ವಿಶ್ವ ಶೌಚಾಲಯ ದಿನ:ಇದು ವರ್ಷಕ್ಕೊಮ್ಮೆ ‘ಆಚರಿಸುವ’ ದಿನವಲ್ಲ, ಸಮರ್ಪಕ ವ್ಯವಸ್ಥೆಯ ಶೌಚಾಲಯ ಎನ್ನುವುದು ಕೊಡುಗೆಯಲ್ಲ, ಹಕ್ಕು ಎನ್ನುವುದನ್ನು ಸರ್ಕಾರಿ ಮತ್ತು ಸಾರ್ವಜನಿಕ ಮಟ್ಟದಲ್ಲಿ ಅರಿಯಬೇಕಾದ ದಿನ.

ಬಹುಶಃ ಅದು 2017ರಲ್ಲಿರಬೇಕು. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ರಾಜ್ಯಮಟ್ಟದ ಪತ್ರಕರ್ತೆಯರ ಸಮಾವೇಶವನ್ನು ಆಯೋಜಿಸಲಾಗಿತ್ತು. ಹಿರಿಕಿರಿಯ ಪತ್ರಕರ್ತೆಯರೆಲ್ಲಾ ಅಲ್ಲಿ ಸೇರಿ ತಮ್ಮ ವೃತ್ತಿಜೀವನದ ಸವಾಲು, ಸವಿನೆನಪುಗಳನ್ನು ಹಂಚಿಕೊಂಡಿದ್ದರು. ಆಗ ಹಂಚಿಕೊಂಡ ಸಾಮಾನ್ಯ ಸಂಗತಿಯೆಂದರೆ ಸವಾಲು ಕೆಲಸದಲ್ಲಿರುವಾಗ ಶೌಚಾಲಯಗಳು ಸರಿಯಾಗಿ ಸಿಗದ, ಸಿಕ್ಕರೂ ಉಪಯೋಗಿಸಲು ಸಾಧ್ಯವಾಗುವ ರೀತಿಯಲ್ಲಿ ಇರದ ಪರಿಸ್ಥಿತಿ. ಬಹುಮಟ್ಟಿಗೆ ಎಲ್ಲಾ ಪತ್ರಕರ್ತೆಯರೂ ಅನುಭವಿಸಿದ್ದ ಪಡಿಪಾಟಲಿದು.

‘ಫೀಲ್ಡಿಗೆ ಹೋಗುವಾಗ, ಫೀಲ್ಡಿನಲ್ಲಿದ್ದಾಗ ನಾನು ನೀರು ಕುಡಿಯುವುದನ್ನೇ ಮುಂದೂಡುತ್ತೇನೆ’ ಈ ಮಾತು ಹೇಳಿದ್ದು ಒಬ್ಬ ಸ್ನೇಹಿತೆಯಾದರೆ, ಹೌದೆಂದು ತಲೆ ಆಡಿಸಿದವರು ನನ್ನನ್ನೂ ಒಳಗೊಂಡು ಬಹಳಷ್ಟು ಮಂದಿ.

ಕನ್ನಡ ಸಾಹಿತ್ಯ ಅಕಾಡೆಮಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಹಿಳೆಯರ ವರ್ಕ್ಶಾಪ್ ಏರ್ಪಡಿಸಿತ್ತು. ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಸಹೋದರಿಯರ ಪರವಾಗಿ ಬಂದಿದ್ದ ಸ್ನೇಹಿತೆ ಒಬ್ಬರು ಕೆಲಸ ಮಾಡುವಾಗ ತಾವು ಅನುಭವಿಸುವ ಬವಣೆಯ ಕುರಿತು ಹೇಳುವಾಗ ಬಂದದ್ದು ಇದೇ ಸಮಸ್ಯೆ. ‘ಹೆಚ್ಚು ಸಲ ಬಾತ್ರೂಮಿಗೆ ಹೋದರೆ ಸೂಪರ್ವೈಸರ್ ಬೈಯ್ಯುವುದರಿಂದ ನೀರು ಕುಡಿಯುವುದನ್ನು ಅವಾಯ್ಡ್ ಮಾಡುತ್ತೇವೆ’. ಇಂಥವರಿಗೆ ಪ್ರತಿದಿನ 3-4 ಲೀಟರ್ ಆದರೂ ನೀರು ಕುಡಿಯಬೇಕು ಎಂದು ಆರೋಗ್ಯ ಸಲಹೆ ಕೊಡುವುದು ಅದೆಂತಹ ಕ್ರೂರ ಜೋಕ್ ಆಗಬಹುದು?

ಇನ್ನೊಂದು ವೈಯಕ್ತಿಕ ಅನುಭವವನ್ನು ಹೇಳುವುದಾದರೆ; ರಂಗಭೂಮಿಯ ಕಾರ್ಯಕ್ರಮ ವೊಂದರ ಭಾಗವಾಗಿ, ರಂಗಕರ್ಮಿಗಳ ಜೊತೆ ಕರ್ನಾಟಕದುದ್ದಕ್ಕೂ ಓಡಾಡಬೇಕಿತ್ತು. ಒಂದೆಡೆ ಭವ್ಯವಾದ ರಂಗಮಂದಿರ. ನಾಟಕ ಮುಗಿದ ಮೇಲೆ ಇನ್ನೊಂದೂರಿಗೆ ಧಾವಿಸಬೇಕಿತ್ತು. ಅವಸರವಸರವಾಗಿ ಟಾಯ್ಲೆಟ್ಗೆ ಓಡಿದೆ. ಮುಚ್ಚಲಿಕ್ಕಾಗದ ಬಾಗಿಲು, ಕಿಟಕಿ, ಗೋಡೆಗಳ ಮೇಲೆ ಬೆಳೆದಿದ್ದ ಹುತ್ತ. ನೋಡುತ್ತಲೇ ಗಾಬರಿಯಾಗಿತ್ತು.

ಸಣ್ಣ ಸಣ್ಣ ಬಟ್ಟೆ ಅಂಗಡಿಗಳಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳಿರುತ್ತಾರೆ. ಅಂಗಡಿಯ ಸುತ್ತಳತೆಯೇ 10 ಅಡಿ x 10 ಅಡಿ ಇರುತ್ತದೆ. ಇನ್ನು ಅಲ್ಲಿ ಟಾಯ್ಲೆಟ್ ವ್ಯವಸ್ಥೆ ಸಾಧ್ಯವೆ? ಹಾಗಿರುವಾಗ ಅವರ ಪರಿಸ್ಥಿತಿ ಏನು? ಯಾವುದಾದರೂ ಹೋಟೆಲ್ನ ಟಾಯ್ಲೆಟ್ಗೆ ಹೋಗಬೇಕೆಂದರೂ ಅಲ್ಲಿ ಕಾಫಿಯನ್ನಾದರೂ ಖರೀದಿಸಬೇಕು. ದಿನಕ್ಕೆರಡು ಕಾಫಿ ಎಂದರೆ ಅವರ ಪುಡಿ ಸಂಬಳದ ಮೇಲೆ ಅದು ದೊಡ್ಡದೇ ಹೊರೆ. ಈ ಸಮಸ್ಯೆಯನ್ನು ಇಟ್ಟುಕೊಂಡು ತಮಿಳಿನಲ್ಲಿ ಒಂದು ಸಿನಿಮಾ ಸಹ ಬಂದಿತ್ತು.

ಈ ಮಾತು ಮತ್ತೆ ಬಂದಿದ್ದು ಮೊನ್ನೆ ಪತ್ರಕರ್ತೆಯರ ವಾಟ್ಸ್ಆ್ಯಪ್ ಗುಂಪಿನಲ್ಲಿ. ಕೆಲಸ ಮಾಡುವ ಕಡೆ, ರಾತ್ರಿ ಪ್ರಯಾಣ ಮಾಡುವಾಗ ಬಸ್ ನಿಲ್ಲಿಸಿದ ಕಡೆಗಳಲ್ಲಿ ಶೌಚಾಲಯಗಳ ದುರ್ಗತಿ, ಕೊಳಕು, ದುರ್ವಾಸನೆ.... ಎಲ್ಲರ ಬಳಿಯೂ ಇದನ್ನು ಕುರಿತಂತೆ ಕತೆಗಳಿದ್ದವು. ಭಾರತ ಎಷ್ಟೇ ಪ್ರಕಾಶಿಸಿ ದರೂ ಈ ಸಮಸ್ಯೆ ಮಾತ್ರ ತೀರುವುದೇ ಇಲ್ಲ.

ನಗರ ಪ್ರದೇಶಗಳಲ್ಲಿ ಇಷ್ಟು ದೊಡ್ಡದಾಗಿರುವ ಈ ಸಮಸ್ಯೆಯೂ ಚಿಕ್ಕದು ಅನ್ನಿಸುವುದು ಯಾವಾಗ? ಸರಿಯಾದ ಶೌಚ ವ್ಯವಸ್ಥೆಯೇ ಇಲ್ಲದೆ, ಗಂಟೆಗಟ್ಟಲೆ ಮೂತ್ರ, ಮಲ ವಿಸರ್ಜಿಸದೆ ಹೊಟ್ಟೆ ಕಟ್ಟಿಕೊಂಡು ಕೆಲಸ ಮಾಡುವ ಹೆಂಗಸರ ಕಥೆ ಹೊಸತಲ್ಲ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೆಳ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳ ಸುಮಾರು 8,29,000 ಮಂದಿ ಪ್ರತಿ ವರ್ಷ ಅಸಮರ್ಪಕ ನೀರು, ನೈರ್ಮಲ್ಯ, ಮತ್ತು ಆರೋಗ್ಯದ ಕಾರಣಕ್ಕೆ ಸಾವನ್ನಪ್ಪುತ್ತಾರೆ.

ಭಾರತ ಒಂದರಲ್ಲೇ ಸುಮಾರು 550 ದಶಲಕ್ಷ ಮಂದಿ ಶೌಚಾಲಯವಿಲ್ಲದ ಸ್ಥಿತಿಯಲ್ಲಿದ್ದು ಇದು ಪ್ರಪಂಚದಲ್ಲಿ ತೆರೆದ ಶೌಚವನ್ನು ಅನುಸರಿಸುವವರ ಪ್ರಮಾಣದ ಸುಮಾರು ಅರ್ಧದಷ್ಟು ಎಂದು ಇನ್ನೊಂದು ವರದಿ ಹೇಳುತ್ತದೆ.

ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ– 5 (NFHS – 5)ರ ದತ್ತಾಂಶದ ಪ್ರಕಾರ ಭಾರತದ ಪ್ರತಿ 5 ಮನೆಗಳಲ್ಲಿ ಒಂದು ಮನೆಯವರು ಇಂದಿಗೂ ತೆರೆದ ಶೌಚವನ್ನೇ ಅವಲಂಬಿಸಿದ್ದಾರೆ. ಆ ಹೆಂಗಸರು ಕತ್ತಲಿರುವಾಗಲೇ ಶೌಚ ಮುಗಿಸಿಕೊಳ್ಳಬೇಕು ಮತ್ತು ಮತ್ತೊಮ್ಮೆ ಹೋಗಬೇಕಾದರೆ ಕತ್ತಲನ್ನೇ ಕಾಯಬೇಕು. ಇದು ಕೇವಲ ನಾಚಿಕೆಯ ಪ್ರಶ್ನೆಯಷ್ಟೇ ಅಲ್ಲ, ಆ ಹೆಣ್ಣುಮಕ್ಕಳ ಸುರಕ್ಷತೆ ಮತ್ತು ಲೈಂಗಿಕ ದೌರ್ಜನ್ಯದ ಪ್ರಶ್ನೆಯೂ ಹೌದು. ಈ ಸಮಯದಲ್ಲಿ ಉಂಟಾಗಬಹುದಾದ ಹಿಂಸೆ ಮತ್ತು ನಾಚಿಕೆಯ ಕಾರಣಕ್ಕೆ ಹೆಣ್ಣುಮಕ್ಕಳು ಪ್ರತಿದಿನ 13 ಗಂಟೆಗಳ ಅವಧಿಯವರೆಗೂ ತಮ್ಮ ಮಲಮೂತ್ರಗಳನ್ನು ಕಟ್ಟಿಹಿಡಿಯುತ್ತಾರೆ. ಹೀಗೆ ಮೂತ್ರವಿಸರ್ಜನೆಯನ್ನು ತಡೆಯುವುದರಿಂದ ಸಹ ಮೂತ್ರನಾಳದ ಸೋಂಕಿಗೆ ಒಳಪಡುತ್ತಾರಲ್ಲದೆ, ಕಡಿಮೆ ನೀರು ಕುಡಿಯುವುದು ಮಲಬದ್ದತೆಯ ಜೊತೆಜೊತೆಗೆ ಇನ್ನೂ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ವೈದ್ಯರು ಎಚ್ಚರಿಸುತ್ತಲೇ ಇರುತ್ತಾರೆ.

ಆರೋಗ್ಯದ ದೃಷ್ಟಿಯಿಂದ ನೋಡುವಾಗ ಇದರ ಪರಿಣಾಮಗಳು ಹೆಣ್ಣು ಮತ್ತು ಗಂಡು ಇಬ್ಬರ ಮೇಲೂ ಆಗುವುದು ನಿಜವಾದರೂ ತನ್ನ ದೈಹಿಕ ಗುಣಧರ್ಮದ ಕಾರಣಕ್ಕೆ ಹೆಣ್ಣು ಇದರಿಂದ ಇನ್ನೂ ಹೆಚ್ಚು ಭಾದೆಗೊಳಗಾಗುತ್ತಾಳೆ. ಹೆಣ್ಣಿನ ಗೌಪ್ಯತೆ ಮತ್ತು ಘನತೆ ಎರಡೂ ಇದರಿಂದ ಹಾನಿಗೊಳಗಾಗುವುದಲ್ಲದೆ ಲೈಂಗಿಕ ಹಲ್ಲೆ ಮತ್ತು ದೌರ್ಜನ್ಯಗಳಂತಹ ಬಾಹ್ಯ ದಾಳಿಗಳ ಜೊತೆಜೊತೆಗೆ ನೈರ್ಮಲ್ಯದ ಕೊರತೆಯ ಕಾರಣಕ್ಕೆ ಆಕೆ ಆಂತರಿಕ ಅಪಾಯಕ್ಕೆ ಕೂಡಾ ಒಳಗಾಗುತ್ತಾಳೆ. ಮುಟ್ಟಿನ ಸಮಯದಲ್ಲಿ ಈ ಕಾರಣಕ್ಕೆ ಬರುವ ಸೋಂಕು ಆಕೆಯ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ.

ನೈರ್ಮಲೀಕರಣದ ಕೊರತೆ ವೈಯಕ್ತಿಕ ಮಾನವ ಹಕ್ಕುಗಳ ಮೇಲೆ ಎಸಗಿದ ಸವಾಲು ಎಂದು ವಿಶ್ವಸಂಸ್ಥೆ ಹೇಳುತ್ತದೆ. ಇದರಿಂದ ಹೆಣ್ಣುಮಕ್ಕಳ ಮೇಲೆ ಆಗುವ ಪ್ರತಿಕೂಲ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡ ವಿಶ್ವಸಂಸ್ಥೆ ಈ ವಿಷಯವನ್ನು ರಾಷ್ಟ್ರ ಮಟ್ಟದಲ್ಲಿ ಗ್ರಹಿಸಿ, ಪರಿಹಾರ ಹುಡುಕದೆ ಇರುವುದು ಲಿಂಗ ಅಸಮಾನತೆಯ ಜೊತೆಜೊತೆಗೆ ಮಾನವಹಕ್ಕುಗಳ ಉಲ್ಲಂಘನೆಯೂ ಹೌದು ಎಂದು ಹೇಳುತ್ತದೆ. ಅಸಮರ್ಪಕ ಟಾಯ್ಲೆಟ್ ವ್ಯವಸ್ಥೆ ಕೇವಲ ಹೆಣ್ಣುಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗೆ ಮಾತ್ರ ಸವಾಲಲ್ಲ. ಇದು ಹೆಣ್ಣಿನ ವಿದ್ಯಾಭ್ಯಾಸಕ್ಕೂ ಸವಾಲೆಸೆಯಬಹುದು. ಶಾಲೆಗಳಲ್ಲಿ ಸರಿಯಾದ ಶೌಚಾಲಯದ ಕೊರತೆಯಿಂದ ಮುಟ್ಟಿನ ಸಮಯದಲ್ಲಿ ಹೆಣ್ಣುಮಕ್ಕಳು ಶಾಲೆಗೆ ಬರದೆ ಮನೆಗಳಲ್ಲಿಯೇ ಉಳಿಯುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.

ಹೆಚ್ಚಲಿ ‘ರಾಣಿ ಮೇಸ್ತ್ರಿ’

UNICEF ಜಾರ್ಖಂಡ್ ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಒಂದು ವಿಶೇಷ ತರಬೇತಿ ಕೊಡುತ್ತಿದೆ. ಅವರನ್ನು ‘ರಾಣಿ ಮೇಸ್ತ್ರಿ’ ಎಂದು ಕರೆಯಲಾಗುತ್ತದೆ. ಈ ಹೆಣ್ಣುಮಕ್ಕಳು ತಮ್ಮ ತಮ್ಮ ಸಮುದಾಯಗಳಲ್ಲಿ ಶೌಚಾಲಯವನ್ನು ನಿರ್ಮಿಸುವ ತರಬೇತಿ ಪಡೆದು ಅದನ್ನು ಸಮುದಾಯದ ಮಟ್ಟದಲ್ಲಿ ಅನುಷ್ಠಾನಕ್ಕೆ ತರುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.