ಸೆ. 13ರಂದು ವಿಶ್ವ ಸೆಪ್ಸಿಸ್ ದಿನ

ಸೆಪ್ಸಿಸ್. ಕನ್ನಡದಲ್ಲಿ 'ತೀವ್ರವಾದ ನಂಜು' ಎನ್ನಬಹುದಾದ, ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುವ ಈ ಸಮಸ್ಯೆ ಸೋಂಕುಗಳಿಂದ ಉಂಟಾಗುವಂತಹದ್ದು. ತೀವ್ರವಾದ ಸೋಂಕುಗಳನ್ನು ಎದುರಿಸಲು ದೇಹ ಸ್ರವಿಸುವ ರಾಸಾಯನಿಕಗಳಿಗೆ ದೇಹ ವ್ಯತಿರಿಕ್ತವಾಗಿ ಸ್ಪಂದಿಸುವುದರಿಂದ ಉಂಟಾಗುವ ಅನಾರೋಗ್ಯ ಸ್ಥಿತಿ. ಇದು ಕಡಿಮೆ ರಕ್ತದೊತ್ತಡ (ಸೆಪ್ಟಿಕ್ ಶಾಕ್), ಅಂಗಾಂಗಗಳ ವೈಫಲ್ಯ ಹಾಗೂ ಮರಣಕ್ಕೂ ಕಾರಣವಾಗಬಹುದು.

ಹಿಂದಿನ ಕಾಲದಲ್ಲಿ ಬಾಣಂತಿ ಜ್ವರ ಬಂದೋ, ಕಾಲಿಗೆ ಆದ ಗಾಯ ಗುಣವಾಗದೆ ತೀವ್ರ ನಂಜಾಗಿಯೋ ಜೀವ ತೊರೆದ ಕೆಲವು ಜನರ ಕತೆಗಳನ್ನು ನಾವು ಒಂದಲ್ಲ ಒಂದು ಸಂದರ್ಭದಲ್ಲಿ ಕೇಳಿರುತ್ತೇವೆ. ಆ್ಯಂಟಿಬಯಾಟಿಕ್ ಔಷಧಿಗಳ ಆವಿಷ್ಕಾರವಾದ ನಂತರ ಇವುಗಳ ಹತೋಟಿ ಸಾಧ್ಯವಾಯಿತು. ಆದರೆ ಇತ್ತೀಚಿನ ದಿನಗಳಲ್ಲಿ ಜಗತ್ತಿನೆಲ್ಲೆಡೆ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚುತ್ತಿರುವಾಗ, ಮಧುಮೇಹದ ರೋಗಿಗಳು ಮಿಲಿಯಗಟ್ಟಲೆ ಇರುವಾಗ, ಹಲವಾರು ಕಾರಣಗಳಿಂದ ನಿರೋಧಕ ಶಕ್ತಿ ಕಡಿಮೆ ಇರುವವರು ಅಧಿಕ ಸಂಖ್ಯೆಯಲ್ಲಿರುವಾಗ (ಕ್ಯಾನ್ಸರ್ ರೋಗಿಗಳು, ಸಂಧಿವಾತದಂತಹ ತೀವ್ರರೋಗಗಳಿರುವವರು, ಅಂಗಾಂಗ ಕಸಿ ಚಿಕಿತ್ಸೆ ಮಾಡಿಸಿಕೊಂಡವರು) ಯಾವುದೇ ಚಿಕ್ಕ ಸೋಂಕು ಕೂಡಾ ತೀವ್ರವಾದ ನಂಜಾಗಿ ಸೆಪ್ಸಿಸ್ ಅಥವಾ ಸೆಪ್ಟಿಕ್ ಶಾಕ್ ಗೆ ಮೂಲವಾಗಬಹುದು.

ಈ ಸಮಸ್ಯೆ ಯಾವುದೇ ವ್ಯಕ್ತಿಯಲ್ಲಿಯೂ ಇದು ಉಂಟಾಗಬಹುದು. ಸಾಮಾನ್ಯವಾಗಿ ಇದಕ್ಕೆ ತುತ್ತಾಗುವವರು
* ಹಿರಿಯ ನಾಗರಿಕರು
* ಗರ್ಭಿಣಿ ಮಹಿಳೆಯರು, ಬಾಣಂತಿಯರು
*ಒಂದು ವರ್ಷಕ್ಕಿಂತ ಕೆಳಗಿನ ಹಸುಳೆಗಳು
* ಅಪಘಾತಗಳಲ್ಲಿ ತೀವ್ರವಾಗಿ ಗಾಯಗೊಂಡವರು
* ಸುಟ್ಟಗಾಯಗಳಿಂದ ಬಳಲುತ್ತಿರುವವರು
* ಬೇರೆ ಕಾಯಿಲೆಗಳ ಚಿಕಿತ್ಸೆಗಾಗಿ ದೀರ್ಘಕಾಲ ಮೂತ್ರನಾಳ ಅಥವಾ ಶ್ವಾಸನಾಳಗಳಲ್ಲಿ ನಳಿಕೆಗಳನ್ನು ಅಳವಡಿಸಬೇಕಾಗಿ ಬಂದಾಗ
* ಮಧುಮೇಹ, ಶ್ವಾಸಕೋಶದ ಅಥವಾ ಮೂತ್ರ ಪಿಂಡಗಳ ಕಾಯಿಲೆಗಳಿಂದ ಬಳಲುತ್ತಿರುವವರು
* ಕ್ಯಾನ್ಸರ್ ಪೀಡಿತ ರೋಗಿಗಳು
* ಯಾವುದೇ ಕಾರಣದಿಂದ ದೇಹದ ರೋಗ ನಿರೋಧಕ ಶಕ್ತಿಯ ಕೊರತೆಯಿಂದ ಬಳಲುತ್ತಿರುವವರು
* ಇತ್ತೀಚೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು, ಆಂಟಿಬಯಾಟಿಕ್ ತೆಗೆದುಕೊಂಡವರು.

ನಮ್ಮ ದೇಶದಲ್ಲಿ ಪ್ರತಿವರ್ಷ ಸುಮಾರು ಒಂದು ಮಿಲಿಯದಷ್ಟು ಜನರು ಇದರಿಂದಾಗಿ ತೊಂದರೆಗೊಳಗಾಗುತ್ತಾರೆಂದು ಅಂದಾಜು.

ದೇಹದ ಯಾವುದೇ ಭಾಗದಲ್ಲಿ ಸೋಂಕಿನ ಲಕ್ಷಣಗಳ ಜೊತೆಗೆ ರೋಗಿಯ ಪ್ರಜ್ಞೆಯಲ್ಲಿ ಏರುಪೇರು, ಕಡಿಮೆ ರಕ್ತದೊತ್ತಡ ಹಾಗೂ ಕ್ಷಿಪ್ರವಾದ ಉಸಿರಾಟ (ನಿಮಿಷಕ್ಕೆ ಇಪ್ಪತ್ತೆರಡು ಬಾರಿಗಿಂತ ಜಾಸ್ತಿ) ಇದ್ದರೆ 'ಸೆಪ್ಸಿಸ್' ಇರಬಹುದೆಂದು ಊಹಿಸಿ ಮುಂದಿನ ಚಿಕಿತ್ಸೆ ಆರಂಭಿಸಬೇಕಾಗುತ್ತದೆ. ರಕ್ತದ ಒತ್ತಡವನ್ನು ಸುಸ್ಥಿತಿಯಲ್ಲಿಡಲು ದ್ರಾವಣಗಳ ಮತ್ತು ಔಷಧಿಗಳ ಪ್ರಯೋಗ ಅವಶ್ಯವಾದಾಗ ಹಾಗೂ ರಕ್ತದೊತ್ತಡ ಸರಿಪಡಿಸಿದ ನಂತರವೂ ರಕ್ತದಲ್ಲಿ ಲ್ಯಾಕ್ಟೇಟ್ ಎಂಬ ಅಂಶ ಹೆಚ್ಚಿದ್ದರೆ ರೋಗಿ 'ಸೆಪ್ಟಿಕ್ ಶಾಕ್' ನಲ್ಲಿದ್ದಾನೆ/ ಇದ್ದಾಳೆಂದು ಹೇಳಲಾಗುತ್ತದೆ. ಈ ಹಂತ ತಲುಪಿದಾಗ ದೇಹದ ಅಂಗಾಂಗಗಳಿಗೆ ರಕ್ತ ಸಂಚಲನೆ ಕಡಿಮೆಯಾಗುತ್ತದೆ ಹಾಗೂ ದೇಹದ ಎಲ್ಲಾ ಜೀವಕೋಶಗಳ ನೈಸರ್ಗಿಕ ಪ್ರಕ್ರಿಯೆಗಳಲ್ಲಿ ವ್ಯತ್ಯಾಸಗಳುಂಟಾಗುತ್ತವೆ. ಲ್ಯಾಕ್ಟಿಕ್ ಆಮ್ಲ ಹೆಚ್ಚಾದರೆ ಜೀವಕೋಶಗಳು ಆಮ್ಲಜನಕವನ್ನು ಸರಿಯಾಗಿ ಉಪಯೋಗಿಸುವುದರಲ್ಲಿ ಅಸಮರ್ಥವಾಗಿವೆ ಎಂದರ್ಥ.

ಹೆಚ್ಚಾಗಿ ಆಸ್ಪತ್ರೆಯಲ್ಲಿ ಭರ್ತಿಯಾಗಿರುವ ರೋಗಿಗಳಲ್ಲಿ ಅಥವಾ ಇತ್ತೀಚಿಗೆ ಒಳರೋಗಿಯಾಗಿದ್ದು ಗುಣಮುಖರಾಗಿ ಹಿಂದಿರುಗಿದವರಲ್ಲಿ ಕಾಣಿಸಿಕೊಳ್ಳುತ್ತದೆ. ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳಲ್ಲಿ ಇದರ ಸಂಭಾವ್ಯತೆ ಅತ್ಯಧಿಕ. ಯಾವುದೇ ವೈರಸ್, ಬ್ಯಾಕ್ಟೀರಿಯಾ ಅಥವಾ ಫಂಗಸ್ (ಶಿಲೀಂಧ್ರ)ಗಳ ಸೋಂಕಿನಿಂದ ಇದು ಆರಂಭವಾಗಬಹುದಾದರೂ ನ್ಯುಮೋನಿಯಾ, ಕರುಳು, ಮೂತ್ರಜನಕಾಂಗ, ಪಿತ್ತಕೋಶಗಳ ಸೋಂಕಿನಿಂದ ಇದು ತೊಡಗುವ ಸಾಧ್ಯತೆ ಜಾಸ್ತಿ. ಕೆಲವರಲ್ಲಿ ಸಣ್ಣ ಪ್ರಮಾಣದಲ್ಲಿ ಸೆಪ್ಸಿಸ್ ಉಂಟಾದರೆ ಇನ್ನು ಕೆಲವರಲ್ಲಿ ತೀವ್ರವಾದ ಸೆಪ್ಟಿಕ್ ಶಾಕ್ ಗೆ ಕಾರಣವಾಗಬಹುದು. ತೀವ್ರತೆ ಹೆಚ್ಚಿದಷ್ಟು ಅಂಗಾಂಗಗಳ ರಕ್ತ ಸಂಚಲನೆ ಕಡಿಮೆಯಾಗುತ್ತದೆ. ಅಂಗಾಂಗಗಳಲ್ಲಿ ರಕ್ತ ಹೆಪ್ಪುಗಟ್ಟುವುದೂ ಜೊತೆಯಾಗಿ ಅಂಗಗಳ ವೈಫಲ್ಯ ಹಾಗೂ ಗ್ಯಾಂಗ್ರಿನ್ (ಕೊಳೆಯುವಿಕೆ)ಗೆ ಮೂಲವಾಗಬಹುದು ಹಾಗೂ ಮರಣ ಸಂಭವಿಸಬಹುದು. ಲಘುವಾದ ಸೆಪ್ಸಿಸ್ ಪೂರ್ತಿ ಗುಣವಾಗುವುದಾದರೂ ತೀವ್ರವಾದ ಸೆಪ್ಟಿಕ್ ಶಾಕ್ ನಲ್ಲಿ ಶೇ 40ರಷ್ಟು ರೋಗಿಗಳಲ್ಲಿ ಮರಣ ಸಂಭವಿಸುವ ಸಾಧ್ಯತೆಗಳಿವೆ. ಒಮ್ಮೆ ಸೆಪ್ಸಿಸ್ನಿಂದ ಗುಣಮುಖರಾದವರಲ್ಲಿ ಮರುಕಳಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಸಮಸ್ಯೆ ಪತ್ತೆ

ಪ್ರತಿ ರೋಗಿಯಲ್ಲೂ ಇದರ ಸಂಭಾವ್ಯತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ರೋಗಿಗಳ ಉಸಿರಾಟ, ರಕ್ತದೊತ್ತಡ, ಪ್ರಜ್ಞಾವಸ್ಥೆ, ಸೋಂಕು ತಗಲಿರುವ ಅಂಗದ ಆರೋಗ್ಯವನ್ನು ಗಮನಿಸುವುದು ಅತಿ ಮುಖ್ಯ. ಸಂಶಯ ಬಂದಾಗ ಹಲವಾರು ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ.

* ರಕ್ತ ಪರೀಕ್ಷೆ: ಸೆಪ್ಸಿಸ್ಗೆ ಕಾರಣವಾದ ಸೂಕ್ಷ್ಮಜೀವಿಯ ಪತ್ತೆಗೆ, ರಕ್ತದ ಕಣಗಳ ವಿವರಗಳು, ರಕ್ತ ಹೆಪ್ಪಗಟ್ಟುವಿಕೆಯ ಮಾಪಕಗಳು, ಪಿತ್ತಜನಕಾಂಗ ಹಾಗೂ ಮೂತ್ರಪಿಂಡಗಳ ಕೆಲಸಗಳ ಮಾಪಕಗಳು, ರಕ್ತದಲ್ಲಿನ ಆಮ್ಲಜನಕ- ಇಂಗಾಲಾಮ್ಲಗಳ ಮಾಪನೆ, ರಕ್ತದ ಲವಣಗಳ ಅಂಶ, ಆಮ್ಲ ಕ್ಷಾರಗಳ ಪ್ರಮಾಣ, ಲ್ಯಾಕ್ಟೇಟ್ ಅಂಶ, ಪ್ರೊಕ್ಯಾಲ್ಸಿಟೋನೊನ್ ಅಂಶ ಸಂದರ್ಭಗಳಿಗನುಗುಣವಾಗಿ ಪರೀಕ್ಷಿಸಬೇಕಾಗುತ್ತದೆ.
* ಮೂತ್ರ, ಕಫ, ಗಾಯದ ಕೀವು ಇತ್ಯಾದಿಗಳು ಮೂಲ ಸೋಂಕಿನ ಪತ್ತೆಯಲ್ಲಿ ಸಹಕಾರಿಯಾಗಬಹುದು.
* ಕ್ಷ ಕಿರಣ, ಸಿ.ಟಿ.ಸ್ಕ್ಯಾನ್, ಅಲ್ಟ್ರಾಸೌಂಡ್ ಸ್ಕ್ಯಾನ್, ಎಂ.ಆರ್. ಐ. ಸ್ಕ್ಯಾನ್ ಗಳ ಅವಶ್ಯಕತೆ ರೋಗಿಯ ಪರಿಸ್ಥಿತಿಗೆ ಅನುಗುಣವಾಗಿ ಬೇಕಾಗಬಹುದು.

ಚಿಕಿತ್ಸೆ

*ಎಷ್ಟು ಬೇಗ ಗುರುತಿಸಿ ಚಿಕಿತ್ಸೆ ಆರಂಭಿಸುತ್ತೇವೋ ಅಷ್ಟೂ ಉಪಯುಕ್ತ.
* ಕ್ತನಾಳಗಳ ಮೂಲಕ ಸಾಕಷ್ಟು ಪ್ರಮಾಣದಲ್ಲಿ ದ್ರಾವಣಗಳನ್ನು ಕೊಡುವುದು. ಮೊದಲ 2-3 ಗಂಟೆಗಳಲ್ಲಿ ವೇಗವಾಗಿ ಕೊಡಲಾಗುತ್ತದೆ (ಇದಕ್ಕೆ ಅನಾರೋಗ್ಯದ ಅಭ್ಯಂತರವಿಲ್ಲದಿದ್ದರೆ).
* ಆಂಟಿಬಯಾಟಿಕ್ಗಳು: ಮೊದಲಿಗೆ ಹೆಚ್ಚಿನ ಬ್ಯಾಕ್ಟೀರಿಯಾಗಳ ವಿರುದ್ಧ ಸೆಣಸಾಡುವ ತೀವ್ರವಾದ ಔಷಧಿಗಳ ಅವಶ್ಯಕತೆ ಇದೆ. ರಕ್ತಪರೀಕ್ಷೆಗಳಿಂದ ಇತರ ವಿವರಗಳು ತಿಳಿದಾಗ ಅದಕ್ಕೆ ಅನುಗುಣವಾಗಿ ಆಂಟಿಬಯಾಟಿಕ್ ಕೊಡಲಾಗುತ್ತದೆ.
* ರಕ್ತದೊತ್ತಡ ಬರೀ ದ್ರಾವಣಗಳಿಂದ ಮೇಲೆ ಬರದಿದ್ದರೆ ಸೂಕ್ತವಾದ ಔಷಧಿಗಳ ಅವಶ್ಯಕತೆ ಇದೆ. ನಾರ್ ಅಡ್ರಿನಲಿನ್ ಬಹಳಷ್ಟು ಉಪಯುಕ್ತ.
* ಸಂದರ್ಭಕ್ಕನುಗುಣವಾಗಿ ಕಾರ್ಟಿಕೊಸ್ಟಿರಾಯಿಡ್ಗಳು, ಇನ್ಸುಲಿನ್, ನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುವ ಔಷಧಿಗಳು, ನೋವು ನಿವಾರಕಗಳು ಬೇಕಾಗಬಹುದು.
* ಆಮ್ಲಜನಕ ಚಿಕಿತ್ಸೆಯಲ್ಲಿ ಅತಿಮುಖ್ಯ ಅಂಶ. ಉಸಿರಾಟದಲ್ಲಿ ತೊಂದರೆ ಇದ್ದರೆ ಕೃತಕ ಉಸಿರಾಟದ ವ್ಯವಸ್ಥೆಯೂ ಬೇಕಾಗಬಹುದು.
* ಮೂತ್ರಪಿಂಡಗಳ ವೈಫಲ್ಯವಿರುವಾಗ ಡಯಾಲಿಸಿಸ್ನ ಅವಶ್ಯಕತೆ ಬೀಳಬಹುದು.
* ರಕ್ತ ನೀಡಬೇಕಾಗಬಹುದು.
* ಶಸ್ತ್ರಚಿಕಿತ್ಸೆ: ಎಲ್ಲಿಯಾದರೂ ಕೀವು ತುಂಬಿಕೊಂಡಿದ್ದರೆ, ತೀವ್ರವಾದ ಸೋಂಕು ಇದ್ದರೆ, ಗ್ಯಾಂಗ್ರಿನ್ ಆಗಿದ್ದರೆ ಸೂಕ್ತ ಶಸ್ತ್ರಚಿಕಿತ್ಸೆ ಅವಶ್ಯ.

ತಡೆಗಟ್ಟುವುದು ಹೇಗೆ?

* ಸಮತೋಲನದ ಆಹಾರ, ವ್ಯಾಯಾಮಗಳು
* ವ್ಯಸನಗಳಿಂದ ದೂರವಿರುವುದು
* ಮಧುಮೇಹಕ್ಕೆ ಸರಿಯಾದ ಚಿಕಿತ್ಸೆ ತೆಗೆದುಕೊಂಡು ಸಕ್ಕರೆಯ ಅಂಶ ನಿಯಂತ್ರಣದಲ್ಲಿಡುವುದು
* ಯಾವುದೇ ಸೋಂಕು ಉಂಟಾದರೂ ಕುಟುಂಬ ವೈದ್ಯರ ಸಲಹೆಯನ್ನು ಪಡೆದು ಚಿಕಿತ್ಸೆ ತೆಗೆದುಕೊಳ್ಳುವುದು
* ಆ್ಯಂಟಿಬಯಾಟಿಕ್ಗಳನ್ನು ಸೂಚನೆಗೆ ಅನುಗುಣವಾಗಿ ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳುವುದು.
* ಆ್ಯಂಟಿಬಯಾಟಿಕ್ಗಳಿಗೆ ನಿರೋಧಕ ಶಕ್ತಿಯನ್ನು ಹೊಂದಿರುವ, ವಾತಾವರಣದಲ್ಲಿರುವ ಸೂಕ್ಷ್ಮಜೀವಿಗಳು ವೃದ್ಧಿಸದಂತೆ ಸಣ್ಣಪುಟ್ಟ ಕಾರಣಗಳಿಗೆ ಅನಾವಶ್ಯಕ ಔಷಧಗಳನ್ನು ತೆಗೆದುಕೊಳ್ಳದೆ ಇರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.