1972ರಲ್ಲಿ ಬಿಡುಗಡೆಯಾದ ಪುಟ್ಟಣ್ಣಕಣಗಾಲ್ ನಿರ್ದೇಶನದ ನಾಗರಹಾವು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹಲವು ಮೈಲಿಗಲ್ಲುಗಳನ್ನು ನೆಟ್ಟ ಸಿನಿಮಾ. ವಿಷ್ಣುವರ್ಧನ್, ಅಂಬರೀಶ್ ಅವರಂಥ ಪ್ರಭಾವಶಾಲಿ ನಟರನ್ನು ಚಿತ್ರರಂಗಕ್ಕೆ ಕೊಟ್ಟ ಸಿನಿಮಾ ಅದು. ಚಾಮಯ್ಯ ಮೇಷ್ಟ್ರು ಎಂಬ ಪಾತ್ರವೊಂದು ಜನಪದವಾಗಿಹೋಗಿದ್ದೂ ಈಗ ಇತಿಹಾಸ. ಚಿತ್ರದುರ್ಗದ ಕೋಟೆ ವಿಖ್ಯಾತಗೊಳ್ಳಲೂ ಈ ಚಿತ್ರದ ಕೊಡುಗೆ ಸಾಕಷ್ಟಿದೆ. ತರಾಸು ಅವರ ಕಾದಂಬರಿ ಆಧರಿಸಿದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿಯೂ ಜೋರು ಸದ್ದು ಮಾಡಿತ್ತು.

ಅದೆಲ್ಲ ಇತಿಹಾಸವಾಯ್ತು. ಪುಟ್ಟಣ್ಣ, ಅಶ್ವಥ್, ವಿಷ್ಣುವರ್ಧನ್ ಸೇರಿದಂತೆ ಆ ಸಿನಿಮಾ ತಂಡದಲ್ಲಿದ್ದ ಹಲವರು ಇಂದು ನಮ್ಮ ನಡುವೆ ಇಲ್ಲ. ಆದರೂ ‘ನಾಗರಹಾವು’ ಚಿತ್ರದ ಜನಪ್ರಿಯತೆ ಇನಿತೂ ಕುಗ್ಗಿಲ್ಲ. ಹೊಸ ಸಿನಿಮಾಗಳ ಭರಾಟೆಯಲ್ಲಿ ಹಿನ್ನೆಲೆಗೆ ಸರಿದಿಲ್ಲ. ಹಾಗಾದರೆ ಆ ಸಿನಿಮಾಕ್ಕೆ ಇಂದಿನ ಆಧುನಿಕ ತಂತ್ರಜ್ಞಾನದ ಪೋಷಾಕು ತೊಡಿಸಿ ಮರುಬಿಡುಗಡೆಗೊಳಿಸಿದರೆ ಹೇಗಿರುತ್ತದೆ? ಅಂದು ‘ನಾಗರಹಾವು’ ಚಿತ್ರವನ್ನು ನಿರ್ಮಿಸಿದ್ದ ಈಶ್ವರಿ ಪ್ರೊಡಕ್ಷನ್ ಸಂಸ್ಥೆಯೇ ಈಗ ಸಿನಿಮಾ ಸ್ಕೋಪ್ ಮತ್ತು 7.1 ಧ್ವನಿವಿನ್ಯಾಸದಲ್ಲಿ ಮರುಬಿಡುಗಡೆ ಮಾಡುತ್ತಿದೆ. ನಾಗರಹಾವು ಜುಲೈ 20 ರಂದು(ಶುಕ್ರವಾರ) ತೆರೆಯ ಮೇಲೆ ಮತ್ತೆ ಭುಸುಗುಟ್ಟಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.