ಇಂದು ಮತ್ತು ನಾಳೆ ದಾವಣಗೆರೆ ಜಿಲ್ಲಾ 12ನೇ ಸಾಹಿತ್ಯ ಸಮ್ಮೇಳನ. (4 - 5 ಮಾರ್ಚ್2023) ಸಿದ್ಧನಮಠದ ಯುಗಧರ್ಮ ರಾಮಣ್ಣ ಸಮ್ಮೇಳನಾಧ್ಯಕ್ಷ. ಸಹಜವಾಗಿ ಸಿದ್ಧಾರೂಢ ಪರಂಪರೆ ಪ್ರೇಮಿಗಳಿಗೆ ಮತ್ತು ಅನಕ್ಷರಸ್ಥ ಸಾಧಕರಿಗೆಲ್ಲ ಅಮಿತ ಸಂತಸ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸಿದ್ಧನಮಠ, ಯುಗಧರ್ಮ ರಾಮಣ್ಣನ ಹುಟ್ಟೂರು. ಕುರುಬರ ಕೆಂಚಪ್ಪ ಮತ್ತು ಹುಚ್ಚಮ್ಮ, ರಾಮಣ್ಣನ ಅಪ್ಪ ಅಮ್ಮ.

ಎಂಬತ್ತೈದರ ಏರುಪ್ರಾಯದ (10–6–1938) ರಾಮಣ್ಣಗೆ ನಿಮ್ ವಯಸ್ಸೆಷ್ಟು ಅಂತ ಸುಮ್ನೆ ಕೇಳಿದೆ. ‘ಭಾಳೇನಿಲ್ಲ ಎಂಟ್ಹತ್ತರ ಮ್ಯಾಲೈದು’ ಎಂದು ದೇಸೀಯ ನುಡಿಗಟ್ಟುಗಳ ಧೀರ ರಾಮಣ್ಣ ಒಗಟಿನ ವರಸೆಯಲಿ ಉತ್ತರಿಸಿದರು. ಬಿ.ಪಿ. ಷುಗರ್ರೂ ಏನಾದರೂ ಇದೇನಾ.? ಕೇಳಿದ್ದಕ್ಕೆ ‘ಅವುನ್ನ ನನ್ ಹತ್ರಕೂ ಬಿಟ್ಗಂಡಿಲ್ಲ. ಅವು ಹತ್ತಿರಕೆ ಬಂದ್ರೆ ಅವುಕ್ಕೆ ಎದೆಗೊದ್ದ ಬಿಡ್ತದೆ ಈ ನನ್ನ ಕಾಯ. ಅದಿಕ್ಕೆ ನಾನಿನ್ನೂ ನಾಲ್ಕ್ ಹಲ್ಲಿನ ಹೋರೀ ಕರ ಇದ್ದಂಗದೀನಿ’.

ಹಳ್ಳಿಕಡೆಯ ಕಳ್ಳಿ ಸಾಲಿನ ಮಂಗ ತಾನೆಂದು ಖುಷಿಯಿಂದ ಕರೆದುಕೊಳ್ಳುವ ರಾಮಣ್ಣನದು ಪರಿಶುದ್ದ ಜವಾರಿತನದ ಅಭಿವ್ಯಕ್ತಿ. ಗ್ರಾಮ್ಯಜನ್ಯ ಸೊಗಡು ತುಂಬಿ ತುಳುಕಾಡುವ ಕೃಷಿಸಂಸ್ಕೃತಿಯ ಮಾತುಗಳು. ಅದರಲ್ಲಿ ಅಡಗಿರುವ ಆರೂಢ ಸ್ವರದಲ್ಲೇ ಈಶ್ವರದ ಬೆಡಗು ಸೂಸುವ ಸಡಗರ.

ಒಂದಷ್ಟು ಮಾಸಲು ಬಣ್ಣದ ಬಿಳಿ ಅಂಗಿ ಧೋತರದ ಅವಧೂತ ರಾಮಣ್ಣನ ಹೆಗಲಿಗೆ ಸದಾ ಹಸಿರು ಶಾಲು. ಬಿಳಿಮಾಸಲು ಬಟ್ಟೆಯಲ್ಲಿ ಹೊಲಿದ ಬಗಲು ಚೀಲ. ಚೀಲದಲ್ಲೊಂದು ಸಣ್ಣ ಡಪ್ಪು. ಅದಕೆ ಚನ್ನಗಿರಿ ಸೀಮೆ ಕಡೆಗೆ ‘ಕಡಾ’ ಅಂತಾರೆ. ಅದೇನೇ ಇರಲಿ ವರ್ತಮಾನದಲ್ಲಿ ಕಡಾ, ಕಂಜರಾಕ್ಕೆ ರೂಪಾಂತರಗೊಂಡಿದೆ. ರಾಮಣ್ಣನ ಆಶುಕವಿತೆ, ಹಾಡು ದರವುಗಳಿಗೆ ಬಗಲು ಚೀಲದ ರೂಪಾಂತರಿತ ಕಂಜರಾ ಡಪ್ಪು ನುಡಿಯಲು ಸದಾಸಿದ್ಧ. ಭಾವಗೆಡದಂತೆ ಹಾಡುವ ಮೂಲಕ ಯುವ ಮನಸುಗಳನು ಹಿಡಿದಿಡುವಲ್ಲಿಯೂ ರಾಮಣ್ಣ ಶತಸಿದ್ಧ.

ಎಂಬತ್ತೈದರ ನಿಷ್ಪತ್ತಿಫಲದ ಪ್ರಾಯದಲ್ಲೂ ವಾರದ ಆರು ದಿನವೂ ಊರೂರು ತಿರುಗಿ ಹಾಡಿ ಕುಣಿಯುವ ಅಲೆಮಾರಿ ರಾಮಣ್ಣ ಸಿದ್ಧನಮಠದ ಸಿದ್ಧಾರೂಢನೇ ಹೌದು. ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದು ಏನನಸ್ತದೆ, ಏನು ಭಾಷಣ ಮಾಡ್ತೀರಿ.? ಕೇಳಿದ್ದಕ್ಕೆ, ‘ನಾನು ಕಸ ಹೊಡೆಯೋನು. ಹೊಡ್ದ ಕಸ ಗೂಡಸ್ತೀನಿ. ನನಿಗೆ ವಿದ್ಯಾವಂತರಂಗ ಭಾಷಣ ಮಾಡಕ ಬರಲ್ಲ. ಅಲ್ಲಿ ನಿಂತಾಗ ನನ್ನ ಗುರು ಸಿದ್ಧಾರೂಢ ಅದೇನ್ ನುಡಿಸ್ತಾನೋ ಅಂವ ನುಡಿಸಿದಂಗ ನುಡಿತೀನಷ್ಟೇ’. ಎಷ್ಟಾದರೂ ಅದು ಬಯಲನೆ ಬಿತ್ತಿ ಬಯಲನೆ ಬೆಳೆಯುವ, ಬಯಲು ಬಿತ್ತನೆಯ ಬೀಜ. ಅದು ಬರೀ ಆಶುಕವಿತೆಯಲ್ಲ, ಆರೂಢದ ನಿಘಂಟು.

ಹದಡಿ - ಹೊಸಹಳ್ಳಿ ನಡುವಿನ ಚಂದ್ರಗಿರಿ ಮಠದ ಸಿದ್ಧಾರೂಢ ಪರಂಪರೆಗೆ ಸೇರಿದ ಸಿದ್ಧನಮಠದ ರಾಮಣ್ಣನೆಂದರೆ ಆಶುಕವಿತ್ವಕ್ಕೆ ಹೇಳಿ ಮಾಡಿಸಿದ ಮಹತ್ವದ ಹೆಸರು. ರಾಮಣ್ಣನ ಹಾಡುಗಾರಿಕೆಯನು ಲಾವಣಿ, ಗೀಗೀ ಪದಗಳೆಂದು ತೇಪೆ ಹಚ್ಚಿದಂತೆ ಹೆಸರಿಸಲಾಗದು. ಅಂತೆಯೇ ತಾನು ಗೀಚಿದ ಆಶುಕವಿತೆಗಳಿಗೆ ಕಾವ್ಯನಾಮದ ಹೆಗ್ಗುರುತು ಇರಲೆಂದು ತುಂಬಾ ಹಿಂದೆಯೇ ‘ಯುಗಧರ್ಮ’ ಹೆಸರು ಕಟ್ಟಿ ಹಾಡಿದರು. ಅಂದಿನಿಂದ ನೆಲಧರ್ಮದ ಪೋಸ್ಟ್ ರಾಮಣ್ಣ ಯುಗಧರ್ಮ ರಾಮಣ್ಣನಾದ. ಅದು ಅವರದೇ ಆದ ಯುಗಧರ್ಮ ಪರಂಪರೆಯಾಗಿ ಅರ್ಧ ಶತಮಾನದಿಂದ ಅಭಿವೃದ್ಧಿಗೊಂಡ ಒಂದು ವಿಶಿಷ್ಟ ಹಾಡುಗಬ್ಬ. ಅದು ಏಕಕಾಲಕ್ಕೆ ಕೇಳುಗಬ್ಬ ಮತ್ತು ಓದುಗಬ್ಬವೂ ಹೌದು. ಇಂಥ ಮುಕ್ತಜ್ಞಾನದ ಲೋಕಾನುಭಾವಿ ಯುಗಧರ್ಮನನ್ನು ನೋಡುವುದೇ ಎಂಥವರಿಗೂ ಹಬ್ಬ.

ಒಂದನೇ ಇಯತ್ತೆಯಲ್ಲಿ ಬಿಟ್ಟೂಬಿಡದೇ ತಾನು ಐದು ವರ್ಷ ನಪಾಸಾದದ್ದು, ಹೊಟ್ಟೆಪಾಡಿಗಾಗಿ ಉಳ್ಳವರ ಮನೆಯಲ್ಲಿ ಐದು ವರ್ಷ ಜೀತಕ್ಕಿದ್ದದ್ದು, ಇಪ್ಪತ್ಮೂರು ವರ್ಷಗಳ ಕಾಲ ತಮ್ಮೂರಿನ ಅಂಚೆ ಕಚೇರಿಯ ಪೋಸ್ಟ್ ಚೀಲ ಹೊತ್ತು ತಿರುಗಿ ಕೂಲಿ ಮಾಡಿದ್ದು, ವೃತ್ತಿರಂಗದ ಹತ್ತಾರು ನಾಟಕಗಳಲ್ಲಿ ಹಾಸ್ಯಪಾತ್ರ ಮಾಡಿದ್ದು, ತಾನು ಮಾಯಕೊಂಡದ ಲಕ್ಷ್ಮಿದೇವಿಯನ್ನು ಬಾಳ ಸಂಗಾತಿಯಾಗಿ ಮಾಡಿಕೊಂಡದ್ದು ಅದೆಲ್ಲವೂ ರಾಮಣ್ಣನ ಚಿತ್ತಶುದ್ದಿಯ ಸುಷುಪ್ತಿಯಲಿ ಚಿತ್ಕಳಿಸಿವೆ. ಹಾಗೆ ಮದುವೆಯಾದ ಐದು ವರ್ಷಕ್ಕೆ ಸರಿಯಾಗಿ 1979ರ ನವೆಂಬರ್ 18ರಂದು ಬೆಳಗು ಮುಂಜಾನೆ ತನ್ನ ಮನೋಭಿತ್ತಿಯ ಚಿತ್ತಭೂಮಿಕೆಯಲ್ಲಿ ದಿವ್ಯತೆಯ ಚಮತ್ಕಾರ ಪ್ರಜ್ವಲಿಸಿತು. ತನ್ನಂಥ ನಿರಕ್ಷರಕುಕ್ಷಿಗೆ ಆಶುಕವಿತ್ವದ ಸಾಕ್ಷಾತ್ಕಾರ ಆಯಿತೆಂದು ರಾಮಣ್ಣ ನನಗೆ ಅನೇಕ ಬಾರಿ ಹೇಳಿಕೊಂಡಿದ್ದುಂಟು.

ಅಂದು ಅಂಗಾಲಿನಿಂದ ನರಮಂಡಲದ ಅಳ್ನೆತ್ತಿವರೆಗೂ ವಿದ್ಯುತ್ ಸಂಚರಿಸಿದಂತಾಯಿತು. ಅವತ್ತಿನಿಂದ ಶ್ರೀಕಾರಗೊಂಡು ಶುರುವಾದ ವಿಮಲಕಾವ್ಯ ಹೃನ್ಮನಗಳ ಒಡಲು ಬಾಯಿ ತುಂಬಿ ಇವತ್ತಿನವರೆಗೂ ಭೋರ್ಗರೆಯುತ್ತಲೇ ಇದೆ. ತನ್ನ ‘ಭವ’ ನೀಗಿ ಉದ್ಧರಿಸಿದ ಗುರು ಸಿದ್ಧಾರೂಢ, ಅನುಭಾವಿ ಶಿಶುನಾಳ ಶರೀಫ ಗಿರಿಗಳ ಗುರುಮನಿ ಕೀಲ ಅರಿತ ರಾಮಣ್ಣ ತನ್ನ ಮಗನಿಗೆ ‘ಶಿಶುನಾಳ ಶರೀಫ’ ಎಂದೇ ಹೆಸರಿಟ್ಟಿದ್ದಾನೆ. ಇದು ಸಿದ್ಧನಮಠದ ರಾಮಣ್ಣನ ಗುರುಮಾರ್ಗ ಭಕ್ತಿಯ ಕಾಣ್ಕೆಯೇ ಹೌದು. ಜನಪದ ಜಂಗಮನೆಂದೇ ಹೆಸರಾದ ರಾಮಣ್ಣಗೆ ಅಷ್ಟ ಮಹಾಸಿದ್ಧಿ ಸುಪ್ತ ಚೈತನ್ಯಗಳ ಅರಿವಿದೆ.

1977ರ ಸುಮಾರಿಗೆ ಸಿರಿಗೆರೆಯ ಅಂದಿನ ಹಿರಿಯ ಗುರುಗಳಾದ ಶ್ರೀಶಿವಕುಮಾರ ಸ್ವಾಮಿಗಳ ಅನುಗ್ರಹವಾಯಿತೆಂದು ರಾಮಣ್ಣ ಹೇಳುತ್ತಾರೆ. ಸಿರಿಗೆರೆಶ್ರೀಗಳು ಸಾಸಲು ಹಳ್ಳದ ದೆವ್ವದಗುಂಡಿ ಸೀಮೆಯಲ್ಲಿ ನೆಲೆಸಿದ್ದರು. ಅವರ ಸನ್ನೆಲೆಯಿಂದಾಗಿ ದೆವ್ವದಗುಂಡಿ ದೇವನ ಗುಂಡಿಯಾಯಿತು. ಶ್ರೀಗುರು ಶಿವಕುಮಾರರ ಶಿವದೀಕ್ಷೆಯಿಂದ ತನ್ನ ಆಶುಕವಿತ್ವದ ಹೊಳಪು ಹೆಚ್ಚಿತು. ಅವರ ಗುರುಕಾರುಣ್ಯದ ಶಿಶುವಾಗಿ ಎಮ್ಮಪ್ಪ ದೆವ್ವನಗುಂಡಿ ದೈವದ ಅಂಕಿತನಾಮದಿಂದಲೂ ಸಹಸ್ರಾರು ವಚನಗಳನ್ನು ರಚಿಸಿದ್ದಾರೆ ರಾಮಣ್ಣ.

ಇದುವರೆಗೆ ಇಪ್ಪತ್ತಕ್ಕೂ ಹೆಚ್ಚು ತರಳಬಾಳು ಹುಣ್ಣಿಮೆಗಳಲ್ಲಿ ನೂರಾರು ವಚನಧರ್ಮ ದ್ವಿರುಕ್ತಿ ಚೌಪದಿಗಳನ್ನು ಹಾಡಿ ಆನಂದಿಸಿದ ಖಂಡುಗ ಖುಷಿ ತನ್ನದೆಂದು ಪ್ರೀತಿ ತುಂಬಿ ಸ್ಮರಿಸುತ್ತಾರೆ. ಯುಗಧರ್ಮನ ತತ್ವಪದಗಳು, ವಚನಧರ್ಮ, ತೋಚಿದ್ದು ಗೀಚಿದ್ದು, ಕನ್ನಡಮ್ಮನ ತೇರು, ಯುಗಧರ್ಮನ ತ್ರಿಪದಿಗಳು, ಬ್ರಹ್ಮಾಂಡದ ಬುನಾದಿ ಪಿಂಡಾಂಡದ ಘನಹಾದಿ ಹೀಗೆ ತನ್ನ ಮಸ್ತಕ ತುಂಬಿಕೊಂಡಿದ್ದ ಸಹಸ್ರಾರು ಪುಟಗಳ ಆರು ಕೃತಿಗಳು ಪುಸ್ತಕ ರೂಪ ಪಡೆದು ಬಿಡುಗಡೆಗೆ ಸಿದ್ಧಗೊಳ್ಳುತ್ತಿವೆ.

ಮದಹುಚ್ಚಿ ಭೋರ್ಗರೆವ ನದಿಗಳಿಗೆ ಕಡಲಗರ್ಭವೇ ಮುಖನೋಡಾ/
ಲಕ್ಷಣವಿಲ್ಲದ ಅವಲಕ್ಷಣದ
ಶಿಕ್ಷಣಕೆ ಶಿಕ್ಷೆಯೇ ಮುಖನೋಡಾ/
ಲಿಂಗದಿಂದುದ್ಭವಿಸಿದ ಜಂಗಮದ ಝೇಂಕಾರಕೆ ಓಂಕಾರ ಪ್ರಣಮವೇ ಮುಖನೋಡಾ/
ಇಹದ ನಿದ್ರೆಯ ಗೆದ್ದು ಭವದ ಉದ್ರಿಯ ಕಿತ್ತೊಗೆದವನ ಮನವೇ ಮಹಾಮನೆಯ ಮುಖನೋಡಾ ವಚನಧರ್ಮ//

ಯುಗಧರ್ಮ ರಾಮಣ್ಣನ ವಚನಧರ್ಮ ರಚನೆಗೆ ಮಂಕುತಿಮ್ಮನ ಕಗ್ಗದ ಮೇರು ಬೆಳಕಿನ ತೋರುಛಾಯೆ ಬೀರಿದಂತಿದೆ. ಅದು ಹುಟ್ಟು ಸಾವುಗಳನು ನಿಕಷಕ್ಕೊಡ್ಡುವ ಮತ್ತು ಪ್ರತಿರೋಧದ ಸೂಕ್ಷ್ಮಸಂವೇದದ ಸೆಳಕು.

ಶುಷ್ಕ ವೇದಾಂತ ಮತ್ತು ಅಧ್ಯಾತ್ಮದ ಚಹರೆಗಳನ್ನು ಬದಲಿಸಿದ ಅವಧೂತ, ಅಚಲ, ಆರೂಢ ಪರಂಪರೆಗಳಿಗೆ ಅನಕ್ಷರಸ್ಥ ರಾಮಣ್ಣ ಸಹಜವಾಗಿ ಆಕರ್ಷಿತರಾದರು. ಮುಖ್ಯವಾಗಿ ಸಿದ್ಧಾರೂಢ ಪರಂಪರೆಯ ಚಂದ್ರಗಿರಿ ಮಠದ ಪರಮಹಂಸ ವಿದ್ಯಾರಣ್ಯ ಗುರುವರ್ಯರ ಸಾಧಕ ಸತ್ಸಂಗ ಅವರ ಅರಿವಿಗೆ ನೆರವಾಗಿ ನಿಂತಿದೆ.

ಕರ್ನಾಟಕ ಸರ್ಕಾರದ ಕನ್ನಡ ರಾಜ್ಯೋತ್ಸವ ಮತ್ತು ಜಾನಪದ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಕನಕಶ್ರೀ, ಕಲ್ಯಾಣ ಕರ್ನಾಟಕ ಕಲಾರತ್ನ, ಜಾನಪದ ಜ್ಯೋತಿ ಹೀಗೆ ನೂರಾರು ಪ್ರಶಸ್ತಿ ಪುರಸ್ಕಾರಗಳು ರಾಮಣ್ಣನ ಮುಡಿಗೇರಿವೆ.

ಅವರೇ ಹೇಳುವ ಪ್ರಕಾರ ಈಗ್ಗೆ ಐವತ್ತು ವರ್ಷಗಳ ಹಿಂದೆ ತನ್ನಂತರಂಗದಲ್ಲಿ ಉದಯಿಸಿದ ಚಿಜ್ಯೋತಿ ಪ್ರಜ್ಞೆಯೇ ತನ್ನ ಕಾವ್ಯದ ಮಹಾಬೆಳಕು. ಅದು ಚುಕ್ಕಿಯೊಳಗಣ ಕನಸಿನ ಸಾಕ್ಷರದ ಬೆಳದಿಂಗಳಾಗಿ ತಂಪನ್ನೀಯುತ್ತಲೇ ಇದೆ. ಅವರ ಆಶುಕವಿತ್ವದ ಕೆಲವು ರಚನೆಗಳನ್ನು ಗಮನಿಸುವುದಾದರೆ ಆರೂಢ, ಅಚಲ, ಅವಧೂತ, ಅನುಭಾವದಾಚೆಯ ಆಜೀವಕ ನೆಲೆಯ ಸಂವೇದನೆಗಳನ್ನು ನೆನಪಿಸುತ್ತವೆ. ಅದಕ್ಕೆಂದೇ ಬಲ್ಲಂಥ ಮಹಾಜ್ಞಾನಿಗಳು, ಘನವಿದ್ವಾಂಸರು ರಾಮಣ್ಣನ ಕವಿತ್ವ ಕುರಿತು ಗಂಭೀರ ಅಧ್ಯಯನ ಮಾಡುವ, ಗಹನ ಸಂಶೋಧನೆ ಗೈಯ್ಯುವ ಅಗತ್ಯವಿದೆ. ಅದು ಹೊಟ್ಟೆಪಾಡು ಮತ್ತು ಹೊಟ್ಟೆಕಿಚ್ಚಿನ ಪಿಎಚ್.ಡಿ.ಗಳಿಂದ ನೀಗುವ ಕೆಲಸದಂತಾಗಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.