ಅಭಿವೃದ್ಧಿಗೆ '3 ಐ’ ಕಾರ್ಯತಂತ್ರ ಸಲಹೆ
‘ಮಧ್ಯಮ ಆದಾಯದ ಬಲೆ’ಯಿಂದ ತಪ್ಪಿಸಿಕೊಂಡು, ಹೆಚ್ಚು ಆದಾಯದ ರಾಷ್ಟ್ರವಾಗಿ ಪರಿವರ್ತನೆಗೊಳ್ಳಲು ಈ ದೇಶಗಳು ‘3 ಐ’ ಕಾರ್ಯತಂತ್ರವನ್ನು ಅನುಸರಿಸಬೇಕು ಎಂದು ವರದಿ ಪ್ರತಿಪಾದಿಸಿದೆ. ‘3 ಐ’ಗಳೆಂದರೆ ಹೂಡಿಕೆ (Investment), ಅಳವಡಿಕೆ (Infusion) ಮತ್ತು ನಾವೀನ್ಯ/ಆವಿಷ್ಕಾರ (Innovation). ಕಡಿಮೆ ಆದಾಯ ಹೊಂದಿರುವ ರಾಷ್ಟ್ರಗಳು ಈಗ ಹೂಡಿಕೆ ಬಗ್ಗೆ ಮಾತ್ರ ಆದ್ಯತೆ ನೀಡುತ್ತಿವೆ. ಹೂಡಿಕೆಯೊಂದರಿಂದಲೇ ಅಭಿವೃದ್ಧಿ ಸಾಧ್ಯವಿಲ್ಲ. ಬಂಡವಾಳ ಹೂಡಿಕೆಯ ಜೊತೆಗೆ ಹೊಸ ಹೊಸ ತಂತ್ರಜ್ಞಾನಗಳ ಅಳವಡಿಕೆ ಮತ್ತು ಹೊಸ ಕಲ್ಪನೆಗಳು, ಆವಿಷ್ಕಾರಗಳಿಗೂ ಗಮನ ಹರಿಸಬೇಕು ಎಂದು ವರದಿ ಹೇಳಿದೆ. ಅಭಿವೃದ್ಧಿಯ ವಿವಿಧ ಹಂತಗಳಲ್ಲಿ ದೇಶಗಳು ಈ ಕಾರ್ಯತಂತ್ರವನ್ನು ಹೇಗೆ ಅನುಷ್ಠಾನ ಮಾಡಬೇಕು ಎಂಬುದನ್ನೂ ವಿಶ್ವ ಬ್ಯಾಂಕ್ ವಿವರಿಸಿದೆ. ಹೂಡಿಕೆ (1i) ಆಧಾರಿತ ಅಭಿವೃದ್ಧಿ ಕಾರ್ಯತಂತ್ರಗಳು ಪ್ರಗತಿಯ ಆರಂಭದ ಹಾದಿಯಲ್ಲಿ ಅಭಿವೃದ್ಧಿಗೆ ವೇಗ ನೀಡುತ್ತವೆ. ಆ ನಂತರದಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸುವ (2i) ನೀತಿಗಳಿಗೆ ಆದ್ಯತೆ ನೀಡಬೇಕು. ಬಳಿಕ ಹೊಸ ಕಲ್ಪನೆಗಳು, ಸಂಶೋಧನೆ, ಆವಿಷ್ಕಾರಗಳಿಗೆ (3i) ಸಂಪನ್ಮೂಲ ಗಳನ್ನು ಒದಗಿಸಬೇಕು. ವಿಶ್ವಬ್ಯಾಂಕ್‌ನ ಪ್ರಕಾರ, ಕಡಿಮೆ ಆದಾಯದ ರಾಷ್ಟ್ರಗಳು (low income) ಹೂಡಿಕೆಗೆ (1i) ಹೆಚ್ಚು ಆದ್ಯತೆ ನೀಡಬೇಕು, ಕೆಳ ಮಧ್ಯಮ ಆದಾಯದ (low middle income) ದೇಶಗಳು ಹೂಡಿಕೆ ಮತ್ತು ತಂತ್ರಜ್ಞಾನಗಳ ಅಳವಡಿಕೆಗೆ (2i) ಗರಿಷ್ಠ ಪ್ರಮಾಣದಲ್ಲಿ ಒತ್ತು ನೀಡಬೇಕು, ಮೇಲು ಮಧ್ಯಮ ಆದಾಯದ (upper middle income) ದೇಶಗಳು ಹೂಡಿಕೆ, ಅಳವಡಿಕೆಯೊಂದಿಗೆ ಆವಿಷ್ಕಾರಕ್ಕೂ (3i) ಗರಿಷ್ಠ ಆದ್ಯತೆ ನೀಡಬೇಕು. ಯಾವ ಕ್ಷೇತ್ರಗಳಿಗೆ ಒತ್ತು?: ‘3ಐ’ ಕಾರ್ಯತಂತ್ರವನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ದೇಶಗಳು ಉದ್ಯಮ (Enterprise), ಕೌಶಲ ವೃದ್ಧಿ/ಪ್ರತಿಭೆ (Talent) ಮತ್ತು ಇಂಧನ (Energy) ಕ್ಷೇತ್ರಗಳಿಗೆ ಒತ್ತು ನೀಡಬೇಕು ಎಂದೂ ವರದಿ ಪ್ರತಿಪಾದಿಸಿದೆ.