋಮವಾರ, 1 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರ ರಚನೆ ಪ್ರಯತ್ನವೋ ವಿಪಕ್ಷದಲ್ಲಿ ಕೂರುವುದೋ: ‘ಇಂಡಿಯಾ’ದಿಂದ ಇಂದು ನಿರ್ಧಾರ

Published 5 ಜೂನ್ 2024, 3:49 IST
Last Updated 5 ಜೂನ್ 2024, 3:49 IST
ಅಕ್ಷರ ಗಾತ್ರ

ನವದೆಹಲಿ: ಮಂಗಳವಾರ ಹೊರಬಿದ್ದ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 293 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ‘ಇಂಡಿಯಾ’ಬಣ 234 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಬಿಜೆಪಿ 240 ಮತ್ತು ಕಾಂಗ್ರೆಸ್ 99 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಲು ಯಶಸ್ವಿಯಾಗಿದೆ.

ಯಾವುದೇ ಏಕೈಕ ಪಕ್ಷಕ್ಕೆ ಸರ್ಕಾರ ರಚನೆಗೆ ಬೇಕಾದಷ್ಟು ಸೀಟುಗಳು ಸಿಕ್ಕಿಲ್ಲ. ಹೀಗಾಗಿ, ’ಇಂಡಿಯಾ’ ಬಣ ಟಿಡಿಪಿ, ಜೆಡಿಯು ಮತ್ತು ಇತರರನ್ನು ಸೇರಿಸಿಕೊಂಡು ಸರ್ಕಾರ ರಚಿಸುವ ಪ್ರಯತ್ನ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ಕುರಿತಂತೆ ಇಂದು ನಡೆಯಲಿರುವ ಇಂಡಿಯಾ ಬಣದ ನಾಯಕರ ಸಭೆ ಬಳಿಕವಷ್ಟೇ ಸ್ಪಷ್ಟ ಉತ್ತರ ನೀಡಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಮಂಗಳವಾರ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆಗೆ ಪಕ್ಷದ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿಯಾ ಬಣದ ನಾಯಕರು ಫಲಿತಾಂಶದ ಕುರಿತಂತೆ ಸಭೆ ಸೇರಿ ಚರ್ಚಿಸಲಿದ್ದೇವೆ. ಸರ್ಕಾರ ರಚಿಸುವುದೇ? ಅಥವಾ ಪ್ರತಿಪಕ್ಷದಲ್ಲಿ ಕೂರುವುದೇ ಎಂಬ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದರು.

‘ನಾವು ನಾಳೆ ಸಭೆ ನಡೆಸುತ್ತೇವೆ. ಎನ್‌ಡಿಎಯ ಮೈತ್ರಿಕೂಟದಲ್ಲಿರುವ ಜೆಡಿಯು ಮತ್ತು ಟಿಡಿಪಿ ಅನ್ನು ಸಂಪರ್ಕಿಸಿ ಸರ್ಕಾರ ರಚನೆಗೆ ಪ್ರಯತ್ನಿಸುವುದೇ? ಅಥವಾ ಪ್ರತಿಪಕ್ಷದಲ್ಲಿ ಕೂರುವುದೇ ಎಂಬ ಪ್ರಶ್ನೆಗಳ ಬಗ್ಗೆ ಅಲ್ಲಿ ಚರ್ಚಿಸಲಾಗುತ್ತದೆ. ನಮ್ಮ ಮಿತ್ರಪಕ್ಷಗಳನ್ನು ನಾವು ಗೌರವಿಸುತ್ತೇವೆ. ಅವರ ಜೊತೆ ಚರ್ಚಿಸದೆ ನಾವು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ’ ಎಂದು ರಾಹುಲ್ ಹೇಳಿದ್ದರು.

ರಾಹುಲ್ ಮಾತಿಗೆ ಧ್ವನಿಗೂಡಿಸಿದ ಖರ್ಗೆ, ಮೈತ್ರಿ ಸಾಧ್ಯತೆ ಮತ್ತು ಇತರ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಅದನ್ನು ಮಾಧ್ಯಮಗಳ ಜೊತೆ ಚರ್ಚಿಸಿ ನಮ್ಮ ಯೋಜನೆಗಳ ಬಗ್ಗೆ ಮೋದಿಗೆ ಮಾಹಿತಿ ಕೊಡುವ ಇಚ್ಛೆ ಇಲ್ಲ ಎಂದಿದ್ದರು.

ವಯನಾಡ್ ಮತ್ತು ರಾಯ್‌ಬರೇಲಿ ಎರಡೂ ಕಡೆ ಗೆಲುವು ಸಾಧಿಸಿದ್ದು, ಯಾವ ಕ್ಷೇತ್ರ ಉಳಿಸಿಕೊಳ್ಳುತ್ತೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಚರ್ಚೆ ಬಳಿಕ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

‘ಫಲಿತಾಂಶವು ಮೋದಿ ವಿರುದ್ಧವಾಗಿದ್ದು, ರಾಜಕೀಯ ಮತ್ತು ನೈತಿಕತೆಯ ಸೋಲಾಗಿದೆ. ಜನರ ಮತ್ತು ಪ್ರಜಾಪ್ರಭುತ್ವದ ಗೆಲುವು ಇದಾಗಿದೆ. ಇದು ಜನರು ಮತ್ತು ಮೋದಿ ನಡುವಿನ ಚುನಾವಣೆ ಎಂದು ಹೇಳುತ್ತಲೇ ಬಂದಿದ್ದೆವು. ಜನರ ತೀರ್ಪನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇವೆ’‌ ಎಂದು ಖರ್ಗೆ ಹೇಳಿದ್ದಾರೆ.

ಬಿಜೆಪಿ ಸೇರಿ ಯಾವ ಪಕ್ಷಕ್ಕೂ ಮತದಾರರು ಬಹುಮತ ನೀಡಿಲ್ಲ. ಒಬ್ಬ ವ್ಯಕ್ತಿ, ಒಂದು ಮುಖ ಇಟ್ಟುಕೊಂಡು ಬಿಜೆಪಿ ಮತ ಕೇಳಿತ್ತು ಎಂದಿದ್ದಾರೆ.

ನಮ್ಮ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ ನಮ್ಮ ನಾಯಕರ ವಿರುದ್ಧ ಅಪಪ್ರಚಾರ ಮಾಡಿದ್ದರು. ಹಣದುಬ್ಬರ, ನಿರುದ್ಯೋಗ, ರೈತರು ಮತ್ತು ಕಾರ್ಮಿಕರ ಸಂಕಟ, ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಬಗ್ಗೆ ಪ್ರಸ್ತಾಪಿಸಿ ಧನಾತ್ಮಕ ಚುನಾವಣಾ ಪ್ರಚಾರ ನಡೆಸಿದ್ದವು ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT