ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ | ನಗಿಸುವ ಸಿನಿಮಾಗಳಿಗೆ ಜಾಗವಿದೆ: ನಾಗಭೂಷಣ್‌

Published : 27 ಅಕ್ಟೋಬರ್ 2023, 0:00 IST
Last Updated : 27 ಅಕ್ಟೋಬರ್ 2023, 0:00 IST
ಫಾಲೋ ಮಾಡಿ
Comments
ಪ್ರ

ಈ ಸಿನಿಮಾದಲ್ಲಿ ನಿಮ್ಮ ಪಾತ್ರವೇನು?

ಒಂದು ಮನೆಯನ್ನು ನಿಭಾಯಿಸುವ ಹಳ್ಳಿ ಹುಡುಗ ‘ಚಿಕ್ಕ’ನಾಗಿ ಕಾಣಿಸಿಕೊಂಡಿದ್ದೇನೆ. ಮದ್ದೂರಿನಿಂದ ಕೊಳ್ಳೆಗಾಲದವರೆಗಿನ ಗ್ರಾಮೀಣ ಸೊಗಡಿನ ಕಥೆ. ಭರಚುಕ್ಕಿ ಜಲಪಾತದ ಸುತ್ತಮುತ್ತಲಿನ ಊರುಗಳಲ್ಲಿ ಚಿತ್ರೀಕರಣಗೊಂಡಿದೆ. ಹಾಸ್ಯ, ಮನರಂಜನೆ ಜೊತೆಗೆ ಇವತ್ತಿಗೆ ತೀರ ಅಗತ್ಯವಿರುವ ಗಟ್ಟಿಯಾದ ಸಂದೇಶ ಕೂಡ ಚಿತ್ರದಲ್ಲಿದೆ. ಹಳ್ಳಿ ಹುಡುಗರಿಗೆ ಮದುವೆಯಾಗದಿರುವುದು, ಗ್ರಾಮೀಣ ಭಾಗದ ಸಮಸ್ಯೆಗಳು, ಇಂದಿನ ಪೀಳಿಗೆ ಊರಿನಿಂದ ನಗರದತ್ತ ವಲಸೆ ಹೋಗುತ್ತಿರುವುದರತ್ತ ಬೆಳಕು ಚೆಲ್ಲಿದ್ದೇವೆ.

ಪ್ರ

ನೀವು ನಾಯಕನಾಗಿ ಚಿತ್ರಮಂದಿರಲ್ಲಿ ತೆರೆ ಕಾಣುತ್ತಿರುವ ಮೊದಲ ಸಿನಿಮಾವೇ?

ಹೌದು. ‘ಇಕ್ಕಟ್ಟು’ ನಾಯಕನಾದ ಮೊದಲ ಸಿನಿಮಾ. ಆದರೆ ಅದು ಚಿತ್ರಮಂದಿರದಲ್ಲಿ ತೆರೆ ಕಂಡಿರಲಿಲ್ಲ. ಹೀಗಾಗಿ ಇದು ಚಿತ್ರಮಂದಿರಕ್ಕೆ ಬರುತ್ತಿರುವ ಮೊದಲ ಸಿನಿಮಾ. ಜನ ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಭಯವಿದೆ. ಆದರೆ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ರಂಗಾಯಣ ರಘು ಹಾಗೂ ತಾರಮ್ಮ ಈ ಚಿತ್ರದ ನಿಜವಾದ ನಾಯಕ–ನಾಯಕಿ. ಎಲ್ಲರ ಪಾತ್ರವೂ ಪ್ರಮುಖವಾಗಿದೆ. ಇತ್ತೀಚಿನ ದಿನಗಳಲ್ಲಿ ಈ ರೀತಿ ಸಿನಿಮಾ ಬಂದಿರಲಿಲ್ಲ ಎಂಬುದು ಬಹಳ ಆತ್ಮವಿಶ್ವಾಸದಿಂದ ಹೇಳುವೆ. ಆ ರೀತಿಯ ಒಂದು ಕಂಟೆಂಟ್‌, ಹಳ್ಳಿಯ ಸೊಗಡು ಚಿತ್ರದಲ್ಲಿದೆ.

