ಒಂದಷ್ಟು ದಿನ ಶಾಂತಿಯಿಂದ ಇದ್ದ ಮಣಿಪುರ ಮತ್ತೆ ಉದ್ವಿಗ್ನಗೊಂಡಿದೆ. ಈಶಾನ್ಯ ರಾಜ್ಯದ ಹೊಸ ಭಾಗಗಳಲ್ಲಿ ಸಂಘರ್ಷ ಕಾಣಿಸಿಕೊಂಡಿದ್ದು, ಹಿಂಸಾಚಾರ ಭುಗಿಲೆದ್ದಿದೆ. ಮೈತೇಯಿ ಮತ್ತು ಕುಕಿ ಜೊ ಸಮುದಾಯಗಳ ನಡುವಿನ ಸಂಘರ್ಷಕ್ಕೆ ಮತ್ತೊಂದು ಸಮುದಾಯ ಪ್ರವೇಶ ಪಡೆದಿದೆ. ಒಂದು ಕಡೆ ಮಹಿಳೆಯರ ಮೇಲೆ ಅತ್ಯಾಚಾರ, ಮಹಿಳೆಯರು ಮತ್ತು ಮಕ್ಕಳ ಅಪಹರಣ; ಮತ್ತೊಂದು ಕಡೆ, ಸೇನಾ ಪಡೆಗಳ ಗುಂಡಿಗೆ ಹತ್ತಾರು ಮಂದಿ ಸಾವು. ಸುಮಾರು ಒಂದೂವರೆ ವರ್ಷದಿಂದ ತಣ್ಣಗಿದ್ದ ಜಿರೀಬಾಮ್ ಜಿಲ್ಲೆಗೆ ಈಗ ಬೆಂಕಿ ಬಿದ್ದಿದೆ. ಚರ್ಚು, ಅಂಗಡಿ, ಮನೆಗಳ ಜತೆಗೆ ಜನರ ಮನಸ್ಸುಗಳು ಕೂಡ ದಳ್ಳುರಿಗೆ ಸಿಲುಕಿ ಉರಿಯತೊಡಗಿವೆ