ಆಸಕ್ತರಿಗೆ ಜಗತ್ತಿನ ಸಿನಿಮಾಗಳನ್ನು ನೋಡುವ ಅವಕಾಶ ಒದಗಿಸುವ ವೇದಿಕೆ ಗೋವಾದಲ್ಲಿ (ಪಣಜಿ) ನಡೆಯುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ. ಈ ಸಲದ ಚಿತ್ರೋತ್ಸವದಲ್ಲಿ ಭಯೋತ್ಪಾದನೆಯನ್ನೇ ವಸ್ತುವಾಗಿ ಉಳ್ಳ ಮೂರು ಭಿನ್ನ ಸಿನಿಮಾಗಳ ಕುರಿತ ಟಿಪ್ಪಣಿಗಳು ಇಲ್ಲಿವೆ...

ಕೇಂದ್ರ ಸರ್ಕಾರ ಗೋವಾದಲ್ಲಿ ಸಂಘಟಿಸುವ ಚಿತ್ರೋತ್ಸವಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ. ಇತ್ತೀಚೆಗೆ ಒಂಬತ್ತು ದಿನಗಳ ಕಾಲ ನಡೆದ ಚಿತ್ರೋತ್ಸವದಲ್ಲಿ 78 ದೇಶಗಳ 240ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಗೊಂಡವು.

ಬಹುತೇಕ ಸಿನಿಮಾಗಳು ಕಳೆದ ಒಂದು ವರ್ಷದ ಅವಧಿಯಲ್ಲಿ ಆಯಾ ದೇಶಗಳಲ್ಲಿ ಆಗಿರುವ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಪಲ್ಲಟಗಳೇ ಅಲ್ಲದೆ ಜನರ ಬದುಕಿಗೆ ಸಂಬಂಧಿಸಿದ ಅನೇಕ ಸೂಕ್ಷ್ಮ ಸಂಗತಿಗಳನ್ನು ಇಟ್ಟುಕೊಂಡು ತಯಾರಿಸಲಾದವು. ಒಂದಕ್ಕಿಂತ ಒಂದು ಭಿನ್ನ. ಕೋವಿಡ್ ಹಾವಳಿಯ ನಂತರ ಚೇತರಿಸಿಕೊಂಡಿದ್ದ ಚಿತ್ರೋತ್ಸವದಲ್ಲಿ ಈ ವರ್ಷ ಉತ್ಸಾಹದ ಕೊರತೆ ಇತ್ತು. ನೋಂದಾಯಿಸಿಕೊಂಡು ಬಂದ ಪ್ರತಿನಿಧಿಗಳ ಸಂಖ್ಯೆಯೂ ಕಡಿಮೆ ಇತ್ತು.

ಇತ್ತೀಚಿನ ವರ್ಷಗಳಲ್ಲಿ ಮೂಲಭೂತವಾದ ಪ್ರೇರಿತ ಭಯೋತ್ಪಾದನೆ ಕೆಲ ದೇಶಗಳಿಗೆ ಸವಾಲಾಗಿದೆ. ಹಲವು ದೇಶಗಳು ಜನಾಂಗೀಯ ಸಂಘರ್ಷ ಮತ್ತು ಕೋಮು ಅಸಹನೆಗಳಿಂದ ನಲುಗುತ್ತಿವೆ. ಕೋಮು ದ್ವೇಷ ಬೆಳೆಯುವುದಕ್ಕೆ ಅವಕಾಶ ಕೊಟ್ಟು, ಬೆಳೆದ ಮೇಲೆ ನಿಯಂತ್ರಿಸಲಾಗದ ವಿಚಿತ್ರ ಪರಿಸ್ಥಿತಿ ಕೆಲ ದೇಶಗಳಲ್ಲಿದೆ. ಹೊಸ ತಲೆಮಾರಿನ ಜನರಲ್ಲಿ ಕಾಣಿಸಿಕೊಂಡಿರುವ ಅರಾಜಕ, ವಿಕ್ಷಿಪ್ತ ಮನಃಸ್ಥಿತಿಗೆ ಪ್ರತಿಕ್ರಿಯಿಸುವ ಸಿನಿಮಾಗಳೂ ಇದ್ದವು. ಪ್ರತಿನಿಧಿಯೊಬ್ಬ ದಿನಕ್ಕೆ ನಾಲ್ಕೈದು ಸಿನಿಮಾ ನೋಡುವ ಅವಕಾಶವಿತ್ತು. ಹಾಗೆ ನೋಡಿದ ಯಾವುದೋ ಒಂದರ ಕಥೆಯೋ, ಪಾತ್ರವೋ, ವಸ್ತುವೋ ಇಷ್ಟವಾಗಿ ಅದು ಮತ್ತೆ ಮತ್ತೆ ನೆನಪಾಗಿ ಕಾಡಿದರೆ ಅದು ಉತ್ತಮ ಸಿನಿಮಾ. ಆದರೆ, ಅಂತಹ ಸಿನಿಮಾಗಳ

ದಿಟ್ಟೆಯ ಕೊನೆಯ ಹುಟ್ಟುಹಬ್ಬ

ಕಳೆದ ವರ್ಷದ ನವೆಂಬರ್‌ನಲ್ಲಿ ಅಫ್ಗಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದ ತಾಲಿಬಾನ್ ಸರ್ಕಾರದ ಬೆಂಬಲಿಗರು ಅಲ್ಲಿನ ಮಹಿಳೆಯರ ಮೇಲೆ ನಡೆಸಿದ ದೌರ್ಜನ್ಯಗಳನ್ನು ಕಟ್ಟಿಕೊಡುವ ಸಿನಿಮಾ ‘ದ ಲಾಸ್ಟ್ ಬರ್ಥ್‌ಡೇ’. ನವೀದ್ ಮಹ್ಮೌದಿ ಇದರ ನಿರ್ದೇಶಕರು. ಮಹಿಳೆಯರ ಪರ ಧ್ವನಿ ಎತ್ತಿದ್ದ ದಿಟ್ಟ ಪತ್ರಕರ್ತೆಯೊಬ್ಬಳು ತನ್ನ ಹುಟ್ಟುಹಬ್ಬದ ದಿನವೇ ತಾಲಿಬಾನಿ ಉಗ್ರರ ಗುಂಡಿಗೆ ಬಲಿಯಾಗುವುದು ಸಿನಿಮಾದ ಒನ್‌ಲೈನ್ ಕಥೆ.

ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಅದರ ಬೆಂಬಲಿಗರು ಮಹಿಳೆಯರನ್ನು ನಿಯಂತ್ರಿಸುವ ಪ್ರಯತ್ನಕ್ಕೆ ಕೈಹಾಕುತ್ತಾರೆ. ಬುರ್ಖಾ ಧರಿಸದ, ಬ್ಯೂಟಿ ಪಾರ್ಲರ್‌ಗಳಿಗೆ ಹೋಗುವ ಮಹಿಳೆಯರು ಉಗ್ರರ ಕೆಂಗಣ್ಣಿಗೆ ಗುರಿಯಾದ ವಿದ್ಯಮಾನಗಳು ಇಡೀ ಜಗತ್ತಿಗೆ ಗೊತ್ತಿವೆ. ಇಂಥ ಬೆಳವಣಿಗೆಗಳ ವಿರುದ್ಧ ಧ್ವನಿ ಎತ್ತಿ ಮಹಿಳೆಯರ ಭವಿಷ್ಯದ ದಿನಗಳ ಬಗ್ಗೆ ಎಚ್ಚರಿಸುವ ಪತ್ರಕರ್ತೆ ಸೊರೈಯಾ ಮೇಲೆ ಉಗ್ರರ ಕಣ್ಣು ಬೀಳುತ್ತದೆ. ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಂಭ್ರಮದಲ್ಲಿದ್ದ ಸೊರೈಯಾ ಮನೆಯನ್ನು ಉಗ್ರರು ಸುತ್ತುವರಿಯುತ್ತಾರೆ. ಮನೆಗೆ ಬಂದ ಅತಿಥಿಗಳನ್ನು ರಕ್ಷಿಸಿ ಎಲ್ಲರನ್ನೂ ಕಾಬೂಲ್‌ನ ಏರ್‌ಪೋರ್ಟ್‌ಗೆ ಕಳಿಸಿಕೊಡುವ ಸೊರೈಯಾ, ದೇಶದಿಂದ ಪಲಾಯನ ಮಾಡಲು ನಿರಾಕರಿಸಿ ಉಗ್ರರ ಗುಂಡಿಗೆ ಬಲಿಯಾಗುತ್ತಾಳೆ.

ತಾಲಿಬಾನ್ ಸರ್ಕಾರ ಸಿನಿಮಾಗಳ ಪರ ಇಲ್ಲ. ಹೀಗಾಗಿ ಉಗ್ರರ ದೌರ್ಜನ್ಯಗಳನ್ನು ಟೀವಿ ಮತ್ತು ವಿಡಿಯೊ ತುಣುಕಗಳು ಮತ್ತು ಆಗಾಗ ಕೇಳಿಬರುವ ಗುಂಡಿನ ಸದ್ದುಗಳ ಮೂಲಕವೇ ಪ್ರೇಕ್ಷಕರಿಗೆ ದಾಟಿಸುವ ನಿರ್ದೇಶಕರ ಜಾಣತನ ಇಷ್ಟವಾಗುತ್ತದೆ. ಸಂಪ್ರದಾಯಗಳ ವಿರುದ್ಧ ಧ್ವನಿ ಎತ್ತುವವರ ಜೀವ ತೆಗೆಯುತ್ತೇವೆ ಎನ್ನುವ ತಾಲಿಬಾನಿಗಳ ಮನಃಸ್ಥಿತಿಯನ್ನು ಸಿನಿಮಾ ಧ್ವನಿಸುತ್ತದೆ.

ಭಯೋತ್ಪಾದಕರ ವಿರುದ್ಧ ಹೆಣ್ಣಿನ ಹೋರಾಟ

‘ಇಟ್ಸ್ ಸೀರಾ’ (It's Sira), ಇಸ್ಲಾಮಿಕ್ ಭಯೋತ್ಪಾದಕರ ವಿರುದ್ಧ ಹೋರಾಡಿ ಯಶಸ್ವಿಯಾಗುವ ಸೀರಾ ಎಂಬ ಯುವತಿ ಎದುರಿಸಿದ ಕಷ್ಟಗಳನ್ನು ದಾರುಣವಾಗಿ ನಿರೂಪಿಸುವ ಸಿನಿಮಾ.

ಪಶ್ಚಿಮ ಆಫ್ರಿಕಾ ಪ್ರಾಂತ್ಯದ ಅಲೆಮಾರಿ ಜನಾಂಗವೊಂದರ ಗುಂಪಿನ ನಾಯಕನೊಬ್ಬ ತನ್ನ ಮಗಳು ಸೀರಾಳ ಜತೆ ಮದುವೆ ಗೊತ್ತಾಗಿರುವ ಕ್ರಿಶ್ಚಿಯನ್ ಹುಡುಗನನ್ನು ನೋಡಲು ತನ್ನ ಪರಿವಾರದ ಜತೆಯಲ್ಲಿ ಹೊರಟಿದ್ದಾನೆ. ಸಡಗರ, ಸಂಭ್ರಮದಲ್ಲಿದ್ದ ಗುಂಪಿನ ಮೇಲೆ ಭಯೋತ್ಪಾದಕರು ಎರಗಿ ಗಂಡಸರನ್ನೆಲ್ಲ ಕೊಲ್ಲುತ್ತಾರೆ! ತಂದೆ ಹಾಗೂ ಇತರರ ಸಾವಿನಿಂದ ಆಕ್ರೋಶಗೊಂಡ ಸೀರಾ ಭಯೋತ್ಪಾದರತ್ತ ಉಗುಳಿ ಶಪಿಸುತ್ತಾಳೆ! ಕೆರಳಿದ ಉಗ್ರರು ಸೀರಾಳನ್ನು ಅಪಹರಿಸುತ್ತಾರೆ. ಉಗ್ರನೊಬ್ಬ ಅವಳ ಮೇಲೆ ಅತ್ಯಾಚಾರ ಎಸಗಿ ನಿರ್ಜನ ಮರಳುಗಾಡಿನಲ್ಲಿ ಬಿಟ್ಟು ಹೋಗುತ್ತಾನೆ. ಆಘಾತಗೊಂಡ ಸೀರಾ ಗುಂಪಿನಲ್ಲಿದ್ದ ತಾಯಿ ಮತ್ತಿತರ ಮಹಿಳೆಯರನ್ನು ಹುಡುಕಿಕೊಂಡು ಹೋಗದೆ ಉಗ್ರರ ನೆಲೆ ಪತ್ತೆ ಮಾಡಿ ಅವರನ್ನು ನಾಶಗೊಳಿಸುವುದು ಸಿನಿಮಾದ ಕಥೆ.

ಆಫ್ರಿಕಾದ ಉತ್ತರ ಮತ್ತು ಪಶ್ಚಿಮ ಪ್ರಾಂತ್ಯಗಳಲ್ಲಿ ಸಕ್ರಿಯವಾಗಿರುವ ಜಗತ್ತಿನ ಅತ್ಯಂತ ಕ್ರೂರಿಗಳಾದ ಭಯೋತ್ಪಾದಕರ ಸಂಘಟನೆಯೊಂದು ಹಳ್ಳಿಗಳ ಅಮಾಯಕ ಯುವಕರನ್ನು ಸೇರಿಸಿಕೊಳ್ಳುತ್ತದೆ. ಭಯೋತ್ಪಾದಕರು ತಮ್ಮ ಚಾಕರಿಗೆ, ಲೈಂಗಿಕ ದಾಹ ತೀರಿಸಿಕೊಳ್ಳಲು ಮುಗ್ಧ ಯುವತಿಯರನ್ನು ಅಪಹರಿಸುತ್ತಾರೆ. ಅಸಹಾಯಕ ಯುವತಿಯರು ಗರ್ಭಿಣಿಯರಾಗಿ ಉಗ್ರರ ನೆಲೆಗಳಲ್ಲೇ ಉಳಿದು ಅನುಭವಿಸುವ ದಾರುಣ ಪರಿಸ್ಥಿತಿಯನ್ನು ಜಗತ್ತಿಗೆ ತೋರಿಸುವ ಗಂಭೀರ ಸಿನಿಮಾ ಆಗುವ ಅವಕಾಶ ಈ ಚಿತ್ರದಲ್ಲಿ ತಪ್ಪಿಹೋಗಿದೆ.

ಅತ್ಯಾಚಾರದಿಂದ ಬಸಿರಾಗಿ, ಮರಳುಗಾಡಿನ ಸಣ್ಣ ಗುಡ್ಡವೊಂದರ ಗುಹೆಯಂತಹ ಪೊಟರೆಯಲ್ಲಿ ಉಳಿದುಕೊಂಡ ಸೀರಾ, ಉಗ್ರರ ಕಣ್ಣು ತಪ್ಪಿಸಿ ಅವರ ನೆಲೆಗೆ ನುಗ್ಗುತ್ತಾಳೆ. ಅಲ್ಲಿದ್ದ ಹೆಣ್ಣುಮಕ್ಕಳ ಅನುಕಂಪ ಗಿಟ್ಟಿಸುತ್ತಾಳೆ. ಮಗುವನ್ನೂ ಹೆರುತ್ತಾಳೆ. ಕೊನೆಗೆ ಭಯೋತ್ಪಾದಕರ ನೆಲೆಯನ್ನು ಸ್ಫೋಟಿಸಿ, ನಾಶ ಮಾಡುತ್ತಾಳೆ! ಗನ್ ಹಿಡಿದು ಹಲವರನ್ನು ಕೊಲ್ಲುತ್ತಾಳೆ. ಸೀರಾಳ ಅಸಹಾಯಕತೆ, ಧೈರ್ಯ, ಸಾಹಸಗಳನ್ನು ಹೇಳುತ್ತಲೇ ಪ್ರತಿಭಟನೆಯ ಹೊಸ ಮಾದರಿಯೊಂದನ್ನು ರೂಪಿಸುವ ಸಾಧ್ಯತೆ ಇದ್ದ ಈ ಸಿನಿಮಾ ಕೊನೆಯ ಹತ್ತು ನಿಮಿಷಗಳಲ್ಲಿ ಭಾರತೀಯ ಕಮರ್ಷಿಯಲ್ ಸಿನಿಮಾಗಳ ಜಾಡು ಹಿಡಿದಿದೆ. ಅಪೋಲಿನ್ ಟ್ರಾಒರ್ ಈ ಸಿನಿಮಾದ ನಿರ್ದೇಶಕಿ.

ಮನುಷ್ಯ ಸಂಬಂಧಗಳ ರೂಪಕ

ಐವತ್ತನಾಲ್ಕನೇ ಚಿತ್ರೋತ್ಸವದ ಅತ್ಯುತ್ತಮ ಚಿತ್ರ ಎಂಬ ಪ್ರಶಂಸೆಗೆ ಪಾತ್ರವಾಗಿ ಸ್ವರ್ಣ ಮಯೂರ ಫಲಕದ ಜತೆಗೆ ₹40 ಲಕ್ಷ ನಗದು ಪುರಸ್ಕಾರಕ್ಕೆ ಭಾಜನವಾದದ್ದು
‘ಎಂಡ್‌ಲೆಸ್ ಬಾರ್ಡರ್ಸ್’ ಇರಾನ್ ಸಿನಿಮಾ. ಅಬ್ಬಾಸ್ ಅಮಿನಿ ಇದರ ನಿರ್ದೇಶಕರು. 111 ನಿಮಿಷಗಳ ಈ ಸಿನಿಮಾ ತಾಲಿಬಾನಿಗಳ ಕೈವಶವಾದ ನಂತರ ಅಫ್ಗಾನಿಸ್ತಾನದ ಬುಡಕಟ್ಟು ಸಮುದಾಯಗಳ ಅತಂತ್ರ ಸ್ಥಿತಿಯನ್ನು ಕಟ್ಟಿಕೊಡುತ್ತದೆ.

ತಾಲಿಬಾನಿ ಉಗ್ರರಿಂದ ತಪ್ಪಿಸಿಕೊಂಡು ದಕ್ಷಿಣ ಇರಾನಿನ ಗಡಿ ಹಳ್ಳಿಯೊಂದಕ್ಕೆ ನುಸುಳಿ ಬಂದ ಹಝಾರ್ ಬುಡಕಟ್ಟು ಜನರ ಗುಂಪಿಗೆ, ಶಾಲೆಯ ಶಿಕ್ಷಕ ಅಹ್ಮದ್ ಆಶ್ರಯ ಕೊಡುತ್ತಾನೆ. ಗುಂಪಿನ ಜತೆ ಬಂದ ವಿವಾಹಿತ ಯುವತಿಯೊಬ್ಬಳು ಸ್ಥಳೀಯ ಬಲೂಚ್ ಯುವಕನಲ್ಲಿ ಅನುರಕ್ತಳಾಗುತ್ತಾಳೆ! ಬೆನ್ನತ್ತಿ ಬರುವ ತಾಲಿಬಾನಿಗಳಿಂದ ತಪ್ಪಿಸಿಕೊಳ್ಳಲು ಪ್ರೇಮಿಗಳು ಟರ್ಕಿಗೆ ಓಡಿಹೋಗುವ ಸನ್ನಾಹದಲ್ಲಿದ್ದಾರೆ. ಮಕ್ಕಳಿಗೆ ಪಾಠ ಹೇಳುತ್ತ, ಸ್ಥಳೀಯರ ವಿಶ್ವಾಸ ಗಳಿಸಿದ್ದ ಅಹ್ಮದ್ ಪತ್ನಿಯಿಂದ ದೂರವಿದ್ದಾನೆ. ಅವಳ ವಿಶ್ವಾಸ ಗಳಿಸುವ, ಮುರಿದ ಸಂಬಂಧಗಳನ್ನು ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾನೆ. ಅಫ್ಗನ್ ಜನರ ಅಸಹಾಯಕತೆಗೆ ಅವನ ಹೃದಯ ಮರುಗುತ್ತದೆ. ನಗರದಲ್ಲಿರುವ ಪತ್ನಿಯ ನೆರವು ಪಡೆದು ಪ್ರೇಮಿಗಳನ್ನು ಇರಾನ್ ಗಡಿ ದಾಟಿಸುತ್ತಾನೆ. ದೇಶ, ದೇಶಗಳ ನಡುವೆ ಮತ್ತು ಮನುಷ್ಯ ಸಂಬಂಧಗಳಿಗೆ ಗಡಿ ಎಂಬುದಿಲ್ಲ ಎನ್ನುವುದರ ಸಾಂಕೇತಿಕ ರೂಪಕ ಈ ಸಿನಿಮಾ.

ಅಸಹಾಯಕರ ರಕ್ಷಣೆಗೆ ಧಾವಿಸುವ ಕಾಳಜಿಯ ಅಹ್ಮದ್ ಪಾತ್ರ ನೆನಪಿನಲ್ಲಿ ಉಳಿಯುತ್ತದೆ. ಈ ಪಾತ್ರ ಪೋಷಿಸಿರುವ ನಟ ಪೌರಿಯೊ ರಹಿಮಿ ಸ್ಯಾಮ್ ಅವರಿಗೆ ಚಿತ್ರೋತ್ಸದ ಅತ್ಯುತ್ತಮ ನಟ ಪ್ರಶಸ್ತಿಯೂ ದಕ್ಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.