ಮಾಸಾಶನಕ್ಕೆ ಸಂಬಂಧಿಸಿದಂತೆ ದೂರು ಕೊಟ್ಟ ತಕ್ಷಣ ಕೆ–2 ತಂತ್ರಾಂಶದ ಮೂಲಕ ಬೇಗ ಪರಿಹಾರ ಸಿಗುತ್ತಿದೆ. ಆಧಾರ್ ಲಿಂಕ್ ಆಗದಿರುವ ಖಾತೆಗಳಿದ್ದರೆ ಸಮಸ್ಯೆ ಆಗುತ್ತದೆ. ತಾಂತ್ರಿಕ ಅಥವಾ ಇನ್ನಿತರ ಸಮಸ್ಯೆ ಗಮನಕ್ಕೆ ತಂದರೆ ಅಧಿಕಾರಿಗಳು ಆದಷ್ಟು ಬೇಗ ಪರಿಹರಿಸಿ ಮಾಸಾಶನ ಸಿಗುವ ವ್ಯವಸ್ಥೆ ಮಾಡುತ್ತಾರೆ. ಈ ಮೊದಲಿನಂತೆ ಮಾಸಾಶನಕ್ಕೆ ಅಂಗವಿಕಲರು ಅಲೆದಾಡುವಂತಹ ಪರಿಸ್ಥಿತಿ ಇಲ್ಲ. ಹೊಸದಾಗಿ ಅರ್ಜಿ ಸಲ್ಲಿಸಿದವರಿಗೂ ಬೇಗನೇ ಮಾಸಾಶನ ಮಂಜೂರಾಗುತ್ತದೆ.
-ಹೊನ್ನಪ್ಪ ಗೂಳಪ್ಪನವರ ಜಿಲ್ಲಾ ಘಟಕದ ಅಧ್ಯಕ್ಷ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ರಾಯಚೂರು
ಅರ್ಜಿ ಸಲ್ಲಿಸಿದ 7 ದಿನಗಳಲ್ಲಿ ಭೂ ಪರಿವರ್ತನೆ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರ ಕ್ರಮ ವಹಿಸಿದೆ ಎಂದು ಹಿಂದಿನ ಕಂದಾಯ ಸಚಿವರು ಹೇಳಿಕೆ ನೀಡಿ ತಿಂಗಳುಗಳೇ ಕಳೆದಿವೆ. ಕಂದಾಯ ನಿರೀಕ್ಷಕರಿಂದ ವಿವಿಧ ಹಂತಗಳನ್ನು ದಾಟಿ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ತಲುಪಲು ಒಂದು ತಿಂಗಳು ಬೇಕು. ಏಕೆ ತಡ ಎಂದು ಕೇಳಿದರೆ ಅಧಿಕಾರಿಗಳು ಕಾರಣ ನೀಡಿ ಮತ್ತಷ್ಟು ವಿಳಂಬ ಮಾಡುತ್ತಾರೆ.
–ಸೋಮಶೇಖರ್, ಕೂಡಲಕುಪ್ಪೆ, ಶ್ರೀರಂಗಪಟ್ಟಣ ತಾಲ್ಲೂಕು
ಮನೆ ಬಾಗಿಲಿಗೆ ಮಾಸಾಶನ ತಲುಪಿಸುವ ಪ್ರಾಯೋಗಿಕ ಯೋಜನೆಯನ್ನು ಉಡುಪಿ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಈ ವರೆಗೆ ಬಂದಿರುವ ಎಲ್ಲ ಅರ್ಜಿಗಳನ್ನು 72 ತಾಸುಗಳೊಳಗೆ ವಿಲೇವಾರಿ ಮಾಡಲಾಗಿದೆ.