ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಹೆಜ್ಜಾರು’ ಸಿನಿಮಾ ವಿಮರ್ಶೆ: ಚಿತ್ರಕಥೆಯಲ್ಲಿ ಎಡವಿದ ಭಿನ್ನ ಕಥೆ

Published 19 ಜುಲೈ 2024, 12:23 IST
Last Updated 19 ಜುಲೈ 2024, 12:23 IST
ಅಕ್ಷರ ಗಾತ್ರ
ಚಿತ್ರ ವಿಮರ್ಶೆ : ಹೆಜ್ಜಾರು (ಕನ್ನಡ)
ನಿರ್ಮಾಪಕರು:ವಿಮಲ
ನಿರ್ದೇಶಕ:ಹರ್ಷ ಪ್ರಿಯ  
ಪಾತ್ರವರ್ಗ:ಭಗತ್‌ ಆಳ್ವ, ಗೋಪಾಲಕೃಷ್ಣ ದೇಶಪಾಂಡೆ, ಲಿಯೋನಿಲ್ಲಾ ಶ್ವೇತಾ ಡಿಸೋಜ, ನವೀನ್‌ ಕೃಷ್ಣ, ಅರುಣಾ ಬಾಲರಾಜ್‌ ಮತ್ತಿತರರು 

ಭಿನ್ನವಾದ ವಿಷಯಗಳನ್ನು ಇಟ್ಟುಕೊಂಡು ಹೊಸ ನಿರ್ದೇಶಕರು ಕಥೆ ಹೆಣೆಯುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯದಂತಿದೆ ‘ಹೆಜ್ಜಾರು’. ಆದರೆ ಭಿನ್ನ ಕಥೆ ಎಂಬ ಅಂಶವಷ್ಟೇ ಸಿನಿಮಾವನ್ನು ದಡ ಮುಟ್ಟಿಸಲಾರದು. ಗಟ್ಟಿಯಾದ ಕಥೆ ಇಟ್ಟುಕೊಂಡು ಚಿತ್ರಕಥೆಯ ಬಿಗಿಹಿಡಿತವನ್ನು ಸಡಿಲಿಸಿದರೆ, ಸಿನಿಮಾವನ್ನು ನಿರೀಕ್ಷಿಸಿದ ಮಟ್ಟಕ್ಕೆ ತಲುಪಿಸುವುದು ಕಷ್ಟ. ‘ಹೆಜ್ಜಾರು’ ಇಲ್ಲೇ ಕೊಂಚ ಎಡವಿದೆ. ದ್ವಿತೀಯಾರ್ಧದ ಆರಂಭದಲ್ಲೇ ಚಿತ್ರಕಥೆಯ ಸೂತ್ರವನ್ನು ಸಡಿಲಬಿಟ್ಟ ನಿರ್ದೇಶಕರು ಕ್ಲೈಮ್ಯಾಕ್ಸ್‌ನಲ್ಲಿ ಅದನ್ನು ಮತ್ತೆ ಹಿಡಿತಕ್ಕೆ ತೆಗೆದುಕೊಂಡು ಸಿನಿಮಾವನ್ನು ದಡ ಮುಟ್ಟಿಸಿದ್ದಾರೆ.

ಸಿನಿಮಾದ ಕಥೆ ಮೂರು ಕಾಲಘಟ್ಟದಲ್ಲಿ ನಡೆಯುತ್ತದೆ. ಇಸವಿ 1965. ಹೆಜ್ಜಾರು ಪೊಲೀಸ್‌ ಠಾಣೆಯಲ್ಲಿ ಸತ್ಯಮೂರ್ತಿ ಎಂಬಾತ ಕಾನ್‌ಸ್ಟೆಬಲ್ ಆಗಿ ಕಾರ್ಯನಿರ್ವಹಿಸುತ್ತಿರುತ್ತಾನೆ. ಕಳ್ಳನೊಬ್ಬನನ್ನು ಹಿಡಿಯಲು ಓಡುತ್ತಿರುವಾಗ ಸತ್ಯಮೂರ್ತಿ, ಅದೇ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ಹಾಗೂ ಕಳ್ಳ ಊರಿನ ಆಲದಮರದ ಕೆಳಗೆ ಲಾರಿ ಅಪಘಾತವಾಗಿ ಸಾಯುತ್ತಾರೆ. ಸತ್ಯಮೂರ್ತಿಯ ಪತ್ನಿ, ಮಗ ಅನಾಥರಾಗುತ್ತಾರೆ. 1995ರಲ್ಲಿ ಇದೇ ರೀತಿಯ ಮತ್ತೊಂದು ಘಟನೆ ಅದೇ ಆಲದಮರದ ಕೆಳಗೆ ನಡೆಯುತ್ತದೆ. ಆ ಅಪಘಾತದಲ್ಲಿ ಕಾನ್‌ಸ್ಟೆಬಲ್‌ ಆಗಿದ್ದ ಕೃಷ್ಣಮೂರ್ತಿ ಸಾಯುತ್ತಾನೆ. ಕೃಷ್ಣಮೂರ್ತಿಯ ಪತ್ನಿ, ಮಗ ಅನಾಥರಾಗುತ್ತಾರೆ. ಒಂದೇ ರೀತಿಯಲ್ಲಿ ನಡೆದ ಈ ಎರಡೂ ಘಟನೆಗಳು ಸತ್ಯಮೂರ್ತಿಯ ಮಗ ರಾಜಾರಾಮನ(ಗೋಪಾಲಕೃಷ್ಣ ದೇಶಪಾಂಡೆ) ಗಮನಕ್ಕೆ ಬರುತ್ತದೆ. ಆ ವೇಳೆಗಾಗಲೇ ರಾಜಾರಾಮನ ಪ್ರೇಯಸಿಯ ಕೊಲೆಯಾಗಿರುತ್ತದೆ. ಕೊಲೆಗಾರನ ಹುಡುಕಾಟದಲ್ಲಿ ಆತನಿರುತ್ತಾನೆ. 2020ರ ವೇಳೆಗೆ ಕೃಷ್ಣಮೂರ್ತಿಯ ಮಗ ಭಗತ್‌(ಭಗತ್‌ ಆಳ್ವ) ಯುವಕನಾಗಿದ್ದಾನೆ. ಆತ ಜಾನಕಿ(ಶ್ವೇತಾ ಡಿಸೋಜ) ಎಂಬಾಕೆಯನ್ನು ಪ್ರೀತಿಸುತ್ತಿದ್ದಾನೆ. ಹೀಗಿರುವಾಗ ಒಂದು ದಿನ ರಾಜಾರಾಮ ತನ್ನನ್ನೇ ಹಿಂಬಾಲಿಸುತ್ತಿರುವ ವಿಷಯ ಭಗತ್‌ಗೆ ತಿಳಿಯುತ್ತದೆ. ಇಲ್ಲಿಂದ ಕಥೆ ತಿರುವು ಪಡೆಯುತ್ತಾ ಮುಂದಡಿ ಇಡುತ್ತದೆ. 

ಪ್ಯಾರಲಲ್‌ ಲೈಫ್‌ ಹಾಗೂ ಡಿಐಡಿ (ಡಿಸೋಸಿಯೇಟಿವ್ ಐಡೆಂಟಿಟಿ ಡಿಸೋರ್ಡರ್‌) ಎಂಬ ಭಿನ್ನವಾದ ಎಳೆಯನ್ನು ಇಟ್ಟುಕೊಂಡು ನಿರ್ದೇಶಕರು ಇಲ್ಲಿ ಕಥೆ ಹೆಣೆದಿದ್ದಾರೆ. ಕಥೆಯ ಮೊದಲಾರ್ಧ ಕುತೂಹಲಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಅವರ ನಟನೆ ಗಮನ ಸೆಳೆಯುತ್ತದೆ. ಪ್ರೇಕ್ಷಕರೂ ದ್ವಿತೀಯಾರ್ಧಕ್ಕೆ ಉತ್ಸುಕರಾಗುತ್ತಾರೆ. ಆದರೆ ಸಿನಿಮಾ ದ್ವಿತೀಯಾರ್ಧಕ್ಕೆ ಹೆಜ್ಜೆ ಇಡುತ್ತಿದ್ದಂತೇ ಚಿತ್ರಕಥೆ ಸಡಿಲವಾಗುತ್ತದೆ. ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುವಂತಹ, ತರ್ಕಕ್ಕೆ ಸಿಗದ ದೃಶ್ಯಗಳು ಕೆಲವೆಡೆ ಇದೆ. ಗಟ್ಟಿಯಾದ ಚಿತ್ರಕಥೆಯ ಕೊರತೆಯೇ ಇದಕ್ಕೆ ಕಾರಣ. ಎಲ್ಲಿಯ ಆಸ್ಪತ್ರೆ, ಎಲ್ಲಿಯ ಕಾರಿಂಜ ಬೆಟ್ಟ! ಕಥೆಗೆ ಕಮರ್ಷಿಯಲ್‌ ಸಿನಿಮಾ ಸ್ಪರ್ಶ ನೀಡಲೇಬೇಕು ಎಂಬ ಹಟಕ್ಕೆ ಬಿದ್ದಂತೆ ಕೆಲ ದೃಶ್ಯಗಳು, ಎರಡು ಹಾಡುಗಳಿವೆ. ಆ್ಯಕ್ಷನ್‌ ದೃಶ್ಯಗಳೂ ಕೃತಕವಾಗಿವೆ. ಗೋಪಾಲಕೃಷ್ಣ ದೇಶಪಾಂಡೆ ಎಂಬ ಶಕ್ತಿಯನ್ನು ಪೂರ್ಣವಾಗಿ ಬಳಸಿಕೊಳ್ಳುವಲ್ಲಿ ಚಿತ್ರಕಥೆ ಸೋತಿದೆ.

ನಟನೆಯಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ಭಗತ್‌ ಆಳ್ವ, ಲಿಯೋನಿಲ್ಲಾ ಶ್ವೇತಾ ಡಿಸೋಜ, ಅರುಣಾ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಕೆಲವು ಪಾತ್ರಗಳಿಗೆ ಸ್ಪಷ್ಟ ರೂಪ ನೀಡುವಲ್ಲಿ ನಿರ್ದೇಶಕರು ಸೋತಿದ್ದಾರೆ. ಅನಂತದ(ಇನ್ಫಿನಿಟಿ) ಸಂಕೇತವನ್ನು ಶೀರ್ಷಿಕೆಯಲ್ಲೇ ಹೊತ್ತ ಈ ಸಿನಿಮಾ ಆಲದಮರದ ಕೆಳಗಡೆ ಒಂದೇ ರೀತಿಯ ಅಪಘಾತ ಏಕೆ ನಡೆಯುತ್ತಿದೆ ಎನ್ನುವುದನ್ನು ನಿಗೂಢವಾಗಿಯೇ ಇರಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT