ಕೃಷಿ ಉತ್ಪನ್ನಗಳಿಗೆ ಸರಿಯಾದ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ನಿಗದಿ ಮಾಡಬೇಕು ಮತ್ತು ಎಂಎಸ್‌ಪಿಗೆ ಕಾನೂನಿನ ಖಾತರಿ ಒದಗಿಸಬೇಕು ಎಂದು ಒತ್ತಾಯಿಸಿ ಉತ್ತರ ಭಾರತದ ರೈತರು ದೆಹಲಿ ಚಲೋ ಚಳವಳಿ ನಡೆಸುತ್ತಿದ್ದಾರೆ. ಸರ್ಕರ ಐದು ವರ್ಷಗಳ ಎಂಎಸ್‌ಪಿ ಖಾತರಿ ನೀಡುತ್ತೇವೆ ಎಂದು ಹೇಳಿದರೂ ರೈತರು ಅದನ್ನು ತಿರಸ್ಕರಿಸಿದ್ದಾರೆ. ಸ್ವಾಮಿನಾಥನ್ ಆಯೋಗದ ವರದಿಯ ಶಿಫಾರಸಿನ ಆಧಾರದಲ್ಲೇ ಎಂಎಸ್‌ಪಿ ನೀಡುತ್ತಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಆ ಶಿಫಾರಸುಗಳನ್ನು ಸರ್ಕಾರ ಪೂರ್ಣ ಪ್ರಮಾಣದಲ್ಲಿ ಅನುಸರಿಸುತ್ತಿಲ್ಲ ಮತ್ತು ಎಂಎಸ್‌ಪಿ ಲೆಕ್ಕಾಚಾರದಲ್ಲೇ ಹಲವು ಸಮಸ್ಯೆಗಳು ಇವೆ ಎಂಬುದು ತಜ್ಞರ ಅಭಿಪ್ರಾಯ. ಎಂಎಸ್‌ಪಿಗೆ ಸಂಬಂಧಿಸಿ ಸರ್ಕಾರದ ವರದಿಗಳೂ ಇದೇ ಮಾತನ್ನು ಪುಷ್ಟೀಕರಿಸುತ್ತವೆ ಮತ್ತು ಎಂಎಸ್‌ಪಿ ಲೆಕ್ಕಾಚಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನೇ ಹೇಳುತ್ತವೆ

ಕೃಷಿ ಉತ್ಪನ್ನಗಳನ್ನು ಐದು ವರ್ಷಗಳವರೆಗೆ ಎಂಎಸ್‌ಪಿ ಅಡಿ ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ರೈತರು ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಕೇಂದ್ರ ಸರ್ಕಾರವು ಸೋಮವಾರವಷ್ಟೇ ಹೇಳಿತ್ತು. ಆದರೆ ಸರ್ಕಾರದ ಆ ಭರವಸೆಯನ್ನು ಪ್ರತಿಭಟನೆನಿರತ ರೈತರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಸ್ವಾಮಿನಾಥನ್ ಆಯೋಗದ ವರದಿಯ ಶಿಫಾರಸಿನಂತೆ ಎಂಎಸ್‌ಪಿ ನೀಡಬೇಕು ಮತ್ತು ಎಂಎಸ್‌ಪಿಗೆ ಕಾನೂನಿನ ಖಾತರಿ ಒದಗಿಸಬೇಕು ಎಂಬ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಘೋಷಿಸಿದ್ದಾರೆ. ಜತೆಗೆ ಪ್ರತಿಭಟನೆಯನ್ನು ಮುಂದುವರಿಸುವುದಾಗಿಯೂ ಹೇಳಿದ್ದಾರೆ.

ಕೇಂದ್ರ ಸರ್ಕಾರವು ಕೆಲವು ಪ್ರಮುಖ ದವಸ–ಧಾನ್ಯಗಳಿಗೆ ಮತ್ತು ಎಣ್ಣೆಕಾಳುಗಳಿಗೆ ಎಂಎಸ್‌ಪಿಯನ್ನು ಘೋಷಿಸುತ್ತದೆ. ಅದರ ಅಡಿ ಕೆಲ ಪ್ರಮಾಣದ ಕೃಷಿ ಉತ್ಪನ್ನಗಳ ಖರೀದಿಯನ್ನೂ ಮಾಡುತ್ತದೆ. ಆದರೆ ಈ ಎಂಎಸ್‌ಪಿ ವೈಜ್ಞಾನಿಕವಾಗಿ ಇಲ್ಲ ಎಂಬುದು ರೈತರ ಆರೋಪ. ಯಾವುದೇ ಕೃಷಿ ಉತ್ಪನ್ನದ ಉತ್ಪಾದನೆಗೆ ತಗಲುವ ವೆಚ್ಚಕ್ಕಿಂತ ಕಡಿಮೆ ಮೊತ್ತದ ಎಂಎಸ್‌ಪಿಯನ್ನು ಸರ್ಕಾರ ನಿಗದಿ ಮಾಡುತ್ತಿದೆ. ಇದರಿಂದ ನಮಗೆ ನಷ್ಟವಾಗುತ್ತದೆ ಎಂಬುದು ರೈತರ ಆರೋಪ. ಈ ಆರೋಪ ಬಹಳ ಹಿಂದಿನಿಂದಲೂ ಇದೆ.

ರೈತರ ಸ್ಥಿತಿ ಸುಧಾರಣೆಗೆ ಎಂದು ಕೇಂದ್ರದ ಯುಪಿಎ ಸರ್ಕಾರವು ಎಂ.ಎಸ್. ಸ್ವಾಮಿನಾಥನ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಕೃಷಿ ಆಯೋಗವನ್ನು ರಚಿಸಿತ್ತು. ಆ ಆಯೋಗವು ಒಟ್ಟು ಐದು ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಆ ವರದಿಗಳಲ್ಲಿ ಇದ್ದ ಪ್ರಮುಖ ಅಂಶಗಳಲ್ಲಿ ಎಂಎಸ್‌ಪಿ ಸಹ ಒಂದು. ಸರ್ಕಾರ ಒದಗಿಸುತ್ತಿರುವ ಎಂಎಸ್‌ಪಿಯಿಂದ ರೈತರಿಗೆ ನಷ್ಟವೇ ಆಗುತ್ತಿದೆ ಎಂಬುದನ್ನು ಆ ವರದಿಗಳಲ್ಲಿ ವಿವರಿಸಲಾಗಿತ್ತು. ಜತೆಗೆ ರೈತರಿಗೆ ಅನ್ಯಾಯವಾಗದಂತೆ ಎಂಎಸ್‌ಪಿಯನ್ನು ಹೇಗೆ ನಿಗದಿ ಮಾಡಬೇಕು ಎಂಬುದನ್ನೂ ಆಯೋಗವು ತನ್ನ ವರದಿಯಲ್ಲಿ ಕೂಲಂಕಷವಾಗಿ ವಿವರಿಸಿತ್ತು.

ಎಂಎಸ್‌ಪಿಯನ್ನು ಉತ್ಪಾದನಾ ವೆಚ್ಚದ ಆಧಾರದಲ್ಲಿ ನಿಗದಿ ಮಾಡಲಾಗುತ್ತಿತ್ತು. ಸರ್ಕಾರವು ಹೇಳುತ್ತಿರುವ ಉತ್ಪಾದನಾ ವೆಚ್ಚವು ಉಳುಮೆ, ಬಿತ್ತನೆ, ಬೀಜ ಖರೀದಿ, ಗೊಬ್ಬರ ಖರೀದಿಯ ವೆಚ್ಚವನ್ನಷ್ಟೇ ಒಳಗೊಳ್ಳುತ್ತಿತ್ತು (ಸ್ವಾಮಿನಾಥನ್ ವರದಿಯಲ್ಲಿ ಇದನ್ನು ಎ2 ಎಂದು ಕರೆಯಲಾಗಿದೆ). ಸರ್ಕಾರವು ಅದರ ಆಧಾರದಲ್ಲೇ ಎಂಎಸ್‌ಪಿ ನಿಗದಿ ಮಾಡುತ್ತಿತ್ತು. ಇದು ವೈಜ್ಞಾನಿಕವಲ್ಲ. ರೈತರು ಮತ್ತು ಅವರ ಕುಟುಂಬದ ಸದಸ್ಯರು ಹೊಲಗಳಲ್ಲಿ ದುಡಿಯುವುದನ್ನೂ ಉತ್ಪಾದನಾ ವೆಚ್ಚದಲ್ಲಿ ಸೇರಿಸಬೇಕು. ಹೊಲಕ್ಕೆ ಭೋಗ್ಯ ಅಥವಾ ವೆಚ್ಚವನ್ನು ನಿಗದಿ ಮಾಡಿ, ಅದನ್ನೂ ಉತ್ಪಾದನಾ ವೆಚ್ಚಕ್ಕೆ ಸೇರಿಸಬೇಕು. ಆ ಎಲ್ಲಾ ವೆಚ್ಚಗಳನ್ನು ಒಳಗೊಂಡ ಸಮಗ್ರ ಉತ್ಪಾದನಾ ವೆಚ್ಚವನ್ನು ನಿಗದಿ ಮಾಡಬೇಕು (ಇದನ್ನು ಸಿ2 ಎಂದು ಕರೆಯಲಾಗಿದೆ). ಈ ಉತ್ಪಾದನಾ ವೆಚ್ಚದ ಮೇಲೆ, ಶೇ 50ರಷ್ಟು ಹೆಚ್ಚುವರಿ ಮೊತ್ತವನ್ನು ಸೇರಿಸಿ ಎಂಎಸ್‌ಪಿ ನಿಗದಿ ಮಾಡಬೇಕು ಎಂದು ಸ್ವಾಮಿನಾಥನ್ ಆಯೋಗವು ಹೇಳಿತು.

ಕೇಂದ್ರ ಸರ್ಕಾರವು ಸ್ವಾಮಿನಾಥನ್ ವರದಿಯ ಆಧಾರದಲ್ಲೇ ಎಂಎಸ್‌ಪಿ ನೀಡುತ್ತಿದ್ದೇವೆ ಎಂದು ಹೇಳುತ್ತಿದೆ. ಆದರೆ ಅದು ನೀಡುತ್ತಿರುವುದು ಎ2 ಮತ್ತು ಕುಟುಂಬದ ಕೂಲಿ ವೆಚ್ಚವನ್ನು ಒಳಗೊಂಡ ಉತ್ಪಾದನಾ ವೆಚ್ಚ ಮತ್ತು ಅದರ ಮೇಲೆ ಶೇ 50ರಷ್ಟು ಹೆಚ್ಚುವರಿ ಮೊತ್ತವನ್ನು ಮಾತ್ರ. ಸ್ವಾಮಿನಾಥನ್ ಆಯೋಗವು ಶಿಫಾರಸು ಮಾಡಿದ್ದಂತೆ ಸಮಗ್ರ ವೆಚ್ಚವನ್ನು ಆಧರಿಸಿದ ಎಂಎಸ್‌ಪಿ ಇದಲ್ಲ. ಕೇಂದ್ರ ಸರ್ಕಾರವು ನೀಡುತ್ತಿರುವ ಎಂಎಸ್‌ಪಿಯಿಂದ ರೈತರಿಗೆ ಹೇಗೆ ನಷ್ಟವಾಗುತ್ತಿದೆ ಎಂಬುದನ್ನು ಕರ್ನಾಟಕ ಕೃಷಿ ಬೆಲೆ ಆಯೋಗವು 2018ರಲ್ಲಿ ಸಿದ್ದಪಡಿಸಿದ್ದ ವರದಿಯಲ್ಲಿ ವ್ಯವಸ್ಥಿತವಾಗಿ ವಿವರಿಸಲಾಗಿದೆ. ಅಲ್ಲದೆ, ಕೇಂದ್ರ ಸರ್ಕಾರವು ಎಂಎಸ್‌ಪಿ ನಿಗದಿಯಲ್ಲಿ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಹೇಗೆ ಕಡೆಗಣಿಸುತ್ತಿದೆ ಎಂಬುದನ್ನೂ ವಿವರಿಸಲಾಗಿದೆ.

ದೇಶದ ಪ್ರತಿ ರಾಜ್ಯದಲ್ಲೂ ಒಂದೇ ಬೆಳೆಯ (ಉದಾಹರಣೆಗೆ ಭತ್ತ) ಉತ್ಪಾದನಾ ವೆಚ್ಚದಲ್ಲಿ ಭಾರಿ ವ್ಯತ್ಯಾಸ ಇರುತ್ತದೆ. ನೀರಾವರಿ ಸೌಲಭ್ಯ ಇರುವ ಕಾರಣಕ್ಕೆ ಪಂಜಾಬ್‌ನಲ್ಲಿ ಒಂದು ಕ್ವಿಂಟಾಲ್ ಭತ್ತವನ್ನು ಬೆಳೆಯಲು ಕಡಿಮೆ ಖರ್ಚಾಗುತ್ತದೆ. ಆದರೆ ಅಷ್ಟೇ ಭತ್ತವನ್ನು ಕರ್ನಾಟಕದಲ್ಲಿ ಬೆಳೆಯಲು ತಗಲುವ ವೆಚ್ಚ ಇನ್ನೂ ಹೆಚ್ಚಾಗುತ್ತದೆ. ಕೇಂದ್ರ ಸರ್ಕಾರವು ಪಂಜಾಬ್‌ನಲ್ಲಿನ ವೆಚ್ಚವನ್ನು ಪರಿಗಣಿಸಿ ಎಂಎಸ್‌ಪಿ ನಿಗದಿ ಮಾಡಿದರೆ, ಕರ್ನಾಟಕದ ರೈತರಿಗೆ ನಷ್ಟವಾಗುತ್ತದೆ. ಹೀಗಾಗಿ ಎಲ್ಲಾ ರಾಜ್ಯಗಳಿಗೂ ಉತ್ಪಾದನಾ ವೆಚ್ಚವನ್ನು ಪ್ರತ್ಯೇಕವಾಗಿ ನಿಗದಿ ಮಾಡಬೇಕು ಮತ್ತು ಅದರ ಆಧಾರದಲ್ಲಿ ಸಮಗ್ರ ಉತ್ಪಾದನಾ ವೆಚ್ಚವನ್ನು (ಸಿ2) ಲೆಕ್ಕ ಹಾಕಬೇಕು. ಆನಂತರ ಶೇ 50ರಷ್ಟು ಹೆಚ್ಚುವರಿ ಮೊತ್ತವನ್ನು ಸೇರಿಸಿ ಎಂಎಸ್‌ಪಿ ನಿಗದಿ ಮಾಡಬೇಕು ಎಂದು ಸ್ವಾಮಿನಾಥನ್ ಆಯೋಗವು ತನ್ನ ಐದೂ ವರದಿಗಳಲ್ಲಿ ಪದೇ–ಪದೇ ಹೇಳಿದೆ. ಆದರೆ ಕೇಂದ್ರ ಸರ್ಕಾರವು ದೇಶದಾದ್ಯಂತ ಏಕಪ್ರಕಾರದ ಎಂಎಸ್‌ಪಿಯನ್ನೇ ಘೋಷಿಸುತ್ತಿದೆ. ‘ಕೇಂದ್ರ ಸರ್ಕಾರದ ಎಂಎಸ್‌ಪಿಯಿಂದ ರೈತರಿಗೆ ನಷ್ಟವಾಗಲು ಇದೂ ಒಂದು ಕಾರಣ’ ಎನ್ನುತ್ತಾರೆ ತಜ್ಞರು.

‘ರೈತರ ಬೇಡಿಕೆ ನ್ಯಾಯಯುತ’

ಸ್ವಾಮಿನಾಥನ್ ಆಯೋಗದ ವರದಿಯ ಪ್ರಕಾರ ಎಂಎಸ್‌ಪಿ ನೀಡಿದರೆ ಗ್ರಾಹಕರಿಗೆ ಹೊರೆಯಾಗುತ್ತದೆ ಎಂಬ ತಪ್ಪು ಅಭಿಪ್ರಾಯವನ್ನು ಜನರಲ್ಲಿ ಬಿತ್ತಲಾಗುತ್ತಿದೆ. ಆದರೆ, ಅದು ನಿಜವಲ್ಲ. ಆ ಶಿಫಾರಸಿನಂತೆ ಎಂಎಸ್‌ಪಿ ನಿಗದಿ ಮಾಡಿದರೂ, ಪ್ರತಿ ಕೃಷಿ ಉತ್ಪನ್ನಕ್ಕೆ ಗ್ರಾಹಕರು ಈಗ ನೀಡುತ್ತಿರುವ ಬೆಲೆಗಿಂತ ಆ ಎಂಎಸ್‌ಪಿ ಹೆಚ್ಚೇನೂ ಆಗುವುದಿಲ್ಲ. ದಲ್ಲಾಳಿಗಳ ಮತ್ತು ವ್ಯಾಪಾರಿಗಳ ಲಾಭದ ಪ್ರಮಾಣ ಕಡಿಮೆಯಾಗುತ್ತದೆ ಅಷ್ಟೆ. ಈ ಕಾರಣದಿಂದಲೇ ಸ್ವಾಮಿನಾಥನ್ ಆಯೋಗದ ಶಿಫಾರಸು ಜಾರಿಗೆ ಬರದಂತೆ ನೋಡಿಕೊಳ್ಳಲಾಗುತ್ತಿದೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ.

