ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | 'ವಾರಂಟಿ‘ ಇಲ್ಲದ ಕಾಂಗ್ರೆಸ್‌ನಿಂದ ‘ಗ್ಯಾರಂಟಿ‘ ಘೊಷಣೆ: ಅಣ್ಣಾಮಲೈ

Published 3 ಮೇ 2024, 20:14 IST
Last Updated 3 ಮೇ 2024, 20:14 IST
ಅಕ್ಷರ ಗಾತ್ರ

ಧಾರವಾಡ: ‘ಮಹಿಳೆಯರಿಗೆ ವರ್ಷಕ್ಕೆ ₹ 1 ಲಕ್ಷ ನೀಡುವುದಾಗಿ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹೇಳಿದೆ. ವಾರೆಂಟಿ ಇಲ್ಲದ ಕಾಂಗ್ರೆಸ್‌ ಪಕ್ಷ ಗ್ಯಾರಂಟಿ ಘೋಷಿಸಿದೆ’ ಎಂದು ಬಿಜೆಪಿಯ ತಮಿಳುನಾಡಿನ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ವ್ಯಂಗ್ಯವಾಡಿದರು.

ನಗರದ ಕೆಸಿಡಿ ಮೈದಾನದಲ್ಲಿ ಶುಕ್ರವಾರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್‌ನವರ ಭರವಸೆಯ ಪತ್ರ ಸುಳ್ಳು. ಜನರು ಸುಳ್ಳು ಹೇಳುವವರನ್ನು ನಂಬಲ್ಲ. ಕಾಗ್ರೆಸ್‌ ಪಕ್ಷ 2004ರ ಲೋಕಸಭೆ ಚುನಾವಣೆಯಲ್ಲಿ 414 , 2009ರಲ್ಲಿ 440, 2014ರಲ್ಲಿ 464 ಹಾಗೂ 2019ರಲ್ಲಿ 421 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. 2024ರಲ್ಲಿ 300ಕ್ಕೂ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಚುನಾವಣೆಯಿಂದ ಚುನಾವಣೆಗೆ ಕಾಂಗ್ರೆಸ್‌ ಕುಸಿಯುತ್ತಿದೆ ಎಂದರು.

‘ಕಾಂಗ್ರೆಸ್‌ ಮತ್ತು ಮಿತ್ರ ಪಕ್ಷಗಳು ಇಂಡಿಯಾ ಮೈತ್ರಿಕೂಟದಲ್ಲಿ ಹೊಂದಾಣಿಕೆ ಇಲ್ಲ. ಮೈತ್ರಿಕೂಟ ಬಹುಮತ ಪಡೆದರೆ ಪ್ರಧಾನಿ ಯಾರಾಗುತ್ತಾರೆ ಎಂದು ಘೋಷಿಸಿಲ್ಲ. ರಾಹುಲ್‌ ಗಾಂಧಿ ಅವರು ಅಮೇಥಿ ಕ್ಷೇತ್ರ ಬಿಟ್ಟು ರಾಯಬರೇಲಿಯಲ್ಲಿ ನಾಮಪತ್ರ ಕೊನೆ ಕ್ಷಣದಲ್ಲಿ ಸಲ್ಲಿಸಿದ್ಧಾರೆ. ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬ ಬಗ್ಗೆ ಅವರಿಗೆ ಸ್ಪಷ್ಟತೆ ಇರಲಿಲ್ಲ. ಪ್ರಧಾನಿಗೆ ಇರಬೇಕಾದ ಗುಣಗಳು ರಾಹುಲ್‌ ಗಾಂಧಿ ಅವರಿಗೆ ಇಲ್ಲ’ ಎಂದು ಮೂದಲಿಸಿದರು.

‘ಪ್ರಧಾನಿ ಮೋದಿ ಅವರು ಇಡೀ ಜಗತ್ತು ಭಾರತದ ಕಡೆಗೆ ನೋಡುವಂತೆ ಮಾಡಿದ್ದಾರೆ. ಮೋದಿ ಅವರನ್ನು ಮತ್ತೊಮ್ಮೆ ಬೆಂಬಲಿಸಬೇಕು. ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರು ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ಧಾರೆ. ನಾಲ್ಕು ಬಾರಿ ಗೆದ್ದಿರುವ ಅವರನ್ನು ಮತದಾರರು ಮತ್ತೊಮ್ಮೆ ಬೆಂಬಲಿಸಬೇಕು’ ಎಂದರು.

ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಮಾತನಾಡಿ, ಸಂಪೂರ್ಣ ವಿಕಾಸ ಹೊಂದಿದ ಭಾರತ ನಿರ್ಮಾಣ ಮಾಡುವುದೇ ಮೋದಿ ಗುರಿ. ಧಾರವಾಡ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಮತದಾರರು ಮತ್ತೊಮ್ಮೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್‌ ಮತ್ತು ಮಿತ್ರ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದಲ್ಲಿ ದಿಲ್ಲಿ ಮೇ ದೋಸ್ತಿ, ಕೊಲ್ಕತ್ತ, ಕೊಚ್ಚಿನ್‌ ಮೇ ಕುಸ್ತಿ ಸ್ಥಿತಿ ಎಂಬ ಸ್ಥಿತಿ ಇದೆ ಎಂದು ವ್ಯಂಗ್ಯವಾಡಿದರು.

ಮಾಳವಿಕಾ ಅವಿನಾಶ್ ಮಾತನಾಡಿ, ದೇಶ ಮತ್ತು ಧರ್ಮದ ರಕ್ಷಣೆ ನಿಟ್ಟಿನಲ್ಲಿ ಮೋದಿ ಅವರನ್ನು ಮತದಾರರು ಬೆಂಬಲಿಸಬೇಕು ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT