ಚಿತ್ರ: ಸಪ್ತ ಸಾಗರದಾಚೆ ಎಲ್ಲೋ (Side A)

ರಚನೆ ಮತ್ತು ನಿರ್ದೇಶನ: ಹೇಮಂತ್ ಎಂ. ರಾವ್

ನಿರ್ಮಾಣ: ಪರಂವಃ ಪಿಕ್ಚರ್ಸ್

ತಾರಾಗಣ: ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ರಮೇಶ್ ಇಂದಿರಾ, ಪವಿತ್ರಾ ಲೋಕೇಶ್, ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್ ಮುಂತಾದವರು

ನಿಶ್ಶಬ್ದವಾಗಿ, ನಿರುಮ್ಮಳವಾಗಿ, ಹಿತವಾಗಿ ಹರಿಯುವ ನದಿ (ಕಥೆ). ಅದರೊಳಗೇ ಬೆರೆತು ಪ್ರವಹಿಸುವ ಜೋಡಿ. ನದಿಯ ದಾರಿಯಲ್ಲಿ ಒಂದಿಷ್ಟು ತಿರುವು. ಸೇರುವ ಸಮುದ್ರ ಮಾತ್ರ ಪ್ರಕ್ಷುಬ್ಧ. ವೇಗವಾಗಿ ಹರಿಯುವ ಮುನ್ಸೂಚನೆಯುಳ್ಳ ಎರಡನೇ ನದಿಗೊಂದು ವಿಸ್ತಾರ ವೇದಿಕೆ. ನಿರ್ದೇಶಕ ಹೇಮಂತ್ ಎಂ.ರಾವ್ ಮೂರನೇ ಸಿನಿಮಾವಾದ ‘ಸಪ್ತ ಸಾಗರದಾಚೆ ಎಲ್ಲೋ– ಸೈಡ್–A’ಯ ನೋಟವಿದು.

ದೃಶ್ಯವೊಂದರ ಹೆಣಿಗೆಯಲ್ಲಿ ಸಾವಧಾನ ತೋರುವ ನಿರ್ದೇಶಕ, ಹೇಮಂತ್. ಹೀಗಾಗಿ ಪ್ರೇಕ್ಷಕನಿಗೂ ಅದನ್ನು ಕಣ್ಣಿಗೆ ಇಳಿಸಿಕೊಳ್ಳುವಾಗ ತಾಳ್ಮೆ ಅಗತ್ಯ. ಈ ನದಿಯ ಹರಿವಿಗೂ ಯಾವುದೇ ಅವಸರವಿಲ್ಲ. ಇಲ್ಲಿ ದೃಶ್ಯಗಳಿಗೂ, ಸಂಗೀತಕ್ಕೂ ಪರಸ್ಪರ ಸ್ಪರ್ಧೆಯಷ್ಟೇ. ಅವುಗಳಲ್ಲಿ ಮಿಂದು ಮೆಲ್ಲನೆ ಹೆಜ್ಜೆ ಹಾಕುವ ಮನು(ರಕ್ಷಿತ್ ಶೆಟ್ಟಿ) ಹಾಗೂ ಪ್ರಿಯಾ(ರುಕ್ಮಿಣಿ ವಸಂತ್) ಈ ನದಿಗೆ ಸೇರುವ ತೊರೆಗಳು. ‘ಮನು’ವಿನ ಉಗಮ ಗೂಢ; ಕಾಯಕ–ಚಾಲಕ. ‘ಪ್ರಿಯಾ’ ಮಧ್ಯಮ ವರ್ಗಕ್ಕೆ ಸೇರಿದ ಸಹಜ ಹುಡುಗಿ. ಈ ಜೋಡಿಯ ಪ್ರೀತಿಯ ಹುಟ್ಟೂ ಗುಟ್ಟು! ಕನಸು ನನಸಾಗಿಸಲು ಹೋಗಿ ಜೈಲು ಸೇರುವ ‘ಮನು’ ಹಾಗೂ ‘ಪ್ರಿಯಾ’ ನಡುವಿನ ಗಾಢವಾದ ಪ್ರೀತಿಯ ಪಯಣ, ಮೋಸ, ಪರಿವರ್ತನೆಗಳೇ ಚಿತ್ರದ ಮುಂದಿನ ಕಥೆ. ನದಿ ಒಂದೆರಡು ಇಳಿಜಾರಿನ ತಿರುವುಗಳಲ್ಲಿ ವೇಗ ಪಡೆದರೂ ಮತ್ತೆ ನಿಶ್ಶಬ್ದವಾಗಿ ಹರಿಯುವುದೇ ಅದರ ಗುರಿ. ಸಮುದ್ರ ತಲುಪುತ್ತಲೇ ಕಥೆ ಮತ್ತಷ್ಟು ಬಿಗಿ.

‘ಸೈಡ್–A’ ಮುಂದಿನ ಭಾಗಕ್ಕಿರುವ ಪ್ರವೇಶ. ‘ಸೈಡ್–B’ ಚಿತ್ರದ ಸೀಕ್ವೆಲ್. ಮೊದಲ ಭಾಗದ ಕಥೆಗೆ 2010 ವೇದಿಕೆಯಾದರೆ, ಅ.20ರಂದು ಬಿಡುಗಡೆಯಾಗಲಿರುವ ‘ಸೈಡ್–B’ 2020ರಲ್ಲಿ ನಡೆಯುವ ಕಥೆ ಹೊತ್ತಿದೆ. ಮೊದಲ ಭಾಗದಲ್ಲಿರುವ ಕಥೆಯ ಎಳೆ ಬಹಳ ಸರಳ. ಆದರೆ ಅದನ್ನು ಸುದೀರ್ಘವಾಗಿ ಈ ಭಾಗದಲ್ಲಿ ಹೇಮಂತ್ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಭಾವನೆಗಳಿಗೆ ಇಲ್ಲಿ ಹೆಚ್ಚಿನ ‘ಸ್ಕ್ರೀನ್ ಸ್ಪೇಸ್’ ಸಿಕ್ಕಿದೆ. ಇದರ ತೀವ್ರತೆ ಗಾಢವಾಗಿದೆ. ಹೀಗಾಗಿ ಕೆಲ ದೃಶ್ಯಗಳು ಸ್ಕ್ರೀನ್ಪ್ಲೇಯಲ್ಲಿ ಅನಗತ್ಯ ಎನಿಸುತ್ತದೆ. ಇವುಗಳನ್ನು ಚೊಕ್ಕವಾಗಿಸಬಹುದಿತ್ತು. ಹೀಗಾಗಿ ಇದು ಅತ್ತ ಎರಡು ಭಾಗಗಳಲ್ಲಿ ಬರಬೇಕಾದ ಕಥೆಯೂ ಅಲ್ಲ, ಇತ್ತ ಒಂದೇ ಭಾಗದಲ್ಲಿ ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ಹೇಳಿ ಮುಗಿಸಬಹುದಾದ ಕಥೆಯೂ ಅಲ್ಲವೆನಿಸಿಬಿಡುತ್ತದೆ. ಸ್ಕ್ರೀನ್ಪ್ಲೇಯಲ್ಲಿ ಒಂದೆರಡು ಕಡೆ ಸಂಭವಿಸುವ ಏಕಾಏಕಿ ಬದಲಾವಣೆಗಳು ಕಥೆಯ ತೀವ್ರತೆಯನ್ನು ಮುಕ್ಕಾಗಿಸಿದೆ. ಹಾಸ್ಯದ ಕೊರತೆ ಕಾಡುತ್ತದೆ.

ನಟರಿಗೆ ಹೇಮಂತ್ ಅವರು ನಡೆಸಿದ ಕಾರ್ಯಾಗಾರದ ಫಲವನ್ನು ತೆರೆಯಲ್ಲಿ ಕಾಣಬಹುದು. ಮನು–ಪ್ರಿಯಾ ಜೋಡಿ ನಡುವಿನ ಕಣ್ಣಿನ ಮಾತುಗಳು, ಬೆರಳ ಸ್ಪರ್ಶದ ಕ್ಷಣಗಳೇ ಇದಕ್ಕೆ ಸಾಕ್ಷ್ಯ. ರುಕ್ಮಿಣಿ ಅವರ ಸಹಜ ನಟನೆ ಅವರ ಪಾತ್ರಕ್ಕೆ ಜೀವತುಂಬಿದೆ. ರಕ್ಷಿತ್ ಶೆಟ್ಟಿ ನಟನೆ ಗಮನಾರ್ಹ. ಕಣ್ಣಿನಲ್ಲೇ ಅವರ ಮಾತುಗಳು ಅಧಿಕ.

ನಟ ರಮೇಶ್ ಇಂದಿರಾ ನಟನೆ ಹಾಗೂ ಪಾತ್ರದ ಕೆತ್ತನೆ ವಿಭಿನ್ನವಾಗಿದೆ. ಉಳಿದಂತೆ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಚರಣ್ ರಾಜ್ ಸಂಗೀತದ ಎಳೆ ಸಿನಿಮಾದುದ್ದಕ್ಕೂ ಸಮುದ್ರದ ಅಲೆಯಂತೆ ಅಪ್ಪಳಿಸುತ್ತಲೇ ಇರುತ್ತದೆ. ‘ಹೋರಾಟ’ ಎನ್ನುವ ಭಿನ್ನವಾದ ಎಳೆಯೂ ಇದರೊಳಗಿದೆ. ಅದ್ವೈತ ಗುರುಮೂರ್ತಿ ಛಾಯಾಚಿತ್ರಗ್ರಹಣ ಗಮನ ಸೆಳೆಯುತ್ತದೆ. ಸಿನಿಮಾದುದ್ದಕ್ಕೂ ನೀಲಿ ಬಣ್ಣಕ್ಕೆ ಹಲವು ಆಯಾಮಗಳಿವೆ.

ಕ್ಲೈಮ್ಯಾಕ್ಸ್ ಬಳಿಕ ‘ಸೈಡ್–B’ಯ ರಭಸವಾಗಿ ಧುಮ್ಮಿಕ್ಕುವ ತುಣುಕುಗಳಿವೆ. ‘ಸುರಭಿ’ಯಾಗಿ ನಟಿ ಚೈತ್ರಾ ಜೆ.ಆಚಾರ್ ಅವರ ಪ್ರವೇಶ ಇಲ್ಲಿದೆ. ಈ ಗ್ಲಿಮ್ಸ್ ಎರಡನೇ ಭಾಗದ ನಿರೀಕ್ಷೆಯನ್ನು ಹೆಚ್ಚಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.