ಕೇಂದ್ರ ಸರ್ಕಾರವೂ ಇದೇ ರೀತಿ ಮಾತನಾಡುತ್ತಿದೆ. ‘ಈ ಶಿಫಾರಸಿನಂತೆ ಎಂಎಸ್‌ಪಿ ನಿಗದಿ ಮಾಡಿದರೆ ಮಾರುಕಟ್ಟೆ ಹಾದಿತಪ್ಪುತ್ತದೆ’ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ. ಆದರೆ ಅದರಲ್ಲೂ ಹುರುಳಿಲ್ಲ. ರಾಜಕೀಯ ಹಿತಾಸಕ್ತಿಗಾಗಿ ಸರ್ಕಾರ ಹೀಗೆ ಮಾಡುತ್ತಿದೆ. ಏಕೆಂದರೆ ವರ್ತಕರ ಸಂಘಗಳಲ್ಲಿ ರಾಜಕಾರಣಿಗಳೇ ಇದ್ದಾರೆ. ಇದು ಜಾರಿಗೆ ಬಂದರೆ ಅವರಿಗೆ ನಷ್ಟವಾಗುತ್ತದೆ.

ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಎಂಎಸ್‌ಪಿ ನಿಗದಿ ಮಾಡಿ ಮತ್ತು ಎಂಎಸ್‌ಪಿಗೆ ಕಾನೂನಿನ ಖಾತರಿ ನೀಡಿ ಎಂದು ರೈತರು ಇಡುತ್ತಿರುವ ಬೇಡಿಕೆ ನ್ಯಾಯಯುತವಾಗಿದೆ. ಏಕೆಂದರೆ ಈಗ ಎಂಎಸ್‌ಪಿಯನ್ನು ಸರ್ಕಾರ ಘೋಷಿಸುತ್ತದೆ ಅಷ್ಟೆ. ಸರ್ಕಾರ ಖರೀದಿಸಿದ್ದನ್ನು ಬಿಟ್ಟರೆ, ಎಂಎಸ್‌ಪಿಗಿಂತ ಕಡಿಮೆ ಬೆಲೆಗೇ ವರ್ತಕರು ಖರೀದಿಸುತ್ತಾರೆ. ಇದರಿಂದ ಎಲ್ಲಾ ರೈತರಿಗೆ ಎಂಎಸ್‌ಪಿ ದೊರೆಯುತ್ತಿಲ್ಲ. ಎಂಎಸ್‌ಪಿಗೆ ಕಾನೂನಿನ ಖಾತರಿ ನೀಡಿದರೆ ಸರ್ಕಾರ, ವರ್ತಕರು, ಜನರು, ಖಾಸಗಿ ಕಂಪನಿಗಳು ಸಹ ಎಂಎಸ್‌ಪಿ ದರದಲ್ಲೇ ಕೃಷಿ ಉತ್ಪನ್ನ ಗಳನ್ನು ಖರೀದಿಸಬೇಕಾಗುತ್ತದೆ. ಎಂಎಸ್‌ಪಿಗೆ ಕಾನೂನಿನ ಖಾತರಿ ದೊರೆಯುವುದರಿಂದ ರೈತರಿಗೆ ಆದಾಯದ ಖಾತರಿಯೂ ದೊರೆಯುತ್ತದೆ ಮತ್ತು ನಷ್ಟ ಇಲ್ಲವಾಗುತ್ತದೆ.

–ಟಿ.ಎನ್.ಪ್ರಕಾಶ್ ಕಮ್ಮರಡಿ, ಕರ್ನಾಟಕ ಕೃಷಿ ಬೆಲೆ, ಆಯೋಗದ ಮಾಜಿ ಅಧ್ಯಕ್ಷ.

ಆಧಾರ: ಎಂ.ಎಸ್.ಸ್ವಾಮಿನಾಥನ್ ಅಧ್ಯಕ್ಷತೆಯ ರಾಷ್ಟ್ರೀಯ ಕೃಷಿ ಆಯೋಗದ ಐದು ವರದಿಗಳು, ಕರ್ನಾಟಕ ಕೃಷಿ ಬೆಲೆ ಆಯೋಗದ ವರದಿಗಳು, ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.