ಒಂದು ದಿನದ ಅವಧಿಯಲ್ಲಿ ನಮ್ಮ ಯಾವುದೇ ವಯಸ್ಸಿನ ಮಕ್ಕಳ ಮೇಲೆ ಎಷ್ಟು ಸಿಡುಕುತ್ತೇವೆ ಎನ್ನುವುದನ್ನು ಗಮನಿಸಿದ್ದೀರಾ? ಮಕ್ಕಳಷ್ಟೇ ಅಲ್ಲ ಮನೆಯ ಇತರ ಸದಸ್ಯರ ಮೇಲೆ, ಸಹೋದ್ಯೋಗಿಗಳೊಡನೆ, ಅಪರಿಚಿತರೊಡನೆ 'ಸಿಡುಕಿನಿಂದ ವರ್ತಿಸುತ್ತಿದ್ದೇನೆ' ಎಂದು ಅನಿಸಿದೆಯೇ? ಹಾಗೆ ಸಿಡುಕುತ್ತಿರುವಾಗ ಏನು ನಡೆಯುತ್ತಿದೆ ನಿಮ್ಮೊಳಗೆ, ಯಾಕೆ ಸಿಡುಕಬೇಕೆನಿಸುತ್ತಿದೆ ಪ್ರಶ್ನಿಸಿಕೊಂಡಿದ್ದೀರಾ? ಮಕ್ಕಳ ಪ್ರತಿ ಮಾತು, ಪ್ರಶ್ನೆ, ನಡವಳಿಕೆ ಎಲ್ಲದಕ್ಕೂ ಹೆಚ್ಚಿನ ಬಾರಿ ಸಿಡುಕಿನಿಂದ, ಅಸಹನೆಯಿಂದ ಏರುದನಿಯಲ್ಲಿ ಮಾತನಾಡುತ್ತಿದ್ದರೆ ಅದು ಅವರ ವ್ಯಕ್ತಿತ್ವದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದೆಂಬ ಅಂದಾಜಿದೆಯೇ?

ಯಾರಾದರೂ ನಮಗಿಂತ ಹಿರಿಯರು, ನಾವು ಭಾವನಾತ್ಮಕವಾಗಿ ಯಾರನ್ನು ಆಶ್ರಯಿಸಿರುವೆವೋ ಅವರು, ನಮ್ಮ ಜೀವನದಲ್ಲಿ ಮುಖ್ಯವಾಗಿರುವವರು ನಮ್ಮ ಮೇಲೆ ಆಗಾಗ ಸಿಡುಕುತ್ತಲೇ ಇದ್ದರೆ ನಮಗೆ ಹೇಗನಿಸುತ್ತದೆ? ನಮ್ಮ ಸಣ್ಣ ತಪ್ಪಿಗೂ ಅಥವಾ ತಪ್ಪಿಲ್ಲದಿದ್ದರೂ ಅವರದ್ಯಾವುದೋ ಅಸೌಖ್ಯಕ್ಕೆ ನಮ್ಮ ಮೇಲೆ ಕೂಗಾಡಿದರೆ ಏನನಿಸುತ್ತದೆ? ಇಂತಹ ಪರಿಸ್ಥಿತಿಗಳು ವಯಸ್ಕರಾದ ನಮ್ಮನ್ನೇ ಅಸ್ವಸ್ಥತೆಗೆ ದೂಡುವುದಾದರೆ 'ನನ್ನ ಪ್ರಪಂಚ ಎಂದರೆ ನನ್ನ ತಂದೆ, ತಾಯಿ' ಎಂದು ತಿಳಿದುಕೊಂಡಿರುವ ಮಗುವಿಗೆ ಎಷ್ಟು ನೋವುಂಟು ಮಾಡುವುದಿಲ್ಲ?

ನಮ್ಮ ಯಾವುದೋ ತಲೆಬಿಸಿಯನ್ನು ಮುಗ್ಧ ಮಕ್ಕಳ ಮೇಲೆ ಕೂಗಾಡಿ ತೀರಿಸಿಕೊಂಡಾಗ ‘ಈ ಸಿಡುಕು/ ಕೂಗಾಟ ನನ್ನ ತಪ್ಪಿಗಾಗಿಯಲ್ಲ, ಇದು ಅವರ ಅಸಹಾಯಕತೆ, ಅಪಕ್ವತೆಯನ್ನು ಪ್ರತಿಬಿಂಬಿಸುತ್ತದೆ' ಎಂದು ಮಕ್ಕಳಿಗೆ ವಿಚಾರ ಮಾಡಲು ಬರುವುದಿಲ್ಲ. ಯಾವುದೇ ಕಾರಣಕ್ಕೂ ಮಗು ತನ್ನ ತಂದೆ ತಾಯಿಯೇ ತಪ್ಪಿತಸ್ಥರು, ತಿಳಿವಳಿಕೆಯಿಲ್ಲದವರು ಎಂಬ ತೀರ್ಮಾನಕ್ಕೆ ಬರುವುದಿಲ್ಲ, ಯಾಕೆಂದರೆ ಹಾಗೆ ತಂದೆ ತಾಯಿಯನ್ನು ಒಂದು ಉನ್ನತ ಸ್ಥಾನದಲ್ಲಿರಿಸುವುದು, ಅವರನ್ನು ಮಾದರಿಯಾಗಿಟ್ಟುಕೊಳ್ಳುವುದು ಹಲವು ಕಾರಣಗಳಿಗಾಗಿ ಮಕ್ಕಳ ಬೆಳವಣಿಗೆಗೆ ಅವಶ್ಯಕ. ತಮ್ಮನ್ನು ನಿಂದಿಸಿದಾಗ, ತಮ್ಮ ಮೇಲೆ ಸಿಡುಕಿದಾಗ ಮಕ್ಕಳು ಅದಕ್ಕೆ ತನ್ನ ತಂದೆ ತಾಯಿಯನ್ನು ಜವಾಬ್ದಾರರನ್ನಾಗಿಸುವುದಿಲ್ಲ ,ಬದಲಾಗಿ ತಂದೆ ತಾಯಿಯ ಈ ವರ್ತನೆಗೆ ತಮ್ಮನ್ನೇ ಜವಾಬ್ದಾರರನ್ನಾಗಿಸಿಕೊಳ್ಳುತ್ತಾರೆ. 'ನಾನು ಯಾವಾಗಲೂ ಏನಾದರೂ ತಪ್ಪನ್ನೇ ಮಾಡುತ್ತಿರುತ್ತೇನೆ', 'ನನಗೆ ಗೌರವಕ್ಕೆ ಅರ್ಹತೆಯಿಲ್ಲ', 'ಯಾರ ಸಮಯಕ್ಕೂ, ಸಮಾಧಾನದ ವರ್ತನೆಗೂ ನನಗೆ ಹಕ್ಕಿಲ್ಲ, ಸ್ವಲ್ಪ ಪ್ರೀತಿಗಾಗಿಯೂ ನಾನೇ ತುಂಬಾ ಪರಿಶ್ರಮ ಪಡಬೇಕು' ಎನ್ನುವುದು ಮಕ್ಕಳ ಮನಸ್ಸಿನಲ್ಲಿ ಅಚ್ಚೊತ್ತಿದಂತೆ ಉಳಿದುಕೊಂಡು ಬಿಡುತ್ತದೆ.

ಸ್ನೇಹಕ್ಕೆ, ಸಮಾಧಾನದ ಮಾತುಕತೆಗೆ, ಗೌರವಕ್ಕೆ ಯಾರೂ ಕಷ್ಟಪಡಬೇಕಾದ್ದಿಲ್ಲ, ಅದು ಎಲ್ಲರ ಆಜನ್ಮಸಿದ್ಧ ಹಕ್ಕು, ಅದನ್ನು ನಮಗೆ ನೀಡಲಾರದವರು ಅಪ್ರಬುದ್ಧರು ಎನ್ನುವ ತಿಳಿವಳಿಕೆ ಇಲ್ಲದಿದ್ದರೆ ಮಕ್ಕಳು ಅವರ ಮುಂದಿನ ಜೀವನದಲ್ಲಿ ಎಲ್ಲರನ್ನೂ ಮೆಚ್ಚಿಸುವ, ಕನಿಷ್ಠ ಮಾನವೀಯ ವರ್ತನೆಗೂ ಬೇಡಿಕೊಳ್ಳುವ, ತಮ್ಮೊಂದಿಗೆ ಗೌರವಯುತವಾಗಿ ನಡೆದುಕೊಳ್ಳದವರನ್ನು ತಿರಸ್ಕರಿಸಲಾಗದ, ಎಲ್ಲ ಬಗೆಯ ಅವಮಾನಗಳನ್ನು, ಭಾವನಾತ್ಮಕ ಅನ್ಯಾಯಗಳನ್ನು ಸಹಿಸಿಕೊಂಡೇ ಬಾಳುವ ಬಲಹೀನತೆ ಮೈಗೂಡಿಸಿಕೊಳ್ಳುತ್ತಾರೆ. ತನ್ನ ಬೇಕು-ಬೇಡಗಳಿಗಿಂತ, ತನ್ನ ಸುರಕ್ಷೆಗಿಂತ ಬೇರೆಯವರ ಅವಶ್ಯಕತೆಗಳೇ ಮುಖ್ಯ ಎನ್ನುವ ತಪ್ಪುಕಲ್ಪನೆಯೂ ಅವರನ್ನು ಆವರಿಸಿಕೊಳ್ಳುತ್ತದೆ. ಇಂತಹ ತಪ್ಪುಕಲ್ಪನೆಗಳು ಮಕ್ಕಳ ಸಾಮಾಜಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಶಿಕ್ಷಣ, ಉದ್ಯೋಗ, ಸ್ನೇಹ, ಸಾಮುದಾಯಿಕ ಸಹಭಾಗಿತ್ವ, ಮಾನಸಿಕ ಆರೋಗ್ಯ ಎಲ್ಲದಕ್ಕೂ ಸೌಹಾರ್ದಯುತ ಸಂಬಂಧಗಳು ಮುಖ್ಯವಾಗುತ್ತದೆ. ಎಲ್ಲ ಸಂದರ್ಭಗಳಲ್ಲೂ ಬೇರೆಯವರು ತೋರಿಸುವ ಅಸಹನೆ, ಅಸಡ್ಡೆಗಳಿಗೆ ತನ್ನಲ್ಲಿರುವ ಯಾವುದೋ ದೋಷವೇ ಕಾರಣ ಎಂದು ತಿಳಿಯುವ ವ್ಯಕ್ತಿ ಹೇಗೆ ತಾನೇ ಸಂತೃಪ್ತಿ ತರುವ ಬಾಂಧವ್ಯಗಳನ್ನು ಕಂಡುಕೊಳ್ಳುವುದು ಸಾಧ್ಯ? ಅಷ್ಟೇ ಅಲ್ಲದೆ ಸದಾ ಸಿಡುಕಿಗೆ, ಕೋಪಕ್ಕೆ ತುತ್ತಾಗುವ ಮಗುವಿನಲ್ಲಿ ಒಂದು ಬಗೆಯ ಆತಂಕ, ಚಡಪಡಿಸುವಿಕೆ, ಸದಾ ಏನನ್ನೋ ಸರಿಪಡಿಸಲು ಹೆಣಗುವುದು, 'ಏನು ಮಾಡಿದರೆ ಏನಾಗುವುದೋ, ಅದರಿಂದ ಹೇಗೆ ತಪ್ಪಿಸಿಕೊಳ್ಳುವುದೋ' ಎಂಬ ನಿರಂತರ ಚಿಂತೆ ಇಂಥವೆಲ್ಲಾ ಮಕ್ಕಳನ್ನು ಸಂಕಟದಲ್ಲಿ ತೊಳಲಾಡುವಂತೆ ಮಾಡುತ್ತದೆ.

ಮಕ್ಕಳ ಮಾನಸಿಕ ಸೌಖ್ಯದ ಬಗ್ಗೆ ಮಾತ್ರ ಮಾತನಾಡುತ್ತಾ ಪೋಷಕರು ಮಕ್ಕಳನ್ನು ಬೆಳೆಸುವ ದಾರಿಯಲ್ಲಿ ಎಷ್ಟೆಲ್ಲಾ ಕಷ್ಟಗಳನ್ನು ಎದುರಿಸುತ್ತಾರೆ ಎನ್ನುವುದನ್ನೇ ಮರೆತುಬಿಡಬೇಕಾ? ಪೋಷಕರ ಬಗೆಗೂ ಸಹಾನುಭೂತಿ ಬೇಡವೇ? ಎಂದರೆ ಖಂಡಿತ ಹೌದು; ಪೋಷಕರಿಗೂ ತಮ್ಮ ಕರ್ತವ್ಯ, ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಬಳಲಿಕೆ ಉಂಟಾಗಿರುತ್ತದೆ, ತಮ್ಮ ಜೀವನದ ನೋವು ಹತಾಶೆಗಳಿಂದ ಕಂಗಾಲಾಗಿರುವ ಸಾಧ್ಯತೆಯೂ ಇದೆ. ಇದೆಲ್ಲದರ ಜೊತೆಗೆ ತಾವೇ ಆರೋಗ್ಯಕರವಾದ ಕೌಟುಂಬಿಕ ವಾತಾವರಣದಲ್ಲಿ ಬೆಳೆಯದೆ ಇದ್ದಾಗ, ತಮ್ಮ ಜೀವನದ ಮುಖ್ಯ ನಿರ್ಧಾರಗಳಾದ ಉದ್ಯೋಗ, ಮದುವೆ, ಮಕ್ಕಳು, ಕುಟುಂಬ ಮುಂತಾದವುಗಳನ್ನು ತಾವೇ ಸ್ವತಂತ್ರವಾಗಿ ಕೈಗೊಳ್ಳದೇ ಇದ್ದಾಗ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಅವರಿಗೆ ಹೊರೆಯಂತೆ ಭಾಸವಾಗುತ್ತದೆ. ತನಗೆ ಆಯ್ಕೆಗಳೇ ಇಲ್ಲ, ಬೇರೆಯವರ ಒತ್ತಡಗಳಿಗೆ ಮಣಿಯದೆ ಬೇರೆ ದಾರಿಯಿಲ್ಲ ಎಂದುಕೊಂಡು, ತನ್ನತನಕ್ಕೆ ಅವಕಾಶವನ್ನೂ, ಬೆಲೆಯನ್ನು ಕೊಡುವುದೆಂದರೆ ಏನು ಎಂದೇ ತಿಳಿಯದೆ, ತನಗೆ ತಾನೇ ಸ್ವಾತಂತ್ರ್ಯ ಕೊಟ್ಟುಕೊಳ್ಳದೆ ಅದರಿಂದ ಉಂಟಾಗುವ ಅಸಮಾಧಾನಗಳನ್ನು ಮಕ್ಕಳ ಮೇಲೆ ಸಿಡುಕುವುದರ ಮೂಲಕ ತೋರ್ಪಡಿಸಿಕೊಳ್ಳುವಂತಾಗುತ್ತದೆ.

ಮಕ್ಕಳ ಮೇಲೆ ಸಿಡುಕುವವರು ನೀವಾದರೆ ಕೆಳಕಂಡ ಕೆಲವು ವಿಚಾರಗಳ ಬಗೆಗೆ ಚಿಂತಿಸುವುದು ಒಳ್ಳೆಯದು:

* ಕೆಲವು ಪೋಷಕರು ‘ನಾವು ಮಕ್ಕಳನ್ನು ತುಂಬಾ ಪ್ರೀತಿಸುತ್ತೇವೆ, ಎಲ್ಲ ಸೌಕರ್ಯ ಕೊಡುತ್ತಿದ್ದೇವೆ, ಸ್ವಲ್ಪ ಸಿಡುಕಿದರೆ ಯಾವ ದೊಡ್ಡ ಹಾನಿಯಾಗಿಬಿಡುತ್ತದೆ’ ಎಂದುಕೊಳ್ಳುತ್ತಾರೆ. ಮಕ್ಕಳಿಗೆ 'ಪ್ರೀತಿ'ಯಷ್ಟೇ ಸಾಕಾಗುವುದಿಲ್ಲ, ತಂದೆ/ತಾಯಿ ಸಿಡುಕುತ್ತಾರೆ ಎನ್ನುವ ಭಯವಿಲ್ಲದೆ ತಮ್ಮನ್ನು ತಾವು ತೆರೆದಿಟ್ಟುಕೊಳ್ಳಬಹುದಾದ ಒಂದು ನಿರಾತಂಕವಾದ space ಬೇಕು. ಎಲ್ಲ ಸಂಘರ್ಷಗಳನ್ನು, ಭಿನ್ನಾಭಿಪ್ರಾಯಗಳನ್ನು ನಿರ್ವಹಿಸಲು ಬೇಕಾದ ಸಮಾಧಾನದ ಮಾತುಗಳು ಮಕ್ಕಳ ಭಾವನಾತ್ಮಕ ಅವಶ್ಯಕತೆಗಳಲ್ಲೊಂದು.

* ಮಕ್ಕಳೂ ಮನುಷ್ಯರೇ ಹೌದು, ಅವರೂ ನಮಗೆ ಕಿರಿಕಿರಿಯುಂಟುಮಾಡುತ್ತಾರೆ ಕೂಡ, ಆದರೆ ಅದು ಉದ್ದೇಶಪೂರ್ವಕವಲ್ಲ. ಮಕ್ಕಳು ತಮಗಾಗುತ್ತಿರುವ ಯಾವುದೋ ಕೆರಳಿಕೆಯನ್ನು ರಗಳೆ, ಹಠದ ಮೂಲಕ ವ್ಯಕ್ತಪಡಿಸುತ್ತಾರೆ. ಅಂತಹ ಸಮಯದಲ್ಲಿ ತನಗೂ ತನ್ನ ಮಗುವಿಗೂ ಶಿಕ್ಷೆಯಲ್ಲ ಸಹಾನುಭೂತಿಯ ಅವಶ್ಯಕತೆಯಿದೆ ಎಂದು ಗುರುತಿಸುವುದೇ ಸಮಾಧಾನಕ್ಕೆ ಕೀಲಿಕೈ.

* ನಿಯಂತ್ರಣ ಮೀರಿ ಮಕ್ಕಳ ಮೇಲೆ ಕೂಗಾಡಿದಾಗ ಅಹಂ ತೊರೆದು ಮಕ್ಕಳ ಕ್ಷಮೆಯಾಚಿಸುವುದುಸರಿಯಾದ ನಡೆಯೇ ಹೌದು. ತಾನು ಸಿಡುಕದೇ ಇರಬಹುದಾಗಿದ್ದರೂ ಸಿಡುಕಿದ್ದು ತನ್ನದೇ ಆಯ್ಕೆಯಾಗಿತ್ತು, ಹಾಗೆ ಮಾಡಬಾರದಿತ್ತು ಎನ್ನುವುದನ್ನು ಮಕ್ಕಳಿಗೆ ಅರ್ಥವಾಗುವಂತೆ ಹೇಳುವುದು ಎಷ್ಟು ಚಂದವಲ್ಲವೇ?

* ಮಕ್ಕಳು ನಮ್ಮ ಬಹುಪಾಲು ಸಮಯವನ್ನು, ಗಮನವನ್ನು ಬೇಡುತ್ತಾರೆ; ಇದರಿಂದ ಪೋಷಕರಾದ ನಮಗೆ ಮಾನಸಿಕ ಆಯಾಸವಾಗಿ ಅದನ್ನು ಮಕ್ಕಳ ಮೇಲೆ ಸಿಡುಕಿ ತೋರಿಸಿಕೊಳ್ಳುವಂತಾಗುತ್ತದೆ. ಸ್ವ ಆರೈಕೆಯ ಕಡೆಗೆ ಗಮನ ನೀಡಿ ಸದೃಢರಾಗುವುದು ಇಂತಹ ಆಯಾಸದಿಂದ ಹೊರಬರುವ ದಾರಿಯಾಗಿದೆ.

* ಮಕ್ಕಳನ್ನು ಎಲ್ಲ ಬಗೆಯ ಸಮಸ್ಯೆಗಳಿಂದ, ಸಂಕಟಗಳಿಂದ, ತಪ್ಪು ಮಾಡುವುದರಿಂದ ನಾವು ಪಾರುಮಾಡಲಾರೆವು. ಅಂತಹ ನಿರೀಕ್ಷೆಗಳನ್ನಿಟ್ಟುಕೊಂಡಾಗ ತಾಳ್ಮೆ ತಪ್ಪುತ್ತದೆ. ಮಕ್ಕಳ ಆಯ್ಕೆ, ಅಭಿಪ್ರಾಯಗಳಿಗೆ ಬೆಲೆಕೊಟ್ಟು ಸಂದರ್ಭಗಳನ್ನೆದುರಿಸುವ ವಿವೇಚನೆಯನ್ನು, ಸ್ವತಂತ್ರ ಮನೋಭಾವವನ್ನು ಅವರಲ್ಲಿ ಬೆಳೆಸುವುದು ನಮ್ಮ ತಲೆಯ ಮೇಲಿನ ಭಾರವನ್ನು ಸ್ವಲ್ಪ ಮಟ್ಟಿಗೆ ಹಗುರಾಗಿಸುತ್ತದೆ. ಹಗುರವಾದ ಭಾವ ಸಮಾಧಾನದಿಂದ ಮಾತನಾಡಲು ಪ್ರೋತ್ಸಾಹಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.