ಕೈಗೂಡದ ತೃತೀಯ ರಂಗ
ರಾಷ್ಟ್ರರಾಜಕಾರಣದಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಹೊರತುಪಡಿಸಿದ ತೃತೀಯ ರಂಗವನ್ನು ರಚಿಸುವ ಹಲವು ಯತ್ನಗಳು ಈಚಿನ ವರ್ಷಗಳಲ್ಲಿ ನಡೆದಿವೆ. 2019ರ ಲೋಕಸಭಾ ಚುನಾವಣೆಯ ನಂತರ ಇಂತಹ ಪ್ರಯತ್ನಗಳು ಚುರುಕುಪಡೆದಿತ್ತು.
ಆರಂಭದಲ್ಲಿ ಟಿಎಂಸಿಯ ಮಮತಾ ಬ್ಯಾನರ್ಜಿ ಅವರು ಅಂತಹ ಯತ್ನಕ್ಕೆ ಕೈಹಾಕಿದ್ದರು. ರಾಷ್ಟ್ರರಾಜಕಾರಣದಲ್ಲಿ ಪಕ್ಷದ ಛಾಪನ್ನು ಹೆಚ್ಚಿಸಲು ಬೇರೆ–ಬೇರೆ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸ್ಪರ್ಧಿಸಿತು. ಆದರೆ, ಅದು ನಿರೀಕ್ಷಿತ ಫಲ ನೀಡಲಿಲ್ಲ. ಬೇರೆ ಪ್ರಾದೇಶಿಕ ಪಕ್ಷಗಳ ನಾಯಕರ ಜತೆಗೆ ಅವರು ಹಲವು ಸುತ್ತಿನ ಮಾತುಕತೆ ನಡೆಸಿದರು. ಅದೂ ಫಲ ನೀಡಲಿಲ್ಲ. ಇಂಥದ್ದೇ ಪ್ರಯತ್ನವನ್ನು ತೆಲಂಗಾಣದ ಬಿಆರ್‌ಎಸ್ (ಹಿಂದಿನ ಟಿಆರ್‌ಎಸ್) ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ನಡೆಸಿದ್ದರು. ತಮಿಳುನಾಡಿನ ಡಿಎಂಕೆ, ಮಹಾರಾಷ್ಟ್ರದ ಶಿವಸೇನಾ ಮತ್ತು ಎನ್‌ಸಿಪಿ, ಟಿಎಂಸಿ, ಉತ್ತರ ಪ್ರದೇಶದ ಎಸ್‌ಪಿ ಮುಂದಾಳುಗಳ ಜತೆಗೆ ರಾವ್ ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ಆದರೆ, ಈ ಯತ್ನವೂ ಫಲ ನೀಡಲಿಲ್ಲ.