ಕೆಲವು ಸಿನಿಮಾಗಳು ಹಾಗೆಯೇ. ಅಲ್ಲೊಂದು ಇಲ್ಲೊಂದು ತಿರುವುಗಳನ್ನು ಕಾಣುತ್ತಾ ನಿಶ್ಶಬ್ದ ನದಿಯಂತೆ ಹರಿಯುತ್ತವೆ. ಹರಿವಿನ ಮೌನವೇ ಹಲವು ದಿನ ಕಾಡುತ್ತದೆ. ಇತ್ತೀಚೆಗೆ ರಾಜ್ ಬಿ.ಶೆಟ್ಟಿ ಅವರ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಈ ಅನುಭವ ನೀಡಿತ್ತು. ಇದೀಗ ಬಂದಿರುವ ಚಂದ್ರಜಿತ್ ಬೆಳ್ಯಪ್ಪ ನಿರ್ದೇಶನದ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾವೂ ಇದೇ ಧಾಟಿಯಲ್ಲಿದೆ. ಇಲ್ಲಿ ಯಾವುದಕ್ಕೂ ಧಾವಂತವಿಲ್ಲ. ಮೊನಚಾದ ಎಲೆಯ ಮೇಲೆ ಇಬ್ಬನಿ ಬಿದ್ದರಷ್ಟೇ ಅದಕ್ಕೊಂದು ಸೌಂದರ್ಯ. ಸೂರ್ಯನ ರಶ್ಮಿಗೆ ಹೊಳೆಯುವ, ಅದೇ ಶಾಖಕ್ಕೆ ಕರಗುವ ಇಬ್ಬನಿಯ ಕಥೆಯಿದು.