ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಉಪಯುಕ್ತವಾಗಿರುವ ಒಂದು ವೈದ್ಯಶಾಸ್ತ್ರವೆಂದರೆ ಅರಿವಳಿಕೆ ಶಾಸ್ತ್ರ. ಯಾವುದೇ ಒಂದು ಸಣ್ಣ ಶಸ್ತ್ರಚಿಕಿತ್ಸೆಯೂ ಅರಿವಳಿಕೆಯ ಔಷಧವಿಲ್ಲದೇ ನೆರವೇರದು. ರೋಗಿಗಳೂ ‘ಅನೇಸ್ಥೆಸಿಯಾ ಕೊಟ್ಟೇ ಆಪರೇಷನ್ ಮಾಡುತ್ತೀರಲ್ಲ ಡಾಕ್ಟ್ರೇ’ ಎಂದು ಕೇಳುತ್ತಾರೆ. ರೋಗಿಯ ರೋಗಶಮನಕ್ಕೆ ಶಸ್ತ್ರಚಿಕಿತ್ಸೆ ಎಷ್ಟು ಮುಖ್ಯವೋ ಶಸ್ತ್ರಚಿಕಿತ್ಸೆ ವೇಳೆ ನೋವಾಗದಂತೆ ನೋಡಿಕೊಳ್ಳುವುದೂ ಅಷ್ಟೇ ಮುಖ್ಯ. ಶಸ್ತ್ರಚಿಕಿತ್ಸೆಯ ವೇಳೆ ನೋವಿನ ಸಂವೇದನೆ ರೋಗಿಗೆ ಕೊಂಚವೂ ಆಗದಷ್ಟು ನೋಡಿಕೊಳ್ಳುವಲ್ಲೇ ಅರಿವಳಿಕೆಯ ಮಹತ್ವ ಅಡಗಿದೆ.

ವೈದ್ಯಕೀಯ ವಿಜ್ಞಾನದ ಅನೇಕ ಶಾಸ್ತ್ರಗಳನ್ನು ಅವಲೋಕಿಸಿದರೆ ‘ಅರಿವಳಿಕೆಶಾಸ್ತ್ರ’ ಕೊಂಚ ಹೊಸದೇ. ಅದರಲ್ಲೂ ಆಧುನಿಕ ಅರಿವಳಿಕೆಶಾಸ್ತ್ರಕ್ಕೆ ಸುಮಾರು ಒಂದೂ ಮುಕ್ಕಾಲು ಶತಮಾನದ ಇತಿಹಾಸವಷ್ಟೇ ಇದೆ. ಬೇರೆಲ್ಲಾ ಕ್ಷೇತ್ರಗಳಲ್ಲಿ 17-18ನೇ ಶತಮಾನಗಳಲ್ಲಿ ನಡೆದ ಅನೇಕ ಸಂಶೋಧನೆಗಳು ಮತ್ತು ಆವಿಷ್ಕಾರಗಳು ರೋಗವನ್ನು ಅರಿತುಕೊಳ್ಳಲು, ಹಾಗೂ ಔಷಧಗಳ ಮೂಲಕ ಚಿಕಿತ್ಸೆ ನೀಡಲು ಸಹಾಯಮಾಡಿದರೆ ನೋವುರಹಿತ ಶಸ್ತ್ರಚಿಕಿತ್ಸೆ 19ನೇ ಶತಮಾನದ ಮಧ್ಯಭಾಗದವರೆಗೆ ಇನ್ನೂ ಮರೀಚಿಕೆಯೇ ಆಗಿತ್ತು. ಅದುವರೆಗೆ ಶಸ್ತ್ರಚಿಕಿತ್ಸೆ ನಡೆಸುವ ಮುನ್ನ ರೋಗಿಗೆ ಅಫೀಮು ತಿನ್ನಿಸಿ ಅಥವಾ ಸಂಪೂರ್ಣ ಅಮಲು ಬರುವಷ್ಟು ಸುರಾಪಾನ ಮಾಡಿಸಿ ನಂತರ ಅಂಗಚ್ಛೇದದಂತಹ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಿದ್ದರು. ಇದು ಅವೈಜಾನಿಕವಾಗಿದ್ದು ಎಷ್ಟೋ ಬಾರಿ ರೋಗಿಗಳು ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲೇ ಪ್ರಾಣಬಿಡುತ್ತಿದ್ದರು. ಇದಕ್ಕೂ ಮುಂಚೆ ಮರದ ಕೊರಡಿನಿಂದ ರೋಗಿಯ ತಲೆಗೆ ಬಲವಾದ ಪೆಟ್ಟು ಕೊಟ್ಟು ಪ್ರಜ್ಞೆಯನ್ನು ತಪ್ಪಿಸಿ ಶಸ್ತ್ರಚಿಕಿತ್ಸೆಯನ್ನು ಮಾಡುತ್ತಿದ್ದರು. ಅನೇಕ ಬಾರಿ ಪೆಟ್ಟಿನಿಂದ ಪ್ರಜ್ಞೆ ತಪ್ಪಿದ್ದ ರೋಗಿಗಳು ಶಸ್ತ್ರಚಿಕಿತ್ಸೆಯ ಅನಂತರ ಮರಳಿ ಪ್ರಜ್ಞಾವಸ್ಥೆಗೆ ಬರುತ್ತಲೇ ಇರಲಿಲ್ಲ!

ಆದರೆ 1946ರ ಅಕ್ಟೋಬರ್ 16ರಂದು ಅಮೆರಿಕದ ಮೆಸಾಚುಸೆಟ್ಸ್ ಜನರಲ್ ಆಸ್ಪತ್ರೆಯಲ್ಲಿ ನಡೆದ ಒಂದು ಪ್ರಾತ್ಯಕ್ಷಿಕೆ ಶಸ್ತ್ರಚಿಕಿತ್ಸೆಯನ್ನು ನೋವಿಲ್ಲದೇ ಸುರಕ್ಷಿತವಾಗಿ ಮಾಡಬಹುದೆಂದು ತೋರಿಸಿಕೊಟ್ಟಿತು. ಅಂದು ಡಬ್ಲ್ಯೂಟಿಜಿ ಮಾರ್ಟನ್ ಎಂಬ ದಂತವೈದ್ಯ ‘ಈಥರ್’ ಎಂಬ ರಾಸಾಯನಿಕದ ಹನಿಗಳನ್ನು (ಅಬ್ಬಾಟ್ ಎಂಬ) ರೋಗಿಗೆ ಉಸಿರಾಟದ ಮೂಲಕ ಕೊಟ್ಟು ರೋಗಿಯು ಪ್ರಜ್ಞೆ ತಪ್ಪುವಂತೆ ಮಾಡಿದ. ನಂತರ (ವಾರೆನ್ ಎಂಬ) ಶಸ್ತ್ರಚಿಕಿತ್ಸಕ ರೋಗಿಯ ಕುತ್ತಿಗೆಯ ಮೇಲಿನ ಗಂಟೊಂದನ್ನು ಛೇದಿಸಿ ತೆಗೆದ. ಶಸ್ತ್ರಚಿಕಿತ್ಸೆಯ ನಂತರ ರೋಗಿಯು ಎಚ್ಚರವಾಗಿ ಕಣ್ತೆರೆದು ತನಗೆ ಯಾವುದೇ ತರಹದ ನೋವಿನ ಸಂವೇದನೆ ಆಗಲಿಲ್ಲ ಎಂದ. ಆಗ ಅಲ್ಲಿ ನೆರೆದಿದ್ದ ವೈದ್ಯಸಮುದಾಯವೆಲ್ಲ ಸಂತಸದಿಂದ ‘ಇದು ಕಣ್ಕಟ್ಟಲ್ಲ ಅದ್ಭುತ ಸಂಶೋಧನೆ’ ಎಂದು ಕೊಂಡಾಡಿತು. ಡಾ. ಮಾರ್ಟನ್ ಅಂದು ಬಳಸಿದ ಈಥರ್ ಅರಿವಳಿಕೆ ಜಗತ್ತಿನ ಪ್ರಪ್ರಥಮ ಅಧಿಕೃತ ಅರಿವಳಿಕೆಯಾಗಿ ಇತಿಹಾಸದಲ್ಲಿ ದಾಖಲಾಗಿದೆ. ಶಸ್ತ್ರಚಿಕಿತ್ಸೆ ನಡೆದ ಆಸ್ಪತ್ರೆಯ ಪ್ರಾಂಗಣ ಈಗ ‘ಈಥರ್ ಡೋಮ್’ ಎಂದೇ ಪ್ರಸಿದದ್ಧಿಯಾಗಿದೆ. ಅದರಂತೆ ಪ್ರತಿವರ್ಷ ಅಕ್ಟೋಬರ್ 16ರಂದು ಜಗತ್ತಿನಾದ್ಯಂತ ವೈದ್ಯರು ‘ವಿಶ್ವ ಅರಿವಳಿಕೆಯ ದಿನ’ವನ್ನು ಆಚರಿಸುತ್ತಾರೆ.

ಈಥರ್ ಪ್ರಸಿದ್ಧಿಯಾದ ಕೆಲವು ವರ್ಷಗಳ ನಂತರ ಜಾನ್ ಸ್ನೋ ಎಂಬ ರಾಜವೈದ್ಯ ‘ಕ್ಲೋರೊಫಾರ್ಮ್’ ಅನ್ನು ಬಳಸುವ ಮೂಲಕ ವಿಕ್ಟೋರಿಯಾ ರಾಣಿಗೆ ನೋವುರಹಿತ ಹೆರಿಗೆಯನ್ನು ಮಾಡಿಸಿದ. ಅಂದಿನಿಂದ 20ನೇ ಶತಮಾನದ ಮಧ್ಯಭಾಗದವರೆಗೂ ಈಥರ್ ಮತ್ತು ಕ್ಲೋರೊಫಾರ್ಮ್ ಅರಿವಳಿಕೆಗಳು ಶಸ್ತ್ರಚಿಕಿತ್ಸೆಯ ಅವಿಭಾಜ್ಯ ಅಂಗಗಳಾಗಿದ್ದವು. 19ನೇ ಶತಮಾನದ ಕೊನೆಗೆ ಆಗಸ್ಟ್ ಬಯರ್ ಎಂಬಾತ ಬೆನ್ನುಹುರಿಯ ದ್ರವದಲ್ಲಿ ‘ಲಿಗ್ನೋಕೈನ್’ ಎಂಬ ಅರಿವಳಿಕೆ ಔಷಧವನ್ನು ನೀಡುವ ಮೂಲಕ ‘ಸ್ಪೈನಲ್’ ಅರಿವಳಿಕೆಗೆ ನಾಂದಿ ಹಾಡಿದ. ಇಂದಿಗೂ ಸ್ಪೈನಲ್ ಅರಿವಳಿಕೆ ಅತ್ಯಂತ ಸುರಕ್ಷಿತ ವಿಧಾನವಾಗಿದ್ದು ಜಗತ್ತಿನಾದ್ಯಂತ ವ್ಯಾಪಕವಾಗಿ ಬಳಕೆಯಾಗುತ್ತಿದೆ.

20ನೇ ಶತಮಾನದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಅಗಾಧ ಸುಧಾರಣೆ ಕಂಡುಬಂದಿತು. ಅದರಂತೆ ಅರಿವಳಿಕೆಶಾಸ್ತ್ರ ಕೂಡ ಸುಧಾರಣೆ ಹೊಂದುತ್ತ ಬಂದು ಈಗ ಅತ್ಯಾಧುನಿಕ ಯಂತ್ರೋಪಕರಣಗಳು, ಶಕ್ತಿಯುತ ಔಷಧಗಳನ್ನು ಹೊಂದಿ ರೋಗಿಗಳಿಗೆ ಮತ್ತು ಶಸ್ತ್ರಚಿಕಿತ್ಸಕರಿಗೆ ಒಂದು ವರದಾನವಾಗಿದೆ. ವಿಶ್ವದಾದ್ಯಂತ ಲಕ್ಷಾಂತರ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳು ಸುರಕ್ಷಿತವಾಗಿ ನಡೆಯಲು ಅರಿವಳಿಕೆಯೂ ಮುಖ್ಯ ಕಾರಣವೆಂದರೆ ತಪ್ಪಾಗಲಾರದು. ಇಂದು ಪ್ರತಿಯೊಂದು ಶಸ್ತ್ರಚಿಕಿತ್ಸೆ ಹಾಗೂ ಪ್ರತಿಯೊಂದು ರೋಗಿಗೂ ಸೂಕ್ತವಾಗುವ ರೀತಿಯಲ್ಲಿ ನೀಡಬಲ್ಲ ಅನೇಕ ಅರಿವಳಿಕೆಯ ವಿಧಾನಗಳಿವೆ. ಚರ್ಮದ ಮೇಲಿನ ಚಿಕ್ಕ-ಪುಟ್ಟ ಗಡ್ಡೆಗಳ ಚಿಕಿತ್ಸೆಗೆ ಸ್ಥಾನೀಯ ಅರಿವಳಿಕೆ ಸಾಕಾದರೆ, ಸೊಂಟ, ಕಾಲುಗಳ ಶಸ್ತ್ರಚಿಕಿತ್ಸೆಗೆ ಬೆನ್ನುಹುರಿಯಲ್ಲಿ ಇಂಜೆಕ್ಷನ್ ನೀಡುವ ಮೂಲಕ ಅರಿವಳಿಕೆಯನ್ನು ನೀಡಲಾಗುತ್ತದೆ. ಅದರಂತೆ ಮಿದುಳು, ಹೃದಯ, ಶ್ವಾಸಕೋಶ ಅಥವಾ ಯಕೃತ್ತಿನ ಶಸ್ತ್ರಚಿಕಿತ್ಸೆಗೆ ಸಂಪೂರ್ಣ ಪ್ರಜ್ಞೆಯನನ್ಉ ತಪ್ಪಿಸುವ ಮೂಲಕ ‘ಜನರಲ್ ಅನೇಸ್ಥೆಸಿಯಾ’ವನ್ನು ನೀಡಲಾಗುತ್ತದೆ.

ಅರಿವಳಿಕೆ ನೀಡುವ ಮುನ್ನ ತಜ್ಞರು ರೋಗಿಗಳ ದೇಹಸ್ಥಿತಿಯ ಸಮಗ್ರ ಮಾಹಿತಿಯನ್ನು ಪಡೆದುಕೊಂಡು ಅವರಿಗೆ ಸೂಕ್ತವಾದ ಅರಿವಳಿಕೆಯ ವಿಧಾನವನ್ನು ನಿರ್ಧರಿಸುತ್ತಾರೆ. ಆದ್ದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳು ತಮಗೆ ಬಿಪಿ, ಮಧುಮೇಹ, ಅಸ್ತಮಾ ಅಥವಾ ಹೃದಯಸಂಬಂಧಿ ಕಾಯಿಲೆಗಳಿದ್ದರೆ ಅದರ ವಿವರಗಳನ್ನು ವೈದ್ಯರಿಗೆ ತಿಳಿಸುವುದು ಬಹುಮುಖ್ಯ. ಅಲ್ಲದೇ ಈ ಹಿಂದೆ ಅರಿವಳಿಕೆಯನ್ನು ತೆಗೆದುಕೊಂಡಿದ್ದರೆ ಅದನ್ನೂ ತಿಳಿಸುವುದು ಅವಶ್ಯಕ.

ಇಂದು ಅರಿವಳಿಕೆತಜ್ಞರ ಕೆಲಸ ಕೇವಲ ಶಸ್ತ್ರಚಿಕಿತ್ಸೆಗೆ ಮಾತ್ರ ಸೀಮಿತವಾಗಿಲ್ಲ. ಅವರು ತುರ್ತುಚಿಕಿತ್ಸೆ, ಮತ್ತು ತೀವ್ರನಿಗಾ ಘಟಕಗಳನ್ನೂ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ನೋವುರಹಿತ ಹೆರಿಗೆ, ಕ್ಯಾನ್ಸರ್ ನೋವುನಿವಾರಣೆ ಇವಕ್ಕೂ ಕೂಡ ಅರಿವಳಿಕೆ ತಜ್ಞರು ಸಹಾಯ ಮಾಡಬಲ್ಲರು.

• ಅರಿವಳಿಕೆಗೂ ಮುನ್ನ ನಾಲ್ಕಾರು ಗಂಟೆಗಳ ಕಾಲ ಏನನ್ನೂ ಸೇವಿಸಿರಬಾರದು.

• ಶಸ್ತ್ರಚಿಕಿತ್ಸೆ ಮುಗಿದ ನಂತರ ಸಾಮಾನ್ಯವಾಗಿ ಮತ್ತೆ ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಏನನ್ನೂ ಸೇವಿಸಬಾರದು.

• ಅರಿವಳಿಕೆ ನಂತರ ಒಂದೆರಡು ಗಂಟೆ ಕೊಂಚ ಮಂಪರು, ಉಬ್ಬಳಿಕೆ ಸಾಮಾನ್ಯ.

• ಅರಿವಳಿಕೆ ವಿಧಾನಗಳು ರೋಗ ಹಾಗೂ ರೋಗಿಯ ದೇಹಸ್ಥಿತಿಯ ಮೇಲೆ ನಿರ್ಧರಿಸಲ್ಪಡುತ್ತವೆ.

• ಸುರಕ್ಷಿತ ಅರಿವಳಿಕೆಯಿಂದ ಯಾವುದೇ ದೀರ್ಘಕಾಲೀನ ಅರೋಗ್ಯಸಮಸ್ಯೆಗಳು ಉಂಟಾಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.