ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ | ಭೋಜ್‌ಪುರಿಯ ಅವಕಾಶ ತಾನಾಗಿಯೇ ಅರಸಿ ಬಂತು: ಹರ್ಷಿಕಾ ಪೂಣಚ್ಚ

Published : 12 ಅಕ್ಟೋಬರ್ 2023, 23:30 IST
Last Updated : 12 ಅಕ್ಟೋಬರ್ 2023, 23:30 IST
ಫಾಲೋ ಮಾಡಿ
Comments
ಪ್ರ

ಈ ಸಿನಿಮಾದಲ್ಲಿ ನಿಮ್ಮ ಪಾತ್ರವೇನು?

ವರದಿಗಾರ್ತಿಯಾಗಿ ಕಾಣಿಸಿಕೊಂಡಿದ್ದೇನೆ. ಕೊಲೆಯ ಸುದ್ದಿಗಳನ್ನು ಲೈವ್‌ ನೀಡುವ ಸುದ್ದಿ ವಾಹಿನಿಯ ಕ್ರೈಂ ರಿಪೋರ್ಟರ್‌. ಮೊದಲ ಸಲ ಈ ರೀತಿ ಪಾತ್ರ ಮಾಡಿರುವೆ. ನನಗೆ ರಕ್ತ ಎಂದರೆ ಭಯ. ಆದರೆ ಸದಾ ರಕ್ತದೊಂದಿಗೆ ಕೆಲಸ ಮಾಡುವವರ ಕಥೆ ಹೇಗಿರಬಹುದೆಂದು ಈ ಪಾತ್ರದಿಂದ ಅರಿವಾಯಿತು.

ಪ್ರ

ರಕ್ತಸಿಕ್ತ ಜಗತ್ತಿನ ಚಿತ್ರೀಕರಣದ ಅನುಭವ ಹೇಗಿತ್ತು?

ಇಲ್ಲಿ ಕ್ರೂರತೆ ಹೆಚ್ಚಿದೆ. ಭಯಾನಕ ಕೊಲೆಗಳು ನಡೆಯುತ್ತಿರುತ್ತವೆ. 20–25 ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೆ. ಮಾಲಾಶ್ರೀ ಅವರು ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗಿನ ದೃಶ್ಯಗಳು ಹೆಚ್ಚಿವೆ. ರಾಮು ಅವರು ಬದುಕಿದ್ದಾಗಲೇ ಅವರ ನಿರ್ಮಾಣ ಸಂಸ್ಥೆಯ ಒಂದೆರಡು ಸಿನಿಮಾಗಳಲ್ಲಿ ನಟಿಸುವ ಅವಕಾಶ ಬಂದಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಈ ಚಿತ್ರದಲ್ಲಿ ಮಾಲಾಶ್ರೀ ಅವರ ಜೊತೆ ಅಭಿನಯಿಸಿದ ಖುಷಿಯಿದೆ.

ಪ್ರ

ನಿಮ್ಮ ಮುಂದಿನ ಯೋಜನೆಗಳು ಯಾವುವು?

ಈ ವರ್ಷ ನನ್ನ ಪಾಲಿಗೆ ಅತ್ಯುತ್ತಮವಾಗಿತ್ತು. ನನ್ನ ನಟನೆಯ ‘ಕಾಸಿನ ಸರ’, ‘ಬೇರ’, ‘ಸ್ತಬ್ಧ’ ಚಿತ್ರಗಳು ಈಗಾಗಲೇ ಬಿಡುಗಡೆಗೊಂಡಿವೆ. ‘ಹಗ್ಗ’ ಎಂಬ ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ‘ಕಾಲ ನಾಗಿಣಿ’ ಎಂಬ ಚಿತ್ರದಲ್ಲಿ ನಟಿಸಿರುವೆ. ಸದ್ಯದಲ್ಲೇ ಇನ್ನೊಂದು ಚಿತ್ರ ಸೆಟ್ಟೇರುತ್ತಿದೆ. ಬೋಜ್‌ಪುರಿಯಲ್ಲಿ ಒಂದು ಸಿನಿಮಾಕ್ಕೆ ಸಹಿ ಹಾಕಿರುವೆ.

ಪ್ರ

ನೀವು ಇಲ್ಲಿಂದ ಬೋಜ್‌ಪುರಿ ಕಡೆಗೆ ಹೋಗಿದ್ದು ಹೇಗೆ?

ಹೋಗಿದ್ದಲ್ಲ, ಅವಕಾಶ ಒದಗಿಬಂದಿದ್ದು. ನಿರ್ಮಾಪಕರೊಬ್ಬರು ಹಿಂದಿಯಲ್ಲಿ ಸಿನಿಮಾ ಮಾಡಬೇಕು ಎಂದು ಬಂದಿದ್ದರು. ನಂತರ ಅವರೇ ಬೋಜ್‌ಪುರಿಯಲ್ಲಿ ಸಿನಿಮಾ ಮಾಡಿದಾಗ ಅವಕಾಶ ಒದಗಿಬಂತು. ಅಲ್ಲಿ ನನ್ನ ನಟನೆಯ ಮೂರು ಸಿನಿಮಾಗಳು ಬಿಡುಗಡೆಯಾಗಿವೆ. ಮೂರೂ ಸೂಪರ್‌ ಹಿಟ್‌. ಜೊತೆಗೆ ಅಲ್ಲಿನ ಟಾಪ್‌ ನಾಯಕರ ಜೊತೆ ಕಾಣಿಸಿಕೊಂಡಿರುವೆ. ಬಹುಶಃ ‘ಜಾಕಿ’ ಸಿನಿಮಾದಿಂದಾಗಿ ಇದೆಲ್ಲ ಸಾಧ್ಯವಾಗಿದ್ದು.

ಪ್ರ

ಪತಿ ಭುವನ್‌ ಜೊತೆ ಸಿನಿಮಾ ಮಾಡುವ ಆಲೋಚನೆ ಇದೆಯಾ?

ಗಂಡ–ಹೆಂಡತಿ ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸುವ ಆಸೆ ಖಂಡಿತ ಇದೆ. ಸರಿಯಾದ ಕಥೆ ಸಿಗಬೇಕು. ಅದಕ್ಕಾಗಿ ಕಾಯುತ್ತಿದ್ದೇವೆ. ಈಗಾಗಲೇ ನಮ್ಮ ನಿರ್ಮಾಣ ಸಂಸ್ಥೆಯಲ್ಲಿ ‘ಭುವನಂ ಶರಣಂ ಗಚ್ಛಾಮಿ’ ಸಿನಿಮಾದ ಕೆಲಸ ಶುರುವಾಗಿದೆ. ಆ ಚಿತ್ರದಲ್ಲಿ ಭುವನ್‌ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಕ್ಸಿಂಗ್‌ ಕಥೆ. ಆದರೆ ಆ ಚಿತ್ರದಲ್ಲಿ ನನಗೆ ನಾಯಕಿ ಪಾತ್ರ ಕೊಟ್ಟಿಲ್ಲ. ಸದ್ಯಕ್ಕೆ ಫೈನಾನ್ಸ್‌ ಜವಬ್ದಾರಿ ನೀಡಿದ್ದಾರೆ. ಮುಂದೆ ಒಟ್ಟಿಗೆ ಸಿನಿಮಾ ಮಾಡುವ ಆಲೋಚನೆಯಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT