ಪ್ರಕೃತಿಯೆಂದರೆ ಸಹಜತೆ, ನಿಯಮ, ಚಲನೆ; ಅದೊಂದು ನಿರಂತರ ಸತ್ಯ. ಮನುಷ್ಯ ಕಂಡುಕೊಂಡ ಬದುಕಿನ ಎಲ್ಲ ಸತ್ಯಗಳೂ, ಅರ್ಥಗಳೂ, ಮೌಲ್ಯಗಳೂ ಮಾನವ ಪ್ರಪಂಚಕ್ಕಷ್ಟೇ ಸೀಮಿತ, ಪ್ರಕೃತಿಗೆ ಅದರಲ್ಲಿ ಆಸಕ್ತಿಯಿಲ್ಲ. ಪ್ರಕೃತಿಗೆ ಜೀವಿಯ ಮುಂದುವರಿಕೆ ಮುಖ್ಯ, ಜೀವನದ ಅರ್ಥವಲ್ಲ. ಪ್ರಕೃತಿಯಲ್ಲಿ ಸೌಂದರ್ಯವಿದೆ, ಹಾಗಾಗಿ ಮನಸ್ಸು ಅಲ್ಲಿ ನಿಲ್ಲುತ್ತದೆ, ಪ್ರಕೃತಿಯ ಮಡಿಲನ್ನು ಅರಸಿ ಅಲೆಯುತ್ತದೆ; ಪ್ರಕೃತಿಯಲ್ಲಿ ರೌದ್ರವಿದೆ, ಅಪಾಯವೂ ಇದೆ. ಹಾಗಾಗಿ ಅಲ್ಲಿ ಭಯವೂ ಹಿಂಜರಿಕೆಯೂ ಇದೆ. ಹೀಗಿರುವ ಪ್ರಕೃತಿಯೊಂದಿಗೆ ಮನುಷ್ಯನ ಒಡನಾಟ ಹೇಗಿರಬೇಕು? ಮಕ್ಕಳು ಪ್ರಕೃತಿಯನ್ನು ಹೇಗೆ ನೋಡಬೇಕು?

ಪ್ರಕೃತಿಯೆಂದರೆ ಬೆಟ್ಟ, ನದಿ, ಸಮುದ್ರವಷ್ಟೇ ಅಲ್ಲ; ನಮ್ಮ ದೇಹವೇ ಪ್ರಕೃತಿ; ನಮ್ಮ ಮನಸ್ಸೂ ಪ್ರಕೃತಿಯೇ ಹೌದು; ನಮ್ಮ ದಿನನಿತ್ಯದ ಜೀವನವೂ ಪ್ರಾಕೃತಿಕ ನಿಯಮಗಳಿಗೆ ಅನುಗುಣವಾಗಿಯೇ ರೂಪಿತವಾಗಿದೆ. ಹಗಲು, ರಾತ್ರಿ, ಬದಲಾಗುವ ಋತುಮಾನ, ದೈಹಿಕ ಬೆಳವಣಿಗೆ, ಮಾನಸಿಕ ಬದಲಾವಣೆ, ಹರಿಯುವ ನೀರು, ಸುಡುವ ಬೆಂಕಿ – ಎಲ್ಲವೂ ಪ್ರಕೃತಿಯೇ ಹೌದು. ಮಕ್ಕಳಿಗೆ ವಿಜ್ಞಾನದ ಮೊದಲ ಪಾಠವೇ ಪ್ರಕೃತಿ ಹೇಗಿದೆ ಎನ್ನುವುದನ್ನು ಗಮನಿಸುವುದು. ಪ್ರಕೃತಿಯ ವಿಸ್ಮಯಗಳನ್ನು ಕುತೂಹಲದಿಂದ ಗಮನಿಸುತ್ತಾ ಹೋದಾಗ ಹೊಸ ಕಲಿಕೆಗೂ ದಾರಿಯಾಗುತ್ತದೆ.

ನಗರ ಪ್ರದೇಶಗಳಲ್ಲಿ ಬೆಳೆದು ಕೇವಲ ಪ್ರವಾಸಕ್ಕೆಂದು ಕಾಡು, ಬೆಟ್ಟ ಪ್ರದೇಶಗಳಿಗೆ, ಸಮುದ್ರ ತೀರಕ್ಕೆ ಹೋಗುವ ಮಕ್ಕಳ ಮನಸ್ಸಿನ ಪ್ರಕೃತಿಯ ಚಿತ್ರಣಕ್ಕೂ, ದಿನನಿತ್ಯ ಕಾಡು–ಬೆಟ್ಟಗಳನ್ನೋ ಸಮುದ್ರವನ್ನೋ ನೋಡಿ ಬೆಳೆದ ಮಕ್ಕಳ ಮನಸ್ಸಿನ ಪ್ರಕೃತಿಯ ಚಿತ್ರಣಕ್ಕೂ ವ್ಯತ್ಯಾಸವಿರುತ್ತದೆ; ಪ್ರಕೃತಿಯನ್ನು ನೋಡುವ, ಅನುಭವಿಸುವ ರೀತಿಯೇ ವಿಭಿನ್ನವಾಗಿರುತ್ತದೆ.

ಪ್ರಕೃತಿಯಲ್ಲಿ ಅಗಾಧ ಶಾಂತಿಯಿದೆ, ಸೌಖ್ಯವಿದೆ. ಪ್ರಕೃತಿಯನ್ನು ಹೇಗೆ ಆಸ್ವಾದಿಸುತ್ತೇವೆ, ಆ ಸವಿಯನ್ನು ಸಹಜೀವಿಗಳೊಟ್ಟಿಗೆ ಸೇರಿ ಹೇಗೆ ಆನಂದಿಸುತ್ತೇವೆ ಎನ್ನುವುದು ನಮ್ಮ ನಮ್ಮ ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ. ಹಾಗೆಯೇ ಪ್ರಕೃತಿಯೊಂದಿಗಿನ ನಮ್ಮ ಸಂಬಂಧ ನಮ್ಮ ವ್ಯಕ್ತಿತ್ವವನ್ನೂ ರೂಪಿಸುತ್ತದೆ. ನಾವು ಮನುಷ್ಯರು ಪ್ರಕೃತಿಯನ್ನು ಪ್ರಾಣಿಗಳಂತೆ ನೋಡುವುದಿಲ್ಲ. ಪ್ರಾಣಿಗಳಿಗೆ ಪ್ರಕೃತಿಯಲ್ಲಿ ಸೌಂದರ್ಯ ಕಾಣುತ್ತದೋ ಇಲ್ಲವೋ ಗೊತ್ತಿಲ್ಲ. ನಮಗಂತೂ ಸೌಂದರ್ಯವನ್ನು ಕಾಣಲು ಕೇವಲ ಕಣ್ಣು ಸಾಲದು, ಹೃದಯವೂ ಬೇಕು. ಹೃದಯಕ್ಕೆ ಬೇಕಾದ ಸಿದ್ಧತೆಯನ್ನು, ಹದವನ್ನು ಮಕ್ಕಳಿಗೆ ಒದಗಿಸಿಕೊಡುವುದರಲ್ಲಿ ಸಮಾಜದ, ಸಂಸ್ಕೃತಿಯ ಪಾತ್ರವಿದೆ. ಕಣ್ಣೆದುರಿಗೆ ಮರವಿರಬಹುದು; ಆದರೆ ಮರದಲ್ಲಿ ಸೌಂದರ್ಯವನ್ನು ಕಾಣಲು ಸಂಸ್ಕಾರ ಬೇಕು.

ಪ್ರಕೃತಿಗೆ ನಮ್ಮ ಮನಸ್ಸು ಸ್ಪಂದಿಸುವ ರೀತಿ, ಪ್ರಕೃತಿಯ ನಿಯಮಗಳನ್ನು ಅರ್ಥೈಸುವ ರೀತಿ; ಪ್ರಕೃತಿಯನ್ನು ಮೀರಿ ಮತ್ತೊಂದು ಲೋಕವನ್ನು ಕಲ್ಪನೆಯಲ್ಲಿ ಸಾಕಾರಗೊಳಿಸಿಕೊಳ್ಳುವುದು ಎಲ್ಲವೂ ಮನುಷ್ಯನ ವೈಶಿಷ್ಟ್ಯ. ಅಂತರಂಗದ ಭಾವಗಳನ್ನೂ, ಪ್ರಾಕೃತಿಕವಲ್ಲದ ಎಷ್ಟೋ ಅನುಭವಗಳನ್ನೂ ಪ್ರಕೃತಿಯಲ್ಲಿರುವ ಅನೇಕ ವಿದ್ಯಮಾನಗಳನ್ನೇ ರೂಪಕಗಳಂತೆ ಆಶ್ರಯಿಸಿ ಹೇಳಿಕೊಳ್ಳುತ್ತೇವೆ. ಇದೆಲ್ಲದರ ಹಿನ್ನೆಲೆಯಲ್ಲಿ ಪ್ರಕೃತಿಗೂ ತಮ್ಮ ಮನಸ್ಸಿಗೂ, ಜೀವನಕ್ಕೂ ನಡುವಿನ ಸಂಬಂಧವನ್ನು ಮಕ್ಕಳು ತಾವಾಗೇ ಕಂಡುಕೊಳ್ಳುವಂತೆ ಪ್ರೇರೇಪಿಸಬಹುದು.

ಪ್ರಕೃತಿಗೂ ಬದುಕನ್ನು ನೋಡುವ ಬಗೆಗೂ ಅವಿನಾಭಾವ ನಂಟಿದೆ. ಉದಾಹರಣೆಗೆ ಹೇಳಬೇಕೆಂದರೆ, ಸೂರ್ಯೋದಯವನ್ನು ಆಸ್ವಾದಿಸುವ ಯಾರೂ ಬದುಕಿನಲ್ಲಿ ಭರವಸೆ ಕಳೆದುಕೊಳ್ಳಲಾರರು. ಪ್ರತಿದಿನವೂ ಸೂರ್ಯ ಉದಯಿಸುವುದು, ಅದರಿಂದ ನಮ್ಮ ಮೈಮನಗಳಲ್ಲಿ ಶಕ್ತಿಸಂಚಾರವಾಗುವುದು ಯಾವ ಪವಾಡಕ್ಕೂ ಕಡಿಮೆಯಿಲ್ಲ. ರಾತ್ರಿಯ ಎಲ್ಲ ಭಯ, ಗೊಂದಲ, ಆಲಸ್ಯವನ್ನು ತೊಡೆದುಹಾಕಿ ಮತ್ತೆ ಜೀವನವನ್ನು ಹೊಸದಾಗಿ ಕಟ್ಟಿಕೊಳ್ಳಬಹುದಾದ ಸಾಧ್ಯತೆಯ ಕಡೆ ನಮ್ಮನ್ನು ಪ್ರಚೋದಿಸುವ ಪ್ರತಿದಿನದ ಬೆಳಗನ್ನು, ‘ಇನ್ನು ಕತ್ತಲು ಕಳೆಯಿತು, ಬೆಳಕಿಗೆ ಮುಖಮಾಡು’ ಎಂಬಂತಿರುವ ಹಕ್ಕಿಗಳ ಕಲರವವನ್ನು ಆಸ್ವಾದಿಸಲಾರದವರು ಬದುಕಿನ ಯಾವ ಸೌಂದರ್ಯವನ್ನೂ ಅನುಭವಿಸಲಾರರು. ನಿಜವಾದ ಸಂತೋಷ ಹೇಗಿರುತ್ತದೆ ಎಂದು ಯಾರಾದರೂ ಕೇಳಿದರೆ ನಿಸ್ಸಂಶಯವಾಗಿ ‘ನಿಜವಾದ ಸಂತೋಷ ಸೂರ್ಯೋದಯದ ಹಾಗಿರುತ್ತದೆ’ ಎಂದೇ ಹೇಳಬಹುದು. ನಿತ್ಯವೂ ಸೂರ್ಯೋದಯದ ಮೊದಲು ಎದ್ದು ಆ ಕಾಲದಲ್ಲಿ ಪ್ರಕೃತಿ ಹೇಗೆ ತನ್ನ ‘ಬಣ್ಣ ಬದಲಾಯಿಸುತ್ತದೆ’ ಎನ್ನುವುದನ್ನು ಮಕ್ಕಳು ಸ್ವತಃ ಕಾಣುವುದಕ್ಕೆ ಪೋಷಕರೂ ಜೊತೆಯಾಗಬಹುದು.

ನಮ್ಮ ಎಷ್ಟೋ ಕವಿಗಳು, ಅನುಭಾವಿಗಳು ಪ್ರಕೃತಿಯನ್ನು ಕಾಣುವ, ಆಂತರ್ಯದಲ್ಲಿ ಸೌಂದರ್ಯವನ್ನು ಕಂಡುಕೊಳ್ಳುವ ಹಲವು ಬಗೆಗಳನ್ನು ನಮಗೆ ದಕ್ಕಿಸಿಕೊಟ್ಟಿದ್ದಾರೆ. ಪ್ರಕೃತಿಯೊಂದಿಗಿನ ಅನುಭವವೊಂದು ಕವಿಯ ಹೃದಯದಲ್ಲಿ ಬೆಳೆದು, ಹೊಳೆದು, ಲೋಕಕ್ಕೇ ಬೆಳಕಾಗಬಲ್ಲ ದರ್ಶನವಾಗಿ, ಕಾಣ್ಕೆಯಾಗಿ ಹೊರಹೊಮ್ಮುವುದನ್ನು ಕುವೆಂಪು, ವರ್ಡ್ಸ ವರ್ತ್ ಮುಂತಾದವರ ಪದ್ಯಗಳಲ್ಲಿ ಕಾಣುತ್ತೇವೆ. ಸೂರ್ಯೋದಯದ ಬಗೆಗಿನ ಪದ್ಯವನ್ನು ಸೂರ್ಯೋದಯವನ್ನು ಕಾಣುವ ಹೊತ್ತಿಗೇ, ಹೂವೊಂದರ ಬಗೆಗಿನ ಪದ್ಯವನ್ನು ಹೂದೋಟದಲ್ಲೇ ವಾಚಿಸುವುದು ಮಕ್ಕಳ ಅನುಭವಲೋಕವನ್ನು ಮತ್ತಷ್ಟು ಸಮೃದ್ಧಗೊಳಿಸುತ್ತದೆ.

ಹರಿಯುವ ನದಿಗೆ, ಬೀಳುವ ಮಳೆಗೆ ಎಂತಹ ಸಂಮೋಹನ ಶಕ್ತಿಯಿದೆ ಎಂದು ಯಾರಾದರೂ ಪದಗಳಲ್ಲಿ ಹೇಳಿ ಮುಗಿಸಬಲ್ಲರೇ? ಮಳೆ ಎಂದರೇನು? ಬರೀ ಆಗಸದಿಂದ ಬೀಳುವ ಜಲಧಾರೆಯೇ? ನದಿಸಾಗರಗಳು ಕೇವಲ ಜಲರಾಶಿಯೇ? ಮಳೆಯನ್ನು ನೋಡುವುದು, ಮಳೆಯಲ್ಲಿ ನೆನೆಯುವುದು ಎಲ್ಲರ ಬಾಲ್ಯದಲ್ಲಿಯೂ ಇರಲೇಬೇಕಾದ ಅನುಭವ. ಹರಿಯುವ ನೀರಿಗೆ, ಅದರ ತಂಪಿಗೆ, ಜುಳು ಜುಳು ನಿನಾದಕ್ಕೆ ಮನಸ್ಸನ್ನು ಶಾಂತಗೊಳಿಸುವ ಶಕ್ತಿಯಿದೆ. ಹರಿಯುವ ನೀರಿಗೆ ಮೈ ತಾಗಿದಾಗ ಹೊಸ ಮನುಷ್ಯರೇ ಆಗಿಬಿಟ್ಟೆವೇನೋ ಅನಿಸುವುದು ಹೊಸ ಮನುಷ್ಯರಾಗುವುದಕ್ಕೆ ಹರಿಯುವುದು, ಚಲನಶೀಲರಾಗಿರುವುದು ಎಷ್ಟು ಮುಖ್ಯ ಎನ್ನುವುದನ್ನು ತಿಳಿಸಿಕೊಡುವಂತಿದೆ. ಮಕ್ಕಳು ಮಳೆಯನ್ನು ಆಸಕ್ತಿಯಿಂದ ನೋಡುವುದೂ, ತಮ್ಮನ್ನೇ ತಾವು ಮಳೆಗೆ ಒಡ್ಡಿಕೊಳ್ಳುವುದು ಮಳೆಯನ್ನೂ ಜೀವನವನ್ನೂ ಹಲವು ರೀತಿಗಳಲ್ಲಿ ಅರ್ಥ ಮಾಡಿಕೊಳ್ಳಲು ಅವಶ್ಯಕ.

ಪ್ರಕೃತಿ ಮತ್ತು ಕಲೆಗಿರುವ ಸಂಬಂಧವನ್ನು ಮಕ್ಕಳಿಗೆ ತಿಳಿಸಿಕೊಡಬಹುದಾದ ಸುಲಭೋಪಾಯವೆಂದರೆ ಪ್ರಕೃತಿಯನ್ನು ನೋಡಿ ಚಿತ್ರರಚಿಸುವ ಚಟುವಟಿಕೆ ಮಾಡಿಸುವುದು. ಆಗಸದ ನೀಲಿಯಲ್ಲೂ, ಸಮುದ್ರದ ನೀಲಿಯಲ್ಲೂ ಎಷ್ಟೊಂದು ವೈವಿಧ್ಯಗಳಿವೆ; ಮೋಡದ ಚಲನೆಯೂ ಅಲೆಗಳ ಚಲನೆಯೂ ಹುಟ್ಟಿಸುವ ಭಾವಗಳೆಷ್ಟು ವಿಭಿನ್ನ ಎನ್ನುವುದೆಲ್ಲಾ ಗೊತ್ತಾಗುತ್ತಹೋಗುತ್ತದೆ. ನೀರಿನಲ್ಲಿ ಬೆಳಕಿನ ಪ್ರತಿಫಲನವನ್ನು ದಿನನಿತ್ಯದ ಬದುಕಿನಲ್ಲಿ ಹೀಗೆ ಧ್ಯಾನಸ್ಥರಾಗಿ ನೋಡೇ ಇಲ್ಲವಲ್ಲಾ, ಪಕ್ಷಿಯ ಆಕಾರವೂ, ಎಲೆಯ ಆಕಾರವೂ, ಬೆಟ್ಟಗುಡ್ಡಗಳ ತಿರುವುಗಳೂ ನಿಜವಾಗಿ ಹೀಗಿದೆಯೇ, ಹೂವುಗಳು ದೂರದಿಂದ ಕೇವಲ ಬಣ್ಣದ ಬಿಂದುಗಳಂತೆ ಕಾಣುತ್ತವೆಯಲ್ಲಾ ಎನ್ನುವ ಆಶ್ಚರ್ಯ ಪ್ರಕೃತಿಯನ್ನು ಚಿತ್ರಿಸುವಾಗ ಉಂಟಾಗದೇ ಇರದು. ಪ್ರಕೃತಿಯನ್ನು ಕಣ್ಣು, ಮೈ ಮನಗಳನ್ನು ತೆರೆದು ತಮ್ಮೊಳಗೆ ಬರಮಾಡಿಕೊಳ್ಳುವ ಅಭ್ಯಾಸವಿರುವ ಮಕ್ಕಳ ಬದುಕು ನಿತ್ಯನೂತನವಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.