ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯ | ನಿಮ್ಮ ಸುಸ್ತಿಗೆ ನೀವೇ ಕಾರಣ

Published 22 ಜುಲೈ 2024, 23:30 IST
Last Updated 22 ಜುಲೈ 2024, 23:30 IST
ಅಕ್ಷರ ಗಾತ್ರ

ಸಹಜವಾಗಿ ದಿನನಿತ್ಯದ ಕೆಲಸಕಾರ್ಯಗಳಲ್ಲಿ ತೊಡಗಿರುವ ಯಾವುದೇ ವ್ಯಕ್ತಿಯಾದರೂ ತನ್ನ ನಿತ್ಯದ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗದೇ ಹೋದಾಗ ಅಥವಾ ಆ ಕೆಲಸವನ್ನು ಸಮರ್ಪಕವಾಗಿ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಅನ್ನಿಸಿದಾಗ ಅಥವಾ ಸ್ವಲ್ಪವೂ ಆ ಕೆಲಸದಲ್ಲಿ ತೊಡಗಿಸಿಕೊಳ್ಳಲು ದೇಹ ಸಹಕರಿಸುತ್ತಿಲ್ಲ ಎಂದು ಭಾಸವಾದಾಗ ‘ತನಗೆ ಸುಸ್ತು ಆಗಿದೆ’ ಎಂದು ಹೇಳುವುದನ್ನು ಕಾಣುತ್ತೇವೆ.

ಸುಸ್ತಿನ ಹಂತಗಳು

ಪ್ರಥಮ ಹಂತ: ದಿನನಿತ್ಯದ ಚಟುವಟಿಕೆಯ ಜೊತೆಗೇ ಹೆಚ್ಚಿನ ಕೆಲಸ ಕಾರ್ಯಗಳಲ್ಲಿ ತೊಡಗಿದಾಗ ಸುಸ್ತು ಕಾಣಿಸಿಕೊಳ್ಳುವುದು 
ದ್ವಿತೀಯ ಹಂತ: ದಿನನಿತ್ಯದ ಚಟುವಟಿಕೆಗಳನ್ನು ಮಾಡಿದಾಗ ಸುಸ್ತು ಕಾಣಿಸಿಕೊಳ್ಳುವುದು.
ತೃತೀಯ ಹಂತ: ದಿನನಿತ್ಯದ ಚಟುವಟಿಕೆಗಳನ್ನು ಕಡಿಮೆ ಮಾಡಿಕೊಂಡರೂ ಸುಸ್ತಾಗುವುದು.
ನಾಲ್ಕನೇ ಹಂತ: ಸುಮ್ಮನೆ ಕುಳಿತಿದ್ದರೂ ಸುಸ್ತಾಗುವುದು.

ಸುಸ್ತು ಎಷ್ಟು ಸಮಯದಿಂದ ಇದೆ ಎನ್ನುವ ಆಧಾರದಮೇಲೆ ಸುಸ್ತಿನ ಕಾರಣಗಳನ್ನೂ, ಅದಕ್ಕೆ ಕೊಡಬೇಕಾದ ಕಾಳಜಿಯನ್ನೂ ಗುರುತಿಸಬಹುದು. ತಾತ್ಕಾಲಿಕ (ಸುಸ್ತು ಒಂದು ವಾರದ ಅವಧಿಯಾಗಿದ್ದಾಗ), ದೀರ್ಘವಾದ (ಒಂದು ತಿಂಗಳಿಂದ ಕಾಡುತ್ತಿದ್ದಾಗ), ದೀರ್ಘಕಾಲದ (ಆರು ತಿಂಗಳಿಗಿಂತಲೂ ಹೆಚ್ಚು ಸಮಯದಿಂದ ಇದ್ದಾಗ) – ಹೀಗೆ ಸುಸ್ತಿನ ತೀವ್ರತೆಯ ಆಧಾರದಿಂದ ವರ್ಗೀಕರಿಸಬಹುದು.

ಸುಸ್ತು ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದಾದರೂ, ಸಣ್ಣಮಕ್ಕಳಲ್ಲಿ ಸುಸ್ತು ಎಂದಾಗ ಹೆಚ್ಚಾಗಿ ದೈಹಿಕ ಸಮಸ್ಯೆಗಳು ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಜೊತೆಗೆ ಮಾನಸಿಕ ಸಮಸ್ಯೆಗಳನ್ನೂ ಅಲ್ಲಗಳೆಯುವಂತಿಲ್ಲ.

ಹೆಂಗಸರಲ್ಲಿ ಸುಸ್ತು ಎನ್ನುವ ಸಮಸ್ಯೆ ಹೆಚ್ಚಾಗಿ ಕಾಣಿಸುವುದಾದರೂ, ಗಂಡಸರು ಸುಸ್ತು ಎಂದಾಗ ದೈಹಿಕ ಸಮಸ್ಯೆಯೇ ಕಾರಣವಾಗಿರುವ ಸಾಧ್ಯತೆ ಹೆಚ್ಚು.

ಲಕ್ಷಣಗಳು

ನಿದ್ರೆ ಬರುವಂತೆ ಅನ್ನಿಸುವುದು; ಮೈಕೈ ಚಾಚಿಕೊಂಡು ನೆಲದಲ್ಲಿ ಬಿದ್ದುಕೊಳ್ಳೋಣ, ಮಲಗೋಣ ಅನಿಸುವುದು; ನಿತ್ಯದ ಚಟುವಟಿಕೆಗಳನ್ನು ನಡೆಸಲು ಉತ್ಸಾಹವಿಲ್ಲದಿರುವುದು; ಒಳ್ಳೆಯ ನಿದ್ರೆಯ ನಂತರವೂ ಉಲ್ಲಾಸವಿಲ್ಲದಿರುವುದು;
ಸಹಜ ಕೆಲಸಗಳಿಗೂ ಶಕ್ತಿ ಇಲ್ಲದ ಭಾವ ಮೂಡುವುದು. ನಂತರದ ದಿನಗಳಲ್ಲಿ ತಲೆಸುತ್ತು ತಲೆನೋವು, ಗಲಿಬಿಲಿ, ಉಸಿರಾಟದಲ್ಲಿ ಏರುಪೇರು, ಉಸಿರು ಸಿಕ್ಕಿಹಾಕಿಕೊಂಡಂತೆ ಅನ್ನಿಸುವುದು, ಮಾಂಸಖಂಡಗಳಲ್ಲಿ ಸೆಳೆತ–ನೋವು, ನಡೆಯಲು ಕಷ್ಟವಾಗುವುದು, ಹೃದಯಬಡಿತ ಹೆಚ್ಚುವುದು, ಮಾನಸಿಕವಾಗಿಯೂ ಬೇಸರ–ಖಿನ್ನತೆ, ಸುಮ್ಮನೆ ಅಳುವುದು, ಕಾರಣವೇ ಇಲ್ಲದೆ ಕೋಪ ಮಾಡಿಕೊಳ್ಳುವುದು ಇಂತಹ ಭಾವಪ್ರಕ್ರಿಯೆಗಳನ್ನು ಕಾಣಬಹುದು.

ಕಾರಣಗಳು

1. ಸಹಜ ಕಾರಣಗಳು (ತಾತ್ಕಾಲಿಕ)
* ದೀರ್ಘ ಪ್ರಯಾಣ, ಸರಿಯಾದ ಆಹಾರವನ್ನು ಸೇವಿಸದಿರುವುದು, ಕಳಪೆ ಆಹಾರವನ್ನು ಸೇವಿಸಿರುವುದು, ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದಿರುವುದು, ಹೆಚ್ಚಿನ ದೈಹಿಕ ಶ್ರಮ, ಅತಿಯಾದ ವ್ಯಾಯಾಮಗಳು ಸುಸ್ತಿಗೆ ಕಾರಣವಾಗಬಹುದು,

2. ಮಾನಸಿಕ ಕಾರಣಗಳು


ದೇಹದ ಅವ್ಯಕ್ತ ರೂಪವೇ ಮನಸ್ಸು. ಆದುದರಿಂದ ಮನಸ್ಸಿನಲ್ಲಿ ಏನೇ ಏರುಪೇರು ಅದು ಪ್ರಕಟವಾಗುವುದು ದೇಹದ ಮೂಲಕವೇ. ಹೀಗಾಗಿ ಮನಹಸ್ಥಿತಿಯನ್ನು ಸರಿಯಾಗಿ ಇಟ್ಟುಕೊಳ್ಳದೇ ಇದ್ದಾಗ ಅದು ಸುಸ್ತಿನ ರೂಪದಲ್ಲಿ ಕಾಡುವ ಸಾಧ್ಯತೆ ಇದೆ. ಮನಸ್ಸಿನ ಯಾವುದೇ ಆತಂಕ, ಒತ್ತಡಗಳು ಸುಸ್ತಿಗೆ ಕಾರಣವಾಗಬಹುದು. ಮಾನಸಿಕ ಆರೋಗ್ಯದ ಏರುಪೇರಿಗೆ ಹಲವು ಕಾರಣಗಳು ಕೆಲಸಮಾಡುತ್ತವೆ. ಉದ್ಯೋಗ, ಸಂಸಾರ, ಸ್ನೇಹಿತರ ವಲಯ, ವ್ಯವಹಾರ – ಹೀಗೆ ನಮ್ಮ ಜೀವನದ ಹಲವು ವಿದ್ಯಮಾನಗಳಲ್ಲಿಯ ಏರುಪೇರುಗಳು ನಮ್ಮ ಮನಸ್ಸನ್ನು ಆಯಾಸಗೊಳಿಸಬಹುದು.

3. ದೈಹಿಕ ಸಮಸ್ಯೆಗಳು


ದೇಹದ ಅನೇಕ ಕಾಯಿಲೆಗಳ ಪ್ರಥಮ ಸೂಚನೆಯಾಗಿ ಸುಸ್ತು ಕಾಣಿಸಿಕೊಳ್ಳಬಹುದು. ರಕ್ತಹೀನತೆ, ಮಧುಮೇಹ, ಥೈರಾಯ್ಡ್, ಹೃದಯದ ಕಾಯಿಲೆ, ಜೀರ್ಣಾಂಗ ಸಮಸ್ಯೆ, ರಕ್ತದ ಕ್ಯಾನ್ಸರ್, ಕಿಮೋಥೆರಪಿ–ರೇಡಿಯೋಥೆರಪಿಗಳ ಬಳಿಕ, ದೊಡ್ಡ ಶಸ್ತ್ರಚಿಕಿತ್ಸೆಯ ಬಳಿಕ, ಜ್ವರ ಬಂದಾಗ, ಯಾವುದೇ ಸೋಂಕು/ ನಂಜು ಆದ ಬಳಿಕ, ಟೈಫಾಯಿಡ್‌–ಮಲೇರಿಯಾ–ಹೆಪಟೈಟಿಸ್ ಇತ್ಯಾದಿ ಕಾಯಿಲೆಗಳು ಸೂಚನೆಗಳು ಕಂಡು ಬರುವ ಮೊದಲು – ಇಂತಹ ಸಮಯದಲ್ಲಿ ಸುಸ್ತು ಒಂದು ಮುಖ್ಯ ತೊಂದರೆಯಾಗಿ ಕಾಣಿಸಿಕೊಳ್ಳುತ್ತದೆ. ಕಾಯಿಲೆ ತಹಬಂದಿಗೆ ಬಂದನಂತರವೂ ಕೆಲವು ವಾರಗಳ ಕಾಲ ಸುಸ್ತಿನ ಸಮಸ್ಯೆ ಕಾಡಬಹುದು. ನರಸಂಬಂಧಿತ ಕಾಯಿಲೆಗಳು, ಶ್ವಾಸಕೋಶ ಸಂಬಂಧ ಕಾಯಿಲೆಗಳು, ರಕ್ತದೊತ್ತಡ, ಅಲರ್ಜಿ ಕೆಮ್ಮು ಇವುಗಳಿಗೆ ತೆಗೆದುಕೊಳ್ಳುವ ಔಷಧಗಳು ಸುಸ್ತಿಗೆ ಕಾರಣವಾಗಬಹುದು. ಗರ್ಭಿಣಿ ಮತ್ತು ಎದೆ ಹಾಲು ಉಣಿಸುವ ತಾಯಂದಿರಲ್ಲಿಯೂ ಸುಸ್ತು ಕಾಣಿಸಿಕೊಳ್ಳಬಹುದು.

ಪರಿಹಾರ

ದೇಹಕ್ಕೆ ಉಂಟಾದ ಕಾಯಿಲೆಯನ್ನು ಗುರುತಿಸಿ ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವುದು. ಮಾನಸಿಕ ಸಮಸ್ಯೆ ಕಂಡು ಬಂದಾಗ ಮಾನಸಿಕ ತಜ್ಞರಿಂದ ಸೂಕ್ತ ಚಿಕಿತ್ಸೆ, ಆಪ್ತ ಸಮಾಲೋಚನೆ, ಔಷಧಗಳ ಸಹಾಯವನ್ನು ಕೊಡಬಹುದು. ಜೀವನಶೈಲಿಯ ಬದಲಾವಣೆಯೂ ಸುಸ್ತಿನ ಉಪಶಮನಕ್ಕೆ ನೆರವಾಗಬಹುದು. ಒಳ್ಳೆಯ ಆಹಾರಸೇವನೆ, ನಿಯಮಿತ ವ್ಯಾಯಾಮ, ಸರಿಯಾದ ನಿದ್ರಾಕ್ರಮಗಳು, ಮಾನಸಿಕ ನೆಮ್ಮದಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಹಳ ಮುಖ್ಯವಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT