ಕಲಬುರ್ಗಿ: ಸರ್ಕಾರಿ ಶಾಲೆಗಳನ್ನು ಶಾಸಕರಿಗೆ ದತ್ತು ನೀಡುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ. ಆದರೆ, ಸರ್ಕಾರಿ ಶಾಲಾ–ಕಾಲೇಜುಗಳ ಅಭಿವೃದ್ಧಿಗೆ ಎಷ್ಟು ಜನ ಶಾಸಕರು ಪ್ರಸಕ್ತ ಅವಧಿಯಲ್ಲಿ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿ ವಿನಿಯೋಗಿಸಿದ್ದಾರೆ ಎಂದು ಹುಡುಕಿದರೆ ಸಿಗುವ ಸಂಖ್ಯೆ ಅತ್ಯಲ್ಪ.

ಬಡ ಮಕ್ಕಳೇ ಹೆಚ್ಚಾಗಿ ಓದುವ ಸರ್ಕಾರಿ ಶಾಲೆಗಳಿಗೆ ಸ್ಥಳೀಯ ಶಾಸಕರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ಒಂದು ಪಾಲನ್ನು ಕೊಡುವುದು ವಾಡಿಕೆಯಂತಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಇದು ಮರೆಯಾಗುತ್ತಿದೆ. ಕ್ಷೇತ್ರಾಭಿವೃದ್ಧಿ ನಿಧಿ ಎಂಬುದು ‘ಮತಬೇಟೆಯ ನಿಧಿ’ಯಂತಾಗಿ ಪರಿವರ್ತನೆಯಾಗಿರುವುದೇ ಇದಕ್ಕೆ ಕಾರಣ.

ತಮ್ಮ ಸಮುದಾಯಕ್ಕೆ ಸೇರಿದ, ಇಲ್ಲವೇ ಕ್ಷೇತ್ರದ ಪ್ರಬಲ ಸಮುದಾಯ, ಮಠಗಳ ಒಡೆತನದಲ್ಲಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳು ಇದ್ದರೆ ಜನಪ್ರತಿನಿಧಿಗಳು ಧಾರಾಳವಾಗಿ ಅನುದಾನ ಕೊಡುತ್ತಾರೆ. ಇನ್ನು ಹಿಂಬಾಲಕರು, ಪಕ್ಷದ ಕಾರ್ಯಕರ್ತರು ನಡೆಸುವ ಸಂಸ್ಥೆಗಳಿಗೂ ನೆರವು ದೊರೆಯುತ್ತದೆ. ಅದೇ ಧಾರಾಳತನ ಸರ್ಕಾರಿ ಶಾಲೆಗಳ ವಿಚಾರದಲ್ಲಿ ಕಂಡುಬರುವುದಿಲ್ಲ. ಸಮುದಾಯ ಭವನಗಳ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ, ರಸ್ತೆ ಹಾಗೂ ಇತರೆ ಸಣ್ಣಪುಟ್ಟ ಕಾಮಗಾರಿಗಳಿಗೆ ನಿಧಿ ವಿನಿಯೋಗವಾಗುವುದೇ ಹೆಚ್ಚು.

‘ಸರ್ಕಾರಿ ಶಾಲಾ–ಕಾಲೇಜುಗಳ ಅಭಿವೃದ್ಧಿಗೆ ಶಿಕ್ಷಣ ಇಲಾಖೆಯೂ ಸೇರಿದಂತೆ ಬೇರೆ ಬೇರೆ ಯೋಜನೆಗಳಲ್ಲಿ ಅನುದಾನ ಹಂಚಿಕೆ ಮಾಡಿದ್ದೇವೆ. ಜನರಿಗೆ ಅತ್ಯವಶ್ಯವಾಗಿ ಮತ್ತು ತುರ್ತಾಗಿ ಬೇಕಿರುವ ಕಾಮಗಾರಿಗಳಿಗೆ ನಮ್ಮ ನಿಧಿ ವಿನಿಯೋಗಿಸುತ್ತಿದ್ದೇವೆ’ ಎಂಬುದು ಬಹುಪಾಲು ಶಾಸಕರು ಹೇಳುವ ಮಾತು.

ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸಹ ಇದನ್ನೇ ಹೇಳುತ್ತಾರೆ. ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಬರುವ ಅನುದಾನದಲ್ಲಿ ಒಂದು ಪಾಲನ್ನು ಶಿಕ್ಷಣ ಕ್ಷೇತ್ರಕ್ಕೆ ಕಡ್ಡಾಯ ವಾಗಿ ನೀಡಲೇಬೇಕಿದೆ. ಅದನ್ನು ಬಳಸಿಕೊಂಡು ನಮ್ಮ ಭಾಗದ ಸರ್ಕಾರಿ ಶಾಲಾ–ಕಾಲೇಜುಗಳ ಮೂಲಸೌಲಭ್ಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. 2018ರಿಂದ ಇಲ್ಲಿಯವರೆಗೆ ₹ 2.50 ಕೋಟಿ ಮಾತ್ರ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ ಬಿಡುಗಡೆಯಾಗಿದೆ.

ಬರುವ ಅನುದಾನವೇ ಕಡಿಮೆ. ಅದೂ ಇತ್ತೀಚಿನ ದಿನಗಳಲ್ಲಿ ಕಡಿತವಾಗುತ್ತಿದೆ. ಅಷ್ಟಕ್ಕೂ ಶಾಲೆಗಳ ಅಭಿವೃದ್ಧಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಇದೆಯಲ್ಲ. ಅದಕ್ಕೆ ಹಂಚಿಕೆಯಾಗುವ ಅನುದಾನ ಎಲ್ಲಿ ಹೋಗುತ್ತಿದೆ? ಶಾಸಕರ ನಿಧಿಯಿಂದ ಕೊಡಬೇಕು ಎಂಬುದಾದರೆ ವಾರ್ಷಿಕವಾಗಿ ನಮಗೆ ನೀಡುತ್ತಿರುವ ನಿಧಿಯನ್ನು ಹೆಚ್ಚಿಸಲಿ’ ಎಂಬ ಬೇಡಿಕೆಯನ್ನು ಮುಂದಿಡುತ್ತಾರೆ.

‘ಸಮುದಾಯದ ನೆರವಿಗೆ ಹಣ ಹೊಂದಿಸಲು ಪ್ರದೇಶಾಭಿವೃದ್ಧಿ ನಿಧಿಯೇ ನಮಗೆ ಮೂಲದ್ರವ್ಯ. ಇದು ನಮ್ಮ ವಿವೇಚನಾ ನಿಧಿ. ಹೀಗಾಗಿ ಇದನ್ನು ಒರೆಗೆ ಹಚ್ಚುವ ಅಗತ್ಯವಿಲ್ಲ’ ಎಂದು ಸಮರ್ಥಿಸಿಕೊಳ್ಳುತ್ತಾರೆ ಪ್ರಥಮ ಬಾರಿಗೆ ಆಯ್ಕೆಯಾಗಿರುವ ಮುಂಬೈ ಕರ್ನಾಟಕ ಭಾಗದ ಯುವ ಶಾಸಕರೊಬ್ಬರು.

ಹೆಸರು ಬಹಿರಂಗ ಪಡಿಸಲು ಬಯಸದ ಶಾಸಕರೊಬ್ಬರು ‘ನಿಧಿ ಹಂಚಿಕೆಯ ಕಷ್ಟ’ದ ಪಟ್ಟಿಯನ್ನೇ ಮುಂದಿಡುತ್ತಾರೆ. ‘ಚುನಾವಣೆಯ ವೇಳೆ ನಾವು ಪ್ರತಿ ಊರಿನ ಪ್ರತಿ ಜಾತಿಯವರಿಗೆ ‘ನಿಮಗೇನು ಮಾಡಿದ್ದೇವೆ’ ಎಂಬ ಲೆಕ್ಕ ಕೊಡಬೇಕಾಗುತ್ತದೆ. ಚುನಾವಣೆ ಸಮಯದಲ್ಲಿ ನೀಡಿದ ಭರವಸೆಯನ್ನೂ ಈಡೇರಿಸಬೇಕಾಗುತ್ತದೆ. ಆಯಾ ಜಾತಿಗಳ ಭವನಗಳಿಗೆ ಕ್ಷೇತ್ರಾಭಿವೃದ್ಧಿ ನಿಧಿಯ ಜೊತೆಗೆ ವೈಯಕ್ತಿಕವಾಗಿಯೂ ನೆರವು ನೀಡಬೇಕಾಗುತ್ತದೆ. ನಮ್ಮ ನಿಧಿ ಸಮುದಾಯ ಭವನಗಳಿಗೇ ಹೆಚ್ಚು ವ್ಯಯವಾಗುವುದು ಇದೇ ಕಾರಣಕ್ಕೆ’ ಎನ್ನುತ್ತಾರೆ ಅವರು.

‘ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಕೊಡುವಾಗ ನಾವು ಸರ್ಕಾರಿ-ಅನುದಾನಿತ ಎಂಬ ಭೇದ ಮಾಡುವುದಿಲ್ಲ. ಅನುದಾನಿತ ಸಂಸ್ಥೆಯವರು ಬಂದು ಕೇಳುತ್ತಾರೆ; ನಾವು ಕೊಡುತ್ತೇವೆ. ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾಗಲಿ, ಶಾಲಾಭಿವೃದ್ಧಿ ಸಮಿತಿಯವರಾಗಲಿ ಬಂದು ಕೇಳುವುದಿಲ್ಲ. ತಮ್ಮ ಜಾತಿಯ ಸಮುದಾಯ ಭವನ, ದೇವಸ್ಥಾನಗಳಿಗೆ ನೆರವು ಕೋರುವವರೇ ಹೆಚ್ಚು’ ಎಂದು ಜನರತ್ತಲೇ ಬೆಟ್ಟು ಮಾಡುತ್ತಾರೆ ಬಹುಪಾಲು ಶಾಸಕರು.

‘ಕೈಬೆಚ್ಚಗೆ ಮಾಡುವ ಸಂಕಷ್ಟ’
ಜನ ಸರ್ಕಾರಿ ಶಾಲೆಗಳಿಗೆ ಏಕೆ ಅನುದಾನ ಕೇಳುವುದಿಲ್ಲ ಎಂಬುದಕ್ಕೆ ಬಾಗಲಕೋಟೆಯ ನವನಗರದ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಮಾಧವ ರಡ್ಡಿ ನೀಡುವ ಕಾರಣ ಹೀಗಿದೆ.

‘ಜನಪ್ರತಿನಿಧಿಗಳು ಅನುದಾನ ನೀಡಿಕೆಗೆ ಒಪ್ಪಿದ ನಂತರ ಹಣ ಬಿಡುಗಡೆಗೆ, ಕಾಮಗಾರಿ ಯಾರಿಗೆ ಕೊಡಬೇಕು ಎಂಬ ವಿಚಾರದಲ್ಲಿ ಸಂಬಂಧಿಸಿದವರೊಂದಿಗೆ ನಿರಂತರ ಪತ್ರ ವ್ಯವಹಾರ, ಇಲ್ಲವೇ ಕಚೇರಿಗೆ ಎಡತಾಕುವ ಕೆಲಸ ಮಾಡಬೇಕು. ಪರ್ಸೆಂಟೇಜ್ ವ್ಯವಹಾರ, ಅನುದಾನಕ್ಕೆ ಸಂಬಂಧಿಸಿದ ಕಡತ ವಿಲೇವಾರಿ ಮಾಡಲು ಕೆಲವರ ಕೈ ಬೆಚ್ಚಗೆ ಮಾಡಬೇಕಿರುತ್ತದೆ. ಈ ಕೆಲಸವನ್ನು ಅನುದಾನಿತ ಶಿಕ್ಷಣ ಸಂಸ್ಥೆಯವರು ಮಾಡುತ್ತಾರೆ. ಆದರೆ ಸರ್ಕಾರಿ ಶಾಲೆಯಲ್ಲಿ ಯಾರೂ ತಮ್ಮ ಕೈಯಿಂದ ಹಣ ಖರ್ಚು ಮಾಡಿ ಅನುದಾನ ಒಯ್ಯುವ ಕೆಲಸ ಮಾಡುವುದಿಲ್ಲ. ಅನುದಾನ ಬಂದರೂ ಅದನ್ನು ಖರ್ಚು ಮಾಡುವ ವಿಚಾರದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರೊಂದಿಗೆ ಸಮನ್ವಯ ಸಾಧಿಸುವುದು ದೊಡ್ಡ ಸವಾಲು. ಹೀಗಾಗಿ ಅಷ್ಟೊಂದು ರಿಸ್ಕ್ ತೆಗೆದುಕೊಳ್ಳಲು ಯಾರೂ ಮುಂದಾಗುವುದಿಲ್ಲ’ ಎನ್ನುತ್ತಾರೆ ಅವರು.

ನಿಯಮ ರೂಪಿಸಲಿ
ಶಾಸಕರು ಹಾಗೂ ಸಂಸದರ ನಿಧಿಯಲ್ಲಿ ಶೇ 25ರಷ್ಟು ಪಾಲನ್ನು ಕಡ್ಡಾಯವಾಗಿ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಕೊಡುವಂತೆ ಸರ್ಕಾರ ಸ್ಪಷ್ಟ ನಿಯಮಾವಳಿ ರೂಪಿಸಲಿ.

ಬಹುತೇಕ ಶಾಸಕರ ನಿಧಿ ಮಾರ್ಗಸೂಚಿಯಲ್ಲಿರುವ ಅಂಶಗಳನ್ನು ಬಿಟ್ಟು ಬೇರೆ ವಿಚಾರಕ್ಕೆ ಬಳಕೆಯಾಗುತ್ತಿದೆ. ಅಚ್ಚರಿಯೆಂದರೆ ನಿಧಿ ಬಳಕೆಗಾಗಿಯೇ ಕೆಲವು ನೋಂದಾಯಿತ ಸಂಸ್ಥೆಗಳು ಹುಟ್ಟಿಕೊಂಡಿವೆ. ಜನಪ್ರತಿನಿಧಿಗಳು ತಾವುಪ್ರತಿನಿಧಿಸುವ ಉಪಜಾತಿಯ ಸಂಸ್ಥೆಗಳಿಗೆ ಮಾತ್ರ ಅನುದಾನ ಕೊಡುವ ಮಟ್ಟಕ್ಕೆ ಇಳಿದಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿಗತಿ ತುಂಬಾ ದಯನೀಯವಾಗಿದೆ. ಕಟ್ಟಡಗಳು ದುಸ್ಥಿತಿಯಲ್ಲಿವೆ. ಅಂಗನವಾಡಿಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಹೀಗಾಗಿ ಅವುಗಳ ಬಲವರ್ಧನೆಗೆ ಮಾತೃಹೃದಯ ತೋರಲಿ.
-ನಾಗರಾಜ ಹೊಂಗಲ್,ಜನಜಾಗೃತಿವೇದಿಕೆಯ ಮುಖ್ಯಸ್ಥ, ಇಳಕಲ್, ಬಾಗಲಕೋಟೆ ಜಿಲ್ಲೆ

ಅನುದಾನ ಹೆಚ್ಚಲಿ
ಶಾಸಕರು, ಸಂಸದರ ನಿಧಿಯನ್ನು ಸರ್ಕಾರಿ ಶಾಲೆಗಳ ಅಭ್ಯುದಯಕ್ಕೆ ಬಳಸಲು ಸರ್ಕಾರಿ ಆದೇಶವೇ ಸಾಕು. ಅದಕ್ಕೇನೂ ಕಾನೂನು ಬೇಕಿಲ್ಲ. ಅದಕ್ಕೂ ಮುನ್ನ ಪ್ರದೇಶಾಭಿವೃದ್ಧಿ ನಿಧಿಯಡಿ ಜನಪ್ರತಿನಿಧಿಗಳಿಗೆ ನೀಡುವ ಅನುದಾನದ ಮೊತ್ತವನ್ನು ಬಜೆಟ್ ಗಾತ್ರಕ್ಕೆ ಅನುಗುಣವಾಗಿ ಹೆಚ್ಚಿಸಬೇಕು.

ಬಜೆಟ್ನಲ್ಲಿ ಶೇ 1.5ರಷ್ಟು ಹಣವನ್ನು ಮಾತ್ರ ಶಿಕ್ಷಣಕ್ಕೆ ವಿನಿಯೋಗಿಸುತ್ತಿದ್ದೇವೆ. ಇದನ್ನು ಶೇ 7ರಿಂದ 8ಕ್ಕೆ ಏರಿಸಬೇಕಾದ ಅನಿವಾರ್ಯತೆ ಇದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕನ್ನಡ ಶಾಲೆಗಳ ಅಭಿವೃದ್ಧಿಗೆ ನಿಯಮಾವಳಿ ರೂಪಿಸಲಿ.
-ಸಿದ್ದರಾಮಯ್ಯ,ವಿಧಾನಸಭೆ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.