ಮರಾಠಿ ರಂಗಭೂಮಿಯೊಳಗ ಸಂತೋಷ್ ಪವಾರ್ ಅಗ್ದಿ ಹೆಸರುವಾಸಿಯಾಗ್ಯಾರ. 52 ನಾಟಕಗಳನ್ನು ಬರದಾರ. ಅದರೊಳಗ ನಲ್ವತ್ತು ನಾಟಕಗಳು ಕನಿಷ್ಠಂದ್ರೂ 2000ದಷ್ಟು ಪ್ರಯೋಗ ಕಂಡಾವ. ಅವರ ‘ಯದಾಕದಾಶ್ಚಿತ್’ ನಾಟಕ 4 ಸಾವಿರ ಮೀರಿ ಪ್ರದರ್ಶನಗಳನ್ನು ಕಂಡದ. ಇದೇ ನಾಟಕವನ್ನು ಯಶ್ವಂತ ಸರದೇಶಪಾಂಡೆ ಅವರು ಕನ್ನಡಕ್ಕೆ ತಂದಾರ. ‘ಹಿಂಗಾದ್ರ ಹೆಂಗ’ ಅಂತ. ಈ ನಾಟಕದ ತಯಾರಿಗೆ ಬಂದಾಗ ಸಂತೋಷ ಪವಾರ್ ಹಾಗೂ ಅವರ ಪತ್ನಿ, ಕಲಾವಿದೆ ಶಿಲಾಖಾ ಇಬ್ಬರೂ ಮಾತಿಗೆ ಸಿಕ್ಕರು. ಮರಾಠಿ ರಂಗಭೂಮಿಯ ಒಳಹೊರಗನ್ನು ತೆರೆದಿಟ್ಟರು. ಮುಂದಿನ ಸಂವಾದ ಅವರ ಮಾತಿನಾಗೇ ಕೇಳಬಹುದು.

ನಾಟಕ ನೋಡಾಕ ಬಂದಾಂವ ಬಿದ್ಬಿದ್ದು ನಗ್ತಾನ. ಹಗುರಾಗ್ತಾನ. ಮನೀಗೆ ಹೋಗ್ತಾನ. ಆದ್ರ ಹಂಗ ಹೋಗೂಮುಂದ ಅವನ ಮನಸಿನಾಗ, ಹಿಂಗಾದ್ರ ಹೆಂಗ ಅನ್ನುವ ಗುಂಗಿ ಹುಳ ಬಿಟ್ರ ನಿಮ್ಮ ನಾಟಕ ಮತ್ತು ಮಾಧ್ಯಮ ಎರಡೂ ಯಶಸ್ವಿಯಾದ್ಹಂಗ. ನಾನು ಕೊಂಕಣ ಭಾಗದಿಂದ ಬಂದಾಂವ. ಸಣ್ತನದಿಂದ ಕೊಂಕಣಿ ಕಲೆಯ ಪ್ರಕಾರವಾದ ನಮನ ನಾಟ್ಯ ನಂಗ ಸೆಳೀತಿತ್ತು. ನಾಟ್ಯ ಸಂಗೀತ, ನಾಟಕ ಇರುವ ಪ್ರಕಾರ ಅದು. ಮೊದಲು ನಿರೂಪಕರು, ನಂತರ ಗಾವಳಿ ನಾಟ್ಯ, ಆಮೇಲೆ ನಾಟಕ.

ನಾಟಕ ನೋಡಾಕ ಬೇಕಾಗಿರುವ ಮನಃಸ್ಥಿತಿಯನ್ನು ಇವು ಪ್ರವೇಶದ ಸಂದರ್ಭದೊಳಗ ಸಿದ್ಧಪಡಸ್ತಾವ.ಮನರಂಜನೆ, ಮಾಹಿತಿ ಜೊತಿಗೆ ಚಿಂತನೆ ಇವೆಲ್ಲವನ್ನೂ ಒಟ್ಟೊಟ್ಟಿಗೆ ಕೊಡ್ತದ. ನನ್ನೆಲ್ಲ ನಾಟಕಗಳೂ ವ್ಯಂಗ್ಯ ಮತ್ತು ವಿಡಂಬನೆಯ ಆಧಾರಿತವಾಗಿವೆ. ರಾಜಕೀಯ ನನ್ನ ನಾಟಕದ ಮೂಲದ್ರವ್ಯ ಎಂದರು ಸಂತೋಷ್.

ಶಿಲಾಖಾ ಅಷ್ಟರೊಳಗ ಮಾತಿಗೆ ತಮ್ಮ ಅಭಿಪ್ರಾಯ ಸೇರಿಸಿದ್ರು. ಸಂತೋಷ ಅವರ ನಾಟಕದ ಇನ್ನೊಂದು ಪ್ರಬಲ ಅಂಶ ಅಂದ್ರ, ಇಲ್ಲಿಯ ಹೆಣ್ಮಕ್ಕಳು ಭಾಳ ಎಕ್ಸ್‌ಪ್ರೆಸಿವ್ ಇರ್ತಾರ. ಅಂದ್ರ ಮಹಿಳಾ ಪಾತ್ರಗಳು ತಮ್ಮ ಸಿದ್ಧ ಚೌಕಟ್ಟಿನಿಂದ ಹೊರಗ ಇರ್ತಾವ. ಗಾಂಧಾರಿ ಇಲ್ಲಿ ಧೃತರಾಷ್ಟ್ರಗ ತಿವೀತಾಳ, ಬೈತಾಳ, ಜರೀತಾಳ.

ದ್ರೌಪದಿ ಇದು ತನ್ನ ಕಥನ, ತಾನು ನಿರ್ಧಾರ ತಾಳಬೇಕು ಅಂತ ನಿರ್ಧಾರ ಮಾಡ್ತಾಳ. ಪಾಂಡವರು, ನಾವು ಸತ್ಯದ ಮಾರ್ಗದೊಳಗ ನಡದ್ವಿ. ಬರೇ ವನವಾಸ ಅನುಭವಿಸಬೇಕಾಯಿತು. ‘ಸತ್ತಾ’ ಅಧಿಕಾರ ಬೇಕಂದ್ರ ಮೋಸ ಮಾಡಲೇಬೇಕು ಅನ್ನುವ ನಿರ್ಧಾರಕ್ಕ ಬರ್ತಾರ. ಕೌರವರು, ಶತಶತಮಾನಗಳಿಂದ ನಾವು ದುಷ್ಟತನಕ್ಕ ಹೆಸರಾದ್ವಿ, ಇನ್ನು ಒಳಿತಿನ ಕಡೆ ಇರೂನು ಅನ್ನುವ ನಿರ್ಧಾರಕ್ಕ ಬರ್ತಾರ.

ಇದೊಂಥರ ಮಾನವೀಯ ನೆಲೆಯ ಸಂಘರ್ಷಗಳು. ಮಾನ, ಮರ್ಯಾದೆ ಅಥವಾ ಐಶ್ವರ್ಯ ಹಾಗೂ ಖ್ಯಾತಿ ಹೀಗೆ ಎರಡರ ನಡುವಿನ ಸಂಘರ್ಷಗಳು. ಜೊತಿಗೆ ಪ್ರಚಲಿತ ರಾಜಕೀಯದ ಗೊಂದಲ, ತೊಳಲಾಟಗಳು. ಇವೆಲ್ಲವೂ ಒಂದೊಂದು ಪಾತ್ರದೊಳಗ ಇಣುಕಿ ಇಣುಕಿ ಹೋಗ್ತಾವ. ಇವು ಪಾತ್ರಗಳೇ ಅಲ್ಲ. ಮೂಲತಃ ಮಾನವ ಸ್ವಭಾವದ ಸಂಕೇತಗಳು. ಈ ಪ್ರತೀಕಗಳು ಕಾಣಿಸಿಕೊಳ್ಳೂದೆ ಹಿಂಗ ಎಂದು ಶಿಲಾಖಾ ಅಲ್ಪವಿರಾಮ ಹಾಕಿದರು.

ಸಂತೋಷ್ ಮತ್ತೆ ಆರಂಭಿಸಿದರು... ನಾಟಕ ಒಂದು ಪ್ರಬಲ ಮಾಧ್ಯಮ. ರಾಜಕೀಯ ಪ್ರಜ್ಞೆ ಇರದಿದ್ದಲ್ಲಿ ನಾವೆಂಥ ನಾಗರಿಕರು ಹೇಳಿ? ಈಗಲೂ ಹಳ್ಳಿ ಕಟ್ಟೆಗಳಲ್ಲಿ ಹರಟಿ ಹೊಡಿಯೋರು ಇರ್ತಾರಲ್ಲ, ಅವರಿಗೆ ಒಂದು ಸ್ಪಷ್ಟ ನಿಲುವು ಇರ್ತದ. ಅವರಿಗೆ ತಮ್ಮ ರಾಜಕೀಯ ಒಲವಿನ ಬಗ್ಗೆ ಯಾವ ಗೊಂದಲವೂ ಇರೂದಿಲ್ಲ. ನಾಗರಿಕರು ಎನಿಸಿಕೊಂಡ ನಗರವಾಸಿಗಳೇ ಈ ನಿಟ್ಟಿನಲ್ಲಿ ಆಷಾಢಭೂತಿಗಳು. ನಾವು ಯಾವ ಪಕ್ಷದ ಪರ, ವಿರೋಧ ಅಂತ ಮಾತಾಡೂದಿಲ್ಲ. ಏನು ಕೆಟ್ಟದ್ದದೋನೊ ಅದನ್ನ ಲೇವಡಿ ಮಾಡಬೇಕು. ತೀಕ್ಷ್ಣವಾಗಿ ಕುಟುಕಬೇಕು. ಇಂಥ ಕೆಲಸ ಸಾಹಿತಿಗಳಿಂದ, ಲೇಖಕರಿಂದ ಆಗಬೇಕು.

ಇಲ್ಲಾಂದ್ರ ನೋಡ್ರಿ ನಮ್ಮ ಹಳ್ಳಿಯೋರು ಪೈಸೆ ಇಸ್ಕೊಂಡು ವೋಟು ಹಾಕ್ತಾರ... ಸರಿ ಹಾಕಲಿ. ಆದ್ರ ಅವರು ಟೈಮ್ ಬಂದ್ರ ಕೊರಳುಪಟ್ಟಿ ಹಿಡದು ಪ್ರಶ್ನಿಸ್ತಾರ. ನಮ್ಮ ಯುವಜನಾಂಗ ಹಂಗಲ್ಲ. ಪಲಾಯನವಾದ ಹಿಡೀತದ. ನೋಟಾ ಒತ್ತಿ ಬರ್ತಾರ. ಹಂಗಾಗಬಾರದು.

ನನ್ನ ನಾಟಕದೊಳಗ ಆಡಳಿತಶಾಹಿಯನ್ನು ನಾನು ಕಟುವಾಗಿ ಟೀಕಿಸ್ತೀನಿ. ಯಾವ ಅವಕಾಶಗಳನ್ನೂ ಬಿಡೂದಿಲ್ಲ. ಬದಲಾವಣೆ, ಸುಧಾರಣೆ ಮಾಡ್ತೀನಿ ಅನ್ನುವ ಹಟ ನನ್ನೊಳಗಿಲ್ಲ. ಆದ್ರ ನಾಟಕ ನೋಡಿ ಹೋದೋರ ತೆಲಿಯೊಳಗ ಒಂದು ಗುಂಗೀಹುಳ ಅಂತೂ ಬಿಡ್ತೀನಿ. ಅದು ಗುಂಯ್‌ಗುಡ್ಕೊಂತ ಇರ್ತದ.

ನಮ್ಮಲ್ಲಿ ಕೊರತೆ ಆಗ್ತಿರೂದು, ಸಾಹಿತ್ಯ ಕೃತಿಗಳು, ನಾಟಕಗಳು ಹಿಂಗ ಯೋಚನೆಗೆ ಈಡು ಮಾಡವಲ್ವು. ಸಾಹಿತಿಗಳೆಲ್ಲ ಚಳವಳಿಕಾರರ ಹಂಗ ಅಭಿಪ್ರಾಯ ನಿರ್ಮಾಣಕ್ಕ ನಿಲ್ತಾರ. ಒಂದು ಒಲವು, ನಿಲುವು ಸ್ಪಷ್ಟ ಪಡಸ್ತಾರ. ಹಿಂಗ ಬಿತ್ತಿದ ವಿಚಾರಗಳು ಕಡೀತನಕ ಉಳಿಯೂದಿಲ್ಲ. ನಾವು ಪ್ರಶ್ನೆಗಳನ್ನು ಹುಟ್ಟುಹಾಕಬೇಕು. ಉತ್ತರ ನೋಡುಗರೇ ಕಂಡುಕೊಳ್ಳಬೇಕು.

ಶಿಲಾಖಾ ಹೇಳಿದ ಅಂಶ ಅದಲ್ಲ, ಸ್ವಾವಲಂಬಿ ಮಹಿಳೆ ಅಂದ್ರೇನು? ನೀವು ಸಂಬಳಕ್ಕಾಗಿ ದುಡೀತೀರಿ, ನಿಮಗಾಗಿ ಖರ್ಚು ಮಾಡ್ತೀರಿ ಅಂದ್ರ ಸ್ವಾವಲಂಬನೆ ಅಲ್ಲ. ನಿಮ್ಮ ಖುಷಿ, ನಿಮ್ಮ ಸಿಟ್ಟು, ಸೆಡವು, ಮುನಿಸು ಇವೆಲ್ಲವೂ ಸ್ವೀಕಾರಾರ್ಹ ಸ್ಥಿತಿಗೆ ಬರಬೇಕು. ಅದು ಪ್ರಜ್ಞಾವಂತ ಸಮಾಜದ ಲಕ್ಷಣ. ಹಂಗಾಗಿ ನನ್ನ ನಾಟಕದೊಳಗ ಬರುವ ಎಲ್ಲ ಮಹಿಳೆಯರ ಪಾತ್ರಗಳೂ ಹಿಂಗ ‘ಎಕ್ಸ್‌ಪ್ರೆಸಿವ್’ ಆಗಿರ್ತಾವ.

ಕನ್ನಡದ ರಂಗಭೂಮಿ ಬಗ್ಗೆ ಯೋಚಿಸಿದ್ರ ಇದು ನನಗ ಮೊದಲ ಅನುಭವ. ಖರೆ ಹೇಳಬೇಕಂದ್ರ ನನಗ ನಿಮ್ಮ ಯಕ್ಷಗಾನ ಮತ್ತು ಬಯಲಾಟದ ಬಗ್ಗೆ ಅಗ್ದಿ ಕುತೂಹಲ ಅದ. ಆ ಪ್ರಕಾರದೊಳಗ ನನ್ನ ನಾಟಕ ಮಾಡಿಸಬೇಕು ಅಂತ ಆಸೆ ಅದ. ನೋಡೂನು ಏನಾಗ್ತದ ಅಂತ.

ಕನ್ನಡ ರಂಗಭೂಮಿಗೆ ಇದೇ ಮೊದಲ ಸಲ ಬಂದೇನಿ. ಅಗ್ದಿ ಮುಕ್ತದ. ಮುಕ್ತಗೆ ನಮ್ಮ ಮಾತು ಕೇಳ್ತಾರ. ಒಪ್ಕೊಂತಾರ. ಒಪ್ಪಲಿಕ್ಕರ ಮನವರಿಕೆ ಮಾಡಾಕ ಪ್ರಯತ್ನಸ್ತಾರ. ಆದ್ರ ಎಲ್ಲಿಯೂ ಹಟ ಹಿಡಿಯೂದಿಲ್ಲ. ಕನ್ನಡದ ಅನುವಾದ ಓದೂದು ಕೇಳಿದೆ. ಅಲ್ಲಲ್ಲಿ ತಿಳೀತದ. ಪಾತ್ರಗಳು ಸಂಭಾಷಣೆ ಹೇಳುವ ಮೊದಲ ರಿಹರ್ಸಲ್ ನೋಡಿದ್ರ ತಿಳೀತದ ಅದರ ಶಕ್ತಿ ಏನು ಅಂತ. ಬಹುಶಃ ಇದು ಕನ್ನಡದ ಜಾಯಮಾನಕ್ಕ ಭಾಳ ಚಂದ ಭಟ್ಟಿ ಇಳದದ ಅನಿಸ್ತದ. ಯಶ್ವಂತ ಅವರಿಗೆ ಕನ್ನಡ ಛೊಲೊ ಗೊತ್ತದ. ಮರಾಠಿ ತಿಳೀತದ. ಹಿಂದಿ ಬರ್ತದ. ಹಿಂಗಾಗಿ ಭಾಳಷ್ಟು ಮೌಲಿಕ ಚರ್ಚೆ ಆದ್ವು ನಮ್ಮಿಬ್ಬರ ನಡುವೆ.

ಆದ್ರ ನಮ್ಮಲ್ಲಿ ಮುಂಬೈಯೊಳಗ ವೃತ್ತಿ ರಂಗಭೂಮಿಯ ಭರಾಟೆ ಜೋರದ. ಇಲ್ಲಿ ಹೆಂಗದ ಅಂತ ನೀವು ಹೇಳಬೇಕು. ಕನಿಷ್ಠ ನಾಲ್ಕೈದು ನೂರು ರೂಪಾಯಿ ಟಿಕೆಟ್ ಇಟ್ರೂ,ಪ್ರದರ್ಶನಕ್ಕ ಅರ್ಧಗಂಟೆ ಮೊದಲು ಹಾಲ್ ಫುಲ್ ಆಗಿರ್ತದ. ಅಲ್ಲಿ ನೋಡ್ತಾರ, ಮಾತಾಡ್ತಾರ. ಚರ್ಚೆ ಮಾಡ್ತಾರ. ಮರಾಠಿ ರಂಗಭೂಮಿಯ ಆಯಾಮವೇ ಬ್ಯಾರೆ ಅನಿಸ್ತದ. 52 ನಾಟಕ ಬರದೇನಿ. ನಲ್ವತ್ತು ನಾಟಕಗಳು ಕನಿಷ್ಠಂದ್ರೂ 2–3ಸಾವಿರ ಪ್ರದರ್ಶನ ಕಂಡಾವ.

ತಮಾಶಾ ಮಾಡ್ತಾರ ಅನ್ನುವುದೊಂದು ಮಾತಿತ್ತು. ಆದ್ರಿದು ತಮಾಶಾ ಅಲ್ಲ. ಲಾವಣಿನೂ ಅಲ್ಲ. ಇವೆರಡರ ಹೆಜ್ಜಿ ಚೂರು ಕಾಣಬಹುದು. ಇದು ಕೊಂಕಣದ ‘ನಮನ’ ಪ್ರಕಾರ. ಈಗ ಇದಕ್ಕೂ ಹೆಚ್ಚು ಮಹತ್ವ ಸಿಗಾಕ ಶುರು ಆಗೇದ.

ಸಿನಿಮಾ ಮತ್ತು ನಾಟಕ ನಾನು ಎರಡೂ ಪ್ರಕಾರದೊಳಗ ದುಡದೇನಿ. ಆದ್ರ ನಾಟಕದಷ್ಟು ಆತ್ಮಸಂತೃಪ್ತಿ ಕೊಟ್ಟ ಮಾಧ್ಯಮ ಇನ್ನೊಂದಿಲ್ಲ.

ಲೋಕಶಾಹಿ, ತಾನಾಶಾಹಿ ಅಂತ ಒಂದು ನಾಟಕ ಬರೆದೆ. ಅದನ್ನ ಉತ್ತರದ ಭಾಷೆಗೆ ಅನುವಾದ ಮಾಡ್ತಿದ್ವಿ. ಅನುವಾದಕರು ತಾನಾಶಾಹಿ ಉತ್ತಮ ಅನ್ನುವ ನಿರ್ಧಾರಕ್ಕ ಬರೂಹಂಗ ಅನುವಾದ ಮಾಡಿದ್ರು. ನಾನು ತೀರ್ಮಾನ ಎಲ್ಲಿಯೂ ಕೊಡೂದಿಲ್ಲ. ಕೊಡಬಾರದು. ಹಂಗ ಅವರಿಗೆ ಹೇಳಿದಾಗ ಒಪ್ಪಲೇ ಇಲ್ಲ ಅವರು. ನೋಡುಗರಿಗೆ ಗೊತ್ತಿರೂದಿಲ್ಲ, ನಾವೇ ಅವರಿಗೆ ದಾರಿ ತೋರಬೇಕು ಅಂತ ಅವರ ವಾದ. ದಾರಿಯಲ್ಲ, ಬೆಳಕು ತೋರಬೇಕು. ಅವರ ದಾರಿ ಅವರು ಹುಡುಕಿಕೊಬೇಕು ಅನ್ನೂದು ನನ್ನ ವಾದವಾಗಿತ್ತು.

ಆಮೇಲೆ ಹೇಳಿದೆ, ತಾನಾಶಾಹಿ ಛೊಲೊ ಅಂತ ಹೇಳುವ ಸ್ವಾತಂತ್ರ್ಯ ಇರೂದೆ ಲೋಕಶಾಹಿಯಿಂದ ಅಂತ. ಕೊನಿಗೆ ನಾವು ಸಹಮತಕ್ಕ ಬರಬೇಕಾದ್ರ ಭಾಳ ಕಸರತ್ತು ಮಾಡಬೇಕಾಯಿತು. ಒಂದು ಮೂಲಕೃತಿ ಇನ್ನೊಂದಕ್ಕ ಭಾಷಾನುವಾದ ಆಗುವಾಗ, ಸ್ಥಳೀಯ ಭಾಷೆಯ ಜಾಯಮಾನಕ್ಕ ತಕ್ಕಂಗ ಬದಲಾಗಬೇಕೇ ಹೊರತು, ಆಶಯ ಬದಲಾಗಬಾರದು.

ಇನ್ನ ಹೆಚ್ಗಿ ಹೇಳೂದಿಲ್ಲ. ನಾಟಕ ನೋಡ್ರಿ, ನಾವು ಒಂಚೂರು ಪ್ರ್ಯಾಕ್ಟಿಸ್ ಮಾಡಿಸಿ ಬರ್ತೇವಿ ಅಂತ ಶಿಲಾಖಾ ಮತ್ತ ಸಂತೋಷ್ ಪವಾರ್ ರಂಗಾಯಣದ ಅಂಗಳದೊಳಗ ಹೆಜ್ಜಿ ಹಾಕಿದ್ರು. ಅವರೊಟ್ಟಿಗೆ ಅವರ ಮಕ್ಕಳಾದ ಹಾಸ್ಯ ಮತ್ತು ಕಿಯಾ ಇಬ್ಬರೂ ಜೊತಿಗೂಡಿದ್ರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.