ನನಗೆ ಆಗಾಗ ವಿಪರೀತ ಎನ್ನುವಷ್ಟು ಸಿಟ್ಟು ಬರುತ್ತದೆ. ಹತಾಶೆಯ ತುತ್ತತುದಿ ತಲುಪಿದ್ದೇನೆ. ಇದಕ್ಕೆ ಕಾರಣಗಳು ತಿಳಿದಿವೆ. ಇದರಿಂದ ಬೇಸತ್ತು ಆಗಾಗ ಸತ್ತು ಹೋಗಿಬಿಡಬೇಕೆಂಬ ಯೋಚನೆಗಳು ಬರುತ್ತವೆ. ಆದರೆ ಸಾಯಲು ಸುತರಾಂ ಇಷ್ಟವಿಲ್ಲ. ಯೋಗ, ಧ್ಯಾನ ಯಾವುದರಲ್ಲಿಯೂ ಸಂಪೂರ್ಣವಾಗಿ ತೊಡಗಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನನ್ನು ನಾನು ಸಂತೈಸಿಕೊಳ್ಳಲು ಇರುವ ಪರಿಹಾರವೇನು ಸರ್?
–ಶ್ರೇಯಾ, ಗೃಹಿಣಿ
ಈ ಸಮಸ್ಯೆಯಲ್ಲಿ ಇರುವ ಒಂದು ಸಂಪನ್ಮೂಲವೆಂದರೆ ನಿಮಗೆ ನಿಮ್ಮ ಕೋಪದ ಮೂಲ ತಿಳಿದಿರುವುದು. ಎಷ್ಟೋ ಬಾರಿ ನಮಗೆ ಬರುವಂತಹ ಕೋಪಕ್ಕೆ, ಭಯಕ್ಕೆ ಅಥವಾ ಇನ್ಯಾವುದೇ ಋಣಾತ್ಮಕ ಚಿಂತನೆಗಳಿಗೆ ಮೂಲ ಕಾರಣಗಳೇ ತಿಳಿದಿರುವುದಿಲ್ಲ. ಹಾಗಾದಾಗ ಪರಿಹಾರವನ್ನು ಕಂಡುಕೊಳ್ಳುವುದು ಸುಲಭವಲ್ಲ. ನಿಮಗೆ ಕಾರಣಗಳು ತಿಳಿದಿವೆ ಮತ್ತು ಆ ಕಾರಣಗಳು ಹತಾಶೆಯ ಭಾವವನ್ನು ಹೆಚ್ಚಿಸಿವೆ. ಇಲ್ಲಿ ನೀವು ಉಪಯೋಗಿಸಬೇಕಿರುವುದು ನಿಮ್ಮ ಜಾಣ್ಮೆ. ನಿಮ್ಮ ಜೀವನದಲ್ಲಿರುವ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಏನಾದರೂ ಉಪಾಯವಿದೆಯೇ ಎಂಬುವುದನ್ನು ಹುಡುಕುವುದು. ಪರಿಹಾರವನ್ನು ಹುಡುಕುವುದಕ್ಕೆ ಒಂದು ಸುಲಭ ಉಪಾಯವೆಂದರೆ, ಸಮಸ್ಯೆಯನ್ನು ಕೂಲಂಕಷವಾಗಿ ಅವಲೋಕಿಸುವುದು. ಹೇಗೆ ಅವಲೋಕಿಸುವುದು ಎಂಬುವುದಕ್ಕೆ ಉದಾಹರಣೆಯಾಗಿ ಈ ಕಥೆಯನ್ನು ಹೇಳುವುದಕ್ಕೆ ಇಷ್ಟಪಡುತ್ತೇನೆ.
ಒಂದು ಬಾರಿ ಒಬ್ಬ ತಂದೆ ತನ್ನ ಮಗನ ಬಳಿ ಬಿದಿರನ್ನು ಕಡಿಯುವುದಕ್ಕೆ ಹೇಳಿದ. ಬಿದಿರಿನ ಹಿಂಡಿಲಿನಲ್ಲಿ ಸುತ್ತಲೂ ಒಂದಷ್ಟು ಮುಳ್ಳುಗಳಿದ್ದುವು. ತಂದೆ ಹೇಳಿದ ಕೆಲಸವನ್ನು ಪೂರೈಸಲು ಮಗ ಬಿದಿರಿನ ಕಾಂಡಕ್ಕೇ ಕತ್ತಿಯಿಂದ ಏಟುಕೊಡುವ ಪ್ರಯತ್ನ ಮಾಡಿದ. ಹಾಗೆ ಮಾಡುವ ಮೂಲಕ ಕೆಲಸವನ್ನು ಬೇಗ ಮುಗಿಸಿಕೊಳ್ಳಬಹುದು ಎಂದು ಆತ ಅಂದುಕೊಂಡಿದ್ದರೂ, ಸುತ್ತಲೂ ಇದ್ದ ಮುಳ್ಳುಗಳು ಆತನನ್ನು ಮುತ್ತಿಕೊಂಡು ಚುಚ್ಚಿ ಅದರಿಂದ ಹೊರಗೆ ಬರುವುದೇ ಒಂದು ದೊಡ್ಡ ತಾಪತ್ರಯವಾಯ್ತು. ತನಗೆ ಬಿದಿರು ಕಡಿಯುವುದಕ್ಕೆ ಸಾಧ್ಯವಾಗದಿರುವ ಅಸಹಾಯಕತೆಯನ್ನು ತಂದೆಗೆ ಬಂದು ಹೇಳಿದ. ಆವಾಗ ಆ ತಂದೆ ತನ್ನ ಮಡದಿಯ ಬಳಿ ಮಗನಿಗೆ ಬಿಸಿ ಬಿಸಿಯಾದ ಗಂಜಿಯನ್ನು ತಟ್ಟೆಯಲ್ಲಿ ಹಾಕಿಕೊಡು ಎಂದು ಸೂಚಿಸಿದ. ಆಕೆಯೂ ಹಾಗೆಯೇ ಮಾಡಿದಳು. ಆವಾಗ ಮಗ ತಟ್ಟೆಯ ಬದಿಯಿಂದ ನಿಧಾನವಾಗಿ ಗಂಜಿಯ ಬಿಸಿಯನ್ನು ಆರಿಸುತ್ತಾ, ನಿಧಾನವಾಗಿ ಕುಡಿದು ಮುಗಿಸಿದ. ಆವಾಗ ಬಂದ ತಂದೆ, ಗಂಜಿ ಬಿಸಿ ಇದ್ದರೂ ಹೇಗೆ ಕುಡಿದು ಮುಗಿಸಿದೆ ಅಂತ ಕೇಳಿದರು. ಅದಕ್ಕೆ ಉತ್ತರವಾಗಿ ‘ಬದಿಯಿಂದ ನಿಧಾನವಾಗಿ ಆರಿಸಿ ಕುಡಿದು ಮುಗಿಸಿದೆ’ ಎಂದ. ಆವಾಗ ತಂದೆ ಹೇಳಿದ, ‘ಇದೇ ರೀತಿ ಬಿದಿರನ್ನೂ ಕಡಿಯಬಹುದಿತ್ತಲ್ಲಾ? ನಿಧಾನವಾಗಿ ಬದಿಯಲ್ಲಿದ್ದ ಮುಳ್ಳುಗಳನ್ನು ನಿವಾರಿಸಿಕೊಂಡು ಕಾಂಡದ ಮೇಲೆ ಕತ್ತಿಯಿಂದ ಏಟು ಹಾಕಿದ್ದರೆ ಕಡಿಯುವುದು ಸುಲಭ ಸಾಧ್ಯವಾಗುತ್ತಿತ್ತು. ಬದಲಾಗಿ ನೀನು ನೇರವಾಗಿ ಕಾಂಡಕ್ಕೇ ಕೈ ಹಾಕಿದಿ. ಹಾಗಾಗಿ ಮೈಯೆಲ್ಲಾ ಚುಚ್ಚಿಸಿಕೊಳ್ಳಬೇಕಾಯಿತು’. ಮಗನಿಗೆ ತನ್ನ ತಪ್ಪಿನ ಅರಿವಾಯ್ತು.
ಅದೇ ರೀತಿ, ಸಮಸ್ಯೆಯ ಮೂಲಕ್ಕೆ ನೇರವಾಗಿ ಕೈ ಹಾಕದೇ ಸುತ್ತಲೂ ಇರುವಂತಹ ಬಿರುಕುಗಳನ್ನು ಸರಿಪಡಿಸುತ್ತಾ ಹೋಗಿ. ಆವಾಗ ಸಮಸ್ಯೆಯ ಮೂಲಕ್ಕೆ ಹೋಗುವುದು ಸುಲಭವಾಗುತ್ತದೆ. ಹೀಗೆ ನೀವು ನಿಮ್ಮ ಕೋಪಕ್ಕೆ ಕಾರಣವಾಗುತ್ತಿರುವ ಮೂಲವನ್ನು ಸರಿಪಡಿಸಿಕೊಳ್ಳಬೇಕೇ ಹೊರತು ಅಸಹಾಯಕತೆಯಿಂದ ಬೇಸತ್ತು ಋಣಾತ್ಮಕ ಚಿಂತನೆಗಳನ್ನು ಮಾಡುವುದಲ್ಲ. ಯಾಕೆಂದರೆ, ಇವೆಲ್ಲಾ ಸಮಸ್ಯೆಗಳಿಗಿಂತಲೂ ಜೀವನ ಬಹಳ ದೊಡ್ಡದು. ಸಮಸ್ಯೆಗಳು ಬರುತ್ತವೆ, ಹೋಗುತ್ತವೆ. ಕೆಲವೊಂದು ಬಾರಿ ಅವುಗಳು ನಮಗೆ ಹೆಚ್ಚಿನ ಹತಾಶೆ ಕೊಡಬಹುದೇ ಆದರೂ, ಅವುಗಳ ಕೈಯಲ್ಲಿ ನಮ್ಮ ಜೀವವನ್ನು ಕೊಡಬಾರದು. ಸಮಸ್ಯೆಗೆ ಪರಿಹಾರ ಕಂಡುಕೊಂಡ ಮೇಲೆ ಜೀವನ ಹಗುರವಾಗುತ್ತದೆ. ಮಾತ್ರವಲ್ಲ ಸಂತೋಷವೂ ನೆಲೆಮಾಡುತ್ತದೆ.
ಅಕ್ಷರ ದಾಮ್ಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.