ಪ್ರ

ಸದ್ಯ ಕೈಯ್ಯಲ್ಲಿ ಯಾವ್ಯಾವ ಸಿನಿಮಾಗಳಿವೆ?

‘ಮ್ಯಾಟ್ನಿ ಶೋ’ ಬಿಡುಗಡೆಗೆ ಸಿದ್ಧವಿದೆ. ಬೇರೆ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಈ ಚಿತ್ರದ ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ. ಸದ್ಯ ಒಂದು ಸಣ್ಣ ವಿರಾಮ ತೆಗೆದುಕೊಂಡಿರುವೆ. ಬೇರೆ ಚಿತ್ರದ ಆಲೋಚನೆ ಇದೆ. ಶೀಘ್ರದಲ್ಲಿ ಅದರ ಬಗ್ಗೆ ವಿವರ ನೀಡುವೆ.

ಪ್ರ

ಮುಂದಿನ ದಿನಗಳಲ್ಲಿ ಸಣ್ಣ ಪಾತ್ರಗಳಿಗೆ ವಿದಾಯ ಹೇಳಿ ನಾಯಕನಾಗಿಯೇ ಮುಂದುವರಿಯುವಿರಾ?

ಹಾಗೇ ನೋಡಿದ್ರೆ ನಾನು ನಾಯಕ ಆಗ್ತೀನಿ ಅಂದುಕೊಂಡಿರಲ್ಲಿ. ಆಗಬೇಕು ಅಂತ ಹಪಹಪಿಸಿದವನೂ ಅಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿಯೂ ಸಣ್ಣ ಪಾತ್ರ ಮುಂದುವರಿಸುತ್ತೇನೆ. ದೊಡ್ಡ ಸ್ಟಾರ್‌ಗಳೊಂದಿಗೆ ತೆರೆ ಹಂಚಿಕೊಳ್ಳುವ ಆಸೆ ಎಲ್ಲರಿಗೂ ಇರುತ್ತದೆ. ಪಣಿ ರಾಮಚಂದ್ರ ಅವರ ಹಾಸ್ಯದ ಸಿನಿಮಾಗಳು, ಅನಂತ್‌ನಾಗ್‌ ಅವರ ನಗಿಸುವ ಸರಣಿ ಸಿನಿಮಾಗಳ ರೀತಿಯ ಚಿತ್ರಗಳಿಗೆ ನಮ್ಮಲ್ಲಿ ಸಾಕಷ್ಟು ಜಾಗವಿದೆ. ಆ ರೀತಿಯ ಸಿನಿಮಾಗಳ ಕೊರತೆ ಇಂದು ಕಾಣುತ್ತಿದೆ. ಗಟ್ಟಿಯಾದ ಪಾತ್ರದೊಂದಿಗೆ ಕೌಟಂಬಿಕ ಮನರಂಜನೆಯ ಸಿನಿಮಾಗಳತ್ತ ಹೆಚ್ಚು ಒಲವಿದೆ. 

ನಾಗಭೂಷಣ್‌, ಅಮೃತಾ

ನಾಗಭೂಷಣ್‌, ಅಮೃತಾ

ಪ್ರ

ಇಲ್ಲಿವರೆಗಿನ ಸಿನಿಮಾ ಪಯಣ ಹೇಗಿತ್ತು?

ತುಂಬಾ ಚೆನ್ನಾಗಿತ್ತು. ಒಂದೊಂದು ಸಮಯದಲ್ಲಿ ಒಂದೊಂದು ತಂಡಗಳು ಕೈಹಿಡಿದವು. ‘ಸಲಗ’ದಲ್ಲಿ ಎರಡೇ ನಿಮಿಷದ ಪಾತ್ರ. ಆದರೆ ಜನ ಗುರುತಿಸಿದರು. ‘ಫ್ರೆಂಚ್‌ ಬಿರ್ಯಾನಿ’, ‘ಬಡವ ರಾಸ್ಕಲ್‌’, ‘ಕೌಸಲ್ಯಾ ಸುಪ್ರಜಾ ರಾಮ’ ಒಂದು ರೀತಿ ಕಮರ್ಷಿಯಲ್‌ ಆಗಿ ನನಗೆ ಸಕ್ಸಸ್‌ ನೀಡಿದವು. ‘ಹನಿಮೂನ್‌’ ವೆಬ್‌ ಸಿರೀಸ್‌ ಇನ್ನೊಂದು ರೀತಿ ಅವಕಾಶ ನೀಡಿತು. ನಮ್ಮ ಪ್ರತಿಭೆ ಜನಕ್ಕೆ ತಲುಪಲು ಇವೆಲ್ಲ ವೇದಿಕೆ ಸಿಕ್ಕಿವೆ. ಒಂದು ರೀತಿಯಲ್ಲಿ ಪುಣ್ಯವಂತ.  ಹಾಗಂತ ಹಾದಿ ಸುಲಭದ್ದಲ್ಲ. ಸಾಕಷ್ಟು ಕಾದಿರುವೆ. ತಾಳ್ಮೆ, ತ್ಯಾಗಗಳಿವೆ. ಕುಟುಂಬ, ಗೆಳೆಯರ ಬೆಂಬಲದಿಂದ ಇದೆಲ್ಲ ಸಾಧ್ಯವಾಯ್ತು. 

ಪ್ರ

ನಿಮ್ಮ ಸಿನಿ ಪಯಣದಲ್ಲಿ ಧನಂಜಯ ಎಷ್ಟು ಮುಖ್ಯವಾಗುತ್ತಾರೆ?

ಪ್ರತಿಯೊಬ್ಬರಿಗೂ ಎಲ್ಲ ಸಮಯದಲ್ಲಿಯೂ ಜೊತೆಗಿರುವಂತಹ ಒಬ್ಬರು ಬೇಕು. ಅದು ಗೆಳೆಯನಾಗಿರಬಹುದು, ಗೆಳತಿಯಾಗಿರಬಹುದು. ಧನಂಜಯ ನನ್ನ ಪಾಲಿಗೆ ಆ ರೀತಿಯ ಗೆಳೆಯ. ತಾಳ್ಮೆ ಕಳೆದುಕೊಂಡಾಗ, ಧೃತಿಗೆಟ್ಟಾಗ, ಮುಂದೆ ಹೇಗೆ ಎಂದು ಯೋಚಿಸುತ್ತಿರುವಾಗ ಜೊತೆಗೆ ನಿಂತವರು. ಹಾಗಂತ ಈ ಸಿನಿಮಾ ನನಗಾಗಿ ಮಾಡಿದ್ದಲ್ಲ. ಅವರಿಗೆ ಕಥೆ ಇಷ್ಟವಾಯ್ತು. ತಿರುಗಿ ನೋಡಿದರೆ ಖುಷಿಪಡಲು ಒಂದಷ್ಟು ಇರಬೇಕು ಎನ್ನುವ ಸ್ವಭಾವ ಅವರದ್ದು. ಹೀಗಾಗಿ ನಿರ್ಮಾಣ ಸಂಸ್ಥೆ ಶುರುಮಾಡಿದ್ದು. ಪೂರ್ತಿ ಆಲೋಚನೆ, ತೀರ್ಮಾನ ಎಲ್ಲವೂ ಅವರದ್ದೇ. 

ಪ್ರ

ನೀವೊಬ್ಬ ಉತ್ತಮ ಹಾಸ್ಯ ಬರಹಗಾರರೂ ಹೌದು. ನಿರ್ದೇಶನದ ಯೋಚನೆ ಇದೆಯಾ?

‘ಹನಿಮೂನ್‌’ ವೆಬ್‌ ಸರಣಿ ನಾನೇ ಬರೆದು ನಟಿಸಿದ್ದು. ಚಿತ್ರಕಥೆ ಬರವಣಿಗೆ ನನ್ನ ಆಸಕ್ತಿಯೂ ಹೌದು. ನಗಿಸುವ ಸಿನಿಮಾಗಳಿಗೆ ಸಾಕಷ್ಟು ಜಾಗವಿದೆ. ಭವಿಷ್ಯದಲ್ಲಿ ಬರವಣಿಗೆ, ನಿರ್ದೇಶನದ ಆಲೋಚನೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT