ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರಗಿದ ತೂಕ ಮರಳುವುದೇಕೆ?

ಫಾಲೋ ಮಾಡಿ
Comments

ತೂಕ ಇಳಿಸಿಕೊಂಡವರನ್ನು ಕೇಳಿ ನೋಡಿ. ಸ್ಟೀರಿಯೋಟೈಪ್‌ ಉತ್ತರ ನಿಮಗೆ ಸಿಗುವುದು ಖಂಡಿತ. ‘ಬೊಜ್ಜು ಇಳಿಸುವುದು ಬಹಳ ಸುಲಭ. ಆದರೆ ಅದು ಮತ್ತೆ ಬರದಂತೆ ನಿರ್ವಹಣೆ ಮಾಡುವುದು ಕಷ್ಟ’ ಎಂಬ ಉತ್ತರ ಸಾಮಾನ್ಯ. ಈಗಂತೂ ತೂಕ ಇಳಿಸುವ, ದೇಹಕ್ಕೊಂದು ರೂಪದರ್ಶಿಯ ತರಹದ ಆಕಾರ ಕೊಡುವ ಹಲವಾರು ನಮೂನೆ ಚಿಕಿತ್ಸೆಗಳು, ಹಲವಾರು ವಿಧದ ಸಂಸ್ಥೆಗಳು ಹುಟ್ಟಿಕೊಂಡಿವೆ. ಡಯಟ್‌, ಮಸಾಜ್‌, ಜಿಮ್‌ನಲ್ಲಿ ಕಸರತ್ತು, ಆಯುರ್ವೇದದ ತಂತ್ರ, ಯೋಗಾಸನದಿಂದ ಹಿಡಿದು ಬೇರಿಯಾಟ್ರಿಕ್‌ ಶಸ್ತ್ರಚಿಕಿತ್ಸೆಗಳವರೆಗೂ ಬೊಜ್ಜು ಇಳಿಸುವ ವೈವಿಧ್ಯಮಯ ತಂತ್ರಜ್ಞಾನಗಳು ಮಾರುಕಟ್ಟೆ ಕಂಡುಕೊಂಡಿವೆ.

ಆದರೆ ಬಹುತೇಕ ಮಂದಿಯ ದೂರೆಂದರೆ ಇಳಿಸಿದ ಬೊಜ್ಜು ಕೆಲವೇ ತಿಂಗಳುಗಳಲ್ಲಿ, ಇನ್ನು ಕೆಲವರಿಗೆ 2–3 ವರ್ಷಗಳಲ್ಲಿ ವಾಪಸ್ಸು ಬಂದಿದೆ ಎಂಬುದು. ತೂಕ ಇಳಿಸುವುದರಿಂದ ಸಾಕಷ್ಟು ಲಾಭಗಳೇನೋ ಇವೆ. ಕೊಲೆಸ್ಟ್ರಾಲ್‌, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಮೊದಲಾದವುಗಳನ್ನು ನಿಯಂತ್ರಣಕ್ಕೆ ತರಬಹುದು. ಆದರೆ ಇಳಿಸಿದ ತೂಕ ಮತ್ತೆ ವಾಪಸ್ಸು ಬಂದರೆ ಈ ಕಾಯಿಲೆಗಳು ಕೂಡ ಮತ್ತೆ ಪ್ರತ್ಯಕ್ಷವಾಗುವುದು ಖಂಡಿತ. ಇದರಿಂದ ನಿಮ್ಮ ಶ್ರಮವೆಲ್ಲ ವ್ಯರ್ಥ ಎನ್ನುತ್ತಾರೆ ತಜ್ಞರು.

ಹೀಗಾಗಿ ಕಳೆದುಕೊಂಡ ತೂಕ ಪುನಃ ಹೆಚ್ಚದಂತೆ ಎಚ್ಚರಿಕೆ ವಹಿಸಿದರೆ, ನಿಮ್ಮ ಎತ್ತರಕ್ಕೆ ಪೂರಕವಾದ ತೂಕವನ್ನು ಕಾಪಾಡಿಕೊಂಡರೆ ಬದುಕಿನುದ್ದಕ್ಕೂ ಆರೋಗ್ಯದ ಲಾಭ ಪಡೆಯಬಹುದು. ಕಳೆದುಕೊಂಡ ತೂಕ ವಾಪಸ್ಸು ಬರಲೂ ಹಲವಾರು ಕಾರಣಗಳಿವೆ. ಒಂದೇ ಸಲಕ್ಕೆ ಕಟ್ಟುನಿಟ್ಟಾದ ಪಥ್ಯ ಮಾಡಿ ತೂಕ ಕಳೆದುಕೊಳ್ಳುವಾಗ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ. ಹೀಗಾಗಿ ಹೆಚ್ಚು ಕೊಬ್ಬಿಲ್ಲದ ಸಾಮಾನ್ಯ ಆಹಾರವನ್ನು ಸೇವಿಸಿದರೂ ಕೂಡ ತೂಕ ಏರುತ್ತದೆ. ಅಂದರೆ ಕ್ಯಾಲರಿ ಕರಗಿಸುವ ಕ್ರಿಯೆ ನಿಧಾನವಾಗುತ್ತದೆ. ತೂಕ ಇಳಿಸಿದ ನಂತರ ಕೆಲವು ವಿಶೇಷ ಪಥ್ಯಾಹಾರ ಅನುಸರಿಸಬೇಕಾಗುತ್ತದೆ. ಆದರೆ ಕಟ್ಟುನಿಟ್ಟಾದ ಪಥ್ಯ ಮಾಡಬೇಕಾದ ಅವಶ್ಯಕತೆಯಿಲ್ಲ.

ಯಾವ ಆಹಾರ ಬೇಡ ಎನ್ನುತ್ತಾರೋ ಅದನ್ನು ತಿನ್ನಲು ಆಸೆಪಡುವುದು ಸಹಜ. ಇದು ಅತಿಯಾಗಿ ತಿನ್ನುವುದಕ್ಕೆ ದಾರಿ ಮಾಡಿಕೊಡುತ್ತದೆ. ದೀರ್ಘಕಾಲ ಕಷ್ಟಪಟ್ಟು ಇಳಿಸಿದ ತೂಕದಿಂದ ಉಂಟಾಗಬಹುದಾದ ಲಾಭಕ್ಕೆ ಇದು ಕಡಿವಾಣ ಹಾಕುತ್ತದೆ. ಹೀಗಾಗಿ ಕಟ್ಟುನಿಟ್ಟಾದ ನಿಯಮಗಳನ್ನು ಹಾಕಿಕೊಂಡು ಪಥ್ಯ ಮಾಡುವುದು ಒಳಿತಲ್ಲ.

ಕೆಲವರು ತೂಕವನ್ನು ಇಳಿಸುವ ಧಾವಂತದಲ್ಲಿ ಹೆಚ್ಚು ನಿರ್ಬಂಧಗಳನ್ನು ವಿಧಿಸಿಕೊಳ್ಳುತ್ತಾರೆ. ಇದರಿಂದ ತೂಕ ಇಳಿದರೂ ಚಯಾಪಚಯ ಕ್ರಿಯೆಯ ಮೇಲೆ ದುಷ್ಪರಿಣಾಮ ಬೀರುವುದು ಖಂಡಿತ. ಹೀಗಾಗಿ ಕ್ಯಾಲರಿ ಕರಗಿಸುವ ಪ್ರಮಾಣದಲ್ಲಿ ಏರುಪೇರಾಗುತ್ತದೆ. ಇದರಿಂದ ಸಹಜವಾಗಿಯೇ ತೂಕದಲ್ಲಿ ಹೆಚ್ಚಳವಾಗುತ್ತ ಹೋಗುತ್ತದೆ. ಅಂದರೆ ನೀವು ಡಯಟ್‌ ಆಹಾರ ಸೇವಿಸಿದರೂ ಕೂಡ, ಇಂತಹ ದುಷ್ಪರಿಣಾಮ ಕಂಡು ಬರುತ್ತದೆ.

ತೂಕ ಇಳಿಸುವಾಗಲೂ ಕೂಡ ತೀರಾ ಕಡಿಮೆ ಕ್ಯಾಲರಿ ಡಯಟ್‌ ಅನ್ನು ಅನುಸರಿಸಬೇಡಿ ಎನ್ನುತ್ತಾರೆ ತಜ್ಞರು. ಉದಾಹರಣೆಗೆ ಪ್ರೊಟೀನ್‌. ಪ್ರೊಟೀನ್‌ಗೆ ಹಸಿವು ಉಂಟು ಮಾಡುವ ಹಾರ್ಮೋನ್ ಪ್ರಮಾಣವನ್ನು ಕಡಿಮೆ ಮಾಡುವ ತಾಕತ್ತಿದೆ. ಇದರಿಂದ ನಿಮ್ಮ ಹಸಿವಿಗೆ ಕಡಿವಾಣ ಬೀಳುತ್ತದೆ. ಹೀಗಾಗಿ ಪ್ರೊಟೀನ್‌ ಅನ್ನು ಸೇವಿಸುವುದರ ಮೇಲೆ ಕಟ್ಟುನಿಟ್ಟಾದ ಕಡಿವಾಣ ಹಾಕಬೇಡಿ. ಮುಖ್ಯವಾದ ಊಟ, ಮಧ್ಯೆ ಸೇವಿಸುವ ಲಘು ಉಪಾಹಾರದಲ್ಲಿ ಪ್ರೊಟೀನ್‌ ಇರಲಿ. ಕಡಿಮೆ ಕೊಬ್ಬಿರುವ ಮೀನು, ಕೋಳಿ ಮಾಂಸ ಮೊದಲಾದವುಗಳನ್ನು ಸೇವಿಸಿ.

ಯಾವತ್ತೂ ಬೆಳಗ್ಗೆಯ ಉಪಾಹಾರ ತ್ಯಜಿಸಬೇಡಿ. ಈ ಉಪಾಹಾರ ಇಡೀ ದಿನ ನಿಮಗೆ ಶಕ್ತಿ ಒದಗಿಸುತ್ತದೆ. ಇದರಲ್ಲಿ ಪೌಷ್ಟಿಕಾಂಶಗಳನ್ನು ಸೇರಿಸಿ. ಆದರೆ ಕಾರ್ಬೊಹೈಡ್ರೇಟ್‌ ಬೇಡ. ಸಿಹಿ ಹಾಗೂ ಪಿಷ್ಟ ಪದಾರ್ಥಗಳಿಗೆ ಕಡಿವಾಣವಿರಲಿ.

ಯಾವತ್ತೂ ಹಸಿರು ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸಲು ಮರೆಯಬೇಡಿ. ಇವು ನಿಮ್ಮ ಹಸಿವನ್ನು ತೃಪ್ತಿಗೊಳಿಸುತ್ತವೆ. ಆದರೆ ಕ್ಯಾಲರಿಯನ್ನು ನಿಮ್ಮ ದೇಹಕ್ಕೆ ಖಂಡಿತ ಸೇರಿಸುವುದಿಲ್ಲ. ಟೊಮೆಟೊ, ಸೌತೆಕಾಯಿ, ಸಿಟ್ರಸ್‌ ಹಣ್ಣುಗಳನ್ನು ಸೇವಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT